ದಕ್ಷಿಣ ಕೊಡಗಿನ ಕೆಲವೆಡೆ ಕಾಫಿ ಉದುರುತ್ತಿದ್ದು, ಬೆಳೆಗಾರರು ಆತಂಕ್ಕೆ ಒಳಗಾಗಿದ್ದಾರೆ. ಕಾಫಿ ಫಸಲು ಉದುರುತ್ತಿರುವ ಬಗ್ಗೆ ವಿಜ್ಞಾನಿಗಳು ಪ್ರತಿಕ್ರಿಯೆ ನೀಡಿದ್ದು ಇದು ಕೊಳೆ ರೋಗದ ಮುನ್ಸೂಚನೆ ಇರಬಹುದೆಂದು ಹೇಳಿದ್ದಾರೆ.
ಮಡಿಕೇರಿ (ಜು.14): ಮಳೆ ಹೆಚ್ಚು ಸುರಿಯದಿದ್ದರೂ ದಕ್ಷಿಣ ಕೊಡಗಿನ ಕೆಲವೆಡೆ ಕಾಫಿ ಉದುರುತ್ತಿದ್ದು, ಬೆಳೆಗಾರರು ಆತಂಕ್ಕೆ ಒಳಗಾಗಿದ್ದಾರೆ. ಕಾಫಿ ಫಸಲು ನೆಲಕಚ್ಚುತ್ತಿದ್ದು, ಈ ಬಾರಿ ಬೆಳೆನಷ್ಟ ಹೊಂದುವ ಭೀತಿಯಲ್ಲಿದ್ದಾರೆ.
ಈ ಅವಧಿಯಲ್ಲಿ ಕಾಫಿ ಉದುರುವುದಕ್ಕೆ ಕಾರಣ ಏನೆಂದು ವಿಜ್ಞಾನಿಗಳನ್ನು ಬೆಳೆಗಾರರು ಪ್ರಶ್ನಿಸುತ್ತಿದ್ದಾರೆ. ಉತ್ತರ ಕೊಡಗಿನಲ್ಲಿ ಮಳೆ ಕಡಿಮೆಯಿದ್ದು, ಬಿಸಿಲಿನ ವಾತಾವರಣವಿದೆ. ಅದರಂತೆ ದಕ್ಷಿಣ ಕೊಡಗಿನಲ್ಲಿ ಇದೇ ವಾತಾವರಣವಿದೆ. ಆದರೆ ಕಾಫಿ ಫಸಲು ಉದುರುತ್ತಿದೆ. ಬಿರುನಾಣಿ, ಶ್ರೀಮಂಗಲ, ಚಿಕ್ಕಮುಂಡೂರು ಸೇರಿದಂತೆ ಹಲವೆಡೆಗಳಲ್ಲಿ ಕಾಫಿ ಫಸಲು ಉದುರುತ್ತಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ಮತ್ತೊಂದೆಡೆ ಮೋಡ ಬಿತ್ತನೆ ಮಾಡಲಾಗಿದೆ ಎಂದು ಕೆಲವು ಬೆಳೆಗಾರರು ಆರೋಪ ಕೂಡ ಮಾಡುತ್ತಿದ್ದಾರೆ.
ರೈತರಲ್ಲಿ ಆತಂಕ:
ದಕ್ಷಿಣ ಕೊಡಗಿನಲ್ಲಿ ರೋಬೆಸ್ಟಾ ಕಾಫಿ ಮಾತ್ರ ಬೆಳೆಯಲಾಗುತ್ತಿದೆ. ಮೊದಲೇ ಕಾಫಿಗೆ ಬೆಲೆ ಇಲ್ಲದೆ ಬೆಳೆಗಾರರು ಸಮಸ್ಯೆಗೆ ಒಳಗಾಗಿದ್ದಾರೆ. ಆದರೆ ಇದೀಗ ಮಳೆಯಿಂದಾಗಿ ಕಾಫಿ ಕಾಯಿ ನೆಲಕಚ್ಚುತ್ತಿದ್ದು, ಮುಂದೆ ಏನು ಮಾಡಬೇಕೆಂದು ತೋಚದ ಪರಿಸ್ಥಿತಿಯಲ್ಲಿ ಬೆಳೆಗಾರರಿದ್ದಾರೆ. ಮಳೆ ಕಡಿಮೆ ಇದ್ದರೆ ಕೊಳೆ ರೋಗ ಬರುವ ಸಾಧ್ಯತೆ ಇಲ್ಲ. ಈ ಬಾರಿ ಬಿಡುವು ನೀಡಿ ಮಳೆಯಾಗಿದೆ. ಸತತ ಮಳೆ ಬಂದರೆ ಮಾತ್ರ ಕೊಳೆ ರೋಗ ಕಾಣಿಸಿಕೊಳ್ಳುತ್ತದೆ. ಮಳೆ ಕಡಿಮೆಯಾಗಿದ್ದರೂ ಕಾಫಿ ಉದುರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎನ್ನುತ್ತಾರೆ ಬೆಳೆಗಾರರು.
ಕೊಳೆರೋಗದ ಮುನ್ಸೂಚನೆ:
ಕಾಫಿ ಫಸಲು ಉದುರುತ್ತಿರುವ ಬಗ್ಗೆ ವಿಜ್ಞಾನಿಗಳು ಪ್ರತಿಕ್ರಿಯೆ ನೀಡಿದ್ದು, ಬಿರುನಾಣಿ ಸೇರಿದಂತೆ ಕೆಲವು ಭಾಗದಲ್ಲಿ ಕಾಫಿ ಉದುರುತ್ತಿದೆ. ಇದು ಕೊಳೆ ರೋಗದ ಮುನ್ಸೂಚನೆ. ಆದರೆ ಈ ಬಾರಿ ಬೇಗ ಕಾಣಿಸಿಕೊಂಡಿದೆ. ಬೆಳೆಗಾರರು ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡ. ಈ ಸಮಸ್ಯೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಕಾರ್ಬನ್ ಡಯಾಸಿಯಂ ಬ್ಯಾರಲ್‌ವೊಂದಕ್ಕೆ 120ರಿಂದ 200ಗ್ರಾಂ ವರೆಗೆ ಬೆರೆಸಿ ಕಾಫಿ ಗಿಡಗಳಿಗೆ ಸಿಂಪಡಿಸುವಂತೆ ಕೃಷಿ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.
ವಿಘ್ನೇಶ್ ಎಂ. ಭೂತನಕಾಡು