Mandya Crime: ಫೇಸ್‌ಬುಕ್‌ ಸುಂದರಿ ಜತೆ ಮದುವೆಗೆ ಸಿದ್ಧತೆ ನಡೆಸಿ ಬೆಸ್ತುಬಿದ್ದ ಯುವಕ..!

By Girish GoudarFirst Published May 22, 2022, 6:28 AM IST
Highlights

*   ಯುವತಿಯಂತೆ ಮಾತನಾಡಿ 3 ಲಕ್ಷ ವಸೂಲಿ ಮಾಡಿದ 50 ವರ್ಷದ ಆಂಟಿ
*  ಮಂಡ್ಯದ ನಾಗಮಂಗಲದಲ್ಲಿ ನಡೆದ ಘಟನೆ
*  ಆಕೆ ಯುವತಿಯಲ್ಲ 50 ವರ್ಷದ ಮಹಿಳೆ ಎಂದು ತಿಳಿದು ಬೆಸ್ತು ಬಿದ್ದ ಯುವಕ 
 

ಕರಡಹಳ್ಳಿ ಸೀತಾರಾಮು

ನಾಗಮಂಗಲ(ಮೇ.22):  ಫೇಸ್‌ಬುಕ್‌ ಮೆಸೆಂಜರ್‌ನಲ್ಲಿ ಸುಂದರಿಯ ಫೋಟೋ ನೋಡಿ ಫಿದಾ ಆದ ಯುವಕ ಮದುವೆಗೆ ಸಿದ್ಧತೆ ನಡೆಸಿ ಕೊನೆಗೆ ಆಕೆ ಯುವತಿಯಲ್ಲ 50 ವರ್ಷದ ಮಹಿಳೆ ಎಂದು ತಿಳಿದು ಬೆಸ್ತು ಬಿದ್ದ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿ ನಡೆದಿದೆ. 

3 ತಿಂಗಳ ಹಿಂದೆ ಕಮಲಾ ಹೆಸರಿನ ಫೇಸ್‌ಬುಕ್‌ ಮೆಸೆಂಜರ್‌ನಲ್ಲಿದ್ದ ಸುಂದರ ಯುವತಿಯ ಭಾವಚಿತ್ರಕ್ಕೆ ಯುವಕ ಲೈಕ್‌ ಒತ್ತಿದ್ದಾನೆ. ತಾನು ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಮಲ್ಲಸಂದ್ರ ಗ್ರಾಮದ ಎಂ.ಆರ್‌.ಆಶಾ ಆಕೆ ಹೇಳಿಕೊಂಡಿದ್ದಾಳೆ. ನಂತರ ಇಬ್ಬರ ನಡುವೆ ಮಾತುಕತೆ ಶುರುವಾಗಿ ಪ್ರೀತಿಗೆ ತಿರುಗಿದೆ. ಯುವತಿ ತನ್ನ ಕಷ್ಟಹೇಳಿಕೊಂಡು ಯುವಕನಿಂದ .3.50 ಲಕ್ಷ ಪಡೆದಿದ್ದಾಳೆ. .30 ಸಾವಿರ ಮೌಲ್ಯದ ದಿನಸಿ ಸಾಮಗ್ರಿಯನ್ನೂ ತರಿಸಿಕೊಂಡಿದ್ದಾಳೆ. ಈ ನಡುವೆ ಯುವಕ ಮದುವೆ ವಿಷಯ ಪ್ರಸ್ತಾಪಿಸುತ್ತಿದ್ದಂತೆ ವರಸೆ ಬದಲಿಸಿದ ಆಕೆ, ತಾನು ಆಶಾಳ ದೊಡ್ಡಮ್ಮ ಎಂದಿದ್ದಾಳೆ. ಆಶಾ ತಂದೆ-ತಾಯಿ ಇಬ್ಬರೂ ತೀರಿಕೊಂಡಿದ್ದಾರೆ. ಹಾಗಾಗಿ ಅವಳ ಮದುವೆಯನ್ನು ನಾನೇ ಮಾಡಿಸಬೇಕಿದೆ ಎಂದಿದ್ದಾಳೆ. ಬಳಿಕ ಯುವಕನ ಮನೆಗೆ ಹೋಗಿ ಮದುವೆ ಮಾತುಕತೆ ನಡೆಸಿದ್ದಾಳೆ. ನಿಶ್ಚಿತಾರ್ಥ ಮಾಡುವ ಬಗ್ಗೆ ಪ್ರಸ್ತಾಪಿಸಿದಾಗ ಆಕೆ ಮನೆಯಲ್ಲಿ ಸಾವಾಗಿದೆ. ಚಪ್ಪರ ಶಾಸ್ತ್ರದ ದಿನ ನಿಶ್ಚಿತಾರ್ಥ ಮಾಡುವ ಪ್ರಸ್ತಾಪ ಇಟ್ಟಿದ್ದಾಳೆ. ಇದರಂತೆ ಯುವಕನ ಮನೆಯವರು ಲಗ್ನ ಪತ್ರಿಕೆ ಹಂಚಿ, ಮದುವೆ ಸಿದ್ಧತೆ ನಡೆಸಿದ್ದಾರೆ.

ಪತಿಯ ಕಳ್ಳತನ ಕೃತ್ಯಕ್ಕೆ ಬೆಂಬಲ ಕೊಟ್ಟ ಪತ್ನಿ, ಮೈದುನ ಜೈಲಿಗೆ

ಮೇ.20ರಂದು ಆದಿಚುಂಚನಗಿರಿ ಕ್ಷೇತ್ರದ ಶ್ರೀ ಕಾಲಭೈರವೇಶ್ವರಸ್ವಾಮಿ ಸನ್ನಿಧಿಯಲ್ಲಿ ಮದುವೆಗಾಗಿ ಯುವಕನ ಮನೆಯವರು ಬಂದಿದ್ದಾರೆ. ಆದರೆ ವಧುವಿನ ಕಡೆಯವರು ಆಗಮಿಸಿಲ್ಲ. ಬಳಿಕ ಯುವತಿಯ ದೊಡ್ಡಮ್ಮ ಎಂದು ಹೇಳಿಕೊಂಡಿದ್ದ ಮಹಿಳೆ ಯುವಕನ ಗ್ರಾಮಕ್ಕೆ ಆಗಮಿಸಿ, ತನಗೆ ಹುಷಾರಿರಲಿಲ್ಲ. ಹಾಗಾಗಿ ಯುವತಿಯನ್ನು ಆಕೆಯ ಮಾವಂದಿರು ಬಚ್ಚಿಟ್ಟಿದ್ದಾರೆ ಎಂದು ಕಥೆ ಹೆಣೆದಿದ್ದಾಳೆ. ಇದರಿಂದ ಅನುಮಾನಗೊಂಡ ಯುವಕನ ಮನೆಯವರರು ಆಕೆಯನ್ನು ಪೊಲೀಸ್‌ ಠಾಣೆಗೆ ಒಪ್ಪಿಸಿದಾಗ ಆಕೆಯ ನಾಟಕ ಬಯಲಾಗಿದೆ.

50 ವರ್ಷದ ಆಕೆ, ಯುವತಿಯಂತೆ ಮಾತನಾಡಿ ಯಾಮಾರಿಸಿದ ಸಂಗತಿ ಬಯಲಾಗಿದೆ. ಬಳಿಕ ಪಡೆದ ಹಣ ವಾಪಸ್‌ ನೀಡುವುದಾಗಿ ಆಕೆ ಮುಚ್ಚಳಿಕೆ ಬರೆದುಕೊಟ್ಟು ಬಳಿಕ ಪ್ರಕರಣ ಮುಕ್ತಾಯಗೊಂಡಿದೆ.
 

click me!