
ನವದೆಹಲಿ (ಜು.29) ಭಾರತದಲ್ಲಿ ವಾಹನ ಖರೀದಿಯಲ್ಲಿ ಬಳಕೆಯಲ್ಲಿ ಇದುವರೆಗೆ ಯಾವುದೇ ನಿರ್ಬಂಧ ಇರಲಿಲ್ಲ. ಎಷ್ಟು ಕಾರು ಬೇಕಾದರೂ ಖರೀದಿಸಬಹುದು. ಇದೀಗ ಕೇಂದ್ರ ಸರ್ಕಾರ ಹೊಸ ನೀತಿಯೊಂದನ್ನು ಜಾರಿಗೆ ತಂದಿದೆ. ಇದು ನೇರವಾಗಿ ಹಿರಿಯ ಅಧಿಕಾರಿಗಳು ಹಾಗೂ ಐಎಎಸ್ ಅಧಿಕಾರಿಗಳ ಕಾರು ಬಳಕೆಯನ್ನು ನಿಯಂತ್ರಿಸುತ್ತದೆ. ಒಬ್ಬ ಅಧಿಕಾರಿಗೆ ಒಂದು ಕಾರು ಮಾತ್ರ ಅನ್ನೋ ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ವಾಹನಗಳ ದುರುಪಯೋಗ, ಹೆಚ್ಚುವರಿ ವೆಚ್ಚ ಕಡಿತಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು ಹೊಸ ನೀತಿ ಜಾರಿಗೆ ತಂದಿದೆ.
ಸರ್ಕಾರದ ಅಧಿಕಾರಿಗಳು ಹೆಚ್ಚುವರಿ ಕಾರು ಬಳಸುವಂತಿಲ್ಲ. ಒಬ್ಬ ಅಧಿಕಾರಿ ಒಂದು ಸರ್ಕಾರಿ ಕಾರು ಮಾತ್ರ ಬಳಕೆ ಮಾಡಬೇಕು.ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚಗಳ ಇಲಾಖೆ ಹೊಸ ಆದೇಶ ಹೊರಡಿಸಿದೆ. ವಿಶೇಷವಾಗಿ ಹಿರಿಯ ಅಧಿಕಾರಿಗಳು, ಐಎಎಸ್ ಅಧಿಕಾರಿಗಳು ಒಂದಕ್ಕಿಂತ ಹೆಚ್ಚು ಜವಾಬ್ದಾರಿ ಹೊಂದಿರುತ್ತಾರೆ. ಒಂದಕ್ಕಿಂತ ಹೆಚ್ಚುವರಿ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ಸಚಿವಾಲ, ಇಲಾಖೆ, ಸಾರ್ವಜನಿಕ ವಲಯದ ಉದ್ಯಮ, ಸ್ವಾಯತ್ತ ಸಂಸ್ಥೆಯ ಹೆಚ್ಚುವರಿ ಜವಾಬ್ದಾರಿ ಹೊಂದಿರುತ್ತಾರೆ. ಹಾಗಂತೆ ಎಲ್ಲಾ ಇಲಾಖೆಯಿಂದ ಕಾರುಗಳನ್ನು ಬಳಸುವಂತಿಲ್ಲ. ಮೂಲ ಹುದ್ದೆಯಲ್ಲಿನ ಇಲಾಖೆ ನೀಡುವ ಕಾರನ್ನು ಮಾತ್ರ ಬಳಕೆ ಮಾಡಬೇಕು ಎಂಬುದು ಹೊಸ ಆದೇಶ.
ಒಬ್ಬ ಅಧಿಕಾರಿಗೆ ಒಂದು ಕಾರು ಮಾತ್ರ ಬಳಕೆ ಆದೇಶ ಹೊಸದೇನಲ್ಲ. 2022ರಲ್ಲೇ ಈ ಆದೇಶ ಜಾರಿ ಮಾಡಲಾಗಿತ್ತು. ಆದರೆ ಕಟ್ಟುನಿಟ್ಟಾಗಿ ಪಾಲನೆ ಆಗಿರಲಿಲ್ಲ. ಈ ಬಾರಿ ಇದೇ ಆದೇಶವನ್ನು ಹೊಸದಾಗಿ ಜಾರಿಗೊಳಿಸಲಾಗಿದೆ.ಆದರೆ ಈ ಬಾರಿ ಕೆಲ ಮಾರ್ಪಾಡು ಮಾಡಲಾಗಿದೆ. ಅಧಿಕಾರಿಗಳು ಹೆಚ್ಚುವರಿಯಾಗಿ ಬಳಸುತ್ತಿದ್ದ ಕಾರುಗಳನ್ನು ಆಯಾ ಇಲಾಖೆ ವಶಕ್ಕೆ ಪಡೆಯಬೇಕು. ಬಳಿಕ ಕಾರುಗಳನ್ನು ಸುಸ್ಥಿತಿಯಲ್ಲಿ ನಿರ್ವಹಣೆ ಮಾಡಬೇಕು ಎಂದಿದೆ. ಇನ್ನು ಅಧಿಕಾರಿಗಳು ಎರಡು ಇಲಾಖೆಯ ಕೆಲಸಕ್ಕಾಗಿ ತೆರಳುವಾಗಲೂ ಮೂಲ ಇಲಾಖೆಯ ಕಾರನ್ನು ಮಾತ್ರ ಬಳಕೆ ಮಾಡಬೇಕು. ಎರಡೂ ಇಲಾಖೆ ಸಿಬ್ಬಂದಿಗಳು ಒಂದೇ ಕಾರಿನಲ್ಲಿ ಪ್ರಯಾಣಿಸಬೇಕು ಎಂದಿದೆ.
ಈ ಆದೇಶ ಕಟ್ಟು ನಿಟ್ಟಾಗ ಜಾರಿಯಾದರೆ ಸರ್ಕಾರದ ಹಿರಿಯ ಅಧಿಕಾರಿಗಳು, ಐಎಎಸ್ ಅಧಿಕಾರಿಗಳು ಹೆಚ್ಚುವರಿಯಾಗಿ ಬಳಸುತ್ತಿದ್ದ ಕಾರುಗಳ ಸೇವೆಗೆ ಕಡಿವಾಣ ಬೀಳಲಿದೆ. ಇದರಿಂದ ಸರ್ಕಾರದ ಖರ್ಚು ವೆಚ್ಚ ಇಳಿಕೆಯಾಗಲಿದೆ. ಜೊತೆಗೆ ಹಲವು ಇಲಾಖೆಗಳ ಸಿಬ್ಬಂದಿಗಳು ಬಾಡಿಗೆ ಕಾರುಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಈ ಸಮಸ್ಯೆಯನ್ನು ತಪ್ಪಿಸಲು ಸಾಧ್ಯವಿದೆ.