ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದರೆ ಜೋಕೆ, ಬೆಂಗಳೂರಿನ ಪೇ & ಪಾರ್ಕ್ 685 ರಸ್ತೆಗೆ ವಿಸ್ತರಣೆ!

By Suvarna NewsFirst Published Oct 26, 2022, 5:54 PM IST
Highlights

ರಸ್ತೆ ಖಾಲಿ ಇದೆ, ರೋಡ್ ಮಾರ್ಜಿನ್ ದೂರ ಇದೆ ಎಂದು ಪಾರ್ಕಿಂಗ್ ಮಾಡಿದರೆ ನಿಮ್ಗೆ ಬಿಲ್ ತಪ್ಪಿದ್ದಲ್ಲ. ಕಾರಣ ಇದೀಗ ಬೆಂಗಳೂರಿನ ರಸ್ತೆ ಮೇಲಿನ ಪೇ ಅಂಡ್ ಪಾರ್ಕಿಂಗ್ 685 ರಸ್ತೆಗಳಿಗೆ ವಿಸ್ತರಿಸಲಾಗಿದೆ. 

ಬೆಂಗಳೂರು(ಅ.26): ನಗರದ ರಸ್ತೆಗಳಲ್ಲಿ ವಾಹನ ಪಾರ್ಕಿಂಗ್ ಮಾಡುವಾಗ ಅತೀವ ಎಚ್ಚರ ವಹಿಸಬೇಕು. ನೋ ಪಾರ್ಕಿಂಗ್ ಆಗಿದ್ದರೆ ದಂಡ ಖಚಿತ, ಇಲ್ಲದಿದ್ದರೆ ಪಾರ್ಕಿಂಗ್ ಚಾರ್ಜ್ ಕಟ್ಟಬೇಕು. ರಸ್ತೆ ಖಾಲಿ ಇದೆ ಎಂದು ವಾಹನ ನಿಲ್ಲಿಸಿದರೆ ಗಂಟೆ ಇಂತಿಷ್ಟು ಎಂದು ಪಾರ್ಕಿಂಗ್ ಚಾರ್ಜ್ ನೀಡಬೇಕು. ಈ ನಿಯಮ ಈಗಾಗಲೇ ಹಲವು ಪರ ವಿರೋಧಕ್ಕೂ ಕಾರಣವಾಗಿದೆ. ಇದೀಗ ಬೆಂಗಳೂರಿನ 685 ರಸ್ತೆಗಳಿಗೆ ಪೇ ಅಂಡ್ ಪಾರ್ಕಿಂಗ್ ವಿಸ್ತರಿಸಲಾಗಿದೆ.  ಬಿಬಿಎಂಪಿ ಬೆಂಗಳೂರಿನ 8 ವಲಯಗಳಲ್ಲಿ  24,387 ದ್ವಿಚಕ್ರ ವಾಹನಗಳು ಹಾಗೂ  2,834 ಕಾರುಗಳಿಗೆ ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆ ಪರಿಚಿಯಿಸುತ್ತಿದೆ.  ಈಗಾಗಲೇ ಬೆಂಗಳೂರಿನ ಕೇಂದ್ರ ಬಾಗದಲ್ಲಿ 85 ರಸ್ತೆಗಳಲ್ಲಿ ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಿದೆ. ಈ ವ್ಯವಸ್ಥೆಯನ್ನು ಇದೀಗ ವಿಸ್ತರಿಸಿದೆ. ಅಕ್ಟೋಬರ್ ಅಂತ್ಯದಲ್ಲಿ ಟೆಂಡರ್ ಕರೆದು ಎಲ್ಲಾ ಪ್ರಕ್ರಿಯೆ ಅಂತಿಮಗೊಳಿಸಲು ಬಿಬಿಎಂಪಿ ಸಜ್ಜಾಗಿದೆ. ಹೆಚ್ಚು ಕಡಿಮೆ ನವೆಂಬರ್ ತಿಂಗಳಿನಿಂದ ಟೆಂಡರ್ ಖರೀದಿಸಿದ ಸಂಸ್ಥೆಗಳು ರಸ್ತೆಯಲ್ಲಿ ಪಾರ್ಕಿಂಗ್ ಮಾಡಿದವರಿಂದ ಹಣ ವಸೂಲಿ ಮಾಡಲಿದೆ.

ರಸ್ತೆಗಳಲ್ಲಿ ಪಾರ್ಕಿಂಗ್ ಮಾಡುವವರಿಂದ ಹಣ ವಸೂಲಿ ಮಾಡಲು ಮೂರು ವಿಭಾಗ ಮಾಡಲಾಗಿದೆ. ಕೆಟಗರಿ ಎ , ಬಿ ಹಾಗೂ ಸಿ ವಿಭಾಗಗಳಿವೆ. ಎ ಕೆಟಗರಿಯಲ್ಲಿ ಪ್ರತಿ ಗಂಟೆಗೆ ದ್ವಿಚಕ್ರವಾಹನಕ್ಕೆ 15 ರೂಪಾಯಿ, ಕಾರಿಗೆ 30 ರೂಪಾಯಿ ಚಾರ್ಜ್ ಮಾಡಲಾಗುತ್ತದೆ. ಇನ್ನು ಬಿ ಕೆಟಗರಿಯಲ್ಲಿ ಪ್ರತಿ ಗಂಟೆಗೆ ದ್ವಿಚಕ್ರವಾಹನ ಪಾರ್ಕಿಂಗ್ 10 ರೂಪಾಯಿ ಕಾರು ಪಾರ್ಕಿಂಗ್ 20 ರೂಪಾಯಿ ಚಾರ್ಜ್ ಮಾಡಲಾಗುತ್ತದೆ. ಇನ್ನು ಸಿ ಕೆಟಗರಿಯಲ್ಲಿ ಪ್ರತಿ ಗಂಟೆಗೆ ದ್ವಿಚಕ್ರವಾಹನ 5 ರೂಪಾಯಿ ಹಾಗೂ ಕಾರು 15 ರೂಪಾಯಿ ಚಾರ್ಜ್ ಮಾಡಲಾಗುತ್ತದೆ.

ಸಂಚಾರ ದಟ್ಟಣೆ ತಪ್ಪಿಸಲು ಪಾರ್ಕಿಂಗ್‌ ವ್ಯವಸ್ಥೆ ಜಾರಿ

ದಕ್ಷಿಣ ಬೆಂಗಳೂರಿನ 197 ರಸ್ತೆ,  ಪಶ್ಚಿಮ ಬೆಂಗಳೂರಿನ 137 ರಸ್ತೆ, ದಾಸರಹಳ್ಳಿಯ 104 ರಸ್ತೆಗಳು, ಈಸ್ಟ್ ಜೋನ್‌ನ 59 ರಸ್ತೆಗಳನ್ನು ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆಗೆ ಗುರುತಿಸಲಾಗಿದೆ.  ಈ ರಸ್ತೆಗಳಲ್ಲಿ ವಾಹನ ಪಾರ್ಕಿಂಗ್ ಮಾಡಿದರು ಗಂಟೆ ಚಾರ್ಜ್ ಮಾಡಲಾಗುತ್ತದೆ.  ಆದರೆ ಈ ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆಯಿಂದ ಮೈಕ್ರೋ ಮೊಬೈಲಿಟಿಗಳಾದ ಯುಲು, ಆಟೋರಿಕ್ಷಾ, ವಿಶೇಷ ಚೇತನರ ವಾಹನ, ಲಘು ವಾಣಿಜ್ಯ ವಾಹನ ಹಾಗೂ ಸೈಕಲ್‌ಗಳಿಗೆ ಯಾವುದೇ ಚಾರ್ಜ್ ಇರುವುದಿಲ್ಲ.

BEL ರಸ್ತೆ, ಜಾಲಹಳ್ಳಿ ರಸ್ತೆ, ಲಗ್ಗೆರೆ ಮುಖ್ಯ ರಸ್ತೆ, ವಿದ್ಯಾರಣ್ಯಪುರ ರಸ್ತೆ, ಉತ್ತರಹಳ್ಳಿ ರಸ್ತೆ, ಪುಟ್ಟೇನಹಳ್ಳಿ ರಸ್ತೆ ಹುಳಿಮಾವು ರಸ್ತೆ, ವಿಜಯ್ ಬ್ಯಾಂಕ್ ಎನ್‌ಕ್ಲೇವ್ ರಸ್ತೆ, AECS ರಸ್ತೆ, ಕೆಂಗೇರಿ ರಸ್ತೆ, ಅಬ್ಬಿಗೆರಿ ರಸ್ತೆ ಪೈಪ್‌ಲೈನ ರಸ್ತೆ, ಹೆಸರಘಟ್ಟ ರಸ್ತೆ, ಹೂಡಿ ಮುಖ್ಯರಸ್ತೆ, ವೈಟ್‌ಫೀಲ್ಡ್ ಮುಖ್ಯ ರಸ್ತೆ, ITPL ಮುಖ್ಯ ರಸ್ತೆ, ಚನ್ನಸಂದ್ರ ಮುಖ್ಯ ರಸ್ತೆ, ಬೆೋರ್‌ವೆಲ್ ರಸ್ತೆ, ಜಕ್ಕೂರು ರಸ್ತೆ, ಯಲಹಂಕಾ ರಸ್ೆ, ಕೋಗಿಲು ರಸ್ತೆ, ತಣಿಸಂದ್ರ ರಸ್ತೆ, RMC ಯಾರ್ಡ್ ರಸ್ತೆ, ಯಶವಂತಪುರ ರಸ್ತೆ, ಮಾಗಡಿ ಮುಖ್ಯರಸ್ತೆ, ಚಂದ್ರಲೇಔಟ್ ರಸ್ತೆ ಸೇರಿದಂತೆ ಹಲವು ರಸ್ತೆಗಳನ್ನು ಪೇ ಅಂಡ್ ಪಾರ್ಕಿಂಗ್ ರಸ್ತೆ ಎಂದು ಗುರುತಿಸಲಾಗಿದೆ.  

ಈ ಜಾಗದಲ್ಲಿ ನೀವು ಸೆಕೆಂಡ್‌ಗಳ ಕಾಲವೂ ವಾಹನ ಪಾರ್ಕಿಂಗ್ ಮಾಡುವಂತಿಲ್ಲ..!

ನಿಗದಿತ ಸಮಯ ಹೊರತುಪಡಿಸಿ ಬೇರೆ ಸಮಯದಲ್ಲಿ ಪಾರ್ಕಿಂಗ್ ಮಾಡದರೆ 500 ರೂಪಾಯಿ ದಂಡ ವಿಧಿಸಲಾಗುತ್ತದೆ.  ನಿಗದಿತ ಸಮಯಕ್ಕಿಂತ 10 ನಿಮಿಷ ತಡವಾದರೂ 500 ರೂಪಾಯಿ ದಂಡ ವಿಧಿಸಲಾಗುತ್ತದೆ. ಇದನ್ನು ಹಲವರು ವಿರೋಧಿಸಿದ್ದಾರೆ. ಹೆಚ್ಚುವರಿ ಸಮಯಕ್ಕೆ ಹೆಚ್ಚುವರಿ ಹಣ ಪಡೆಯುವುದು ಸೂಕ್ತ. ದಂಡ ವಿಧಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ನಿಗದಿತ ಸಮಯ ಮೀರಿದರೆ ಮೊಬೈಲ್ ಮೂಲಕ ಸ್ಲಾಟ್ ವಿಸ್ತರಿವು ಅವಕಾಶ ನೀಡಲಾಗಿದೆ. ಈ ಮೂಲಕ ಸ್ಲಾಟ್ ವಿಸ್ತರಿಸಿ ಸಮಯದ ಚಾರ್ಜ್ ನೀಡಬಹುದು ಎಂದು ಬಿಬಿಎಂಪಿ ಹೇಳಿದೆ.

click me!