ಬಾಬು ಮಗಳ ಕಡೆಯಿಂದ ಕೊಲೆ ಕಂಪ್ಲೆಂಟ್ ಪಡೆದು ಮಹಾದೇವಿಯನ್ನು ವಿಚಾರಣೆ ನಡೆಸಿದಾಗ ಮೊದಲು ಸಹಜ ಸಾವು ಎಂದು ಪುಂಗಿದ್ದ ಮಹಾದೇವಿ ನಂತರ ಅಸಹಜ ಸಾವಿನ ಕಥೆ ಹೇಳಲಾರಂಭಿಸಿದ್ದಳು. ನಂತರ ಪೊಲೀಸ್ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿದ್ದಾಗಿ ಮಹಾದೇವಿ ಒಪ್ಪಿಕೊಂಡಿದ್ದಾಳೆ.
ಅನಿಲ್ ಕಾಜಗಾರ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಳಗಾವಿ
ಬೆಳಗಾವಿ(ನ.03): ಅವರಿಬ್ಬರದ್ದು 16 ವರ್ಷಗಳ ದಾಂಪತ್ಯ. ಅವರಿಬ್ಬರ ದಾಂಪತ್ಯಕ್ಕೆ ಸಾಕ್ಷಿ ಎಂಬಂತೆ ಇಬ್ಬರು ಮಕ್ಕಳೂ ಸಹ ಇದ್ದಾರೆ. ಸದಾ ತಾವಾಯ್ತು ತಮ್ಮ ಕೆಲಸ ಆಯ್ತು ಅಂತ ಇರ್ತಿದ್ದ ಅವರಿಬ್ಬರ ಮಧ್ಯೆ ಒಂದು ಕಾರಣಕ್ಕೆ ವೈಮನಸ್ಸು ಬಂದಿತ್ತು. ಆ ವೈಮನಸ್ಸು ಎಲ್ಲಿಯವರೆಗೂ ಹೋಗಿ ತಲುಪಿತ್ತು ಅಂದ್ರೆ ಒಂದು ಹೆಣವೇ ಬಿದ್ದು ಹೋಗಿ ಬಿಟ್ಟಿದೆ. ಹಾಗಾದ್ರೆ ಅವರಿಬ್ಬರ ಮಧ್ಯೆ ಬಂದ ವೈ ಮನಸ್ಸು ಎಂಥದ್ದು! ಈ ಸ್ಟೋರಿ ನೋಡಿ.
ರಾತ್ರಿ ಉಂಡು ಮಲಗಿದ್ದ ಗಂಡ ಹಾಸಿಗೆಯಲ್ಲಿಯೇ ಶವವಾಗಿದ್ದ!
ಹೀಗೆ ಹಾಸಿಗೆಯಲ್ಲಿ ಹೆಣವಾಗಿ ಬಿದ್ದಿರೋ ಈತನ ಹೆಸರು ಬಾಬು ಕಲ್ಲಪ್ಪ ಕರ್ಕಿ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚಿಕ್ಕ ಮುನವಳ್ಳಿ ಗ್ರಾಮದವ. ಪೂರ್ವಜರಿಂದ ಬಂದ ಆಸ್ತಿ ಹೊಲ ಮನೆ ಗದ್ದೆ ಎಲ್ಲವೂ ಇತ್ತು. ಕುಟುಂಬದ ಕಣ್ಣಾಗಿ ಇಬ್ಬರು ಮಕ್ಕಳೂ ಸಹ ಬಾಬುಗೆ ಇದ್ರು. ಆದರೆ ಇತ್ತಿಚೆಗೆ ಬಾಬು ಕುಡಿತದ ಚಟಕ್ಕೆ ಜೋತು ಬಿದ್ದಿದ್ದ. ಬೆಳಗೆದ್ದು ನೈಂಟಿ ಹಾಕೋಕೆ ಶುರು ಮಾಡಿದ್ರೆ ಸಂಜೆಯವರೆಗೂ ಎಣ್ಣೆಯ ಮತ್ತಲ್ಲೆ ತೇಲಾಡ್ತಿದ್ದ. ಸಾಲದ್ದಕ್ಕೆ ತನ್ನ ಆಸ್ತಿಯನ್ನೂ ಸಹ ಮಾರಾಟಕ್ಕೆ ತೆಗೆದಿದ್ದ ಎನ್ನಲಾಗಿದೆ. ಇದೇ ವಿಚಾರ ಬಾಬು ಹೆಂಡತಿ ಮಹಾದೇವಿಯ ತಲೆ ಕಡೆಸಿತ್ತು. ಇದು ಹೀಗೆ ಮುಂದುವರೆದರೆ ಪರಿಸ್ಥಿತಿ ಸರಿ ಹೋಗಲ್ಲ ಎಂದು ಮಹಾದೇವಿ ಒಂದು ಮಸಲತ್ತು ಮಾಡಿದ್ಳು.. ಆ ಮಸಲತ್ತು ಎಂಥದ್ದು ಅಂದ್ರೆ ಕೇಳಿದವರು ಧಂಗು ಬಡಿದು ಹೋಗಬೇಕು. ಅಂತ ಮಸಲತ್ತು ಮಾಡಿ ಸ್ವತಃ ಗಂಡನನ್ನೆ ಮಹಾದೇವಿ ಪರಲೋಕಕ್ಕೆ ಕಳಿಸಿದ್ದಾಳೆ ಎಂದು ಬೆಳಗಾವಿ ಎಸ್ಪಿ ಡಾ. ಭೀಮಾಶಂಕರ್ ಗುಳೇದ ತಿಳಿಸಿದ್ದಾರೆ.
ಅಪ್ಪ ಮಗನನ್ನ ಕೊಂದರೆ.. ಇಲ್ಲಿ ಮಗ ತಾಯಿಯನ್ನ ಮುಗಿಸಿದ..!
ಅಕ್ಟೋಬರ್ 31 ರ ರಾತ್ರಿ ಎಂದಿನಂತೆ ಮನೆಗೆ ಬಂದ ಬಾಬುಗೆ ಮಹಾದೇವಿ ಪ್ರೀತಿಯಿಂದ ಸ್ವಾಗತಿಸಿ ಊಟಕ್ಕೆ ಹಾಕಿದ್ಳು. ಕುಟುಂಬ ನಿರ್ವಹಣೆ ಬಗ್ಗೆ ಆಸಕ್ತಿ ತೋರದ ಪತಿ ವಿರುದ್ಧ ಮಹಾದೇವಿ ಸ್ಕೆಚ್ ರೂಪಿಸಿದ್ದಳು. ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿ ಪತಿ ಬಾಬುಗೆ ಬಡಿಸಿದ್ದಳು. ಪತಿ ಊಟ ಮಾಡೋವರೆಗೂ ಸಹ ಮಹಾದೇವಿ ಕಾದು ಕುಳಿತಿದ್ಳು. ಊಟ ಮಾಡಿದ ಬಾಬು ಹಾಸಿಗೆಗೆ ಹೋಗಿ ಜೋರು ನಿದ್ರೆ ಜಾರಿದ್ದ. ಇದನ್ನೇ ಕಾದು ಕುಳಿತ ಮಹಾದೇವಿ, ಬಾಬುಗೆ ನಿದ್ರೆ ಹತ್ತಿದ್ದು ಕನ್ಪರ್ಮ್ ಆಗುತ್ತಿದ್ದಂತೆ ಆತನ ಕತ್ತು ಹಿಸುಕಿ ಕೊಲೆ ಮಾಡಿ ನಂತರ ತಾನೂ ಸಹ ಪಕ್ಕದಲ್ಲಿಯೇ ಮಲಗಿಬಿಟ್ಟಿದ್ದಳು. ಬೆಳಗ್ಗೆ ಎದ್ದು ಎಲ್ಲರ ಮುಂದೆ ಗಂಡ ಮಲಗಿದೋನು ಎದ್ದೇ ಇಲ್ಲ ಎಂದು ಕಥೆ ಕಟ್ಟಲಾರಂಭಿಸಿದ್ದಳು.
ಅಷ್ಟೊತ್ತಿಗಾಗಲೇ ಅನುಮಾನಗೊಂಡ ಅನಾಮಿಕರು ಈ ಸುದ್ದಿಯನ್ನು ಪೊಲೀಸರಿಗೆ ತಿಳಿಸಿದ್ದರು. ಮೃತ ಬಾಬು ಕತ್ತಿನ ಪಕ್ಕದಲ್ಲಿ ಗಾಯಗಳನ್ನು ನೋಡಿದ ಪೊಲೀಸರಿಗೆ ಅನುಮಾನ ಕಾಡೋಕೆ ಶುರುವಾಗಿತ್ತು. ನಂತರ ಬಾಬು ಮಗಳ ಕಡೆಯಿಂದ ಕೊಲೆ ಕಂಪ್ಲೆಂಟ್ ಪಡೆದು ಮಹಾದೇವಿಯನ್ನು ವಿಚಾರಣೆ ನಡೆಸಿದಾಗ ಮೊದಲು ಸಹಜ ಸಾವು ಎಂದು ಪುಂಗಿದ್ದ ಮಹಾದೇವಿ ನಂತರ ಅಸಹಜ ಸಾವಿನ ಕಥೆ ಹೇಳಲಾರಂಭಿಸಿದ್ದಳು. ನಂತರ ಪೊಲೀಸ್ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿದ್ದಾಗಿ ಮಹಾದೇವಿ ಒಪ್ಪಿಕೊಂಡಿದ್ದಾಳೆ ಇಷ್ಟೆಲ್ಲ ಆದರೂ ಸಹ ಊರಿನ ಜನಕ್ಕೆ ಇದ್ಯಾವುದರ ಅರಿವೇ ಇಲ್ಲ ಎಂದು ಗ್ರಾಮಸ್ಥ ಮನೋಹರ್ ಬಡಿಗೇರ ತಿಳಿಸಿದ್ದಾರೆ.
ಒಟ್ಟಿನಲ್ಲಿ ಗಂಡನ ಕುಡಿತದ ಚಟದಿಂದ ಬೇಸತ್ತ7 ಗಂಡನಿಗೆ ಚಟ್ಟ ಕಟ್ಟಿರುವ ಮಹಾದೇವಿ ಇತ್ತ ಜೈಲು ಸೇರಿದ್ದಾಳೆ. ಈ ಗಂಡ ಹೆಂಡಿರ ಜಗಳದ ನಡುವೆ ಇಬ್ಬರು ಮಕ್ಕಳೀಗ ಅನಾಥರಾಗಿದ್ದು ವಿಪರ್ಯಾಸ.