* ಆರೋಪಿಗಳನ್ನು ಬಂಧಿಸಿದ ಬೈಲಹೊಂಗಲ ಪೊಲೀಸರು
* ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಿ, ಮಲಪ್ರಭಾ ನದಿಯಲ್ಲಿ ಎಸೆದಿದ್ದ ಖದೀಮರು
* ಈ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಬೈಲಹೊಂಗಲ(ಜೂ.19): ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಗಂಡನನ್ನು ಪತ್ನಿ, ಪ್ರಿಯಕರ ಹಾಗೂ ಆತನ ಗೆಳೆಯರು ಸೇರಿ ಕೊಲೆ ಮಾಡಿದ ಪ್ರಕರಣವನ್ನು ಬೈಲಹೊಂಗಲ ಪೊಲೀಸರು ಬೇಧಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿತಗಳು ಬಳಸಿದ ಮೋಟಾರ ಸೈಕಲ್, ಇಟಿಯೋಜ್ ಕಾರ ಜಪ್ತಿ ಮಾಡಿ, 6 ಜನ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಪರಿಚಿತ ಶವದ ಕುರಿತು ಕಳೆದ ಮೇ 28 ರಂದು ತಾಲೂಕಿನ ಅರವಳ್ಳಿ ಗ್ರಾಮದ ಮಲ್ಲಿಕಾರ್ಜುನ ಬಸಪ್ಪ ಗಾಣಿಗೇರ ಅವರು ಮಾಹಿತಿ ನೀಡಿ, ಯಾರೋ ತಲೆಗೆ, ಮುಖಕ್ಕೆ ಹೊಡೆದು ಭಾರಿ ಗಾಯ ಪಡಿಸಿ ಕೊಲೆ ಮಾಡಿ ಪುರಾವೆ ನಾಶಪಡಿಸುವ ಉದ್ದೇಶದಿಂದ ಶವವನ್ನು ಪ್ಲಾಸ್ಟಿಕ್ ತಟ್ಟಿನಲ್ಲಿ ಹಾಕಿ ನಯಾನಗರದ ಮಲಪ್ರಭಾ ನದಿಯಲ್ಲಿ ಎಸೆದಿದ್ದಾರೆಂದು ದೂರು ಸಲ್ಲಿಸಿದ್ದರು.
ಹೈದರಾಬಾದ್: ಪತಿಯೊಂದಿಗೆ ಅನೈತಿಕ ಸಂಬಂಧ ಶಂಕೆ: ಮಹಿಳೆ ಮೇಲೆ ಐವರಿಂದ ರೇಪ್ ಮಾಡಿಸಿ ವಿಡಿಯೋ ಚಿತ್ರೀಕರಿಸಿದ ಪತ್ನಿ
ಈ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಎಸ್‌ಪಿ ಲಕ್ಷಣ ನಿಂಬರಗಿ ಹೆಚ್ಚುವರಿ ಎಸ್‌ಪಿ ಮಹಾನಿಂಗ ನಂದಗಾಂವಿ ಡಿವೈಎಸ್‌ಪಿ ಶಿವಾನಂದ ಕಟಗಿ ಮಾರ್ಗದರ್ಶನದಲ್ಲಿ ಸಿಪಿಐ ಯು. ಹೆಚ್. ಸಾತೇನಹಳ್ಳಿ, ಪಿಎಸ್‌ಐ ಪ್ರವೀಣ ಕೋಟಿ ಅವರ ನೇತೃತ್ವದಲ್ಲಿ ತಂಡ ರಚಿಸಿ ಪೊಲೀಸರು ತನಿಖೆ ಕೈಕೊಂಡು ಕೊಲೆಯಾದ ವ್ಯಕ್ತಿಯನ್ನು ಧಾರವಾಡ ಜಿಲ್ಲೆಯ ಗೊಂಗಡಿಕೊಪ್ಪ ಗ್ರಾಮದ ಯಲ್ಲಪ್ಪ ಲಕ್ಷ್ಮಣ ಹಗೇದಾರ (39) ಎಂದು ಗುರುತಿಸಿ, ಮೃತನ ಹೆಂಡತಿ ಆರೋಪಿ ಸರಸ್ವತಿ (28) ಇವಳು ಆರೋಪಿತನಾದ ಧಾರವಾಡದ ಹತ್ತಿಕೊಳ ಗ್ರಾಮದ ಗೋಪಾಲಸಿಂಗ ಸೊಮಸಿಂಗ ಹಜಾರೆ (28) ಈತನೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಕುರಿತು ಗಂಡ ಪ್ರಶ್ನಿಸಿದಾಗ, ತನ್ನ ಅನೈತಿಕ ಸಂಬಂಧಕ್ಕೆ ಅಡ್ಡ ಬಂದ ಗಂಡನನ್ನು ತನ್ನ ಪ್ರಿಯಕರ ಆತನ ಗೆಳೆಯರ ಜೊತೆ ಸೇರಿ ಗಂಡನನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಿ, ಮಲಪ್ರಭಾ ನದಿಯಲ್ಲಿ ಎಸೆದಿದ್ದಾರೆಂದು ಪ್ರಕರಣ ದಾಖಲಾಗಿದೆ.
ಪ್ರಿಯಕರನ ಗೆಳೆಯರಾದ ಧಾರವಾಡದ ಮರಾಠಾ ಕಾಲನಿ ದುರ್ಗಾದೇವಿ ಗುಡಿ ಕಿಲ್ಲಾ ನಿವಾಸಿ, ಕಾರ್ತಿಕ ದಿನೇಶ ಕಾಯಸ್ತ (28), ಮಾಳಮಡ್ಡಿ ಧಾರವಾಡದ ಚಿದಾನಂದ ಪ್ರಕಾಶ ಕೋರಿ (21), ಹಿರೇಹೊನ್ನಳ್ಳಿ ಪಾಲಿ ಮಾಳಮಡ್ಡಿ ಧಾರವಾಡ ಶಂಬುಲಿಂಗ ಬಸವಂತಪ್ಪಾ ನೇಣಕ್ಕಿ (29), ಧಾರವಾಡ ಹೆಬ್ಬಳ್ಳಿಯಲ್ಲಿ ರವಿವಾರ ಪೇಠ ಓಣಿಯ ನಿಂಗಪ್ಪಾ ಬಸವರಾಜ ಟೆಂಗಿನಕಾಯಿ (30) ಆರೋಪಿತರು ಕೂಡಿಕೊಂಡು ಒಳಸಂಚು ಮಾಡಿ ಮೃತನಿಗೆ ಕಬ್ಬಿಣದ ರಾಡನಿಂದ ತಲೆಗೆ ಹೊಡೆದು ಕೊಲೆ ಮಾಡಿ ಪುರಾವೆ ನಾಶಪಡಿಸುವ ಉದ್ದೇಶದಿಂದ ಶವವನ್ನು ಪ್ಲಾಸ್ಟಿಕ ತಟ್ಟಿನಲ್ಲಿ ಕಟ್ಟಿತಂದು ನಯಾನಗರ ಗ್ರಾಮದ ಹತ್ತಿರದ ಮಲಪ್ರಭಾ ನದಿಯಲ್ಲಿ ಒಗೆದು ಹೋಗಿದ್ದಾರೆಂದು ಪೋಲಿಸ ತನಿಖೆಯಲ್ಲಿ ಗೊತ್ತಾಗಿದೆ. ಈ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.