ಬೆಂಗಳೂರು, ಮೈಸೂರು, ಮಡಿಕೇರಿ ಹೆದ್ದಾರಿಯಲ್ಲಿ ಇವಿ ಚಾರ್ಜಿಂಗ್ ಕೇಂದ್ರ ಸ್ಥಾಪನೆಗೆ ಬಿಪಿಸಿಎಲ್‌ ಚಾಲನೆ!

By Suvarna News  |  First Published Oct 14, 2022, 7:52 PM IST

25 ಕೆಡಬ್ಲ್ಯು ವೇಗದ ಚಾರ್ಜಿಂಗ್ ಕೇಂದ್ರಗಳನ್ನು ದಕ್ಷಿಣ ಭಾರತದ ಎರಡು ಕಾರಿಡಾರ್‌ಗಳಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ ಚೆನ್ನೈ-ತಿರುಚ್ಚಿ-ಮದುರೈ ಹೆದ್ದಾರಿ ಹಾಗೂ ಬೆಂಗಳೂರು-ಚೆನ್ನೈ ಮತ್ತು ಬೆಂಗಳೂರು-ಮೈಸೂರು-ಮಡಿಕೇರಿ ಹೆದ್ದಾರಿಯಲ್ಲಿ ಎಲೆಕ್ಟ್ರಿಕ್ ವಾಹನ ಸವಾರಿ ಇನ್ನು ಸುಲಭವಾಗಲಿದೆ. 


ಬೆಂಗಳೂರು(ಅ.14):  ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೆ ಚಾರ್ಜಿಂಗ್ ಸಮಸ್ಯೆ ಅತೀಯಾಗಿ ಕಾಡುತ್ತಿದೆ. ನಗರ ಪ್ರದೇಶಗಳಲ್ಲಿ ಹೇಗೋ ಹೊಂದಿಸಿಕೊಂಡು ಹೋಗಬಹುದು. ಆದರೆ ದೂರ ಪ್ರಯಾಣ, ಹೆದ್ದಾರಿಗಳಲ್ಲಿ ಪ್ರಯಾಣ ಸವಾಲಾಗಿದೆ. ಈ ಸಮಸ್ಯೆ ದೂರವಾಗಿಸಲು ಇದೀಗ ಬಿಪಿಸಿಎಲ್ ಮುಂದಾಗಿದೆ.  ದಕ್ಷಿಣ ಭಾರತದಲ್ಲಿ ವಿದ್ಯುತ್‌ಚಾಲಿತ ವಾಹನ ಚಾರ್ಜಿಂಗ್ ಕೇಂದ್ರ ಸ್ಥಾಪಿಸುವ ಎರಡನೇ ಹಂತಕ್ಕೆ ಬಿಪಿಸಿಎಲ್‌ ಚಾಲನೆ ನೀಡಿದೆ.  'ಮಹಾರತ್ನ' ಕೇಂದ್ರೋದ್ಯಮ ಮತ್ತು ಫಾರ್ಚೂನ್ ಗ್ಲೋಬಲ್ 500 ಕಂಪನಿಗಳಲ್ಲಿ ಒಂದಾಗಿರುವ, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್‌), ದಕ್ಷಿಣ ಭಾರತದ ಎರಡು ಕಾರಿಡಾರ್‌ಗಳಲ್ಲಿ ವಿದ್ಯುತ್‌ಚಾಲಿತ ವಾಹನಗಳ (ಇವಿ) ತ್ವರಿತ ಚಾರ್ಜಿಂಗ್ ಕೇಂದ್ರಗಳನ್ನು ಪ್ರಾರಂಭಿಸುವುದಾಗಿ  ಘೋಷಿಸಿದೆ. ಬೆಂಗಳೂರು-ಚೆನ್ನೈ ಮತ್ತು ಬೆಂಗಳೂರು-ಮೈಸೂರು-ಕೊಡಗು ಹೆದ್ದಾರಿಯಲ್ಲಿ ಈ ;ಇವಿ ಫಾಸ್ಟ್‌ ಚಾರ್ಜಿಂಗ್‌ ಸ್ಟೇಷನ್‌’ಗಳು ಕಾರ್ಯನಿರ್ವಹಿಸಲಿವೆ ಎಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಕಟಿಸಲಾಗಿದೆ.

ಈ ತ್ವರಿತಗತಿಯ ಚಾರ್ಜರ್‌ಗಳು ಸಿಸಿಎಸ್‌–2 (CCS-2) ವಿಧಾನ ಅನುಸರಿಸಲಿವೆ. ಮಾರ್ಗಗಳ ಎರಡೂ ಬದಿಗಳಲ್ಲಿ ಅಂದಾಜು 100 ಕಿಮೀ ಅಂತರದಲ್ಲಿ ಬಿಪಿಸಿಎಲ್‌ನ ಒಂಬತ್ತು ಪೆಟ್ರೋಲ್‌ ಪಂಪ್‌ಗಳಲ್ಲಿ ಈ ಚಾರ್ಜಿಂಗ್‌ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ದೇಶದ ಪ್ರಮುಖ ವಾಣಿಜ್ಯ ಕೇಂದ್ರಗಳು ಮತ್ತು ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿನ ತನ್ನ ಪೆಟ್ರೋಲ್‌ ಪಂಪ್‌ಗಳಲ್ಲಿ ಹಂತ ಹಂತವಾಗಿ ಸಿಸಿಎಸ್‌–2 ಇವಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಆರಂಭಿಸಲು  ಬಿಪಿಸಿಎಲ್‌  ಯೋಜಿಸಿದೆ. ಮೊದಲ ಹಂತದಲ್ಲಿ ಚೆನ್ನೈ-ತಿರುಚ್ಚಿ-ಮದುರೈ ಹೆದ್ದಾರಿಯಲ್ಲಿ ಈ ಚಾರ್ಜಿಂಗ್‌ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ.

Latest Videos

undefined

EV charging ಬೆಂಗಳೂರಲ್ಲಿ ಆರಂಭಗೊಳ್ಳುತ್ತಿದೆ 50 ಎಲೆಕ್ಟ್ರಿಕ್ ವಾಹನ ಚಾರ್ಚಿಂಗ್ ಪಾಯಿಂಟ್!

ಗ್ರಾಹಕರು 125 ಕಿಮೀವರೆಗಿನ ದೂರ ಕ್ರಮಿಸಲು ಸುಮಾರು 30 ನಿಮಿಷಗಳಲ್ಲಿ  ತಮ್ಮ ವಿದ್ಯುತ್‌ಚಾಲಿತ ವಾಹನಗಳನ್ನು ಚಾರ್ಜ್ ಮಾಡಲು 25 ಕೆಡಬ್ಲ್ಯು ವೇಗದ ಚಾರ್ಜರ್ ಕೇಂದ್ರಗಳು ಅನುವು ಮಾಡಿಕೊಡಲಿವೆ. ಬಿಪಿಸಿಎಲ್‌ನ ಬಳಕೆದಾರ ಸ್ನೇಹಿ ಹಣ ಪಾವತಿ ಮೊಬೈಲ್ ಆ್ಯಪ್‌ – ಹೆಲೊಬಿಪಿಸಿಎಲ್‌ (HelloBPCL) ಅನುಕೂಲತೆಯೊಂದಿಗೆ ಗ್ರಾಹಕರು ಸುಲಭವಾಗಿ ಹಣ ಪಾವತಿಸಬಹುದು. ಈ ಫಾಸ್ಟ್‌ ಚಾರ್ಜರ್‌, ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸಲಿದೆ. ಗ್ರಾಹಕರಿಗೆ ಅಗತ್ಯಬಿದ್ದರೆ ಸಿಬ್ಬಂದಿಯ ನೆರವು ಲಭ್ಯ ಇರಲಿದೆ.

ಇವಿ ಫಾಸ್ಟ್ ಚಾರ್ಜಿಂಗ್ ಕಾರಿಡಾರ್‌ಗೆ ಚಾಲನೆ ನೀಡಿದ ಸಮಾರಂಭದಲ್ಲಿ ಮಾತನಾಡಿದ ಬಿಪಿಸಿಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕ (ರಿಟೇಲ್‌) ಪಿ.ಎಸ್. ರವಿ , ‘ಭಾರತದ ವಿದ್ಯುತ್‌ಚಾಲಿತ ವಾಹನಗಳ (ಇವಿ) ಮಾರುಕಟ್ಟೆಯು ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹವಾಗಿ ಬೆಳವಣಿಗೆ ಕಂಡಿದೆ.  ಬೆಂಗಳೂರು-ಚೆನ್ನೈ ಹೆದ್ದಾರಿ ಮತ್ತು ಬೆಂಗಳೂರು-ಮೈಸೂರು-ಕೊಡಗು ಹೆದ್ದಾರಿಯಲ್ಲಿ ಆರಂಭಿಸಿರುವ ನಮ್ಮ ಈ ಇವಿ ಫಾಸ್ಟ್ ಚಾರ್ಜಿಂಗ್ ಕಾರಿಡಾರ್‌, ಶುದ್ಧ ಪರ್ಯಾಯ ಇಂಧನಗಳಿಗೆ ಪರಿವರ್ತನೆಯಾಗುವ ಭಾರತದ ವಿದ್ಯುತ್‌ಚಾಲಿತ ವಾಹನಗಳ (ಇವಿ) ಕನಸಿನ ಜೊತೆ ಜೋಡಣೆಗೊಂಡಿದೆ. ಶ್ರೇಷ್ಠ ದರ್ಜೆಯ ಸೇವೆ ಮತ್ತು ಅನುಭವ ಒದಗಿಸುವಲ್ಲಿ ಮುಂಚೂಣಿಯಲ್ಲಿ ಇರುವ ಬಿಪಿಸಿಎಲ್‌, ಈಗ ಎರಡು ಹೊಸ ಕಾರಿಡಾರ್‌ಗಳಲ್ಲಿ ನಮ್ಮ ವಿದ್ಯುತ್‌ಚಾಲಿತ ವಾಹನ (ಇವಿ) ಗ್ರಾಹಕರಿಗೆ ವಿಶಿಷ್ಟ ಬಗೆಯಲ್ಲಿ ಸೇವೆ ಸಲ್ಲಿಸಲು ಮುಂದಾಗಿದೆ. ವಿದ್ಯುತ್‌ಚಾಲಿತ ವಾಹನಗಳ ಬಳಕೆಯಲ್ಲಿ ಶುದ್ಧ ಅನುಭವ ಒದಗಿಸಲಿದೆ’ ಎಂದು ಹೇಳಿದ್ದಾರೆ.

ತ್ವರಿತ ಚಾರ್ಜಿಂಗ್‌ ಕೇಂದ್ರಗಳಿಗೆ ಚಾಲನೆ ನೀಡಿರುವ ಬಿಪಿಸಿಎಲ್‌, ಈಗ ಈ ಹೊಸ ವಹಿವಾಟಿಗೆ ವೇಗ ನೀಡಲು ಉದ್ದೇಶಿಸಿದೆ. ಮಧ್ಯಮಾವಧಿಯಿಂದ ಹಿಡಿದು ದೀರ್ಘಾವಧಿವರೆಗೆ  ತನ್ನ ಸಾಂಪ್ರದಾಯಿಕ 7,000 ಇಂಧನ ರಿಟೇಲ್‌ ಮಾರಾಟ ಕೇಂದ್ರಗಳನ್ನು  ಬಹುಬಗೆಯ ಇಂಧನ ಮಾರಾಟ ಕೇಂದ್ರಗಳನ್ನಾಗಿ ಪರಿವರ್ತಿಸುವ ಗುರಿ ಹೊಂದಿದೆ,

EV Charge Station ಅತೀ ದೊಡ್ಡ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಶನ್ ಆರಂಭ, ಏಕಕಾಲಕ್ಕೆ 1,00 ವಾಹನ ಚಾರ್ಜ್!

ಭಾರತ್ ಪೆಟ್ರೋಲಿಯಂನ (ಬಿಪಿಸಿಎಲ್‌) ಪೆಟ್ರೋಲ್‌ ಪಂಪ್‌ಗಳು  ಗ್ರಾಹಕರಿಗೆ ಶುದ್ಧ ಮತ್ತು ಆರೋಗ್ಯಕರ ವಾಷ್‌ರೂಮ್‌, ಎಟಿಎಂ, ಚಾರ್ಜ್ ಮಾಡುವಾಗ ಸುರಕ್ಷಿತ ಪಾರ್ಕಿಂಗ್, ಉಚಿತ ಡಿಜಿಟಲ್ ಏರ್ ಸೌಲಭ್ಯ, 24 ಗಂಟೆಗಳ ಕಾರ್ಯನಿರ್ವಹಣೆ ಮತ್ತಿತರ ಅನುಕೂಲತೆಗಳನ್ನು ಗ್ರಾಹಕರಿಗೆ ಒದಗಿಸಲಿವೆ. ಆಯ್ದ ಪೆಟ್ರೋಲ್‌ ಪಂಪ್‌ಗಳು ನೈಟ್ರೋಜನ್‌ ಫಿಲ್ಲಿಂಗ್‌ ಸೌಲಭ್ಯವನ್ನು ಸಹ ನೀಡಲಿವೆ.  ಹೆದ್ದಾರಿಯಲ್ಲಿನ ಭಾರತ್ ಪೆಟ್ರೋಲಿಯಂನ ಪೆಟ್ರೋಲ್‌ ಪಂಪ್‌ಗಳು ಪ್ರಮುಖ ಬ್ರ್ಯಾಂಡ್‌ಗಳಾದ ಮ್ಯಾಕ್‌ಡೊನಾಲ್ಡ್ಸ್, ಎ2ಬಿ, ಕ್ಯೂಬ್ ಸ್ಟಾಪ್, ಕೆಫೆ ಕಾಫಿ ಡೇ ಸೇರಿದಂತೆ ಇತರ ಸ್ಥಳೀಯ ಮಾರಾಟ ಮಳಿಗೆಗಳನ್ನು ಒಳಗೊಂಡಿರಲಿವೆ. ಭಾರತ್ ಪೆಟ್ರೋಲಿಯಂ, ತನ್ನ ಗ್ರಾಹಕರಿಗೆ ಹೆಚ್ಚಿನ ಅನುಕೂಲತೆ ಒದಗಿಸಲು ಹೆದ್ದಾರಿಗಳಲ್ಲಿನ ಪ್ರಮುಖ ಪೆಟ್ರೋಲ್‌ ಪಂಪ್‌ಗಳಲ್ಲಿ ತನ್ನ ಇನ್ ಆ್ಯಂಡ್‌ ಔಟ್ ಸರಣಿ ಮಳಿಗೆಗಳನ್ನು ಆರಂಭಿಸಲೂ ಯೋಜಿಸಿದೆ.
 

click me!