
ಎಂ. ಅಫ್ರೋಜ್ ಖಾನ್
ರಾಮನಗರ(ಜ.22): ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್‌ಗಳ ಹಾರ್ವ ಮುಂದುವರಿದಿದೆ. ಫೈನಾನ್ ಕಾಟಕ್ಕೆ ಹೆದರಿ ಜನರು ಊರು ತೊರೆಯುತ್ತಿರುವುದು ಒಂದು ಕಡೆಯಾದರೆ ಮತ್ತೊಂದೆಡೆ ಜೀವವನ್ನೇ ಕಳೆದುಕೊಳ್ಳುವ ಹಂತಕ್ಕೆ ಬಂದು ನಿಂತಿದೆ. ಗ್ರಾಮೀಣ ಭಾಗದ ಜನರು ಈ ಮೈಕ್ರೋ ಫೈನಾನ್ಸ್ ಪೆಡಂಭೂತಕ್ಕೆ ಹೆದರಿ ಕಂಗಾಲಾಗಿದ್ದಾರೆ.
ಗ್ರಾಮೀಣ ಪ್ರದೇಶಗಳು, ನಗರ ಹಾಗೂ ಪಟ್ಟಣ ಪ್ರದೇಶದಲ್ಲಿರುವ ಬಡ ಕೂಲಿ ಕಾರ್ಮಿಕರನ್ನೇ ಟಾರ್ಗೆಟ್ ಮಾಡಿಕೊಂಡಿರುವ ಮೈಕ್ರೋ ಫೈನಾನ್ಸ್ ಗಳು ಅಧಿಕ ಬಡ್ಡಿಗೆ ಸಾಲ ಕೊಡುತ್ತಿವೆ ಕನಿಷ್ಠ 25 ಸಾವಿರದಿಂದ ಲಕ್ಷದವರೆಗೆ ಸಾಲ ಕೊಡುವ ಸಂಸ್ಥೆಗಳು, ಸಕಾಲದಲ್ಲಿ ಸಾಲ ಮರುಪಾವತಿಸುವಲ್ಲಿ ವಿಫಲರಾಗುವವರ ವಿರುದ್ಧ ಕಿರುಕುಳ ನೀಡಲು ಆರಂಭಿಸುತ್ತವೆ.
ಮೈಕ್ರೋಫೈನಾನ್ಸ್ ಕಂಪನಿಗಳ ಕಿರುಕುಳ: ಗ್ರಾಮ ತೊರೆಯಬಾರದು ಎಂದು ಕುಟುಂಬಗಳಿಗೆ ಧೈರ್ಯ ತುಂಬಿದ ಅಧಿಕಾರಿಗಳು!
ಮೈಕ್ರೋ ಫೈನಾನ್ಸ್ ಗಳು ವೈಯಕ್ತಿಕವಾಗಿ ಹಾಗೂ ನಿಗದಿತ ಸಂಖ್ಯೆಯ ಗುಂಪಿಗೆ ಅಧಿಕ ಬಡ್ಡಿಗೆ ಸಾಲ ನೀಡಿ ವಾರಕ್ಕೊಮ್ಮೆ. 15 ದಿನಕ್ಕೊಮ್ಮೆ ಹಾಗೂ ತಿಂಗಳಿಗೊಮ್ಮೆ ಸಾಲ ಮರುಪಾವತಿಸುವಂತೆ ಸೂಚಿಸುತ್ತವೆ. ಸಾಲಗಾರರು ಸಕಾಲದಲ್ಲಿ ಕಂತಿನ ಹಣ ಪಾವತಿಸದಿದ್ದರೆ, ಮನೆ ಬಾಗಿಲಿಗೆ ಬಂದು ಕಿರುಕುಳ ನೀಡಲಾರಂಭಿಸುತ್ತಾರೆ. ಸಾಲ ಪಡೆಯುವ ಹಳ್ಳಿಗಾಡಿನ ಜನರು ಕೂಲಿ ಮಾಡಿಯೇ ಬದುಕು ಕಟ್ಟಿಕೊಂಡಿರುವವರು. ನಿರ್ದಿಷ್ಟ ಆದಾಯದ ಮೂಲ ಇಲ್ಲದ ಅವರಿಗೆ ಕೂಲಿ ಸಿಗದಿದ್ದರೆ ವಾರದ ಹಣಕಾಸಿನ ಲೆಕ್ಕಾಚಾರ ಸರಿದೂಗಿಸುವುದು ಕಷ್ಟವಾಗುತ್ತದೆ. ಹೀಗಾಗಿ ಸಾಲ ಪಾವತಿ ಸಾಧ್ಯವಾಗುವುದಿಲ್ಲ. ಆದರೆ, ಸಾಲ ಕೊಟ್ಟವರು ಸಬೂಬು ಕೇಳದೆ ಮರುಪಾವತಿಗೆ ಒತ್ತಡ ಹೇರುತ್ತಾರೆ.
ಸಾಲ ವಸೂಲಿಗೆ ಸ್ಥಳೀಯರನ್ನೇ ನಿಯೋಜಿಸಿಕೊಳ್ಳುವ ಸಂಸ್ಥೆಗಳು, ಅವರ ಮೂಲಕ ಬೆದರಿಕೆ ಹಾಕುತ್ತವೆ. ಇದರಿಂದಾಗಿ ಕುಟುಂಬದ ಪುರುಷರು ಊರು ಬಿಡುತ್ತಿದ್ದಾರೆ. ಆದರೂ, ವಸೂಲಿಗಾರರು ಮನೆಗೆ ಬಂದು ಮಹಿಳೆಯರು ಹಾಗೂ ಮಕ್ಕಳಿಗೆ ಕಿರುಕುಳ ನೀಡುತ್ತಾರೆ. ಮೊಬೈಲ್ ಕರೆಮಾಡಿ ಧಮ್ಮಿ ಹಾಕುತ್ತಾರೆ. ಮಾನ ಮರ್ಯಾದೆಗೆ ಅಂಜಿ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳು ವರದಿಯಾಗುತ್ತಿವೆ. ಜಿಲ್ಲಾಡಳಿತ ಕಡಿವಾಣ ಹಾಕಬೇಕು: ಆದಿವಾಸಿ ಬುಡಕಟ್ಟು ಇರುಳಿಗರುವಾಸವಾಗಿರುವಹಳ್ಳಿಗಳಿಗೂ ಫೈನಾನ್ಸ್ ಸಂಸ್ಥೆಗಳು ಕಾಲಿಟ್ಟಿವೆ.
ಆದಿವಾಸಿ ಜನರ ಮುಗ್ಧತೆ ಹಾಗೂ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡಿರುವ ಸಂಸ್ಥೆಗಳು ಕಿರು ಸಾಲದ ಹೆಸರಿ ನಲ್ಲಿ ಅಧಿಕ ಬಡ್ಡಿಗೆ ಸಾಲ ಕೊಡುತ್ತಿವೆ. ಸಂಸ್ಥೆಗಳು ಸಾಲ ವಸೂಲಿ ಹೆಸರಲ್ಲಿ ನೀಡುತ್ತಿರುವ ಕಿರುಕುಳಕ್ಕೆ ಆದಿವಾಸಿ ಜನರು ಊರು ಬಿಡುತ್ತಿದ್ದಾರೆ. ಮೈಕ್ರೋ ಫೈನಾನ್ಸ್ ಗಳ ಹಾವಳಿಯಿಂದ ರೋಸಿ ಹೋಗಿರುವ ಗ್ರಾಮೀಣ ಜನರು ಕಿರುಕುಳ ತಪ್ಪಿಸುವಂತೆ ಆಳಲು ತೋಡಿಕೊಳ್ಳುತ್ತಿದ್ದಾರೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಕಡಿವಾಣ ಹಾಕಬೇಕಿದೆ.
ಫೈನಾನ್ಸ್ ಕಿರುಕುಳಕ್ಕೆ ಮಹಿಳೆ ಬಲಿ
ರಾಮನಗರ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಮಹಿಳೆ ಆತ್ಮ ಹತ್ಯೆಗೆ ಶರಣಾಗಿರುವ ಘಟನೆ ತಾಲೂ ಕಿನ ತಿಮ್ಮಯ್ಯನದೊಡ್ಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಯಶೋಧಮ್ಮ (60) ಆತ್ಮಹತ್ಯೆ ಮಾಡಿಕೊಂಡವರು. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಯಶೋಧಮ್ಮ ಸುಮಾರು 8 ಖಾಸಗಿ ಫೈನಾನ್ಸ್ ಕಂಪನಿಗಳಿಂದ ಲಕ್ಷ ಸಾಲ ಪಡೆದಿದ್ದರು.
ಮೈಕ್ರೋ ಫೈನಾನ್ಸ್ ಕಿರುಕುಳ ತಾಳಲಾರದೇ ಗ್ರಾಮವನ್ನೇ ತೊರೆದ 100ಕ್ಕೂ ಹೆಚ್ಚು ಕುಟುಂಬಗಳು!
ಕಳೆದ ಎರಡು ತಿಂಗಳಿನಿಂದ ಅನಾರೋಗ್ಯಕ್ಕೀಡಾದ ಹಿನ್ನೆಲೆ ಸರಿಯಾಗಿ ಕೆಲಸಕ್ಕೆ ಹೋಗದೇ ಸಾಲ ಮರುಪಾವತಿ ಮಾಡಿರಲಿಲ್ಲ. 2 ತಿಂಗಳು ಸಾಲ ಬಾಕಿ 2 ಉಳಿಸಿಕೊಂಡಿದ್ದ ಕಾರಣ ಫೈನಾನ್ಸ್ ಕಂಪನಿಯ ಸಿಬ್ಬಂದಿ ಮನೆ ಬಳಿ ಬಂದು ಗಲಾಟೆ ನಡೆಸಿ ಇನ್ನೆರಡು ದಿನದಲ್ಲಿ ಸಾಲ ಕಟ್ಟದಿದ್ದರೆ ಮನೆ ಜಪ್ತಿ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ಬೇಸತ್ತ ಯಶೋಧಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತ ದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಒಪ್ಪಿಸಲಾಯಿತು. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೇಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ