Latest Videos

Bengaluru: ಕೋರ್ಟ್‌ ವಿಚಾರಣೆಗೆ ಗೈರಾಗಿದ್ದ ರೌಡಿ ಕುಳ್ಳ ರಿಜ್ವಾನ್‌ ಬಂಧನ

By Kannadaprabha NewsFirst Published Jun 15, 2024, 12:10 PM IST
Highlights

ಕೆಂಪೇಗೌಡನಗರ ಪೊಲೀಸ್‌ ಠಾಣೆಯ ರೌಡಿ ಶೀಟರ್‌ ಆಗಿರುವ ಕುಳ್ಳ ರಿಜ್ವಾನ್‌ ಹಲವು ವರ್ಷಗಳಿಂದ ನಗರದಲ್ಲಿ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಾನೆ. ಈತನ ವಿರುದ್ಧ ಈ ಹಿಂದೆ ಕೊಲೆ, ಕೊಲೆಗೆ ಯತ್ನ, ಹಲ್ಲೆ, ದರೋಡೆ, ಅಪಹರಣ ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 23 ಅಪರಾಧ ಪ್ರಕರಣಗಳು ದಾಖಲಾಗಿವೆ.

ಬೆಂಗಳೂರು (ಜೂ.15): ಕೊಲೆ, ಸುಲಿಗೆ, ಅಪಹರಣ, ದರೋಡೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿ ರಿಜ್ವಾನ್‌ ಅಲಿಯಾಸ್‌ ಕುಳ್ಳ ರಿಜ್ವಾನ್‌ನನ್ನು (39) ಕೆಂಪೇಗೌಡನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೆಂಪೇಗೌಡನಗರ ಪೊಲೀಸ್‌ ಠಾಣೆಯ ರೌಡಿ ಶೀಟರ್‌ ಆಗಿರುವ ಕುಳ್ಳ ರಿಜ್ವಾನ್‌ ಹಲವು ವರ್ಷಗಳಿಂದ ನಗರದಲ್ಲಿ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಾನೆ. ಈತನ ವಿರುದ್ಧ ಈ ಹಿಂದೆ ಕೊಲೆ, ಕೊಲೆಗೆ ಯತ್ನ, ಹಲ್ಲೆ, ದರೋಡೆ, ಅಪಹರಣ ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 23 ಅಪರಾಧ ಪ್ರಕರಣಗಳು ದಾಖಲಾಗಿವೆ. ಕೆಂಪೇಗೌಡನಗರ, ಬನಶಂಕರಿ, ಕಗ್ಗಲೀಪುರ ಸೇರಿ 10 ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ. ಈತನ ಬಂಧನಕ್ಕೆ ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರೆಂಟ್‌ ಜಾರಿಗೊಳಿಸಿತ್ತು.

ಕೆರೆ ಸ್ವಚ್ಛತೆಗಾಗಿ ಬಿಬಿಎಂಪಿ ಯಂತ್ರ ಖರೀದಿ?: ತ್ಯಾಜ್ಯ ವಿಲೇವಾರಿಗೆ ಅನುಕೂಲ

ಈತನ ಬಂಧನಕ್ಕೆ ಕೆಂಪೇಗೌಡನಗರ ಠಾಣೆ ಪೊಲೀಸರ ಒಂದು ವಿಶೇಷ ತಂಡ ರಚಿಸಲಾಗಿತ್ತು. ರೌಡಿ ಕುಳ್ಳ ರಿಜ್ವಾನ್‌ ಬಂಧನಕ್ಕೆ ಹುಡುಕಾಟ ಆರಂಭಿಸಿದ್ದ ಪೊಲೀಸರ ವಿಶೇಷ ತಂಡವು ಬಾತ್ಮೀದಾರರ ಖಚಿತ ಮಾಹಿತಿ ಮೇರೆಗೆ ಎಂ.ಜಿ.ರಸ್ತೆಯಲ್ಲಿ ಆತನನ್ನು ವಶಕ್ಕೆ ಪಡೆದಿತ್ತು. ಜೋಡಿ ಕೊಲೆ ಪ್ರಕರಣ ಸಂಬಂಧ ಸುಬ್ರಮಣ್ಯಪುರ ಠಾಣೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು. ಈ ಜೋಡಿ ಕೊಲೆ ಪ್ರಕರಣ ಸಂಬಂಧ ಆರೋಪಿಯನ್ನು ವಿಚಾರಣೆ ನಡೆಸಿ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ವಿಚಾರಣೆ ನಡೆಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

7 ವರ್ಷಗಳಿಂದ ನ್ಯಾಯಾಲಯ ವಿಚಾರಣೆಗೆ ಗೈರಾಗಿದ್ದವನ ಸೆರೆ: ಮಹಿಳೆ ಮೇಲೆ ಆ್ಯಸಿಡ್‌ ದಾಳಿಗೆ ಯತ್ನಿಸಿದ್ದ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ವಿಚಾರಣೆ ಹಾಜರಾಗದೆ ಕಳೆದ ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಶಿವಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಡಿ.ಜೆ.ಹಳ್ಳಿ ನಿವಾಸಿ ಮೊಹಮ್ಮದ್‌ ಸಿಕಂದರ್‌(51) ಬಂಧಿತ. ಈತ 2016ನೇ ಸಾಲಿನಲ್ಲಿ ಶಿವಾಜಿನಗರ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಮೇಲೆ ಆ್ಯಸಿಡ್‌ ದಾಳಿಗೆ ಯತ್ನಿಸಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ನಟ ದರ್ಶನ್‌ಗೆ ರಾಜಾತಿಥ್ಯ ಕೊಡುತ್ತಿಲ್ಲ: ಸಚಿವ ಪರಮೇಶ್ವರ್‌

ಜಾಮೀನು ಪಡೆದು ಬಿಡುಗಡೆಯಾಗಿದ್ದ ಆರೋಪಿ ಮೊಹಮ್ಮದ್‌ ಸಿಕಂದರ್‌ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತನ ಬಂಧನಕ್ಕೆ ನ್ಯಾಯಾಲಯವು ವಾರೆಂಟ್‌ ಹೊರಡಿಸಿತ್ತು. ಹೀಗಾಗಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!