ಎಚ್ ಡಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅಧಿಕಾರ ಇಲ್ಲದೇ ಹುಚ್ಚರಾಗುತ್ತಿದ್ದಾರೆ ಎಂದು ಖಡಕ್ ವಾಗ್ದಾಳಿ ನಡೆಸಲಾಗಿದೆ.
ದಾವಣಗೆರೆ [ಅ.07]: ಅಧಿಕಾರಿ ಕಳೆದುಕೊಂಡು ಹುಚ್ಚರಾಗುತ್ತಿರುವ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ನಿನ್ನೆ ತನಕ ಕೇಂದ್ರದಿಂದ ಪರಿಹಾರ ಬಂದಿಲ್ಲ ಎನ್ನುತ್ತಿದ್ದವರು ಈಗ ಪರಿಹಾರ ಬಂದ ಮೇಲೆ ಇಷ್ಟೇನಾ ಎನ್ನುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಗೆ ನಾನು ಕೇಳಲು ಬಯಸುತ್ತೇನೆ. ನಿನ್ನೆ ತನಕ ಪರಿಹಾರವೇ ಬಂದಿಲ್ಲವೆಂದು ಬಡಿದುಕೊಂಡಿರಿ. ಇದೀಗ ಪರಿಹಾರದ ಹಣ ಬಂದ ಮೇಲೆ ಇಷ್ಟೇನಾ ಎನ್ನುತ್ತಿದ್ದೀರಲ್ಲ ಎಂದು ಕಿಡಿಕಾರಿದರು.
ಜೆಡಿಎಸ್‌ನ ಕುಮಾರಸ್ವಾಮಿ ವಿರೋಧ ಪಕ್ಷದ ಸ್ಥಾನಕ್ಕೆ ಪ್ರಯತ್ನಿಸುತ್ತಿದ್ದಾರೆ. ಇನ್ನು ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ನಂತರ ಏನೋ ಕಳೆದು ಕೊಂಡಂತಹ ನೋವಿನಲ್ಲಿದ್ದು, ಹೇಗಾದರೂ ಮಾಡಿ ವಿಪಕ್ಷ ನಾಯಕ ಸ್ಥಾನವನ್ನಾದರೂ ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ವಿಪಕ್ಷಗಳ ನಾಯಕರು ಟೀಕೆ ಮಾಡಬೇಕು. ವಿರೋಧ ಪಕ್ಷದ ನಾಯಕ ಸ್ಥಾನ ಸಿಗುತ್ತದೋ, ಇಲ್ಲವೋ ಎಂಬುದಕ್ಕೆ ವಿಲಿವಿಲಿ ಒದ್ದಾಡುತ್ತಿದ್ದಾರೆ. ಈಗ ರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ ಮಾತನಾಡುತ್ತಿದ್ದಾರೆ. ಏನಾದರೂ ಮಾಡಿ ಬಿಜೆಪಿ ಸರ್ಕಾರವನ್ನು ಟೀಕಿಸಲೇಬೇಕೆಂಬ ಕಾರಣಕ್ಕೆ ಟೀಕೆ ಟೀಕಾ ಪ್ರಹಾರ ನಡೆಸಿದ್ದಾರೆ ಎಂದು ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ವರ್ತನೆ ವಿರುದ್ಧ ಈಶ್ವರಪ್ಪ ಹರಿಹಾಯ್ದರು.