ಗೆಳೆಯನೊಂದಿಗೆ ಸೇರಿ ಅಪ್ಪನ ಕೊಂದ ಅಮ್ಮನ ವಿರುದ್ಧ ಸಾಕ್ಷಿ ಹೇಳಿದ 6 ವರ್ಷದ ಕಂದ

By Anusha KbFirst Published Feb 1, 2023, 3:27 PM IST
Highlights

2018ರಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ವರ್ಷದ ಮಗುವಿನ ಸಾಕ್ಷಿ ಆಧರಿಸಿ ಕೋರ್ಟ್‌ ಆರೋಪಿಗಳಿಗೆ ಶಿಕ್ಷೆ ನೀಡಿದೆ.  ಗಂಡನನ್ನು ಕೊಲೆ ಮಾಡಿದ ಮಹಿಳೆ ಹಾಗೂ ಆಕೆಯ ಗೆಳೆಯನಿಗೆ ಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿದೆ.

ಶಾಮ್ಲಿ: 2018ರಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ವರ್ಷದ ಮಗುವಿನ ಸಾಕ್ಷಿ ಆಧರಿಸಿ ಕೋರ್ಟ್‌ ಆರೋಪಿಗಳಿಗೆ ಶಿಕ್ಷೆ ನೀಡಿದೆ.  ಗಂಡನನ್ನು ಕೊಲೆ ಮಾಡಿದ ಮಹಿಳೆ ಹಾಗೂ ಆಕೆಯ ಗೆಳೆಯನಿಗೆ ಕೋರ್ಟ್‌ಜೀವಾವಧಿ ಶಿಕ್ಷೆ ವಿಧಿಸಿದೆ. 37 ವರ್ಷದ ರಾಜೇಶ್ ದೇವಿ ಹಾಗೂ ಆಕೆಯ ಗೆಳೆಯ 39 ವರ್ಷದ ಪ್ರದೀಪ್‌ ಕುಮಾರ್ ಶಿಕ್ಷೆಗೆ ಒಳಗಾದವರು.  ಆರು ವರ್ಷದ ಮಗು ಕಾರ್ತಿಕೇಯ ಸಿಂಗ್ ಸಾಕ್ಷಿ ಹೇಳಿದ ಹಿನ್ನೆಲೆಯಲ್ಲಿ ಈ ಶಿಕ್ಷೆಯಾಗಿದೆ. 

2018ರ ಜೂನ್ 12 ರಂದು ನಡೆದ ಕೊಲೆ ಪ್ರಕರಣ (Murder case) ಇದಾಗಿದೆ. ತನ್ನ ಹಾಗೂ ತನ್ನ ಗೆಳೆಯನ ಅಕ್ರಮ ಸಂಬಂಧವನ್ನು ವಿರೋಧಿಸಿದ ಗಂಡನನ್ನು ಮಹಿಳೆ ತನ್ನ ಗೆಳೆಯನೊಂದಿಗೆ ಸೇರಿ ಕತ್ತು ಹಿಸುಕಿ ಕೊಲೆ ಮಾಡಿದ್ದಳು. ನಂತರ ಮನೆಯ ಬಾಗಿಲಿಗೆ ಪತಿಯ ಶವವನ್ನು ನೇಣು ಹಾಕಿ ಆತ್ಮಹತ್ಯೆ ಎಂದು ಬಿಂಬಿಸಿದ್ದರು. 35 ವರ್ಷದ ಧರ್ಮವೀರ್ ಸಿಂಗ್ (Dharmveer singh) ಕೊಲೆಯಾದ ವ್ಯಕ್ತಿ. 

ಪ್ರಸ್ತತು 11 ವರ್ಷದವನಾಗಿರುವ ಆರನೇ ತರಗತಿಯಲ್ಲಿ ಓದುತ್ತಿರುವ ಮಗು ಈ ಎಲ್ಲಾ ಘಟನೆಯನ್ನು ಕಣ್ಣಾರೆ ನೋಡಿತ್ತು.  ಅಲ್ಲದೇ ತನ್ನ ಅಜ್ಜನ ಬಳಿ ಘಟನೆಯನ್ನು ವಿವರಿಸಿತ್ತು. ನಂತರ ಪೊಲೀಸರು ಹಾಗೂ ಕೋರ್ಟ್‌ನಲ್ಲೂ ಸಾಕ್ಷ್ಯ ಹೇಳಿತ್ತು. ಈ ಮಗು ಪ್ರಸ್ತುತ ಭಾಗ್ಪತ್‌ ಜಿಲ್ಲೆಯ ಖೆಕ್ರಾ ಗ್ರಾಮದಲ್ಲಿರುವ ತನ್ನ ತಂದೆಯ ಕಡೆಯ ಸಂಬಂಧಿಯೊಬ್ಬರ ಮನೆಯಲ್ಲಿ ವಾಸ ಮಾಡುತ್ತಾ ಶಾಲೆಗೆ ಹೋಗುತ್ತಿದ್ದು, ಆರನೇ ತರಗತಿಯಲ್ಲಿ ಓದುತ್ತಿದೆ. 

ತೀರ್ಪಿನ ಬಳಿಕ ಮಗು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನನ್ನನ್ನು ತುಂಬಾ ಪ್ರೀತಿಸುವ ಅಪ್ಪನನ್ನು ಕೊಂದ ದಿನವೇ ನನ್ನ ಪಾಲಿಗೆ ನನ್ನ ತಾಯಿ ಸತ್ತು ಹೋದಳು. ನಾನು ದೊಡ್ಡವನಾದ ಬಳಿಕ  ಪೊಲೀಸ್ ಅಧಿಕಾರಿ  (Police Officer) ಆಗಬೇಕೆಂದು ಬಯಸಿದ್ದು, ಇಂತಹ ಪ್ರಕರಣಗಳಿಗೆ ನ್ಯಾಯ ಒದಗಿಸಬೇಕೆಂದಿದ್ದೇನೆ ಎಂದು ಹೇಳಿದರು. 

ಘಟನೆಯ ಬಗ್ಗೆ ಮತ್ತೆ ವಿವರಿಸಿದ ಮಗು, ನಾನು ನನ್ನ ಇಬ್ಬರು ಕಿರಿಯ ಒಡಹುಟ್ಟಿದವರ ಜೊತೆ ಮಲಗಿದ್ದೆ. ಈ ವೇಳೆ ಬೊಬ್ಬೆ ಕೇಳಿ ನನಗೆ ಎಚ್ಚರವಾಯ್ತು.   ಈ ವೇಳೆ ನೋಡಿದಾಗ ನನ್ನ ತಾಯಿ ನನ್ನ ತಂದೆಯ ಎರಡು ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರೆ, ವ್ಯಕ್ತಿಯೊಬ್ಬ ನನ್ನ ತಂದೆಯ ಮುಖಕ್ಕೆ ದಿಂಬನ್ನು ಒತ್ತಿ ಹಿಡಿದಿದ್ದ, ನನ್ನ ತಂದೆ ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದರು. ಘಟನೆ ನೋಡಿ ನಾನು ಹೆದರಿ ಹೋಗಿದ್ದೆ.  ಹಲವು ದಿನಗಳ ಬಳಿಕ ನಾನು ಈ ವಿಚಾರವನ್ನು ನನ್ನ ತಾತನ ಬಳಿ ಹೇಳಿದೆ ಎಂದು ಬಾಲಕ ಹೇಳಿದ್ದಾನೆ.

ಮೊಮ್ಮಗುವಿನ ಮಾತು ಕೇಳಿದ ಅಜ್ಜ, ಪೊಲೀಸರನ್ನು ಸಂಪರ್ಕಿಸಿದ್ದರು.  ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದ  ಪೊಲೀಸರಿಗೆ ಆರು ವರ್ಷದ ಮಗುವಿನ ಹೇಳಿಕೆ ಸಮಾಧಾನ ತಂದಿರಲಿಲ್ಲ. ಕೊಲೆಯಾದ ಧರ್ಮವೀರ್ ಸಿಂಗ್‌ನ (Dharmveer singh) ತಂದೆ ಬ್ರಹ್ಮ್ ಸಿಂಗ್ (Brahma singh) ಮಾತನಾಡಿ,   ಘಟನೆಯ ಬಗ್ಗೆ ಮೊಮ್ಮಗನ ಮಾತನ್ನು ನಾನು ನಂಬಿದೆ. ಸೊಸೆ ರಾಜೇಶ್ ದೇವಿ (Rajesh Devi), ನನ್ನ ಮಗ ಅವನೇ ಆತ್ಮಹತ್ಯೆ ಮಾಡಿಕೊಂಡ ಎಂದು ನಾಟಕ ಮಾಡಿದ್ದಳು.  ಆಕೆಗೆ ಪ್ರದೀಪ್ ಜೊತೆ ಸಂಬಂಧವಿರುವುದರ ಅರಿವು ಕೂಡ ನಮಗಿತ್ತು. ಆಕೆಯ ಅನೈತಿಕ ಸಂಬಂಧವನ್ನು ನನ್ನ ಮಗ ತೀವ್ರವಾಗಿ ವಿರೋಧಿಸಿದ್ದ. ಈ ಬಗ್ಗೆ ನಾವು ಕೋರ್ಟ್‌ಗೆ ಮಾಹಿತಿ ನೀಡಿದಾಗ ಕೋರ್ಟ್ ಎಫ್‌ಐಆರ್ (FIR) ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿತು. ಅದರಂತೆ ಘಟನೆ ನಡೆದು ಐದು ತಿಂಗಳ ನಂತರ 2018ರ ನವಂಬರ್ 1 ರಂದು ಪ್ರದೀಪ್ ಹಾಗೂ ರಾಜೇಶ್ ದೇವಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದರು. 

 ನಂತರ ನವಂಬರ್ 7 ರಂದು ಪೊಲೀಸರು ಪ್ರದೀಪ್ ಹಾಗೂ ರಾಜೇಶ್ ದೇವಿಯನ್ನು ಬಂಧಿಸಿ ಜೈಲಿಗಟ್ಟಿದ್ದರು.  ಪ್ರಕರಣದಲ್ಲಿ ಬಾಲಕ ಪ್ರಮುಖ ಸಾಕ್ಷಿಯಾಗಿದ್ದ.  ಪ್ರಕರಣದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಕೋರ್ಟ್ ಹಲವು ಬಾರಿ ಬಾಲಕನನ್ನು ಹಲವು ರೀತಿಯ ಪ್ರಶ್ನೆಗಳನ್ನು ಕೇಳಿ ವಿಚಾರಣೆ ನಡೆಸಿತ್ತು. ಈ ವೇಳೆ ಬಾಲಕನ ಹೇಳಿಕೆ ಸತ್ಯ ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಕೋರ್ಟ್ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ 40 ಸಾವಿರ ದಂಡ ವಿಧಿಸಿದೆ. ಉತ್ತರಪ್ರದೇಶ ಶಾಮ್ಲಿ ಜಿಲ್ಲೆಯ ಮಲೈಂಡಿ ಗ್ರಾಮದಲ್ಲಿ ಘಟನೆ ನಡೆದಿತ್ತು. 

click me!