
ಬೆಂಗಳೂರು/ದಾವಣಗೆರೆ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ವಿರುದ್ಧ ಮಸೀದಿಯಲ್ಲಿ ಗಂಡ ದೂರು ನೀಡಿದ ನಂತರ ಯುವಕರ ಗುಂಪೊಂದು ಆತನ ಪತ್ನಿ ಮೇಲೆ ಅಮಾನವೀಯವಾಗಿ ದೊಣ್ಣೆಯಿಂದ ಹಲ್ಲೆ ನಡೆಸಿದ ಅಮಾನವೀಯ ಘಟನೆ ಕರ್ನಾಟಕದ ದಾವಣಗೆರೆಯಲ್ಲಿ ನಡೆದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಕಳೆದ ವಾರ ದಾವಣಗೆರೆಯಲ್ಲಿ ಈ ಘಟನೆ ನಡೆದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 38 ವರ್ಷದ ಮಹಿಳೆಯ ಮೇಲೆ ಪತಿ ದೂರು ನೀಡಿದ್ದ ಇದಾದ ನಂತರ ಈ ಮಸೀದಿ ಮುಂದೆಯೇ ಈ ಹಲ್ಲೆ ನಡೆದಿದೆ. ಶಬೀನಾ ಬಾನು ಹಲ್ಲೆಗೊಳಗಾದ ಮಹಿಳೆ.
ಘಟನೆಯ ಹಿನ್ನೆಲೆ
ಮನೆ ಕೆಲಸದಾಕೆಯಾಗಿ ಕೆಲಸ ಮಾಡುತ್ತಿದ್ದ ಶಬೀನಾ ಬಾನು ಏಪ್ರಿಲ್ 7 ರಂದು ಮನೆಯಲ್ಲಿದ್ದಾಗ ಆಕೆಯ ಸಂಬಂಧಿಯಾಗಿದ್ದ ನಸ್ರೀನ್ ಹಾಗೂ ಆಕೆಯ ಗಂಡ ಫಯಾಜ್ ಆಕೆಯನ್ನು ಭೇಟಿಯಾಗಲು ಬಂದಿದ್ದಾರೆ. ಇದಾದ ನಂತರ ಮೂವರು ಜೊತೆಯಾಗಿ ಬುಕ್ಕಂಬುಡಿ ಎಂಬಲ್ಲಿರುವ ಹಿಲ್ ಸ್ಟೇಷನ್‌ಗೆ ಹೋಗಿದ್ದಾರೆ. ನಂತರ ವಾಪಸ್ ಮೂವರು ಶಬೀನಾಳ ಮನೆಗೆ ಬಂದಿದ್ದಾರೆ. ಇವರು ಮನೆಗೆ ಮರಳಿ ಬಂದ ನಂತರ ಶಬೀನಾಳ ಗಂಡ ಜಮೀಲ್ ಅಹ್ಮದ್ ಕೂಡ ಮನೆಗೆ ಬಂದಿದ್ದಾನೆ. ಮನೆಗೆ ಬಂದವನೇ ಮನೆಯಲ್ಲಿ ಶಬೀನಾಳ ಸಂಬಂಧಿಕರು ಇರುವುದು ನೋಡಿ ಕೋಪಗೊಂಡಿದ್ದಾನೆ. ಅಲ್ಲದೇ ಈತ ಅಲ್ಲಿನ ಸ್ಥಳೀಯ ಮಸೀದಿಯಲ್ಲಿ ದೂರು ನೀಡಿದ್ದಾನೆ.
ಇದಾಗಿ 2 ದಿನದ ನಂತರ ಏಪ್ರಿಲ್ 9 ರಂದು ಮೂವರಿಗೂ ಮಸೀದಿಯಿಂದ ಸಮನ್ಸ್ ಬಂದಿದೆ. ಇವರು ಮಸೀದಿಯನ್ನು ತಲುಪುತ್ತಿದ್ದಂತೆ ಅಲ್ಲಿದ್ದ ಆರು ಜನರ ಗುಂಪು ಪೈಪು ಹಾಗೂ ಕೋಲುಗಳಿಂದ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ. ಈ ಹಲ್ಲೆಯಿಂದ ಶಬೀನಾ ಗಂಭೀರ ಗಾಯಗೊಂಡಿದ್ದಾರೆ. ಈಗ ಆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಘಟನೆಯ ವಿಡಿಯೋ ವೈರಲ್ ಆದ ಸ್ವಲ್ಪ ಸಮಯದ ನಂತರ ಆರು ಆರೋಪಿಗಳನ್ನು ಈಗ ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಪಿತೂರಿ, ಹಲ್ಲೆ ಮತ್ತು ಕೊಲೆ ಯತ್ನ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳನ್ನು ಚಾಲಕ ಮೊಹಮ್ಮದ್ ನಿಯಾಜ್ (32), ಗುಜುರಿ ವ್ಯಾಪಾರಿ ಮೊಹಮ್ಮದ್ ಗೌಸ್ಪೀರ್ (45), ಕಬ್ಬಿನ ರಸ ಮಾರಾಟಗಾರ ಚಾಂದ್ ಬಾಷಾ (35), ಬೈಕ್ ಮೆಕ್ಯಾನಿಕ್ ದಸ್ತಗೀರ್ (24), ಬುಕ್ಕಂಬುಡಿ ಸರೋವರದ ಮೀನುಗಾರ ರಸೂಲ್ ಟಿ ಆರ್ (42) ಮತ್ತು ಸ್ಥಳೀಯ ನಿವಾಸಿ ಇನಾಯತ್ ಉಲ್ಲಾ (51) ಎಂದು ಗುರುತಿಸಲಾಗಿದೆ.
ಕಸ ಸಂಗ್ರಹಗಾರರ ಪ್ರತಿಭಟನೆ: ಕೊಳೆತು ನಾರುತ್ತಿರುವ ಯುಕೆಯ ಬರ್ಮಿಂಗ್ ಹ್ಯಾಮ್
ಲಂಡನ್: ಪೌರ ಕಾರ್ಮಿಕರು ಅಥವಾ ಕಸ ಸಂಗ್ರಹಕಾರರು ನಗರದ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರು ಒಂದು ದಿನ ಕೆಲಸ ಮಾಡದೇ ಹೋದರೂ ನಗರ ಗಬ್ಬೆದ್ದು ನಾರುವುದರಲ್ಲಿ ಯಾವುದೇ ಸಂಶಯವಿಲ್ಲ, ಇದಕ್ಕೊಂದು ಉದಾಹರಣೆ ಬರ್ಮಿಂಗ್‌ಹ್ಯಾಮ್‌ನ ಈ ದೃಶ್ಯಾವಳಿಗಳು. ಒಂದು ಕಾಲದಲ್ಲಿ ಇಡೀ ಪ್ರಪಂಚವನ್ನು ಆಳಿದ ಬ್ರಿಟಿಷ್ ರಾಜಮನೆತನದ ವೈಭವಕ್ಕೆ ಹೆಸರಾಗಿರುವ ಬರ್ಮಿಂಗ್ ಹ್ಯಾಮ್ ನಗರದಲ್ಲಿ ಈಗ ಜನ ಪ್ರವಾಸಿಗರು ಅಕ್ಷರಶಃ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಯುನೈಟೆಟ್ ಕಿಂಗ್ಡಮ್(UK)ಅಂದರೆ ಬ್ರಿಟನ್‌ನ ಬರ್ಮಿಂಗ್ ಹ್ಯಾಮ್‌ನಲ್ಲಿ ಕಸ ಸಂಗ್ರಹಕಾರರ ಪ್ರತಿಭಟನೆಯಿಂದಾಗಿ ಇಡೀ ನಗರ ಗಬ್ಬು ವಾಸನೆ ಹೊಡೆಯುತ್ತಿದೆ. ದಾರಿಬದಿಗಳಲ್ಲಿ ಎಸೆದ ಕಸವೂ ಇಲಿ ಹೆಗ್ಗಣಗಳಿಗೆ ಪೌಷ್ಠಿಕ ಆಹಾರದಂತಾಗಿದ್ದು, ಬೆಕ್ಕಿನ ಗಾತ್ರದ ಇಲ್ಲಿ ಹೆಗ್ಗಣಗಳು ರಸ್ತೆಗಳಲ್ಲಿ ಓಡಾಡುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ. ಈ ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾವಿರಾರು ಜನ ವೀಕ್ಷಿಸಿದ್ದಾರೆ. ಅಲ್ಲದೇ ಹಲವು ರೀತಿಯ ಕಾಮೆಂಟ್ ಮಾಡುತ್ತಿದ್ದಾರೆ.