
ಉತ್ತರ ಕನ್ನಡ (ನ.09): ಆಸ್ತಿ ಹಂಚಿಕೆಗೆ ಒಪ್ಪದ ತಂದೆಯನ್ನ ,ಮಗನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೆಳ್ಳುಂಬಿ ಬಳಿಯ ಮಾವಿನಕಟ್ಟಾದಲ್ಲಿ ನಡೆದಿದೆ. ನಾರಾಯಣ ಪರಶು ಮರಾಠಿ (51), ಮಗನಿಂದ ದಾರುಣವಾಗಿ ಕೊಲೆಯಾದ ವ್ಯಕ್ತಿ. ಕೊಲೆ ಆರೋಪಿ ಮಗ ಹರೀಶ ಮರಾಠಿ (29), ಕೃತ್ಯದ ಬಳಿಕ ಕೊಡಲಿ ಸಹಿತ ಪರಾರಿಯಾಗಿದ್ದಾನೆ. ಮೃತ ನಾರಾಯಣ ಮರಾಠಿ, ತನ್ನ ಪುತ್ರ ಹರೀಶ ಮರಾಠಿ ಮತ್ತು ಪುತ್ರಿ ತಾರಾ ಮರಾಠಿ ಜೊತೆ ವಾಸಿಸುತ್ತಿದ್ದರು.
ತೋಟದ ಕೆಲಸ ಮಾಡುತ್ತಾ ಆರೋಪಿ ಹರೀಶ ಜೀವನ ಸಾಗಿಸುತ್ತಿದ್ದ. ಪತ್ನಿ ಸವಿತಾ ಹಾಗೂ ಮಗಳು ಸುರಕ್ಷಾ, ತಂಗಿ ತಾರಾ ಜತೆ ಒಂದೇ ಮನೆಯಲ್ಲಿದ್ರೂ, ಅಡುಗೆ ಮಾತ್ರ ಪ್ರತ್ಯೇಕವಾಗಿತ್ತು. ಸಹೋದರಿ ತಾರಾ ಮತ್ತು ಪತ್ನಿ ಸವಿತಾ ನಡುವೆ ಆಗಾಗ ಗೃಹ ಕಲಹ ಕೂಡಾ ನಡೆಯುತ್ತಿತ್ತು. ಇಂದು ಕೂಡಾ ಜಗಳ ನಡೆದಿದ್ದು ಆರೋಪಿ ಹರೀಶ್ ಸಹೋದರಿ ತಾರಾ ಮೇಲೆ ಹಲ್ಲೆ ನಡೆಸಿದ್ದ. ಈ ಹಿನ್ನೆಲೆ ಕೋಪಗೊಂಡ ತಂದೆ ನಾರಾಯಣ ಮಗನಿಗೆ ಬೈದು, 'ನಿನ್ನ ವಿರುದ್ಧ ಪೊಲೀಸ್ ದೂರು ಕೊಡುತ್ತೇನೆ' ಎಂದು ಎಚ್ಚರಿಸಿದ್ದ. ಇದರಿಂದ ಕೋಪಗೊಂಡ ಹರೀಶ ಮರಾಠಿ, ಕೊಡಲಿಯನ್ನು ಎತ್ತಿ ತಂದೆಯ ತಲೆಗೆ ಬಾರಿಸಿದ್ದ.
'ಮನೆ ಸಾಲ, ಮದುವೆ ಸಾಲ ನಾನೇ ತೀರಿಸಿದ್ರೂ ಆಸ್ತಿ ಕೊಡಲಿಲ್ಲ' ಎಂದು ಅಬ್ಬರಿಸಿ ಮತ್ತೊಮ್ಮೆ ಕೊಡಲಿ ಬೀಸಿದ್ದ. ಈ ವೇಳೆ ಎಡ ಕಿವಿ ಭಾಗಕ್ಕೆ ಕೊಡಲಿಯೇಟು ಬಿದ್ದ ಪರಿಣಾಮ ನಾರಾಯಣ ಮರಾಠಿ ಸ್ಥಳದಲ್ಲೇ ಕುಸಿದು ಬಿದ್ದು ಸಾವನಪ್ಪಿದ್ದಾರೆ. ತಾರಾ ಮರಾಠಿ ಕೂಡಲೇ ತಂದೆಯನ್ನು ಯಲ್ಲಾಪುರ ಆಸ್ಪತ್ರೆಗೆ ಕರೆದೊಯ್ದರೂ ಅದಾಗಲೇ ನಾರಾಯಣ ಮೃತಪಟ್ಟಿದ್ದರು. ಇನ್ನು ಕೊಲೆ ಮಾಡಿದ ಬಳಿಕ ಪರಾರಿಯಾಗಿದ್ದ ಆರೋಪಿ ಹರೀಶನನ್ನು ಇಂದು ಸಂಜೆ ಪೊಲೀಸರು ಬಂಧಿಸಿದ್ದು, ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ