ಪೋಕ್ಸೊ ಪ್ರಕರಣದಲ್ಲಿ ನಿಜವಾದ ಆರೋಪಿಯನ್ನು ಬಂಧಿಸದೆ ಅದೇ ಹೆಸರಿನ ಬೇರೆ ವ್ಯಕ್ತಿಯನ್ನು ಬಂಧಿಸಿದ ಮಾಡಿದ ಪೊಲೀಸರು ದಂಡ ತೆರುವಂತೆ ಕೋರ್ಟ್ ಆದೇಶಿಸಿದೆ.
ಮಂಗಳೂರು (ಡಿ.2) : ಪೋಕ್ಸೊ ಪ್ರಕರಣದಲ್ಲಿ ನಿಜವಾದ ಆರೋಪಿಯನ್ನು ಬಂಧಿಸದೆ ಅದೇ ಹೆಸರಿನ ಬೇರೆ ವ್ಯಕ್ತಿಯನ್ನು ಬಂಧಿಸಿದ ಮಾಡಿದ ಪೊಲೀಸರು ದಂಡ ತೆರುವಂತೆ ಕೋರ್ಟ್ ಆದೇಶಿಸಿದೆ. ಈ ಪ್ರಕರಣದ ತನಿಖಾಧಿಕಾರಿಗಳಾದ ಮಂಗಳೂರು ಮಹಿಳಾ ಪೊಲೀಸ್ ಠಾಣಾ ನಿರೀಕ್ಷಕರಾದ ರೇವತಿ ಮತ್ತು ಉಪನಿರೀಕ್ಷಕಿ ರೋಸಮ್ಮ ಅವರು ಆರೋಪಿ ನವೀನ್ ಸಿಕ್ವೇರನಿಗೆ ಒಟ್ಟು 5,00,000 ರು. ಪರಿಹಾರ ತಮ್ಮ ಸ್ವಂತದಿಂದ ನೀಡಬೇಕೆಂದು ದ.ಕ. ಜಿಲ್ಲಾ ಎರಡನೇ ಹೆಚ್ಚುವರಿ ಎಫ್‌ಟಿಎಸ್‌ಸಿ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಯು. ರಾಧಾಕೃಷ್ಣರ ಬುಧವಾರ ಆದೇಶಿಸಿದ್ದಾರೆ. ಆರೋಪಿ ನವೀನ್ ಸಿಕ್ವೇರ ಅವರನ್ನು ಖುಲಾಸೆಗೊಳಿಸಿದ್ದಾರೆ.
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನಲ್ಲಿ ನಡೆದಿದೆ ಎನ್ನಲಾದ ಒಂದು ಅಪ್ರಾಪ್ತ ವಯಸ್ಸಿನ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ನವೀನ್ ಎನ್ನುವ ವ್ಯಕ್ತಿ ಆರೋಪಿಯಾಗಿದ್ದ. ಬಾಲಕಿ ನೀಡಿದ ಹೇಳಿಕೆಯನ್ವಯ ಮಂಗಳೂರು ಮಹಿಳಾ ಪೊಲೀಸ್ ಠಾಣಾ ಉಪ ನಿರೀಕ್ಷಕರಾಗಿದ್ದ ರೋಸಮ್ಮ ಅವರು ನವೀನ್ ಎನ್ನುವ ಆರೋಪಿ ಮೇಲೆ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಪೊಲೀಸ್ ನಿರೀಕ್ಷಕರಾದ ರೇವತಿಯವರಿಗೆ ಹಸ್ತಾಂತರಗೊಳಿಸಿದ್ದರು.
ವಿಜಯಪುರ: ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ, ಆರೋಪಿಗೆ 20 ವರ್ಷ ಜೈಲು ಶಿಕ್ಷೆ
ತನಿಖಾ ಸಮಯ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಎಎಸ್‌ಐ ಕುಮಾರ್ ಅವರು ನವೀನ್ ಎನ್ನುವ ಆರೋಪಿ ಬದಲು ನವೀನ್ ಸಿಕ್ವೇರ ಎಂಬವನನ್ನು ಬಂಧಿಸಿ ತನಿಖಾಧಿಕಾರಿ ಮುಂದೆ ಹಾಜರು ಪಡಿಸಿದ್ದರು. ಪ್ರಕರಣ ತನಿಖಾ ಸಮಯ ನೊಂದ ಬಾಲಕಿ ತನ್ನ ದೂರಿನಲ್ಲಿ ಮತ್ತು ನ್ಯಾಯಾಧೀಶರ ಮುಂದೆ ನೀಡಿದ ಹೇಳಿಕೆಯಲ್ಲಿ, ಆರೋಪಿಯ ಹೆಸರನ್ನು ಕೇವಲ ನವೀನ್ ಎಂದಷ್ಟೇ ಉಲ್ಲೇಖಿಸಿದ್ದಳು. ಪ್ರಕರಣದ ಎಲ್ಲ ಸಾಕ್ಷಿದಾರರು ತಮ್ಮ ಹೇಳಿಕೆಗಳಲ್ಲಿ ಕೂಡಾ ನವೀನ್ ಎಂಬ ಆರೋಪಿಯ ಹೆಸರನ್ನು ಉಲ್ಲೀಖಿಸಿದ್ದರು. ತನಿಖೆ ನಡೆಸಿದ ರೇವತಿ ಅವರು ನವೀನ್ ಸಿಕ್ವೇರ ಎಂಬ ವ್ಯಕ್ತಿಯನ್ನು ಆರೋಪಿಯನ್ನಾಗಿಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಆರೋಪಿ ಪರ ವಕೀಲರಾದ ರಾಜೇಶ್ ಕುಮಾರ್ ಅಮ್ಟಾಡಿ ಮತ್ತು ಗಿರೀಶ್ ಶೆಟ್ಟಿವಾದ ಮಂಡಿಸಿ, ಇಡೀ ಪ್ರಕರಣದಲ್ಲಿ ಕೇವಲ ನವೀನ್ ಎನ್ನುವ ವ್ಯಕ್ತಿಯ ಮೇಲೆ ದೂರು ದಾಖಲಿಸಿ, ಸಾಕ್ಷಿದಾರರು ಕೂಡಾ ನವೀನ ಎನ್ನುವ ವ್ಯಕ್ತಿಯನ್ನು ತಮ್ಮ ಹೇಳಿಕೆಗಳಲ್ಲಿ ಉಲ್ಲೇಖಿಸಿದ್ದು, ನವೀನ್ ಸಿಕ್ವೇರ ಎನ್ನುವ ವ್ಯಕ್ತಿಯನ್ನು ನೊಂದ ಬಾಲಕಿಯ ಮುಂದೆ ಹಾಜರುಪಡಿಸಿ ಗುರುತು ಕೂಡ ಹಚ್ಚಿಸದೆ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪೊಲೀಸರು ನಿಜವಾದ ವ್ಯಕ್ತಿಯನ್ನು ಬಂಧಿಸದೆ ತಪ್ಪು ವ್ಯಕ್ತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಸುಮಾರು ಒಂದು ವರ್ಷ ಕಾಲ ನ್ಯಾಯಾಂಗ ಬಂಧನದಲ್ಲಿರುವಂತೆ ಮಾಡಿರುತ್ತಾರೆ ಎಂದು ವಾದ ಮಂಡಿಸಿದ್ದರು.
ಮುಸ್ಲಿಮರ ಮದುವೆ ಪೋಕ್ಸೋ ಕಾಯ್ದೆಯಿಂದ ಹೊರಗಿಲ್ಲ: ಹೈಕೋರ್ಟ್
ವಿಚಾರಣೆ ನಡೆಸಿದ ದಕ್ಷಿಣ ಕನ್ನಡ ಜಿಲ್ಲಾ ಎರಡನೇ ಹೆಚ್ಚುವರಿ ಎಫ್‌ಟಿಎಸ್‌ಸಿ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಕೆ.ಯು ರಾಧಾಕೃಷ್ಣ ಅವರು ನವೀನ್ ಸಿಕ್ವೇರ ನಿರಪರಾಧಿಯಾಗಿದ್ದು, ಪೊಲೀಸರು ನಿಜವಾದ ನವೀನ್ ಎನ್ನುವ ವ್ಯಕ್ತಿಯನ್ನು ಬಂಧಿಸದೆ, ನವೀನ್ ಸಿಕ್ವೇರರವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆದ್ದರಿಂದ ಪೊಲೀಸ್ ನಿರೀಕ್ಷಕರಾದ ರೇವತಿ ಮತ್ತು ಪೊಲೀಸ್ ಉಪ ನಿರೀಕ್ಷಕರಾದ ರೋಸಮ್ಮ ಪಿ.ಪಿ. ಅವರು ನವೀನ್ ಸಿಕ್ವೇರಗೆ 5,00,000 ರು. ಪರಿಹಾರ ಹಣವನ್ನು ತಮ್ಮ ಜೇಬಿನಿಂದಲೇ ನೀಡಬೇಕೆಂದು ಆದೇಶಿಸಿದರು. ಇಬ್ಬರು ಪೊಲೀಸ್ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿ ಗೃಹ ಇಲಾಖೆ, ಬೆಂಗಳೂರು ಅವರಿಗೆ ಆದೇಶಿಸಿದ್ದಾರೆ.