ಕುಡಿದ ಅಮಲಿನಲ್ಲಿ ಯುವಕನಿಗೆ ಚಾಕು ಇರಿಯಲಾಗಿದ್ದು, ಈ ಯುವಕ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ. ಗಾಂಜಾ ಸೇವನೆ ಮಾಡಿ ಅಂಜಿನಿ, ಜೀವನ್ ಕೊಲೆ ಮಾಡಿದ್ದಾರೆ ಎಂದು ಮೃತರ ಸಂಬಂಧಿಕರು ಆರೋಪ ಮಾಡಿದ್ದಾರೆ. ಈ ಹಿನ್ನೆಲೆ ಆರೋಪಿಗಳ ಪತ್ತೆಗಾಗಿ ಎಸ್‌ಪಿ ಪರಶುರಾಮ್ ವಿಶೇಷ ತಂಡ ರಚಿಸಿದ್ದಾರೆ.
(ವರದಿ: ಕಿರಣ್. ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್)
ಚಿತ್ರದುರ್ಗ (ಫೆಬ್ರವರಿ 20, 2023): ಹಬ್ಬ ಹರಿದಿನ ಬಂದ್ರೆ ಸಾಕು ಆ ಏರಿಯಾದಲ್ಲಿ ಜನರು ನಿದ್ದೆ ಮಾಡುವುದೇ ಕಷ್ಟವಾಗಿದೆ. ದುಷ್ಚಟಗಳಿಗೆ ದಾಸರಾಗಿರೋ ಯುವಕರು ಮಾಡಿರೋ ಅಚಾತುರ್ಯ ಕಾರ್ಯಕ್ಕೆ ಯುವಕನೊಬ್ಬ ಬಲಿ ಆಗಿದ್ದಾನೆ. ಗಾಂಜಾ, ಎಣ್ಣೆ ಹೊಡೆದು ಓಡಾಡೋ ಯುವಕರ ಹಾವಳಿಯಿಂದ ಈ ಘಟನೆ ನಡೆದಿದೆ ಎಂದು ಮೃತನ ಸಂಬಂಧಿಕರು ಗಂಭೀರ ಆರೋಪ ಮಾಡಿದ್ದಾರೆ. ಅಷ್ಟಕ್ಕೂ ಆ ಏರಿಯಾ ಯಾವುದು? ಅಲ್ಲಿ ಆಗಿರೋ ಘಟನೆಯಾದ್ರು ಏನು ಅಂತೀರಾ..? ಕಂಪ್ಲೀಟ್ ವರದಿ ಇಲ್ಲಿದೆ..
ಒಂದ್ಕಡೆ ಬಿಳಿ ಬಟ್ಟೆಯಲ್ಲಿ ಸುತ್ತಿರುವ ಯುವಕನ ಮೃತ ದೇಹ. ಮೃತನ ಪಾರ್ಥಿವ ಶರೀರ ಮನೆ ಬಾಗಿಲು ಕಂಡು ಮುಗಿಲು ಮುಟ್ಟಿರುವ ಯುವಕನ ಸಂಬಂಧಿಕರ ಆಕ್ರಂದನ. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗದ ಕಾಮನಬಾವಿ ಬಡಾವಣೆಯ ಬಳಿ. ಹೌದು, ಈ ಬಡಾವಣೆಯಲ್ಲಿ ಕಳೆದ ಒಂದು ವರ್ಷದಿಂದ ಕುಡುಕರು, ಗಾಂಜಾ ವ್ಯಸನಿಗಳು ಹಾಗೂ ದುಷ್ಚಟಗಳಿಗೆ ಬಿದ್ದವರ ಹಾವಳಿ ಮಿತಿ ಮೀರಿದೆ. ಆ ದುಶ್ಚಟದಲ್ಲಿ ಮುಳುಗಿರುವ ಯುವಕರು ಹಗಲು, ಇರುಳೆನ್ನದೇ ಈ ದುಶ್ಚಟದ ದಾಸರಾಗಿದ್ದಾರೆ.
ಇದನ್ನು ಓದಿ: CHIKKAMAGALURU: ಬೈಕಿನಲ್ಲಿ ಹೋಗುತ್ತಿದ್ದ ಇಬ್ಬರ ಮೇಲೆ ಗುಂಡಿನ ದಾಳಿ: ಸವಾರರಿಬ್ಬರು ಸ್ಥಳದಲ್ಲೇ ಸಾವು
ಹೀಗಾಗಿ ಶಿವರಾತ್ರಿಯಂದು ಫುಲ್ ಟೈಟ್ ಆಗಿದ್ದ ಯುವಕರ ಗುಂಪೊಂದು,ಮನೆ ಮುಂದೆ ಕುಳಿತಿದ್ದ ಅಮಾಯಕ ಯುವಕನೊಂದಿಗೆ ಶುರು ಮಾಡಿದ ಗಲಾಟೆಯಿಂದಾಗಿ ಆತನಿಗೆ ಚಾಕುವಿನಿಂದ ಇರಿದಿರೋ ಘಟನೆ ನಡೆದಿದೆ. ಹೀಗಾಗಿ ಗಂಭೀರವಾಗಿ ಗಾಯಗೊಂಡ ಯುವಕ ಮಾರುತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಅಗತ್ಯ ಚಿಕಿತ್ಸೆ ಸಿಗಲಾರದೇ ಮಾರುತಿ ತಡರಾತ್ರಿ ಮೃತಪಟ್ಟಿದ್ದಾನೆ.
ಈ ಹಿಂದೆಯೂ ಈ ಯುವಕ ಹಾಗು ಕುಡುಕರ ಮಧ್ಯೆ ಘರ್ಷಣೆಯಾಗಿದ್ದು, ಆಗ ರಾಜಿ ಸಂಧಾನದಲ್ಲಿ ಇತ್ಯರ್ಥವಾಗಿತ್ತು. ಆದ್ರೆ ಇದೀಗ ಹಳೆಯ ದ್ವೇಷವೋ ಅಥವಾ ಕುಡಿತದ ಅಮಲೋ ಗೊತ್ತಿಲ್ಲ, ಆದ್ರೆ ಬಾಳಿ ಬದುಕಬೇಕಾದ ಅಮಾಯಕ ಬಲಿ ಆಗಿದ್ದಾನೆ. ಹೀಗಾಗಿ ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಚಿತ್ರದುರ್ಗ ಪೊಲೀಸ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪ್ರೇಯಸಿ ಜತೆಗೆ ಓಡಿಹೋಗಿದ್ದ ವ್ಯಕ್ತಿ ನೇಣಿಗೆ ಶರಣು: ಪತ್ನಿ ತೊರೆದು ಪ್ರೇಯಸಿ ಹಿಂದೆ ಹೋಗಿದ್ದ ಭೂಪ..!
ಇನ್ನು ಈ ಬಡಾವಣೆಯಲ್ಲಿ ಈ ಸಾವು ಮೊದಲನೆಯದಲ್ಲ. ಕಳೆದ ಒಂದು ವರ್ಷದಿಂದ ಇಲ್ಲಿಯವರೆಗೆ ಮೂವರು ಅಮಾಯಕ ಯುವಕರು, ಗಾಂಜಾ ಹಾಗು ಕುಡುಕರ ಹಾವಳಿಯಿಂದ ಬಲಿಯಾಗಿದ್ದಾರೆ. ಆದ್ರೆ ಈ ಬಗ್ಗೆ ಎಚ್ಚರ ವಹಿಸಬೇಕಾದ ಪೊಲೀಸರು ಮೌನವಾಗಿದ್ದಾರೆಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಮಾರುತಿಯ ಸಾವಿಗೆ ಕಾರಣವಾದ ಆರೋಪಿಗಳನ್ನು ಬಂಧಿಸಿ, ಉಗ್ರ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿತ್ರದುರ್ಗ ಎಸ್‌ಪಿ ಕೆ. ಪರಶುರಾಮ್, ಈ ಕೊಲೆಗೆ ನಿಖರ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಮೇಲ್ನೋಟಕ್ಕೆ ಯುವಕರ ಗುಂಪೊಂದು ಗಾಂಜಾ ಸೇವನೆಯಿಂದ ಕಾಮನಬಾವಿ ಬಡಾವಣೆಯಲ್ಲಿ ಹುಚ್ಚಾಟ ಮೆರೆದಿದ್ದರ ಪರಿಣಾಮ ಈ ಕೊಲೆ ನಡೆದಿದೆ ಎಂದು ತಿಳಿದು ಬಂದಿದೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ. ಕೂಡಲೇ ಆರೋಪಿಗಳನ್ನು ಎಡೆಮುರಿ ಕಟ್ಟಿ ಕೊಲೆಗೆ ಕಾರಣರಾದವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಇದನ್ನೂ ಓದಿ: ಹಿಟ್ ಆ್ಯಂಡ್ ರನ್: ಹಿಂಬದಿಯಿಂದ ಬೈಕ್‌ಗೆ ಗುದ್ದಿದ ಬಿಎಂಟಿಸಿ ಬಸ್; ಫುಡ್ ಡೆಲಿವರಿ ಬಾಯ್ ಸ್ಥಳದಲ್ಲೇ ಸಾವು
ಒಟ್ಟಾರೆ, ಗಾಂಜಾ ಗಮ್ಮತ್ತು ಹಾಗು ಕುಡುಕರ ಅಮಲಿಗೆ ಅಮಾಯಕರು ಬಲಿಯಾಗ್ತಿದ್ದಾರೆ. ಹೀಗಾಗಿ ಕೋಟೆನಾಡಲ್ಲಿ ಬಾರಿ ಆತಂಕ ಮನೆ ಮಾಡಿದೆ. ಇನ್ನಾದ್ರು ಪೊಲೀಸರು ಎಚ್ಚೆತ್ತು ಈ ದುಶ್ಚಟದ ದಾಸರಾದವರನ್ನು ಬಂಧಿಸಿ, ಅಮಾಯಕರ ಸಾವಿಗೆ ಬ್ರೇಕ್ ಹಾಕುವ ಮೂಲಕ ನಾಗರೀಕರ ಹಿತ ಕಾಯಬೇಕಿದೆ.