ಇ ವಾಹನ ಖರೀದಿಸಿದ್ರೆ ನೋಂದಣಿ ಸರ್ಟಿಫಿಕೇಟ್ ಶುಲ್ಕ ಕೊಡಬೇಕಿಲ್ಲ!

By Suvarna NewsFirst Published Aug 4, 2021, 3:49 PM IST
Highlights

ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಇದು ಖುಷಿಯ ಸುದ್ದಿ. ಇನ್ನು ಮುಂದೆ ಬ್ಯಾಟರಿ ಚಾಲಿತ ವಾಹನಗಳನ್ನು ಖರೀದಿಸಿದರೆ ಗ್ರಾಹಕರು ನೋಂದಣಿ ಸರ್ಟಿಫಿಕೇಟ್ ಶುಲ್ಕವನ್ನು ಕಟ್ಟಬೇಕಿಲ್ಲ. ಈ  ಶುಲ್ಕ ವಿನಾಯ್ತಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಅಧಿಸೂಚನೆ ಹೊರಡಿಸಿದೆ.

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳು ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ. ಈ ಸಾಲಿಗೆ ಇದೀಗ ಹೊಸ ಕ್ರಮವೊಂದು ಸೇರ್ಪಡೆಯಾಗಿದೆ.

ದೇಶದಲ್ಲಿ ಇನ್ನು ಮುಂದೆ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರು ಯಾವುದೇ ರೀತಿಯ ನೋಂದಣಿ ಸರ್ಟಿಫಿಕೇಟ್ ಶುಲ್ಕವನ್ನು ಭರಿಸಬೇಕಿಲ್ಲ. ಇಂಥದೊಂದು ನಿಯಮವನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯು ಜಾರಿಗೆ ತಂದಿದೆ. ಈ ಮೂಲಕ ಸಾಂಪ್ರದಾಯಿಕ ಇಂಧನ ವಾಹನಗಳನ್ನು ಬಿಟ್ಟು, ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಮುಂದಾಗುವ ಗ್ರಾಹಕರಿಗೆ ಸರಕಾರವು ಭರ್ಜರಿ ಗಿಫ್ಟ್ ನೀಡಿದೆ ಎಂದು ಹೇಳಬಹುದು. 
 

ಎಲೆಕ್ಟ್ರಿಕ್ ವಾಹನಗಳ ನೋಂದಣಿ ಸರ್ಟಿಫಿಕೇಟ್ ಶುಲ್ಕ ಸಂಬಂಧ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಅಧಿಸೂಚನೆಯನ್ನು ಹೊರಡಿಸಿದೆ. ಈ ಹೊಸ ನಿಯಮದ ಪ್ರಕಾರ,  ಎಲ್ಲಾ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ವಾಹನಗಳಿಗೆ ನೋಂದಣಿ ಪ್ರಮಾಣಪತ್ರದ ವಿತರಣೆ ಅಥವಾ ನವೀಕರಣಕ್ಕಾಗಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡುತ್ತದೆ. ಹೊಸ ನೋಂದಣಿ ನಿಯೋಜಿಸಲು ಬ್ಯಾಟರಿ ಚಾಲಿತ ವಾಹನಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ ಎಂದು ಸಚಿವಾಲಯ ಹೇಳಿದೆ.

ಎಲೆಕ್ಟ್ರಿಕ್ ದ್ವಿಚಕ್ರವಾಹನ ಖರೀದಿಸಿದರೆ ಸ್ಟೇಟ್ GST ರಿಫಂಡ್!

ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ನಾಗಾಲೋಟದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರೂ ಪರ್ಯಾಯ ಇಂಧನ ವಾಹನಗಳತ್ತ ಮುಖ ಮಾಡಿದ್ದಾರೆ. ವಿಶೇಷವಾಗಿ ಬ್ಯಾಟರಿ ಚಾಲಿತ ವಾಹನಗಳ ಬಗ್ಗೆ ಜನರಲ್ಲಿ ಆಸಕ್ತಿ ಇದೆಯಾದರೂ, ಅವು ತುಟ್ಟಿಯಾಗಿದ್ದರಿಂದ ಹಿನ್ನಡೆಯಾಗುತ್ತಿದೆ.

ಈ ಹಿನ್ನೆಲೆಯಲ್ಲೇ ಕೇಂದ್ರ ಸರ್ಕಾರವು ಬ್ಯಾಟರಿ ಚಾಲಿತ ವಾಹನಗಳ ಬಳಕೆಯನ್ನ ಹೆಚ್ಚಿಸುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಂಡಿದೆ. ಜಾರಿಗೆ ತಂದಿದೆ. ಆ ಪೈಕಿ ನೋಂದಣಿ ಸರ್ಟಿಫಿಕೇಟ್ ಶುಲ್ಕ ವಿನಾಯ್ತಿಯೂ ಒಂದು. ಕೇಂದ್ರ ಸರ್ಕಾರವು ಮಾತ್ರವಲ್ಲದೇ ಹಲವು ರಾಜ್ಯಗಳು ಎಲೆಕ್ಟ್ರಿಕ್ ವಾಹನ ನೀತಿಯನ್ನು ಪ್ರಕಟಿಸಿವೆ. ಆ ಮೂಲಕ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಅನೇಕ ವಿನಾಯ್ತಿಗಳನ್ನು ಘೋಷಿಸಿವೆ. 

ಹೆದ್ದಾರಿಗಳಗುಂಟ ಚಾರ್ಜಿಂಗ್ ಸ್ಟೇಷನ್‌ಗಳು
ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿದ ಮೂಲ ಸೌಕರ್ಯವನ್ನು ಹೆಚ್ಚಿಸುವುದಕ್ಕಾಗಿ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯವು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರವು(ಎನ್‌ಎಚ್ಎಐ) ರಾಷ್ಟ್ರೀಯ ಹೆದ್ದಾರಿಗಳಗುಂಟ 600 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಮುಂದಾಗಿದೆ.

ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಸಬ್ಸಿಡಿ

ಎನ್ಎಚ್ಐಎ 22 ರಾಜ್ಯಗಳ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಮಾರು 600 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವ ಮೂಲಕ ಎಲೆಕ್ಟ್ರಿಕ್ ವಾಹನಗಳ ಮೂಲಸೌಕರ್ಯವನ್ನು ಹೆಚ್ಚಿಸಲು ಮುಂದಾಗಿದೆ. ಈ ಚಾರ್ಜಿಂಗ್ ಸ್ಟೇಷನ್‌ಗಳನ್ನು ಜಂಟಿ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುತ್ತದೆ. ಮುಂದಿನ ಐದು ವರ್ಷಗಳಲ್ಲಿ ಖಾಸಗಿ ಕಂಪನಿಗಳ ಜಂಟಿ ಸಹಭಾಗಿತ್ವದಲ್ಲಿ  ಈ ಚಾರ್ಜಿಂಗ್ ಸ್ಟೇಷನ್‌ಗಳನ್ನು  ರಾಷ್ಟ್ರೀಯ ಹೆದ್ದಾರಿಗಳಗುಂಟ ಸ್ಥಾಪಿಸಲಾಗುತ್ತದೆ.

ಈ 600 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವ ಸಂಬಂಧ ಕೆಲಸ ಶುರುವಾಗಿದೆ. ಈಗಾಲೇ ಎನ್ಎಚ್ಐಎ ಮುಂಬ-ದೆಹಲಿ ಎಕ್ಸ್‌ಪ್ರೆಸ್ ಕಾರಿಡಾರ್‌ನಲ್ಲಿ ಜಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವ ಸಂಬಂಧ 90 ಸ್ಥಳಗಳನ್ನ ಗುರುತಿಸಿದೆ. ಇದರ ಜೊತೆಗೆ ಹೊಸ ಎಕ್ಸ್‌ಪ್ರೇಸ್‌ವೇಯ್ಸ್ ಮತ್ತು ಹೈವೇಯ್ಸ್‌ಗುಂಟ 400 ಜಾರ್ಚಿಂಗ್ ಸ್ಟೇಷನ್‌ಗಳನ್ನ ಸ್ಥಾಪಿಸಲಾಗುತ್ತದೆ. ಇನ್ನುಳಿದ ಸ್ಟೇಷನ್‌ಗಳನ್ನು ಇತರ ಹೆದ್ದಾರಿಗಳಗುಂಟ ಸ್ಥಾಪಿಸಲಾಗುತ್ತದೆ. 

ಗೋವಾದಿಂದ ವರ್ಷಕ್ಕೆ 25 ಕೋಟಿ ರೂ. ಸಬ್ಸಿಡಿ
ಗೋವಾ ಇತ್ತೀಚೆಗೆ ಪ್ರಕಟಿಸಿರುವ ಕರಡುನೀತಿಯ ಪ್ರಕಾರ, ಮುಂದಿನ ಐದು ವರ್ಷಗಳವರೆಗೆ ಪ್ರತಿ ವರ್ಷ 11,000 ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿಯನ್ನು ನೀಡಲಿದೆ. 2025ರ ಹೊತ್ತಿಗೆ ರಾಜ್ಯದಲ್ಲಿ ನೋಂದಣಿಯಾಗಲಿರುವ ಒಟ್ಟು ವಾಹನಗಳ ಪೈಕಿ ಶೇ.30ರಷ್ಟು ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗುವಂತೆ ನೋಡಿಕೊಳ್ಳುವ ಗುರಿಯನ್ನು ಗೋವಾ ರಾಜ್ಯ ಹಾಕಿಕೊಂಡಿದೆ.

2025ರ ಹೊತ್ತಿಗೆ ಟಾಟಾದಿಂದ 10 ಹೊಸ ಎಲೆಕ್ಟ್ರಿಕ್ ವಾಹನಗಳು!.

ಒಟ್ಟಾರೆ, 10000 ಎಲೆಕ್ಟ್ರಿಕ್ ದ್ವಿಚಕ್ರವಾಹನ, 500 ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಹಾಗೂ 500 ನಾಲ್ಕು ಚಕ್ರವಾಹನಗಳಿಗೆ ಸಬ್ಸಿಡಿ ನೀಡಲು ಗೋವಾ ಸರ್ಕಾರವು ಪ್ಲ್ಯಾನ್ ಮಾಡಿಕೊಂಡಿದೆ. ಇದಕ್ಕಾಗಿ ಸರ್ಕಾರವು ಪ್ರತಿ ವರ್ಷ 25 ಕೋಟಿ ರೂ. ಒದಗಿಸಲಿದೆ. ಇದಕ್ಕಿಂತ ಹೆಚ್ಚಿನ ಮೊತ್ತ ವೆಚ್ಚವಾಗದಂತೆ ಸರ್ಕಾರ ನೋಡಿಕೊಳ್ಳಲಿದೆ. 

ಅಂದರೆ, ಪ್ರತಿ ವರ್ಷ ಗೋವಾ ಸರ್ಕಾರವು ಎಲೆಕ್ಟ್ರಿಕ್ ದ್ವಿಚಕ್ರವಾಹನಗಳಿಗೆ 10 ಕೋಟಿ ರೂ, ಮೂರು ಚಕ್ರ ವಾಹನಗಳಿಗೆ  1 ಕೋಟಿ ರೂ ಮತ್ತು ನಾಲ್ಕು ಚಕ್ರದ ಎಲೆಕ್ಟ್ರಿಕ್ ವಾಹನಗಳಿಗೆ 14 ಕೋಟಿ ರೂಪಾಯಿಯಷ್ಟು ಸಬ್ಸಿಡಿಗಾಗಿ ವೆಚ್ಚ ಮಾಡಲಿದೆ. 

click me!