ಬಂಟ್ವಾಳದಲ್ಲಿ ಪಪ್ಪಾಯ ಫಾದರ್; ಯಾರಿದು ಗ್ರೆಗರ್ ಫಿರೇರಾ?

Published : Nov 12, 2019, 09:48 AM ISTUpdated : Nov 12, 2019, 10:22 AM IST
ಬಂಟ್ವಾಳದಲ್ಲಿ ಪಪ್ಪಾಯ ಫಾದರ್; ಯಾರಿದು ಗ್ರೆಗರ್ ಫಿರೇರಾ?

ಸಾರಾಂಶ

ಇತ್ತೀಚೆಗೆ ಬಂಟ್ವಾಳದ ಬೊರಿಮಾರ್ ಚರ್ಚ್‌ನ ಧರ್ಮಗುರುಗಳು ಬೆಳೆದ ಪಪ್ಪಾಯಿ ಹಣ್ಣನ್ನು ಭಕ್ತರೊಬ್ಬರು 10 ಸಾವಿರ ರುಪಾಯಿ ಕೊಟ್ಟು ಖರೀದಿಸಿದ ಸುದ್ದಿಯನ್ನು ಕನ್ನಡಪ್ರಭ ಪ್ರಕಟಿಸಿತ್ತು. ಪಪ್ಪಾಯಿ ಬೆಳೆದ ಆ ಧರ್ಮಗುರುಗಳ ಹೆಸರು ಫಾದರ್ ಗ್ರೆಗರಿ ಪಿರೇರಾ. ಇವರು ‘ಪಪ್ಪಾಯಿ ಫಾದರ್’ ಎಂದೇ ಪ್ರಸಿದ್ಧರು. ಪಪ್ಪಾಯಿ ಜೊತೆಗೆ ಇತರ ಕೃಷಿಯನ್ನೂ ಮಾಡುವ ಅವರ ವಿವರಗಳು ಇಲ್ಲಿವೆ.  

ಮೌನೇಶ ವಿಶ್ವಕರ್ಮ

ಪಪ್ಪಾಯಿ ಫಾದರ್!

ಕಳೆದ ಒಂದು ವರ್ಷದಲ್ಲಿ ಫಾದರ್ ಅವರ ಕೃಷಿಯ ಮೇಲಿನ ಅಭಿರುಚಿ ಚರ್ಚ್ ವ್ಯಾಪ್ತಿಯ ಕ್ರೈಸ್ತಬಾಂಧವರಲ್ಲಿ ಕೃಷಿಯ ಬಗ್ಗೆ ಅಭಿಮಾನ ಹೆಚ್ಚಿಸುವಂತೆ ಮಾಡಿತ್ತು. ಅವರೂ ಕೃಷಿಯತ್ತ ಮುಖಮಾಡಿದರು. ಇದೀಗ ಫಾದರ್ ಗ್ರೆಗರಿ ಅವರು ಎಲ್ಲರ ಪ್ರೀತಿಯ ಪಪ್ಪಾಯಿ ಫಾದರ್ ಆಗಿದ್ದಾರೆ. ಧರ್ಮಗುರುಗಳು ಕೇವಲ ಪೂಜೆಗಷ್ಟೇ ಸೀಮಿತರಲ್ಲ. ಅವರ ನಡೆನುಡಿಗಳೂ ಆದರ್ಶವಾಗಬೇಕು ಎಂಬ ಅಭಿಪ್ರಾಯ ಇವರು. ಇಲ್ಲಿ ಮಾತ್ರವಲ್ಲ, ಈ ಹಿಂದೆ ಸೇವೆ ಮಾಡಿದ ಚರ್ಚ್‌ಗಳಲ್ಲೂ ಇದೇ ತೆರನಾದ ಕೃಷಿಕ್ರಾಂತಿ ಮಾಡಿ ಭಕ್ತರ ಮನ ಗೆದ್ದಿದ್ದರು. ಇವರು ನಾರಂಪಾಡಿ ಎಂಬಲ್ಲಿದ್ದಾಗ ‘ಕುಂಬಳಕಾಯಿ ಫಾದರ್’, ಬೆಳ್ವೆಯಲ್ಲಿ ‘ಅಡಿಕೆ ಫಾದರ್’ ಆಗಿ ಫೇಮಸ್ ಆಗಿದ್ದರು. ಬಡಮಕ್ಕಳಿಗಾಗಿ ಅಲ್ಲಿಪಾದೆಯಲ್ಲಿ ಶಾಲೆಯನ್ನೂ ಆರಂಭಿಸಿದ್ದರು. ಆರಂಭಿಸಿದ ಕೀರ್ತಿ ಕೂಡ ಇವರದು.

ಕಳೆದ ವರ್ಷದವರೆಗೂ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಸೂರಿಕುಮೇರು ಸಮೀಪದ ಬೊರಿಮಾರ್ ಚರ್ಚ್‌ನ ಸುಮಾರು ನಾಲ್ಕೆಕರೆ ಪ್ರದೇಶದಲ್ಲಿ ರಬ್ಬರ್ ಗಿಡಗಳು ಮತ್ತು ಅವುಗಳ ತರಗೆಲೆಯಷ್ಟೇ ತುಂಬಿಕೊಂಡಿತ್ತು. ಕೇವಲ ಒಂದೇ ವರ್ಷದಲ್ಲಿ ಆ ಜಮೀನಿನ ಚಿತ್ರಣವೇ ಬದಲಾಗಿದೆ. ಎಲ್ಲಿ ನೋಡಿದರಲ್ಲಿ ಪಪ್ಪಾಯಿ, ಸುವರ್ಣ ಗಡ್ಡೆ, ಗೆಣಸಿನ ಬಳ್ಳಿಗಳು, ಕುಂಬಳ ಬಳ್ಳಿ, ಗೇರುಗಿಡಗಳು..

ಬಂಟ್ವಾಳ: ಒಂದೇ ಒಂದು ಪಪ್ಪಾಯಿಗೆ 10 ಸಾವಿರ ರೂ.! ಅಂಥಾದ್ದೇನಿತ್ತು?

ಈ ಮ್ಯಾಜಿಕ್‌ನ ಹಿಂದಿರುವವರು ಈ ಚರ್ಚ್‌ನ ಧರ್ಮಗುರುಗಳಾದ ಫಾದರ್ ಗ್ರೆಗರಿ ಪಿರೇರಾ ಅವರು. ಇವರಿಗೆ ಕೃಷಿ ಅದರಲ್ಲೂ ಸಾವಯವ ಕೃಷಿಯ ಬಗ್ಗೆ ಅತೀವ ಪ್ರೀತಿ. ಕಳೆದ ವರ್ಷ ಈ ಚರ್ಚಿಗೆ ಧರ್ಮಗುರುಗಳಾಗಿ ಬಂದಾಗ ರಬ್ಬರ್ ಗಿಡಗಳನ್ನೆಲ್ಲಾ ತೆಗೆಸಿ ಪಪ್ಪಾಯಿ ಕೃಷಿ ಆರಂಭಿಸಿದರು. ಜೊತೆಗೆ ಸುವರ್ಣ ಗೆಡ್ಡೆ, ನುಗ್ಗೆ, ಹರಿವೆ ಸೊಪ್ಪು, ಕುಂಬಳಕಾಯಿ ಬಳ್ಳಿ, ಗೆಣಸಿನ ಬಳ್ಳಿ ಇತ್ಯಾದಿ ಹಾಕಿದರು. ಗಿಡಗಳು ಚಿಗುರೊಡೆಯುತ್ತಾ ಬಂದವು. ಇದೀಗ ಚರ್ಚ್ ಜಮೀನಿನಲ್ಲಿ ನೂರಕ್ಕೂ ಅಧಿಕ ಪಪ್ಪಾಯಿ ಗಿಡಗಳು, ೧೨೦ ನುಗ್ಗೆಮರ, ಸುಮಾರು 1 ಸಾವಿರ ಸುವರ್ಣ ಗೆಡ್ಡೆಯ ಗಿಡಗಳು ಬೆಳೆಯುತ್ತಿವೆ.

ಜೇನುಕೃಷಿ ಮಾಡಿ ಲಕ್ಷ ಎಣಿಸುವ ಅರವಿಂದ್!

ತೋಟದಲ್ಲಿ ಕೆಲಸ ಮಾಡುವ ಫಾದರ್

ಚರ್ಚ್‌ನಲ್ಲಿ ಪೂಜಾ ಕೈಂಕರ್ಯ, ಮಾರ್ಗದರ್ಶನ ನೀಡುವ ಧರ್ಮಗುರುಗಳು, ಬಿಡುವಿನ ಹೊತ್ತಲ್ಲಿ ತೋಟಕ್ಕಿಳಿದು ಕೆಲಸ ಮಾಡುತ್ತಾರೆ. ಪೂಜಾ ಅವಧಿಯ ಇವರ ಪೋಷಾಕು ಬೇರೆ, ತೋಟದ ಕೆಲಸಕ್ಕೆ ಬೇರೆ. ಕೃಷಿಕಾರ್ಯವೂ ದೇವರ ಪೂಜೆಯಷ್ಟೇ ಪವಿತ್ರ ಎಂಬುದು ಇವರ ನಂಬಿಕೆ. ತೋಟದಲ್ಲಿ ಕಾರ್ಮಿಕರಾಗಿ ತೊಡಗಿಸಿಕೊಂಡವರ ಜೊತೆಗೆ ಈ ಧರ್ಮಗುರುಗಳೂ ಮಣ್ಣು, ಗೊಬ್ಬರ ವಿಲೇವಾರಿ ಮಾಡುತ್ತಾ, ಗಿಡಗಳ ಜೊತೆ ಮಾತನಾಡುತ್ತಾರೆ.

ತರಕಾರಿಯನ್ನು ಮುಗಿಬಿದ್ದು ಕೊಳ್ಳುವ ಜನ

ಬೊರಿಮಾರ್ ಚರ್ಚ್ ಆವರಣದಲ್ಲಿ ಬೆಳೆದ ಸಾವಯವ ಕೃಷಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಪಪ್ಪಾಯಿ, ಗೆಣಸು, ಸುವರ್ಣಗೆಡ್ಡೆ, ಹರಿವೆ ಸೊಪ್ಪು, ಕುಂಬಳಕಾಯಿಗೆ ಸ್ಥಳೀಯವಾಗಿ ಸರ್ವ ಸಮುದಾಯದ ಗ್ರಾಹಕರಿದ್ದಾರೆ. ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆ, ಧರ್ಮಗುರುಗಳ ತರಬೇತಿ ಕೇಂದ್ರ ಜೆಪ್ಪು ಸೆಮಿನರಿ, ಬಜ್ಜೋಡಿಯ ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಮುಖ್ಯ ಕಛೇರಿಗೂ ಬೊರಿಮಾರ್ ಚರ್ಚ್‌ನ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಮಾರುಕಟ್ಟೆ ದರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಸಾವಯವ ಉತ್ಪನ್ನ ದೊರಕುವ ಹಿನ್ನೆಲೆಯಲ್ಲಿ ಇವುಗಳಿಗೆ ಬೇಡಿಕೆ ಹೆಚ್ಚಿದೆ.

10 ಲಕ್ಷ ಸಂಬಳದ ಕೆಲಸ ಬಿಟ್ಟು ಗುಲಾಬಿ ಕೃಷಿಗಿಳಿದ ಇಂಜಿನಿಯರ್‌!

ಚರ್ಚ್‌ನಲ್ಲಿ ಪ್ರತೀ ವಾರ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣ ಕಾರ್ಯಕ್ರಮ ಇರುತ್ತದೆ. ಪೂರ್ವ ಪ್ರಾಥಮಿಕದಿಂದ ಪಿಯುಸಿವರೆಗಿನ ಮಕ್ಕಳಿರುತ್ತಾರೆ. ಅವರಿಗೆ ನೀಡುವ ಉಚಿತ ಆಹಾರಕ್ಕೂ ಇದೇ ತರಕಾರಿ ಬಳಕೆಯಾಗುತ್ತದೆ. ಕೇವಲ ಒಂದು ವರ್ಷದ ಅವಧಿಯಲ್ಲಿ ಈ ಸಾವಯವ ಕೃಷಿಯಿಂದ ಚರ್ಚ್ ಒಂದೂವರೆ ಲಕ್ಷಕ್ಕೂ ಅಧಿಕ ಆದಾಯಗಳಿಸಿದೆ. ವಂದನೀಯ ಫಾದರ್ ಗ್ರೆಗರಿ ಪಿರೇರಾ ಅವರ ಸಂಪರ್ಕ ಸಂಖ್ಯೆ 9535291627.

ಕರ್ನಾಟಕದಲ್ಲೊಂದು ಬಾಳೆ ಗ್ರಾಮ; ಗದಗ ಜಿಲ್ಲೆಯ ಹಮ್ಮಗಿಗೆ ಭೇಟಿ ನೀಡಿ!

ಫಾದರ್ ಹಿನ್ನೆಲೆ ಹೀಗಿದೆ

1953 ನ.17ರಂದು ಮೇರಮಜಲು ಗ್ರಾಮದ ಕೃಷಿ ಕುಟುಂಬದಲ್ಲಿ ಜನಿಸಿದ ಫಾದರ್ ಗ್ರೆಗರಿ ಪಿರೇರಾ ಅವರು 1981ರಲ್ಲಿ ಗುರುದೀಕ್ಷೆ ಪಡೆದುಕೊಂಡರು. ಆ ಬಳಿಕ 7 ವರ್ಷ ಮೊಡಂಕಾಪು ಚರ್ಚ್, 7 ವರ್ಷ ನಾರಂಪಾಡಿ, 7 ವರ್ಷ ವೇಣೂರು, 14 ವರ್ಷ ಉಡುಪಿಯ ಬೆಳ್ವೆ ಎಸ್ಟೇಟ್ ಚರ್ಚ್ ಹಾಗೂ ಅಲ್ಲಿಪಾದೆ ಚರ್ಚ್‌ನಲ್ಲಿ 7 ವರ್ಷ ಸೇರಿದಂತೆ ಒಟ್ಟು  37 ವರ್ಷ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ. ಶತಮಾನೋತ್ತರ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಬೊರಿಮಾರು ಚರ್ಚ್‌ನಲ್ಲಿ ಜೂನ್ 2018ರಿಂದ 25 ನೇ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾ.

PREV
click me!

Recommended Stories

ಗಡೀಪಾರು ಸಂಕಷ್ಟದಲ್ಲಿ Mahesh Shetty Timarodi: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ ದೇಗುಲದಲ್ಲಿ ಪ್ರಾರ್ಥನೆ
ಜಾತಿ ವ್ಯವಸ್ಥೆಗೆ ಪರಿಹಾರ ರೂಪದ ವಿದ್ಯೆ ಅಗತ್ಯ: ಸಿಎಂ ಸಿದ್ದರಾಮಯ್ಯ