
ನಾನು ಕರ್ನಾಟಕದಾದ್ಯಂತ ಎಷ್ಟು ಹೆಚ್ಚು ಪ್ರಯಾಣಿಸುತ್ತೇನೋ, ಅಷ್ಟೂ ಈ ಸುಂದರ ರಾಜ್ಯ ನನ್ನನ್ನು 'ವಾವ್!' ಎನ್ನುವಂತೆ ಮಾಡುತ್ತಿದೆ. “ಕೆ.ಎಲ್. ರಾಹುಲ್ ಬಿಟ್ಟರೆ, ನಾನೇ ನಿಮ್ಮೂರಿನ ಮಗ” ಎಂದು ತುಳು ಭಾಷೆಯಲ್ಲೇ ಮಾತನಾಡುವ ಮೂಲಕ ಭಾರತ ಕ್ರಿಕೆಟ್‌ನ ಮಾಜಿ ಆಟಗಾರ, ಹಾಲಿ ಆರ್‌ಸಿಬಿ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ (Dinesh Karthik) ಕನ್ನಡಿಗರ ಮನಗೆದ್ದಿದ್ದಾರೆ.
ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಹೆಗ್ಗುರುತು ಹಾಗೂ ತುಳುನಾಡಿನ ಗಂಡುಕಲೆಯಾಗಿರುವ 'ಹುಲಿವೇಷ' (ಪಿಲಿನಲಿಕೆ) ಇಂದು ಜಾಗತಿಕ ಮಟ್ಟದಲ್ಲಿ ರಾರಾಜಿಸುತ್ತಿದೆ. ಕರಾವಳಿಗೆ ಮಾತ್ರ ಸೀಮಿತವಾಗದೇ ಸಿನಿಮಾಗಳಲ್ಲೂ ಭಾರೀ ಸದ್ದು ಮಾಡುತ್ತಿರುವ ಹುಲಿವೇಷಕ್ಕೆ ಮತ್ತಷ್ಟು ಕಳೆಕಟ್ಟುವ ನಿಟ್ಟಿನಲ್ಲಿ ಯುವ ಮುಖಂಡ ಮಿಥುನ್ ರೈ ನೇತೃತ್ವದಲ್ಲಿ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಅಕ್ಟೋಬರ್ 20 ರಿಂದ 11ನೇ ವರ್ಷದ 'ಪಿಲಿನಲಿಕೆ' ಸ್ಪರ್ಧೆಯನ್ನು ಅತ್ಯಂತ ಅದ್ಧೂರಿಯಾಗಿ ಆಯೋಜಿಸಲಾಗಿದೆ. ಈ ಜಾನಪದ ಮಹೋತ್ಸವಕ್ಕೆ ದಿನೇಶ್ ಕಾರ್ತಿಕ್ ಮುಖ್ಯ ಅತಿಥಿಯಾಗಿ ಆಗಮಿಸಿ, ತುಳು ಭಾಷೆಯಲ್ಲೇ ಮಾತನಾಡಿ ಇಡೀ ಕರಾವಳಿ ಜನತೆಯ ಮನಗೆದ್ದಿದ್ದಾರೆ.
ಪಿಲಿನಲಿಕೆ ವೇದಿಕೆ ಏರುತ್ತಿದ್ದಂತೆ ಮೈಕ್ ಕೈಗೆತ್ತಿಕೊಂಡ ದಿನೇಶ್ ಕಾರ್ತಿಕ್, ಸ್ಥಳೀಯರೊಂದಿಗೆ ಅಚ್ಚ ತುಳು ಭಾಷೆಯಲ್ಲೇ ಸಂಭಾಷಣೆ ನಡೆಸಿದರು. "ಕೆ.ಎಲ್. ರಾಹುಲ್ ಬಿಟ್ರೆ ನಾನೇ ನಿಮ್ಮೂರಿನ ಮಗ" ಎಂದು ತುಳುವಿನಲ್ಲಿ ಹೇಳುವ ಮೂಲಕ ಮೈದಾನದಲ್ಲಿದ್ದ ಸಾವಿರಾರು ಪ್ರೇಕ್ಷಕರನ್ನು ರೋಮಾಂಚನಗೊಳಿಸಿದರು. ಹುಲಿವೇಷಧಾರಿಗಳ ಅತ್ಯದ್ಭುತ ಕುಣಿತ ಹಾಗೂ ಕಸರತ್ತುಗಳನ್ನು ಕಣ್ತುಂಬಿಕೊಂಡು ಮನಸಾರೆ ಕೊಂಡಾಡಿದರು. ಕಾರ್ಯಕ್ರಮ ಮುಗಿದ ಬಳಿಕ ದಿನೇಶ್ ಕಾರ್ತಿಕ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪಿಲಿನಲಿಕೆಯ ಅದ್ಭುತ ಕ್ಷಣಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮಂಗಳೂರಿನ ಕ್ರಿಕೆಟಿಗ ಕೆ.ಎಲ್. ರಾಹುಲ್ ಅವರನ್ನು ಟ್ಯಾಗ್ ಮಾಡುತ್ತಾ ಕರ್ನಾಟಕದ ಬಗ್ಗೆ ಮನದಾಳದ ಪ್ರೀತಿಯನ್ನು ಈ ಕೆಳಗಿನಂತೆ ವ್ಯಕ್ತಪಡಿಸಿದ್ದಾರೆ:
"ನನ್ನ ತುಳು ಹೇಗಿದೆ? ಮಂಗಳೂರಿಗೆ ಹಾರಿ ಬಂದು, ಪಿಲಿನಲಿಕೆಯ ಅದ್ಭುತ ಅನುಭವ ಪಡೆದುಕೊಳ್ಳಲು ಮತ್ತು ಅಭಿಮಾನಿಗಳ ಆರ್‌ಸಿಬಿ (RCB) ಜಯಘೋಷವನ್ನು ಕಣ್ತುಂಬಿಕೊಳ್ಳಲು ಸಿಕ್ಕ ಅವಕಾಶ ಅದ್ಭುತವಾಗಿತ್ತು! ನಾನು ಕರ್ನಾಟಕದಾದ್ಯಂತ ಎಷ್ಟು ಹೆಚ್ಚು ಪ್ರಯಾಣಿಸುತ್ತೇನೋ, ಅಷ್ಟೂ ಈ ಸುಂದರ ರಾಜ್ಯ ನನ್ನನ್ನು 'ವಾವ್!' ಎಂದು ಮೂಕವಿಸ್ಮಿತನನ್ನಾಗಿ ಮಾಡುತ್ತದೆ!" ಎಂದು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಲೈಕ್ಸ್‌ಗಳು ಹಾಗೂ ಮೆಚ್ಚುಗೆಯ ಕಾಮೆಂಟ್‌ಗಳು ಹರಿದುಬರುತ್ತಿವೆ.
ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಹಲವು ಬಾರಿ ಅಸಾಧ್ಯವಾದ ಪಂದ್ಯಗಳನ್ನು ಗೆಲ್ಲಿಸಿಕೊಟ್ಟು ಅಭಿಮಾನಿಗಳ ಪಾಲಿಗೆ 'ಮ್ಯಾಚ್ ಫಿನಿಶರ್' ಆಗಿದ್ದ ದಿನೇಶ್ ಕಾರ್ತಿಕ್, ನಿವೃತ್ತಿಯ ಬಳಿಕವೂ ಕರ್ನಾಟಕದ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಅಪಾರ ಗೌರವ ಉಳಿಸಿಕೊಂಡಿದ್ದಾರೆ. ಈ ಹಿಂದೆ ಹಲವು ವೇದಿಕೆಗಳಲ್ಲಿ ಕನ್ನಡ ಮತ್ತು ಬೆಂಗಳೂರಿನ ಜನರ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ್ದ ಕಾರ್ತಿಕ್, ಈಗ ಕರಾವಳಿಯ ತುಳು ಭಾಷೆಯಲ್ಲೂ ಮಾತನಾಡಿ, 'ನಾನು ನಿಮ್ಮೂರಿನ ಮಗ' ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಮೂಲಕ ಕನ್ನಡಿಗರ ಹೃದಯಕ್ಕೆ ಮತ್ತಷ್ಟು ಆಪ್ತರಾಗಿದ್ದಾರೆ.