ಬದುಕಿ ಬಾಳಬೇಕಿದ್ದ ಹರೆಯದ ಯುವತಿ ತಾನು ಪ್ರೀತಿಸಿ ಮದುವೆ ಆಗಿದ್ದ ಪ್ರಿಯಕರ ಬೇರೊಂದು ಹುಡುಗಿ ಜೊತೆ ಮದುವೆ ಆಗಿದ್ದನ್ನು ಸಹಿಸಿಕೊಳ್ಳದೆ, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣಿಗೆ ಶರಣಾಗಿರೋ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಫೆ.25): ಬದುಕಿ ಬಾಳಬೇಕಿದ್ದ ಹರೆಯದ ಯುವತಿ ತಾನು ಪ್ರೀತಿಸಿ ಮದುವೆ ಆಗಿದ್ದ ಪ್ರಿಯಕರ ಬೇರೊಂದು ಹುಡುಗಿ ಜೊತೆ ಮದುವೆ ಆಗಿದ್ದನ್ನು ಸಹಿಸಿಕೊಳ್ಳದೆ, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣಿಗೆ ಶರಣಾಗಿರೋ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
undefined
ಹೀಗೆ ಎಸ್ಪಿ ಕಚೇರಿ ಬಳಿ ಕಣ್ಣೀರು ಹಾಕುತ್ತಾ ಧರಣಿ ನಡೆಸ್ತಿರುವ ಪೋಷಕರು ಹಾಗೂ ಗ್ರಾಮಸ್ಥರು. ಮೊದಲು ಮೃತಳ ಅಂತ್ಯಸಂಸ್ಕಾರ ನಡೆಸಿ ಎಂದು ಮನವೊಲಿಸುತ್ತಿರುವ ಪೊಲೀಸರು. ಈ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗದ ಎಸ್ಪಿ ಕಚೇರಿ ಬಳಿ. ಚಿತ್ರದುರ್ಗ ತಾಲ್ಲೂಕಿನ ಕೂನಬೇವು ಗ್ರಾಮದ ದುರ್ಗಮ್ಮನ ಮಗಳಾದ ವಿಶಾಲಾಕ್ಷಿ ಜಿಟಿಟಿಸಿ ತರಬೇತಿ ಪಡೆದು, ಉದ್ಯೋಗ ಗಿಟ್ಟಿಸುವ ಕನಸು ಕಂಡಿದ್ದಳು.
ಆದ್ರೆ ಆಕೆಯ ಸೌಂದರ್ಯಕ್ಕೆ ಮಾರು ಹೋಗಿದ್ದ ಅದೇ ಗ್ರಾಮದಲ್ಲಿ ಇವರ ಮನೆಯ ಮುಂಭಾಗದಲ್ಲೇ ವಾಸವಾಗಿದ್ದ ನಾಯಕ ಸಮುದಾಯದ ತಿಪ್ಪೇಸ್ವಾಮಿ ಎಂಬ ಆಸಾಮಿ ವಿಶಾಲಾಕ್ಷಿಯನ್ನು ಪ್ರೀತಿಸಿದ್ದು, ಎಲ್ಲರ ವಿರೋಧದ ನಡುವೆ ಕಳೆದ ವರ್ಷವಷ್ಟೇ ಅಂತರ್ಜಾತಿ ವಿವಾಹವಾಗಿದ್ದನು. ಆದ್ರೆ ದಲಿತ ಸಮುದಾಯದ ವಿಶಾಲಾಕ್ಷಿಯೊಂದಿಗೆ ತಿಪ್ಪೇಸ್ವಾಮಿ ವಿವಾಹವಾಗಿದ್ದಕ್ಕೆ ಅವರ ಕುಟುಂಬಸ್ಥರಿಂದ ತೀವ್ರ ವಿರೋಧ ವ್ಯಕ್ತವಾದ ಪರಿಣಾಮ ಒತ್ತಡಕ್ಕೆ ಮಣಿದ ತಿಪ್ಪೇಸ್ವಾಮಿ, ಪೋಷಕರ ಒತ್ತಾಯಕ್ಕೆ ಪತ್ನಿಯ ತಾಳಿ ತೆಗೆಸಿ ಇಬ್ಬರು ದೂರಾಗಿದ್ದರು. ಆಗ ದಾರಿ ಕಾಣದ ವಿಶಾಲಾಕ್ಷಿಯು
ಕೂನಬೇವು ಗ್ರಾಮದಲ್ಲಿನ ತನ್ನ ತವರು ಮನೆ ಸೇರಿದ್ದು, ಮರಳಿ ಜಿಟಿಟಿಸಿ ವಿದ್ಯಾಭ್ಯಾಸದಲ್ಲಿ ತೊಡಗಿದ್ದರು.
ಆದ್ರೆ ಈ ತಿಪ್ಪೇಸ್ವಾಮಿಯು ಇತ್ತೀಚೆಗೆ ಮತ್ತೊಬ್ಬರೊಂದಿಗೆ ಮದುವೆಯಾಗಿದ್ದಾನೆಂಬ ವಿಚಾರ ತಿಳಿದ ವಿಶಾಲಾಕ್ಷಿ(21) ಇಂದು ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಹೆತ್ತವರನ್ನು ಬಿಟ್ಟು, ತನ್ನ ಪ್ರೀತಿಸಿದವನ ಜಾತಿ ಯಾವುದಾದರೇನು ಪ್ರೀತಿ ಮುಖ್ಯ ಅಂತ ನಂಬಿಹೋಗಿದ್ದ ವಿಶಾಲಾಕ್ಷಿ ದಿಕ್ಕು ತೋಚದೇ ಆತ್ಮಹತ್ಯೆ ಗೀಡಾಗಿದ್ದಾಳೆ. ಈ ಸಂಬಂದ ತುರುವನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆ ಬಳಿಕ ಆಕೆಯ ಕುಟುಂಬಸ್ಥರು ಹಾಗು ಸಂಬಂಧಿಗಳು ಮೃತ ದೇಹದ ಅಂತ್ಯ ಸಂಸ್ಕಾರ ನಡೆಸದೇ ಚಿತ್ರದುರ್ಗ ಎಸ್ಪಿ ಕಚೇರಿ ಬಳಿ, ಧರಣಿ ನಡೆಸುತಿದ್ದಾರೆ. ವಿಶಾಲಾಕ್ಷಿ ಸಾವಿಗೆ ಕಾರಣವಾದ ತಿಪ್ಪೇಸ್ವಾಮಿಯನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟಿಸುತಿದ್ದಾರೆ. ಈ ವೇಳೆ ಮೃತಳ ಅಂತ್ಯಸಂಸ್ಕಾರ ನಡೆಸುವಂತೆ ಸಂಬಂಧಿರಲ್ಲಿ ಪೊಲೀಸರು ಮನವೊಲಿಸಲು ಯತ್ನಿಸಿದ್ದು, ನ್ಯಾಯಕ್ಕಾಗಿ ಹೋರಾಟ ಮುಂದುವರೆದಿದೆ.
ಒಟ್ಟಾರೆ ಪ್ರೀತಿಸಿ,ಕೈಹಿಡಿದ ಪತ್ನಿಗೆ ತಿಪ್ಪೇಸ್ವಾಮಿ ಕೈಕೊಟ್ಟು ಮತ್ತೊಂದು ವಿವಾಹ ಆಗಿದ್ದಾನೆ. ಹೀಗಾಗಿ ಮನನೊಂದ ದಲಿತ ಯುವತಿ ನೇಣಿಗೀಡಾಗಿದ್ದಾಳೆ. ಈ ವಿಷಯ ತಿಳಿದ ತಿಪ್ಪೇಸ್ವಾಮಿ ಎಸ್ಕೇಪ್ ಆಗಿದ್ದು, ಪೊಲೀಸರು ಆತನನ್ನು ಬಂಧಿಸಿ ಸೂಕ್ತ ತನಿಖೆ ನಡೆಸಬೇಕು. ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂಬ ಆಗ್ರಹ ಕೇಳಿ ಬಂದಿದೆ.