ಹಸಿದ ಹೊಟ್ಟೆಗೆ ಅನ್ನ, ಗಾಯಗೊಂಡ ಜೀವಕ್ಕೆ ಆಸರೆ: 800ಕ್ಕೂ ಹೆಚ್ಚು ಬೀದಿನಾಯಿ ಹಸಿವು ನೀಗಿಸುತ್ತಿರುವ ಮಂಗಳೂರು ಮಹಿಳೆ

Published : Oct 05, 2026, 12:14 PM IST
Mangaluru Woman Feeds 800 Stray Dogs Every Day Has Spent 25 Years Saving Animals

ಸಾರಾಂಶ

ಮನೆಯಲ್ಲೇ ಮುದ್ದಿನಿಂದ ಸಾಕಿದ ನಾಯಿಗಳು ಮರಿ ಹಾಕಿದಾಗ ಅಥವಾ ವಯಸ್ಸಾದಾಗ ಅವುಗಳನ್ನು ಬೀದಿಗೆ ತಳ್ಳುವವರ ಸಂಖ್ಯೆ ಕಡಿಮೆಯೇನಿಲ್ಲ. ಆದರೆ ಮಂಗಳೂರಿನ ಈ ಮಹಿಳೆ ಕಳೆದ 25 ವರ್ಷಗಳಿಂದ ಬೀದಿನಾಯಿಗಳ ಪಾಲಿಗೆ ತಾಯಿಯಂತೆ ನಿಂತಿದ್ದಾರೆ.

ಮನೆಯಲ್ಲೇ ಮುದ್ದಿನಿಂದ ಸಾಕಿದ ನಾಯಿಗಳು ಮರಿ ಹಾಕಿದಾಗ ಅಥವಾ ವಯಸ್ಸಾದಾಗ ಅವುಗಳನ್ನು ಬೀದಿಗೆ ತಳ್ಳುವವರ ಸಂಖ್ಯೆ ಕಡಿಮೆಯೇನಿಲ್ಲ. ಆದರೆ ಮಂಗಳೂರಿನ ಈ ಮಹಿಳೆ ಕಳೆದ 25 ವರ್ಷಗಳಿಂದ ಬೀದಿನಾಯಿಗಳ ಪಾಲಿಗೆ ತಾಯಿಯಂತೆ ನಿಂತಿದ್ದಾರೆ. ಹಸಿವಿನಿಂದ ಬಳಲುವ ಮೂಕಪ್ರಾಣಿಗಳಿಗೆ ಅನ್ನ ನೀಡುವುದರ ಜತೆಗೆ, ಅನಾಥ ಹಾಗೂ ಗಾಯಗೊಂಡ ಪ್ರಾಣಿಗಳಿಗೆ ತಮ್ಮ ಮನೆಯಲ್ಲೇ ಆಶ್ರಯ ನೀಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ರಜನಿ ದಾಮೋದರ್ ಶೆಟ್ಟಿ ಅವರು ಕಳೆದ ಎರಡೂವರೆ ದಶಕಗಳಿಂದ ಪ್ರಾಣಿಗಳ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿದಿನ ನಗರದ ವಿವಿಧ ಭಾಗಗಳಿಗೆ ತೆರಳಿ ಸುಮಾರು 700ರಿಂದ 800ಕ್ಕೂ ಹೆಚ್ಚು ಬೀದಿನಾಯಿಗಳಿಗೆ ಆಹಾರ ನೀಡುತ್ತಿರುವ ಅವರು, ಪ್ರಾಣಿಗಳ ರಕ್ಷಣೆಗೂ ಮುಂದಾಗಿದ್ದಾರೆ.

ಒಂದು ದೃಶ್ಯ ಬದಲಿಸಿತು ರಜನಿ ಶೆಟ್ಟಿ ಅವರ ಬದುಕು

ಮೂಲತಃ ಮುಂಬೈನವರಾದ ರಜನಿ ಶೆಟ್ಟಿ ಅವರು ಮದುವೆಯ ಬಳಿಕ ಮಂಗಳೂರಿನಲ್ಲಿ ನೆಲೆಸಿದರು. ಸುಮಾರು 25 ವರ್ಷಗಳ ಹಿಂದೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಕಂಡ ಒಂದು ದೃಶ್ಯ ಅವರ ಮನಸ್ಸನ್ನು ಕಲುಕಿತು. ಹಸಿವಿನಿಂದ ಬಳಲುತ್ತಿದ್ದ ನಾಯಿಯೊಂದು ಮನುಷ್ಯರು ತಿಂದು ಎಸೆದಿದ್ದ ಕಸದ ಪೇಪರ್ ಅನ್ನು ತಿನ್ನುತ್ತಿರುವುದನ್ನು ಅವರು ನೋಡಿದರು. ಆ ದೃಶ್ಯವನ್ನು ಕಂಡ ಬಳಿಕ ಬೀದಿನಾಯಿಗಳಿಗೆ ಊಟ ಹಾಕಬೇಕು ಎಂಬ ನಿರ್ಧಾರಕ್ಕೆ ಬಂದರು. “ಮನುಷ್ಯರು ತಿಂದು ಎಸೆದ ಕಸದ ಪೇಪರ್ ಅನ್ನು ಹಸಿವಿನಿಂದ ನಾಯಿ ತಿನ್ನುವುದನ್ನು ನೋಡಿ ನನಗೆ ತುಂಬಾ ಬೇಸರವಾಯಿತು. ಅಲ್ಲಿಂದಲೇ ಬೀದಿನಾಯಿಗಳಿಗೆ ಊಟ ಹಾಕಲು ಪ್ರಾರಂಭಿಸಿದೆ” ಎಂದು ರಜನಿ ಶೆಟ್ಟಿ ಹೇಳುತ್ತಾರೆ. ಆರಂಭದಲ್ಲಿ ಮನೆಯಲ್ಲೇ ಅಡುಗೆ ಮಾಡಿ 10ರಿಂದ 20 ನಾಯಿಗಳಿಗೆ ಆಹಾರ ನೀಡುತ್ತಿದ್ದ ಅವರು, ಬಳಿಕ ಸೇವೆಯನ್ನು ಹಂತ ಹಂತವಾಗಿ ವಿಸ್ತರಿಸಿದರು. ಇಂದು ಪ್ರತಿದಿನ ನೂರಾರು ಬೀದಿನಾಯಿಗಳ ಹಸಿವು ನೀಗಿಸುವ ಮಟ್ಟಕ್ಕೆ ಅವರ ಸೇವೆ ಬೆಳೆದಿದೆ.

ಸ್ವಂತ ದುಡಿಮೆಯ ಹಣದಲ್ಲೇ 25 ವರ್ಷಗಳ ಸೇವೆ

ರಜನಿ ಶೆಟ್ಟಿ ಅವರು ಯಾವುದೇ ಶ್ರೀಮಂತ ಕುಟುಂಬದಿಂದ ಬಂದವರಲ್ಲ. ಇತರರ ಮನೆಗಳಲ್ಲಿ ಅಡುಗೆ ಕೆಲಸ ಮಾಡುವುದು, ಮಕ್ಕಳನ್ನು ನೋಡಿಕೊಳ್ಳುವುದು ಹಾಗೂ ಡಾಗ್ ಕೇರ್‌ಟೇಕರ್ ಆಗಿ ಕೆಲಸ ಮಾಡುವ ಮೂಲಕ ಗಳಿಸಿದ ಹಣವನ್ನು ಪ್ರಾಣಿಗಳ ಸೇವೆಗೆ ಬಳಸಿದ್ದಾರೆ. ಸುಮಾರು ಎರಡು ದಶಕಗಳಿಗೂ ಹೆಚ್ಚು ಕಾಲ ತಮ್ಮ ಸ್ವಂತ ದುಡಿಮೆಯಲ್ಲೇ ಈ ಸೇವೆಯನ್ನು ಮುಂದುವರಿಸಿದ್ದಾರೆ. ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಅವರ ಪ್ರಾಣಿ ಸೇವೆಯ ವಿಚಾರ ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚಿನ ಜನರಿಗೆ ತಿಳಿಯಿತು. ಬಳಿಕ ಸಾರ್ವಜನಿಕರಿಂದಲೂ ಸಣ್ಣ ಪ್ರಮಾಣದಲ್ಲಿ ನೆರವು ಸಿಗತೊಡಗಿತು. ಈ ಸೇವೆಗೆ ಅವರ ಪತಿ ಹಾಗೂ ಮೂವರು ಮಕ್ಕಳ ಸಂಪೂರ್ಣ ಬೆಂಬಲವಿದೆ.

ಪ್ರತಿದಿನ 60 ಕೆ.ಜಿ. ಅಕ್ಕಿ, ಚಿಕನ್ ಅಡುಗೆ

ಪ್ರಾಣಿಗಳಿಗೆ ಆಹಾರ ನೀಡುವುದು ರಜನಿ ಶೆಟ್ಟಿ ಅವರ ದಿನಚರಿಯ ಪ್ರಮುಖ ಭಾಗವಾಗಿದೆ. ಪ್ರತಿದಿನ ಸುಮಾರು 60 ಕೆ.ಜಿ. ಬಾಯಿಲ್ಡ್ ರೈಸ್‌ (ಕುಚಲಕ್ಕಿ) ಹಾಗೂ ಚಿಕನ್‌ ಬೇಯಿಸುತ್ತಾರೆ. ಅನ್ನಕ್ಕೆ ತುಪ್ಪ ಬೆರೆಸಿ ಪ್ರಾಣಿಗಳಿಗೆ ನೀಡುತ್ತಾರೆ. ಬೆಳಗಿನ ಜಾವ ಸುಮಾರು 6 ಗಂಟೆಗೆ ಹಾಗೂ ರಾತ್ರಿ ಸಮಯದಲ್ಲಿ ಸ್ಕೂಟರ್‌, ಆಟೋ ಅಥವಾ ಇಕೋ ವಾಹನದಲ್ಲಿ ನಗರದ ವಿವಿಧ ಪ್ರದೇಶಗಳಿಗೆ ತೆರಳಿ ನಾಯಿಗಳಿಗೆ ಆಹಾರ ನೀಡುತ್ತಾರೆ. ಇದು ಒಂದು ದಿನ ಅಥವಾ ಒಂದು ವಾರದ ಸೇವೆಯಲ್ಲ. ಸುಮಾರು 25 ವರ್ಷಗಳಿಂದ ನಿರಂತರವಾಗಿ ಸಾಗುತ್ತಿರುವ ಸೇವೆ.

ಗಾಯಗೊಂಡ ಪ್ರಾಣಿಗಳಿಗೆ ಮನೆಯೇ ಆಶ್ರಯ

ಹಸಿದ ನಾಯಿಗಳಿಗೆ ಆಹಾರ ನೀಡುವುದಷ್ಟೇ ರಜನಿ ಅವರ ಸೇವೆಯಲ್ಲ. ಅನಾಥ, ಗಾಯಗೊಂಡ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ನಾಯಿಗಳಿಗೂ ತಮ್ಮ ಮನೆಯಲ್ಲೇ ಆಶ್ರಯ ನೀಡಿ ಆರೈಕೆ ಮಾಡುತ್ತಾರೆ. ಇದರ ಜತೆಗೆ ಬಾವಿಗೆ ಬಿದ್ದ ನಾಯಿಗಳು ಮತ್ತು ಬೆಕ್ಕುಗಳನ್ನು ರಕ್ಷಿಸುವ ಕಾರ್ಯದಲ್ಲೂ ಅವರು ತೊಡಗಿಸಿಕೊಂಡಿದ್ದಾರೆ. ಇಂತಹ ಅಪಾಯಕಾರಿ ರಕ್ಷಣಾ ಕಾರ್ಯಾಚರಣೆಗಳಲ್ಲಿ ಅವರ ಪತಿಯೂ ಸಾಥ್ ನೀಡುತ್ತಾರೆ. ಒಮ್ಮೆ ಸುಮಾರು 60 ಅಡಿ ಆಳದ ಬಾವಿಗೆ ಇಳಿದು ನಾಯಿಯೊಂದನ್ನು ರಕ್ಷಿಸುವ ಸಂದರ್ಭದಲ್ಲಿ ಆಮ್ಲಜನಕದ ಕೊರತೆಯಿಂದ ಜೀವಕ್ಕೆ ಅಪಾಯ ಎದುರಾದರೂ, ಅವರು ಧೈರ್ಯ ಕಳೆದುಕೊಳ್ಳದೆ ರಕ್ಷಣಾ ಕಾರ್ಯ ಮುಂದುವರಿಸಿದ್ದರು.

ಬೀದಿನಾಯಿಗಳ ಸಂಖ್ಯೆ ನಿಯಂತ್ರಣಕ್ಕೂ ಸಲಹೆ

ಬೀದಿನಾಯಿಗಳ ಸಂಖ್ಯೆ ನಿಯಂತ್ರಣಕ್ಕೆ ಬರಬೇಕಾದರೆ ಸಾಕುಪ್ರಾಣಿಗಳ ಮಾಲೀಕರು ತಮ್ಮ ನಾಯಿಗಳಿಗೆ ಸೂಕ್ತ ಸಮಯದಲ್ಲಿ ಸ್ಟೆರಿಲೈಸೇಶನ್‌ (ನಸಬಂದಿ ಶಸ್ತ್ರಚಿಕಿತ್ಸೆ) ಮಾಡಿಸಬೇಕು ಎಂಬುದು ರಜನಿ ಶೆಟ್ಟಿ ಅವರ ಅಭಿಪ್ರಾಯ. ಪಂಚಾಯಿತಿ ಮತ್ತು ನಗರಾಡಳಿತ ಸಂಸ್ಥೆಗಳು ಕೂಡ ಪ್ರಾಣಿಗಳ ಜನನ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸುತ್ತಾರೆ.

24 ಗಂಟೆಯ ಉಚಿತ ಪ್ರಾಣಿ ಆಸ್ಪತ್ರೆ ನಿರ್ಮಿಸುವ ಕನಸು

ಇಷ್ಟೆಲ್ಲ ಸೇವೆ ಮಾಡುತ್ತಿರುವ ರಜನಿ ಶೆಟ್ಟಿ ಅವರ ಮುಂದಿನ ದೊಡ್ಡ ಕನಸು ಇನ್ನೂ ದೊಡ್ಡದು. “24 ಗಂಟೆಯ ಉಚಿತ ಪ್ರಾಣಿ ಆಸ್ಪತ್ರೆ ನಿರ್ಮಿಸುವುದು ನನ್ನ ದೊಡ್ಡ ಕನಸು. ಪ್ರತಿಯೊಂದು ಪ್ರಾಣಿಗೂ ಉಚಿತ ಚಿಕಿತ್ಸೆ, ವ್ಯಾಕ್ಸಿನ್ ಮತ್ತು ಸರ್ಜರಿ ಸಿಗುವಂತಾಗಬೇಕು” ಎಂಬುದು ಅವರ ಆಶಯ. ಪ್ರಾಣಿಗಳ ಹಸಿವು ನೀಗಿಸುವುದರಿಂದ ಹಿಡಿದು ಗಾಯಗೊಂಡ ಮೂಕಜೀವಿಗಳನ್ನು ರಕ್ಷಿಸುವವರೆಗೆ, ರಜನಿ ಶೆಟ್ಟಿ ಅವರ ಸೇವೆ ಮನುಷ್ಯತ್ವಕ್ಕೆ ಮತ್ತೊಂದು ಹೆಸರಿನಂತಿದೆ. ಅವರ ‘Feed Animal Save Animal’ ಟ್ರಸ್ಟ್‌ ಮೂಲಕ ನಡೆಯುತ್ತಿರುವ ಈ ಕಾರ್ಯ, ಮೂಕಪ್ರಾಣಿಗಳ ಮೇಲಿನ ಕಾಳಜಿ ಮತ್ತು ಮಾನವೀಯತೆಯ ಅಪರೂಪದ ಉದಾಹರಣೆಯಾಗಿ ಗಮನ ಸೆಳೆಯುತ್ತಿದೆ.

PREV
Read more Articles on
click me!

Recommended Stories

Mangaluru: ಒಂದೇ ಕ್ರೀಡಾಕೂಟದಲ್ಲಿ 5 ಚಿನ್ನ ಗೆದ್ದು ಹೊಸ ದಾಖಲೆ ಬರೆದ ವಿದ್ಯಾರ್ಥಿ
Bengaluru Karwar Vande Bharat Express: ವಂದೇ ಭಾರತ್ ಮಾರ್ಗ, ಕರಾವಳಿಯಲ್ಲಿ ಭುಗಿಲೆದ್ದ ಹೊಸ ವಿವಾದ!