ಪೆಟ್ರೋಲ್ ದರ ಹೆಚ್ಚಳ; ದೇಶದ ಕೆಲವು ನಗರಗಳಲ್ಲಿ ಲೀ.ಗೆ 103 ರೂಪಾಯಿ!

By Suvarna NewsFirst Published May 17, 2021, 2:31 PM IST
Highlights

ಮೇ 4ರಿಂದ ಸತತ ಏರಿಕೆ ಕಾಣುತ್ತಿರುವ ತೈಲ ದರ ಇದೀಗ ದಾಖಲೆ ಮಟ್ಟಕ್ಕೆ ತಲುಪಿದೆ. ದೇಶದ ಕೆಲವು ನಗರಗಳಲ್ಲಿ ಭಾನುವಾರ ಲೀಟರ್ ಪೆಟ್ರೋಲ್ ದರ 103 ರೂ. ದಾಟಿದೆ. ಬೆಂಗಳೂರಲ್ಲಿ ಲೀಟರ್ ಪೆಟ್ರೋಲ್  ದರ 95.66 ರೂ. ಇದೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೆಲವು ದಿನಗಳವರೆಗೆ ಪೆಟ್ರೋಲ್ ಮತ್ತು ಡಿಸೇಲ್ ಏರಿಕೆ ಸದ್ದು ಇರಲಿಲ್ಲ. ಇದೀಗ ತೈಲ ಕಂಪನಿಗಳು ಸತತವಾಗಿ ತೈಲೆ ಬೆಲೆಯನ್ನುಹೆಚ್ಚಿಸುತ್ತಿವೆ.

ಕೆಲವು ದಿನಗಳಿಂದ ಮಟ್ಟಸವನ್ನು ಕಾಯ್ದುಕೊಂಡಿದ್ದ ತೈಲ ದರ ಏರಿಕೆ ಈಗ ದಾಖಲೆಯ ಮಟ್ಟಕ್ಕೆ ಜಿಗಿದಿದೆ. ಒಂದೆಡೆ ಜನರು ಕೊರೊನಾ ಸಾಂಕ್ರಾಮಿಕದಿಂದ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದರೆ ಮತ್ತೊಂದೆಡೆ ತೈಲ ಕಂಪನಿಗಳು ಇಂಧನ ದರವನ್ನು ದಾಖಲೆ ಮಟ್ಟಕ್ಕೆ ಏರಿಸಿ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿವೆ.

ಭಾನುವಾರ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ಲೀಟರ್‌ಗೆ ತಲಾ 24 ಪೈಸೆ ಮತ್ತು  27 ಪೈಸೆಯಷ್ಟು ಹೆಚ್ಚು ಮಾಡಿವೆ. ಈ ವಾರದಲ್ಲೇ ಮೇ 4ರಿಂದ ಇದು ಐದನೇ ಸತತ ಏರಿಕೆಯಾಗಿದೆ. ಪರಿಣಾಮ, ಲೀಟರ್ ಪೆಟ್ರೋಲ್ ಬೆಲೆ ಕೆಲವು ನಗರಗಳಲ್ಲಿ 103 ರೂಪಾಯಿ ದಾಟಿದೆ.

ಈ ಟ್ರಾಕ್ಟರ್‌ಗೆ ಕ್ಲಚ್ಚೂ ಇಲ್ಲ, ಗಿಯರ್ ಇಲ್ಲ: ದೇಶದ ಮೊದಲ ಸಂಪೂರ್ಣ ಆಟೋಮ್ಯಾಟಿಕ್ ಹೈಬ್ರಿಡ್ ಟ್ರಾಕ್ಟರ್!

ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಮಹಾರಾಷ್ಟ್ರದ ಕೆಲವು ನಗರಗಳಲ್ಲಿ ಪೆಟ್ರೋಲ್ 100 ರೂ. ಗಡಿ ದಾಟಿದೆ. ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಲೀಟರ್ ಪೆಟ್ರೋಲ್ ಬೆಲೆ 103.52 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ ಡಿಸೇಲ್ ಲೀ.ಗೆ 95.99 ರೂ. ಇದೆ. ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ ನಗರದಲ್ಲಿ ಪೆಟ್ರೋಲ್ ಲೀಟರ್‌ಗೆ 100.63 ರೂ. ಇದ್ದರೆ, ಡಿಸೇಲ್ ಬೆಲೆ ಲೀಟರ್‌ಗೆ 91.59 ರೂ. ಇದೆ. ಅದೇ ರೀತಿ ಮಧ್ಯಪ್ರದೇಶದ ಅನುಪ್ಪುರ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 103.21 ರೂ.ಗೆ ತಲುಪಿದೆ. ಡಿಸೇಲ್ ಬೆಲೆ 93.98 ರೂ. ಇದೆ.

ಮಹಾರಾಷ್ಟ್ರದ ಪರಭಾನಿ ಜಿಲ್ಲೆಯ ಜನರು ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಯಾಕೆಂದರೆ, ಈ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 101.25 ರೂಪಾಯಿಯಾಗಿದೆ. ಅದೇ ರೀತಿ ಡಿಸೇಲ್ ದರ ಲೀಟರ್‌ಗೆ 91.30 ರೂ. ಆಗಿದೆ. ಇದೇ ವೇಳೆ, ಮಧ್ಯಪ್ರದೇಶದ ಬಳಿಕ ರಾಜಸ್ಥಾನದಲ್ಲಿ ದೇಶದಲ್ಲೇ ಅತಿ ಹೆಚ್ಚು ವ್ಯಾಟ್(ತೆರಿಗೆ) ವಿಧಿಸಲಾಗುತ್ತಿದೆ ಎಂಬುದನ್ನು ಓದುಗರ ನೆನಪಿನಲ್ಲಿಟ್ಟುಕೊಳ್ಳಬೇಕು.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈಗ  ಲೀಟರ್ ಪೆಟ್ರೋಲ್ ಬೆಲೆ 92.58 ರೂ ಇದ್ದರೆ ಡಿಸೇಲ್ ಬೆಲೆ 83.22 ಪೈಸೆ ಇದೆ. ಇನ್ನು ಮುಂಬೈಯನಲ್ಲೂ ಏರಿಕೆಯಾಗಿದ್ದ ಲೀಟರ್ ಪೆಟ್ರೋಲ್ ಬೆಲೆ  98.88 ರೂಪಾಯಿಯಾಗಿದೆ. ಅಂದರೆ 100 ರೂಪಾಯಿ ಸನಿಹದಲ್ಲೇ ಇದೆ. ಅದೇ ರೀತಿ ಡಿಸೇಲ್ ಬೆಲೆ ಲೀಟರ್‌ಗೆ 90.40 ರೂಪಾಯಿಯಾಗಿದೆ.

ಏಪ್ರಿಲಿಯಾ ಎಸ್ಎಕ್ಸ್ಆರ್ 125 ಸ್ಕೂಟರ್ ಬಿಡುಗಡೆ, ಬುಕ್ಕಿಂಗ್ ಆರಂಭ

ಮತ್ತೊಂದು ಮಹಾನಗರವಾಗಿರುವ ಚೆನ್ನೈನಲ್ಲಿ ಲೀಟರ್ ಪೆಟ್ರೋಲ್‌ಗೆ ಗ್ರಾಹಕರು 94.31 ರೂ. ಹಾಗೂ ಲೀಟರ್ ಡಿಸೇಲ್‌ಗೆ 88.07 ರೂ. ನೀಡುತ್ತಿದ್ದಾರೆ.

ಕೋಲ್ಕತ್ತಾ ನಗರದಲ್ಲೂ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆಯಾಗಿದೆ. ಇಲ್ಲಿನ ಗ್ರಾಹಕರು ಲೀಟರ್ ಪೆಟ್ರೋಲ್‌ಗೆ  92.67 ರೂ. ಹಾಗೂ ಲೀಟರ್ ಡಿಸೇಲ್‌ಗೆ 86.06 ರೂಪಾಯಿ ನೀಡುತ್ತಿದ್ದಾರೆ.  ಹಾಗೆಯೇ ಐಟಿ ಸಿಟಿ ಬೆಂಗಳೂರಲ್ಲಿ ಲೀಟರ್ ಪೆಟ್ರೋಲ್‌ಗೆ 95.66 ರೂಪಾಯಿ ಇದ್ದರೆ ಲೀಟರ್ ಡಿಸೇಲ್‌ಗೆ ಗ್ರಾಹಕರು 88.22 ರೂ. ನೀಡುತ್ತಿದ್ದಾರೆ.

ದೇಶದಲ್ಲಿ ತೈಲ ದರ ಏಕತೆರನಾಗಿಲ್ಲ. ಕಾರಣ ಆಯಾ ರಾಜ್ಯಗಳ ವಿಧಿಸುವ ವ್ಯಾಟ್ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಹಾಗಾಗಿ, ಕಂಪನಿಗಳು ದರವನ್ನು ಪರಿಷ್ಕೃತ ಮಾಡಿದ ಕೂಡಲೇ ಹೆಚ್ಚು ವ್ಯಾಟ್ ವಿಧಿಸುವ ರಾಜ್ಯಗಳಲ್ಲಿ ಬೆಲೆ ದಿಢೀರ್ ಏರಿಕೆ ಕಾಣಲು ಕಾರಣವಾಗುತ್ತಿದೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚಿನ ತೆರಿಗೆ ವಿಧಿಸಾಲಗುತ್ತಿದೆ.

ಶೀಘ್ರವೇ ಹೊಸ 2021 ಮಹಿಂದ್ರಾ ಬೊಲೆರೋ ಬಿಡುಗಡೆ ಸಾಧ್ಯತೆ

ಪೆಟ್ರೋಲ್ ದರ ಏರಿಕೆಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ವಿಧಿಸುತ್ತಿರುವ ವಿಪರೀತ ತೆರಿಗೆ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾಲ ತೈಲ ಏರಿಕೆ ಇಳಿಕೆಯೂ ಕಾರಣವಾಗುತ್ತದೆ. ಕಚ್ಚಾ ತೈಲ ದರ ಏರಿಕೆಯಾಗುತ್ತಿದಂತೆ ತೈಲ ಕಂಪನಿಗಳು ಕೂಡ ದೇಶೀಯ ಮಾರುಕ್ಟಟೆಯಲ್ಲಿ  ತೈಲ ದರವನ್ನು ಹೆಚ್ಚಿಸುತ್ತಿವೆ. ಆದರೆ, ಅಂತಿಮವಾಗಿ ಈ ತೈಲ ದರಗಳ ಏರಿಕೆಯ ಪರಿಣಾಮವ ಜನಸಾಮಾನ್ಯರ ಬದುಕಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ.

click me!