ಬಿಜೆಪಿ ಮುಖಂಡ ಯೋಗೀಶಗೌಡ ಹಂತಕರು ಸಿಬಿಐ ಬಲೆಗೆ

By Kannadaprabha NewsFirst Published Mar 2, 2020, 7:42 AM IST
Highlights

ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದ್ದು, ಕೊಲೆಯಲ್ಲಿ ನೇರವಾಗಿ ಭಾಗಿಯಾಗಿದ್ದ ಹಂತಕರೇ ಈಗ ಸಿಬಿಐ ಬಲೆಗೆ ಬಿದ್ದಿದ್ದಾರೆ. 

ಧಾರವಾಡ [ಮಾ.02]:  ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದ ಜಿಪಂ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದ್ದು, ಕೊಲೆಯಲ್ಲಿ ನೇರವಾಗಿ ಭಾಗಿಯಾಗಿದ್ದ ಹಂತಕರೇ ಈಗ ಸಿಬಿಐ ಬಲೆಗೆ ಬಿದ್ದಿದ್ದಾರೆ. ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿದ ಸಿಬಿಐ ಅಧಿಕಾರಿಗಳು, ಪರಾರಿಗೆ ಸಿದ್ಧತೆ ನಡೆಸುತ್ತಿದ್ದ ಆರು ಮಂದಿ ಸುಪಾರಿ ಕಿಲ್ಲರ್‌ಗಳನ್ನು ಭಾನುವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳ ಬಂಧನದ ದಿನದಿಂದಲೂ ಪ್ರಮುಖ ಆರೋಪಿ ಹಾಗೂ ಇತರೆ ಐವರು ನೇರವಾಗಿ ಈ ಕೊಲೆ ಮಾಡಿಲ್ಲ ಎಂಬ ಸಂಶಯ ಎಲ್ಲರಲ್ಲೂ ಇತ್ತು. ಆದರೆ, ಅದು ಸಾಬೀತಾಗಿರಲಿಲ್ಲ. ಆದರೆ, ತನಿಖೆಯನ್ನು ಸಿಬಿಐ ಕೈಗೆತ್ತಿಕೊಳ್ಳುತ್ತಿದ್ದಂತೆ ಬೆಂಗಳೂರು ಹಾಗೂ ತಮಿಳುನಾಡು ಮೂಲದ ಆರು ಮಂದಿ ಸುಫಾರಿ ಹಂತಕರು ಈ ಕೊಲೆಯಲ್ಲಿ ಭಾಗಿಯಾಗಿದ್ದಾರೆಂಬ ಮಹತ್ವದ ಅಂಶ ಬಯಲಾಗಿತ್ತು. ಇವರೆಲ್ಲ ಯೋಗೇಶ ಗೌಡ ಕೊಲೆ ಆರೋಪದ ಮೇಲೆ ಬಂಧಿತನಾಗಿ ಬಳಿಕ ಜಾಮೀನು ಮೇಲೆ ಬಿಡುಗಡೆಯಾಗಿರುವ ಬಸವರಾಜ ಮುತ್ತಗಿ ಅವರಿಂದ ಸುಪಾರಿ ಪಡೆದಿದ್ದರು ಎನ್ನಲಾಗಿದೆ.

ಏತನ್ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ತನಿಖೆ ಚುರುಕುಗೊಂಡ ಹಿನ್ನೆಲೆಯಲ್ಲಿ ಆರೋಪಿಗಳು ತಮಿಳುನಾಡಿಗೆ ಪರಾರಿಯಾಗುವ ಹಂತದಲ್ಲಿದ್ದರು. ಇನ್ನೇನು ಆರೋಪಿಗಳು ಪರಾರಿಯಾಗಬೇಕು ಎನ್ನುವಾಗ ಸಿಬಿಐ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಬೆಂಗಳೂರಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಅಶ್ವತ್ಥ ಹಾಗೂ ಪುರುಷೋತ್ತಮ ಸೇರಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದ್ದು, ಅವರನ್ನು ಸಿಬಿಐ ಅಧಿಕಾರಿಗಳು ಧಾರವಾಡದಲ್ಲಿರುವ ಪ್ರಧಾನ ಜೆಎಂಎಫ್‌ಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಒಂದು ದಿನದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ನಂದಿ ಬೆಟ್ಟಕ್ಕೆ ತೆರಳುವ ಯುವತಿಯರೇ ಈ ಕಾಮಾಂಧನ ನೋಡಿದ್ದೀರಾ?...

ಬೆಳ್ಳಂಬೆಳಗ್ಗೆ ಹತ್ಯೆ: 2016ರ ಜೂನ್‌ 15ರಂದು ಸಪ್ತಾಪುರದ ಅವರದ್ದೇ ಆದ ಜಿಮ್‌ನಲ್ಲಿ ಯೋಗೀಶಗೌಡ ಅವರನ್ನು ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಹತ್ಯೆ ರಾಜ್ಯರಾಜಕೀಯದಲ್ಲಿ ತೀವ್ರ ಸಂಚಲನಕ್ಕೂ ಕಾರಣವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎರಡೇ ದಿನಗಳಲ್ಲಿ ಬಸವರಾಜ ಮುತ್ತಗಿ ಸೇರಿ ಐವರನ್ನು ಬಂಧಿಸಿದ್ದರು. ಈ ಮಧ್ಯೆ, ಪೊಲೀಸರ ತನಿಖೆ ಬಗ್ಗೆ ಕೊಲೆಯಾದ ಯೋಗೀಶಗೌಡ ಅವರ ಸಹೋದರ ಹಾಗೂ ತಾಯಿ ಇಬ್ಬರೂ ಸಂಶಯ ವ್ಯಕ್ತಪಡಿಸಿದ್ದರು. ಜೊತೆಗೆ ಮಾಜಿ ಸಚಿವ ವಿನಯ ಕುಲಕರ್ಣಿ ಮೇಲೂ ಬೆರಳು ತೋರಿಸಿದ್ದ ಅವರು, ಸಾಕ್ಷಿ ನಾಶಕ್ಕೂ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆಯೂ ತೀವ್ರ ಒತ್ತಡ ಹಾಕಿದ್ದರು. 2019ರಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಕೂಡಲೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪ್ರಕರಣವನ್ನು ಸಿಬಿಐಗೆ ವಹಿಸಿದ್ದರು.

 ಪ್ರಕರಣ ಸಿಬಿಐ ವ್ಯಾಪ್ತಿಗೆ ಬರುತ್ತಿದ್ದಂತೆ ತನಿಖೆಯಲ್ಲಿ ಭಾರೀ ಪ್ರಗತಿ ಕಂಡಿದೆ. ಆರಂಭದಲ್ಲಿ ಆರೋಪಿ ಬಸವರಾಜ ಮುತ್ತಗಿ ಸಿಬಿಐ ತನಿಖೆ ನಡೆಸದಂತೆ ಬೆಂಗಳೂರು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಹಾಕಿ ಒಂದು ಹಂತದಲ್ಲಿ ಯಶಸ್ವಿಯೂ ಆಗಿದ್ದರು. ನಂತರದ ಬೆಳವಣಿಗೆಯಲ್ಲಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಈ ಪ್ರಕರಣಕ್ಕೆ ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಕಳೆದ ವಾರದಿಂದ ಸಿಬಿಐ ಅಧಿಕಾರಿಗಳು ತನಿಖೆ ಹಾಗೂ ಆರೋಪಿಗಳ ಕುರಿತು ತೀವ್ರ ವಿಚಾರಣೆ ನಡೆಸಿದ್ದರು.

click me!