ಉತ್ತರ ಪ್ರದೇಶದ ಆಗ್ರಾದ ಮಥುರಾದಲ್ಲಿ ಮಹಿಳೆಯೊಬ್ಬರು ತನ್ನ ಪತಿಗೆ ಬೆಂಕಿ ಹಚ್ಚಿ ಸುಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಜಗಳ ನಡೆದಿದ್ದು ಈ ಘಟನೆಗೆ ಕಾರಣ ಎಂದು ಹೇಳಲಾಗಿದೆ.
ಉತ್ತರ ಪ್ರದೇಶದಲ್ಲಿ ಸೋಮವಾರ ರಾತ್ರಿ ಪತ್ನಿಯೇ ಪತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಆಘಾತಕಾರಿ ಘಟನೆ ನಡೆದಿದೆ. ಆಗ್ರಾ ವಿಭಾಗದ ಮಥುರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಶೇ. 80 ರಷ್ಟು ಸುಟ್ಟ ಗಾಯಗಳೊಂದಿಗೆ ದೆಹಲಿಗೆ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಚಿಕಿತ್ಸೆ ಪಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಯುಪಿಯ ಕೋಶಿ ಕಲನ್ ಟೌನ್‌ನಲ್ಲಿ ಈ ಘಟನೆ ವರದಿಯಾಗಿದೆ.
ಪತಿಗೆ ಬೆಂಕಿ ಹಚ್ಚಿದ ಮಹಿಳೆಯನ್ನು ರೇಖಾ ಎಂದು ಗುರುತಿಸಲಾಗಿದ್ದು, ಪತಿ ಛಮನ್ ಪ್ರಕಾಶ್ ತನ್ನ ಹೆಂಡತಿ ಅಕ್ರಮ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಸೋಮವಾರ ದಂಪತಿಯ ನಡುವೆ ಜಗಳವಾಗಿದೆ. ನಂತರ ರಾತ್ರಿ ಪತಿ ಮಲಗಿದ್ದ ವೇಳೆ ಪತಿಯ ಮೇಲೆ ಪೆಟ್ರೋಲ್ ಸುರಿದ ಮಹಿಳೆ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಛಮನ್ ಪ್ರಕಾಶ್ ಕೂಗಿಕೊಳ್ಳುತ್ತಿರುವುದನ್ನು ಕೇಳಿಸಿಕೊಂಡ ನೆರೆಹೊರೆಯವರು ಅವರ ಮನೆಗೆ ಹೋಗಿ ಬೆಂಕಿಯನ್ನು ನಂದಿಸಿ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ, ದೇಹದ ತುಂಬೆಲ್ಲಾ ಭೀಕರ ಸುಟ್ಟ ಗಾಯಗಳಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ರಾಷ್ಟ್ರ ರಾಜಧಾನಿಯಲ್ಲಿ ಅವರು ಮೃತಪಟ್ಟಿದ್ದಾರೆ.
ಇದನ್ನು ಓದಿ: Mysuru; ಮನನೊಂದಿದ್ದ ಮಗನಿಂದ ಅಪ್ಪನ ಕೊಲೆ
ಈ ಸಂಬಂಧ ಕೋಶಿ ಕಲನ್‌ನ ಮೀನಾ ನಗರ ಕಾಲೋನಿಯ ನಿವಾಸಿ ಮೃತ ಛಮನ್ ಪ್ರಕಾಶ್ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಹಾಗೂ, ರೇಖಾ ವಿರುದ್ಧ ಐಪಿಸಿ ಸೆಕ್ಷನ್ 302 ಅಡಿ ಪ್ರಕರಣ ದಾಖಲಾಗಿದೆ ಎಂದು ಸ್ಥಳೀಯ ಪೊಲೀಸ್ ಠಾಣೆಯ ಉಸ್ತುವಾರಿ ಮಾಹಿತಿ ನೀಡಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿಯೂ ಅವರು ತಿಳಿಸಿದ್ದಾರೆ.
ವಿಮೆ ಹಣ ಪಡೆಯಲು ಪತ್ನಿಯನ್ನು ಕೊಲೆ ಮಾಡಿದ ಪತಿ
ಇನ್ನೊಂದೆಡೆ, ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯಲ್ಲಿ ಇತ್ತೀಚೆಗೆ ಪತ್ನಿಯ ಹೆಸರಲ್ಲಿ ವಿಮೆ ಮಾಡಿಸಿದ್ದ ಗಂಡ, ಆ ಹಣವನ್ನು ಪಡೆಯುವ ಸಲುವಾಗಿ ಹೆಂಡತಿಯ ಕೊಲೆ ಮಾಡಲು ಪ್ಲ್ಯಾನ್ ಮಾಡಿ ಅದರಲ್ಲಿ ಯಶಸ್ವಿಯಾದ ಪ್ರಕರಣ ವರದಿಯಾಗಿತ್ತು. ಮೂರು ಜನ ಸುಪಾರಿ ಕಿಲ್ಲರ್ಸ್ ಅನ್ನು ಹುಡುಕಿ ಅವರಿಗೆ ಪತ್ನಿಯನ್ನು ಕೊಲ್ಲಲು 5 ಲಕ್ಷ ರೂಪಾಯಿ ಸುಪಾರಿಯನ್ನೂ ನೀಡಿದ್ದ. ಮುಂಗಡ ಹಣವಾಗಿ 1 ಲಕ್ಷ ರೂಪಾಯಿ ನೀಡಿದ್ದ ಆತ, ಕೆಲಸ ಮುಗಿದ ಬಳಿಕ ಉಳಿದ ನಾಲ್ಕು ಲಕ್ಷ ರೂಪಾಯಿ ನೀಡುವುದಾಗಿ ಹೇಳಿದ್ದ. ಹಂತಕರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿದರೂ, ಅವರಿಗೆ ಸಿಗಬೇಕಾದ 4 ಲಕ್ಷ ರೂಪಾಯಿ ಸಿಗಲಿಲ್ಲ.
ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಐಎಎಸ್ ಅಧಿಕಾರಿ ಟೀನಾ ದಾಬಿ ಹೆಸರಲ್ಲಿ ವಂಚಿಸಲು ಯತ್ನಿಸಿದ ವ್ಯಕ್ತಿ ಬಂಧನ
ಯಾಕೆಂದರೆ, ಪೊಲೀಸರು ಈ ಕೊಲೆಯ ಹಿಂದಿದ್ದ ಪ್ರಮುಖ ಸೂತ್ರಧಾರ ಆಕೆಯ ಪತಿ ಎನ್ನುವುದನ್ನು ಪತ್ತೆ ಹಚ್ಚಲು ಯಶಸ್ವಿಯಾಗಿದ್ದಾರೆ. ಜುಲೈ 26 ರಂದು ರಾತ್ರಿ 9 ಗಂಟೆ ಸುಮಾರಿಗೆ ನಿರ್ಜನವಾದ ಭೋಪಾಲ್ ರಸ್ತೆಯಲ್ಲಿ ಈ ಘಟನೆ ನಡೆದಿತ್ತು. ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ದಂಪತಿಯ ಮೇಲೆ ಅಪರಿಚಿತರು ದಾಳಿ ಮಾಡಿದ್ದಲ್ಲದೆ, ಪೂಜಾ ಎನ್ನುವ ಮಹಿಳೆಯನ್ನು ಗುಂಡು ಹಾರಿಸಿ ಕೊಂದಿದ್ದರು. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಈ ಕುರಿತಾದ ತನಿಖೆಯನ್ನು ನಡೆಸಿ, ಆಕೆಯೊಂದಿಗೆ ಬೈಕ್‌ನಲ್ಲಿದ್ದ ಗಂಡನ ವಿಚಾರಣೆ ಮಾಡಿದ್ದರು. ನಂತರ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು ಎಂದು ವರದಿಯಾಗಿದೆ.