Latest Videos

Bengaluru: ಮಾಲೀಕರ ಮನೆಯಲ್ಲೇ 225 ಗ್ರಾಂ ಚಿನ್ನ ಕದ್ದ ಕೆಲಸದ ಮಹಿಳೆ ಬಂಧನ

By Kannadaprabha NewsFirst Published Jun 15, 2024, 12:54 PM IST
Highlights

ಮಾಲೀಕರ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿದ್ದ ಅಡುಗೆ ಕೆಲಸದ ಮಹಿಳೆಯನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಜೋಗುಪಾಳ್ಯದ ಮಮತಾ(36) ಬಂಧಿತೆ. 

ಬೆಂಗಳೂರು (ಜೂ.15): ಮಾಲೀಕರ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿದ್ದ ಅಡುಗೆ ಕೆಲಸದ ಮಹಿಳೆಯನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಜೋಗುಪಾಳ್ಯದ ಮಮತಾ(36) ಬಂಧಿತೆ. ಆರೋಪಿಯಿಂದ ₹16 ಲಕ್ಷ ಮೌಲ್ಯದ 225 ಗ್ರಾಂ ತೂಕದ ಮೂರು ಚಿನ್ನದ ಗಟ್ಟಿಗಳು ಹಾಗೂ ಎರಡು ಚಿನ್ನ ಬಳೆಗಳನ್ನು ಜಪ್ತಿ ಮಾಡಲಾಗಿದೆ. ಜೋಗುಪಾಳ್ಯ ನಿವಾಸಿ ಅಮರೇಂದ್ರ ಅವರ ಮನೆಯಲ್ಲಿ ಕಳೆದ ನವೆಂಬರ್‌ನಲ್ಲಿ ಚಿನ್ನಾಭರಣ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಉದ್ಯಮಿ ಅಮರೇಂದ್ರ ಅವರ ಮನೆಯಲ್ಲಿ ಮಮತಾ ಹಲವು ವರ್ಷಗಳಿಂದ ಅಡುಗೆ ಕೆಲಸ ಮಾಡಿಕೊಂಡಿದ್ದರು. ಮಾಲೀಕರ ನಂಬಿಕೆ ಗಿಟ್ಟಿಸಿದ್ದರು. 2023ರ ನವೆಂಬರ್‌ 25ರಂದು ಮನೆಯ ಮಾಲೀಕ ಅಮರೇಂದ್ರ ಅವರು ಕುಟುಂಬದ ಸದಸ್ಯರ ಜತೆಗೆ ಕಾರ್ಯಕ್ರಮಕ್ಕೆ ತೆರಳಿದ್ದರು. ಈ ವೇಳೆ ಮಮತಾ ಮಾತ್ರ ಮನೆಯಲ್ಲೇ ಇದ್ದರು. ಇದೇ ಸಮಯ ಬಳಸಿಕೊಂಡು ಮನೆಯ ಕೊಠಡಿಯಲ್ಲಿದ್ದ ಕೀ ತೆಗೆದುಕೊಂಡು ಅಲ್ಮೇರಾದ ತೆರೆದು ಚಿನ್ನದ ಒಡವೆಗಳನ್ನು ಕಳ್ಳತನ ಮಾಡಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಬಂದರೂ ಮಾಲೀಕರು ಅಲ್ಮೇರಾದಲ್ಲಿದ್ದ ಚಿನ್ನದ ಒಡವೆಗಳನ್ನು ಗಮನಿಸಿರಲಿಲ್ಲ. ಮಮತಾ ಸಹಜವಾಗಿ ಯಾವುದೇ ಅನುಮಾನ ಬಾರದಂತೆ ಮನೆಯಲ್ಲೇ ಅಡುಗೆ ಕೆಲಸ ಮಾಡಿಕೊಂಡು ಇದ್ದರು.

ಆರು ತಿಂಗಳ ಬಳಿಕ ಕಳ್ಳತನ ಬೆಳಕಿಗೆ: ಮನೆಯ ಮಾಲೀಕ ಅಮರೇಂದ್ರ ಅವರು ಜೂ.7ರಂದು ಅಲ್ಮೇರಾ ತೆರೆದು ನೋಡಿದಾಗ ಚಿನ್ನಾಭರಣ ಇಲ್ಲದಿರುವುದು ಕಂಡು ಬಂದಿದೆ. ಮನೆಯವರನ್ನು ವಿಚಾರಿಸಿದಾಗ ತಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಈ ಸಂಬಂಧ ಹಲಸೂರು ಠಾಣೆಗೆ ದೂರು ನೀಡಿದ್ದರು. ಮನೆಯ ಅಡುಗೆ ಕೆಲಸದ ಮಮತಾ ಕಳ್ಳತನ ಮಾಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಮಮತಾಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಮಾಲೀಕರ ಮನೆಯಲ್ಲಿ ಚಿನ್ನಾಭರಣ ಕಳ್ಳತನ ತಾನೇ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ವಿಶೇಷ ಸೌಲಭ್ಯ ಆರೋಪ ಹಿನ್ನೆಲೆ: ನಟ ದರ್ಶನ್‌ ಇರುವ ಠಾಣೆ ಸಿಸಿಟೀವಿ ದೃಶ್ಯ ಕೋರಿ ಆರ್‌ಟಿಐ ಅರ್ಜಿ!

ಆಭರಣ ಕರಗಿಸಿ ಚಿನ್ನದ ಗಟ್ಟಿ ಮಾಡಿದ್ದ ಆರೋಪಿ: ಪೊಲೀಸರು ಮಮತಾಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಐದು ದಿನ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ಮಾಡಿದಾಗ, ಕದ್ದ ಚಿನ್ನಾಭರಣಗಳನ್ನು ಕರಗಿಸಿ ಮೂರು ಚಿನ್ನದ ಗಟ್ಟಿಗಳಾಗಿ ಮಾರ್ಪಡಿಸಿ ತನ್ನ ಮನೆಯಲ್ಲೇ ಇರಿಸಿರುವುದಾಗಿ ಮಮತಾ ಹೇಳಿದ್ದಾರೆ. ಅದರಂತೆ ಪೊಲೀಸರು ಆಕೆಯ ಮನೆಯಲ್ಲಿ ಮೂರು ಚಿನ್ನದ ಗಟ್ಟಿಗಳು ಹಾಗೂ ಎರಡು ಚಿನ್ನದ ಬಳೆಗಳನ್ನು ಜಪ್ತಿ ಮಾಡಿದ್ದಾರೆ. ಸದ್ಯಕ್ಕೆ ಆರೋಪಿ ಮಮತಾ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!