ಕರ್ನಾಟಕ ಅಕ್ರಮ ಕಳ್ಳಸಾಗಣೆ ತಡೆಗಟ್ಟುವಿಕೆ ಕಾಯ್ದೆಯಡಿ ಮೊದಲ ಬಾರಿ ಮಹಿಳೆ ಬಂಧನ| ಮಸಾಜ್ ಪಾರ್ಲರ್, ಸ್ಪಾ ಮತ್ತು ಸಲೂನ್‌ಗಳ ಸೋಗಿನಲ್ಲಿ ದಂಧೆ ನಡೆಸುತ್ತಿದ್ದ ಬಂಧಿತ ಮಹಿಳೆ| ಆರೋಪಿತೆ ಮೇಲೆ 30 ಅಪರಾಧ ಪ್ರಕರಣಗಳಿವೆ|
ಬೆಂಗಳೂರು(ಜು.23): ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಹಿಳೆಯೊಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿ, ಇದೇ ಮೊದಲ ಬಾರಿಗೆ ಕರ್ನಾಟಕ ಅಕ್ರಮ ಕಳ್ಳಸಾಗಣೆ ತಡೆಗಟ್ಟುವಿಕೆ ಕಾಯ್ದೆಯಡಿ (ಕೆಪಿಐಟಿ) ಪ್ರಕರಣ ದಾಖಲಿಸಿದ್ದಾರೆ.
ಹೊರಮಾವು ಮುಖ್ಯರಸ್ತೆಯ ಸ್ವಾತಿ (37) ಬಂಧಿತ ಆರೋಪಿತೆ. ಆರೋಪಿತೆ 2007ರಿಂದಲೂ ಹೊರ ರಾಜ್ಯದಿಂದ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿದ್ದಳು. ಕಾಟನ್‌ಪೇಟೆ, ಹೆಚ್‌ಎಸ್‌ಆರ್ ಲೇಔಟ್, ಮಾರತ್‌ಹಳ್ಳಿ, ಮಹದೇವಪುರ ಠಾಣಾ ವ್ಯಾಪ್ತಿಗಳಲ್ಲಿ ಮಸಾಜ್ ಪಾರ್ಲರ್, ಸ್ಪಾ ಮತ್ತು ಸಲೂನ್‌ಗಳ ಸೋಗಿನಲ್ಲಿ ದಂಧೆ ನಡೆಸುತ್ತಿದ್ದಳು.
ನಾನು ವೇಶ್ಯಾವಾಟಿಕೆ ನಡೆಸುತ್ತೇನೆ, ಏನೀವಾಗ? ಮಹಿಳೆ ಆವಾಜ್
ಹಲವು ಬಾರಿ ದಾಳಿ ನಡೆಸಿ ಸ್ವಾತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಜಾಮೀನು ಪಡೆದು ಬಳಿಕ ವಿಚಾರಣೆಗೂ ಹಾಜರಾಗದೆ, ತಲೆಮರೆಸಿಕೊಂಡು ತನ್ನ ವಿಳಾಸ ಬದಲಾವಣೆ ಮಾಡಿಕೊಂಡು ಬೇರೊಂದು ಸ್ಥಳದಲ್ಲಿ ಅಕ್ರಮ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಳು. ಆರೋಪಿತೆ ಮೇಲೆ 30 ಅಪರಾಧ ಪ್ರಕರಣಗಳಿವೆ.
ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಈ ಬಾರಿ ಆರೋಪಿತೆ ಮೇಲೆ ಕೆಪಿಐಟಿ ಕಾಯಿದೆ ಹಾಕಿ ಬಂಧಿಸಿದ್ದಾರೆ. ಈ ಕಾಯಿದೆಯ ಅನ್ವಯ ಆರೋಪಿಗೆ ಒಂದು ವರ್ಷ ಯಾವುದೇ ರೀತಿಯಲ್ಲೂ ಜಾಮೀನು ಸಿಗಲ್ಲ. ಈ ಕಾಯ್ದೆಯಡಿ ಬಂಧನಕ್ಕೆ ಒಳಗಾದ ಮೊದಲ ಮಹಿಳೆ ಆಗಿದ್ದಾಳೆ.