
ಮೇಘಾಲಯದ ಹನಿಮೂನ್ ಮರ್ಡರ್ ಈಗ ಸಾಕಷ್ಟು ತಿರುವು ಮುರುವುಗಳನ್ನು ತೆಗೆದುಕೊಂಡು ಏನೇನೋ ಸುಳಿವುಗಳನ್ನು ಬಿಟ್ಟುಕೊಡುತ್ತಿದೆ. ಇದೀಗ ರಘವಂಶಿಯ ತಂದೆ ಇನ್ನೊಂದು ಆರೋಪ ಮಾಡಿದ್ದಾರೆ- ನನ್ನ ಮಗನನ್ನು ಕೊಲ್ಲೋದಕ್ಕೆ ಮೊದಲೇ ಆಕೆ ಮಾಟ ಮಾಡಿಸಿದ್ದಳು. ಒಂದು ಗಂಟನ್ನು ತಂದು ನಮ್ಮ ಮನೆಯ ಬಾಗಿಲಿಗೆ ನೇತುಹಾಕಿದ್ದಳು- ಅಂತ. ಇದಕ್ಕೆ ಪೂರಕವಾದ ಇನ್ನೊಂದು ವಿಚಾರ ಎಂದರೆ, ಆಕೆ ಗಂಡನನ್ನು ಹನಿಮೂನ್‌ಗೆ ಮೊದಲು ಕರೆದೊಯ್ದದ್ದು ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಕ್ಯ ದೇವಾಲಯಕ್ಕೆ. ಅಲ್ಲಿಗೆ ಹೋಗಲೇಬೇಕು, ಇಲ್ಲವಾದರೆ ನನ್ನ ಮೈ ಮುಟ್ಟೋಕೆ ಬಿಡಲ್ಲ ಎಂದು ಆಕೆ ರಘುವಂಶಿಗೆ ಬಲವಂತ ಮಾಡಿದ್ದಳಂತೆ. ಇಷ್ಟು ಬಲವಂತ ಮಾಡೋಕೆ ಏನು ಕಾರಣ ಎಂಬುದೀಗ ಕುತೂಹಲ. ಈ ಕಾಮಾಕ್ಯ ದೇವಾಲಯಕ್ಕೆ ಪ್ರಸಿದ್ಧಿಯಷ್ಟೇ ಕುಖ್ಯಾತಿಯೂ ಇದೆ. ಹೀಗಾಗಿ, ಈಕೆ ರಘುವಂಶಿಯ ನಾಶಕ್ಕೆ ವಾಮಾಚಾರವನ್ನೂ ಮಾಡಿದ್ದಳು ಎಂಬುದಕ್ಕೆ ಪುಷ್ಟಿ ಸಿಗುತ್ತದೆ.
ಹೌದು, ಗುವಾಹಟಿಯ ಕಾಮಾಕ್ಯ ಒಂದು ವಿಶಿಷ್ಟ ದೇವಸ್ಥಾನ. ಇದು ಶಕ್ತಿಪೀಠ- ಎಂದರೆ ದೇವಿ ಗುಡಿ. ವಾಮಾಚಾರ, ಮಾಟ ಮಂತ್ರ, ತಾಂತ್ರಿಕ ಚಟುವಟಿಕೆಗಳಿಗೂ ಇದು ಹೆಸರುವಾಸಿ. ಮಾಟ ಮಂತ್ರಗಳನ್ನು ತೊಡೆದು ಹಾಕಲು, ದುಷ್ಟ ಶಕ್ತಿಗಳಿಂದ ಮುಕ್ತಿ ಪಡೆಯಲು ಸಾಕಷ್ಟು ಮಂದಿ ಈ ದೇವಸ್ಥಾನಕ್ಕೆ ಬರುತ್ತಾರೆ. ಶತ ಶತಮಾನಗಳಷ್ಟು ಹಿಂದಿನ ಇತಿಹಾಸ ಹೊಂದಿರುವ ಈ ದೇವ ಸನ್ನಿಧಿ ತನ್ನ ಸೊಬಗು, ಐತಿಹಾಸಿಕ ಮಹತ್ವ ಮತ್ತು ವಿಶೇಷತೆಯಿಂದ ಭಕ್ತರನ್ನು ಸೆಳೆಯುತ್ತದೆ.
ಗುವಾಹಟಿಯ ಪಶ್ಚಿಮ ಭಾಗದಲ್ಲಿರುವ ನೀಲಾಚಲ ಬೆಟ್ಟಗಳಲ್ಲಿ ಕಾಮಾಕ್ಯ ದೇವಸ್ಥಾನ ಇದೆ. ತಾಂತ್ರಿಕ ಆಚರಣೆಗಳ ಅತ್ಯಂತ ಹಳೆಯ ಮತ್ತು ಪವಿತ್ರ ಕೇಂದ್ರಗಳಲ್ಲಿ ಇದು ಕೂಡಾ ಒಂದು ಎಂದು ಗುರುತಿಸಲಾಗಿದೆ. ಮಾಟ ಮಂತ್ರದ ಬಾಧೆಯಿಂದ ಮುಕ್ತಿ ಪಡೆಯುವ ಸಲುವಾಗಿಯೇ ಸಾಕಷ್ಟು ಮಂದಿ ಇಲ್ಲಿಗೆ ಬರುತ್ತಾರೆ. ಹಾಗೇ ವಾಮಾಚಾರ ಕಲಿಯುವ ಸಾಧಕರನ್ನೂ ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಾಣಬಹುದು. ಅನೇಕ ಸಲ ಯೋಗಿಗಳ ರೂಪದಲ್ಲಿರುವ ಕುತಂತ್ರಿಗಳೂ, ಠಕ್ಕರೂ, ಮಂತ್ರವಾದಿಗಳೂ ಅಟಕಾಯಿಸಿಕೊಳ್ಳಬಹುದು. ಇಲ್ಲಿಗೆ ನೀವು ಭೇಟಿ ಕೊಡುವ ಉದ್ದೇಶ ಇದ್ದರೆ ಇಂಥವರ ಬಗ್ಗೆ ಹುಷಾರಾಗಿರಬೇಕು.
ಈ ದೇವಾಲಯವನ್ನು 51 ಶಕ್ತಿಪೀಠಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಜನಪ್ರಿಯ ಐತಿಹ್ಯಗಳ ಪ್ರಕಾರ, ದಕ್ಷನನ್ನು ಕೊಂದ ಬಳಿಕ ಶಿವ 'ಮಾತೆ ಸತಿ'ಯ ದೇಹವನ್ನು ಹೊತ್ತು ನರ್ತಿಸುತ್ತಾನೆ. ಆಗ ಆ ದೇಹದ 51 ತುಣುಕುಗಳು ಎಲ್ಲೆಲ್ಲಿ ಬಿದ್ದವೋ, ಆ ಸ್ಥಳಗಳನ್ನು ಶಕ್ತಿಪೀಠಗಳೆಂದು ಪರಿಗಣಿಸಲಾಗುತ್ತದೆ. ಅದೇ ಶಕ್ತಿಪೀಠಗಳ ಸಾಲಿನಲ್ಲಿ ಕಾಮಾಕ್ಯ ದೇವಸ್ಥಾನ ಕೂಡಾ ಸೇರುತ್ತದೆ. ಇಲ್ಲಿ ಮಾತಾ ಸತಿಯ ಯೋನಿಯು ಬಿದ್ದಿದೆ ಎಂಬ ನಂಬಿಕೆ ಇದ್ದು, ಅದಕ್ಕಾಗಿಯೇ ಇಲ್ಲಿ ಸತಿಯ ಯೋನಿ ರೂಪವನ್ನು ಪೂಜಿಸಲಾಗುತ್ತದೆ. ಈ ದೇವಾಲಯವನ್ನು 8ನೇ-9ನೇ ಶತಮಾನದಲ್ಲಿ ನಿರ್ಮಿಸಲಾಗುತ್ತದೆ ಎಂದು ಹೇಳಲಾಗುತ್ತಿದ್ದರೂ, ಬಳಿಕ ಇಲ್ಲಿ ಸಾಕಷ್ಟು ಹೊಸ ಸೇರ್ಪಡೆಗಳು, ಪುನರ್ನಿಮಾಣ ಕಾರ್ಯಗಳೂ ಆಗಾಗ ನಡೆದ ಉಲ್ಲೇಖ ಕೂಡಾ ಸಿಗುತ್ತದೆ. ಅಂತಿಮವಾಗಿ ನೀಲಾಚಲ ಎಂಬ ವಾಸ್ತುಶೈಲಿಯನ್ನು ಇಲ್ಲಿ ಅಳವಡಿಸಿರುವುದು ಕಾಣಿಸುತ್ತದೆ.
ಮಾಟ ಮಂತ್ರದ ಭಯ ನಮ್ಮ ದೇಶದ ಬಹುಭಾಗಗಳಲ್ಲಿ ಭದ್ರವಾಗಿ ಬೇರೂರಿದೆ. ಆದರೆ, ಈ ದೇಗುಲದಲ್ಲಿ ಅದಕ್ಕೆಲ್ಲಾ ಪರಿಹಾರ ಸಿಗಲಿದೆ ಎಂಬುದು ಭಕ್ತರ ಬಲವಾದ ನಂಬಿಕೆ. ಬಹಳ ಹಿಂದಿನಿಂದಲೂ ಕಾಮಾಕ್ಯ ದೇವಸ್ಥಾನ ಮಾಟ ಮಂತ್ರದ ಮುಕ್ತಿಯ ಕಾರಣದಿಂದ ಹೆಸರು ಪಡೆದಿದೆ. ಇಲ್ಲಿಗೆ ಭೇಟಿ ನೀಡಿದರೆ ಆ ಸಮಸ್ಯೆಗಳೆಲ್ಲಾ ದೂರವಾಗುತ್ತದೆ, ದುಷ್ಟ ಶಕ್ತಿಗಳಿಂದ ಮುಕ್ತಿ ಸಿಗುತ್ತದೆ ಎಂಬುದು ಜನರ ನಂಬಿಕೆ. ಮ್ಲೇಚ್ಚ ರಾಜವಂಶವು ಆರಂಭದಲ್ಲಿ ಈ ದೇಗುಲದಲ್ಲಿ ಪೂಜೆ ಸಲ್ಲಿಸಿತ್ತು. ಐತಿಹಾಸಿಕವಾಗಿ ಇಲ್ಲಿನ ಆರಾಧನೆಗಳು ಮೂರು ಹಂತಗಳಲ್ಲಿ ಮುಂದುವರಿದ ಉದಾಹರಣೆ ಸಿಗುತ್ತದೆ. ಮ್ಲೇಚ್ಛರ ಆಳ್ವಿಕೆಯ ಕಾಲದಲ್ಲಿ ಯೋನಿ, ಪಾಲರ ಆಳ್ವಿಕೆಯ ಸಂದರ್ಭದಲ್ಲಿ ಯೋಗಿನಿ ಮತ್ತು ಕೋಚ್ ಎಂಬ ವಂಶದ ಆಳ್ವಿಕೆಯ ಕಾಲದಲ್ಲಿ ಇಲ್ಲಿ ಮಹಾವಿದ್ಯಾಗಳ ಆರಾಧನೆಯು ಆರಂಭವಾದ ಉಲ್ಲೇಖ ಸಿಗುತ್ತದೆ. ಇಲ್ಲಿ ಇತರ ಹತ್ತು ದೇವ ಸನ್ನಿಧಿಗಳೂ ಇವೆ. ಈ ಹತ್ತು ದೇವಾಲಯಗಳು ಹತ್ತು ಮಹಾವಿದ್ಯೆಗಳನ್ನು ಸೂಚಿಸುತ್ತವೆ. ಇವುಗಳಲ್ಲಿ, ತ್ರಿಪುರಸುಂದರಿ, ಮಾತಂಗಿ ಮತ್ತು ಕಮಲಾ ಮುಖ್ಯ ದೇವಾಲಯದ ಒಳಗಿದ್ದರೆ, ಇತರ ಏಳು ಏಳು ಪ್ರತ್ಯೇಕ ದೇವಾಲಯಗಳನ್ನೂ ಇಲ್ಲಿ ನೋಡಬಹುದು. ಪ್ರತ್ಯೇಕ ಮಹಾವಿದ್ಯೆಗಳಿಗೆ ಒಂದು ಗುಂಪಿನಂತೆ ಈ ದೇವಾಲಯಗಳನ್ನು ಈ ಸಂಕೀರ್ಣದಲ್ಲಿ ನಿರ್ಮಿಸಲಾಗಿದೆ.
ಮೂರು ವಾರಗಳಲ್ಲಿ ಹೊಸ ವಿಪತ್ತು, ಬಾಬಾ ವಂಗಾ ಹೊಸ ಭವಿಷ್ಯ
ಮಾಟ ಅಥವಾ ವಶೀಕರಣ ಸೇರಿದಂತೆ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯುವ ಸಲುವಾಗಿ ಭಕ್ತರು ಇಲ್ಲಿಗೆ ಬರುತ್ತಾರೆ. ಹೀಗೆ ಬರುವ ಭಕ್ತರಿಗಾಗಿ ಸಾಧುಗಳು ಮತ್ತು ಅರ್ಚಕರು ಪೂಜೆ ಸಲ್ಲಿಸುತ್ತಾರೆ. ದೇವಾಲಯದ ಆವರಣದಲ್ಲಿ ಸಾಕಷ್ಟು ಸಾಧು ಸಂತರನ್ನು ನೋಡಬಹುದು. ಇವರೆಲ್ಲರೂ ಹತ್ತು ಮಹಾವಿದ್ಯೆಗಳು ಬಲ್ಲವರು ಎಂಬುದು ಭಕ್ತರ ನಂಬಿಕೆ. ಮಾಟ ಮಂತ್ರ ಬಾಧೆ ಮಾತ್ರವಲ್ಲದೆ ಮಾನಸಿಕ ಸಮಾಧಾನ, ದಂಪತಿಯ ನಡುವೆ ಹೊಂದಾಣಿಕೆಗೂ ಇಲ್ಲಿ ಪೂಜೆ, ಪ್ರಾರ್ಥನೆಯನ್ನೂ ಸಲ್ಲಿಸಲಾಗುತ್ತದೆ. ಪ್ರತಿದಿನ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಸ್ಥಳೀಯರು ಮಾತ್ರವಲ್ಲದೆ, ದೇಶ ವಿದೇಶದ ಜನರೆಲ್ಲಾ ಇಲ್ಲಿಗೆ ಭೇಟಿ ನೀಡುತ್ತಾರೆ. ಅಸ್ಸಾಂ, ಗುವಾಹಟಿ ಪ್ರವಾಸ ಕೈಗೊಂಡವರು ಕೂಡಾ ಕಾಮಾಕ್ಯ ದೇವಸ್ಥಾನಕ್ಕೆ ಬರದೇ ಇರಲಾರರು.
ಇದೀಗ ಇರುವ ಪ್ರಶ್ನೆ ಎಂದರೆ, ಸೋನಂ ತನ್ನ ಗಂಡನನ್ನು ಕರೆದೊಯ್ದು ಅಲ್ಲಿ ಏನು ಮಾಡಿಸಿದಳು, ಅದಕ್ಕೆ ಯಾರು ನೆರವಾದರು, ವಾಮಾಚಾರ ಮಾಡಿಸಿದಳೇ, ಅಥವಾ ಬರಿಯ ದರ್ಶನ ಮಾಡಿ ಹೋಗಿದ್ದರೇ? ಸೋನಂ- ಕಾಮಾಕ್ಯದ ಲಿಂಕ್ ಏನು? ತನಿಖೆಯಿಂದಲೇ ಗೊತ್ತಾಗಬೇಕಷ್ಟೆ.
ಕಲಿಯುಗದ ಕೊನೆಯ ಭಯಾನಕ ರಾತ್ರಿ ಹೇಗಿರುತ್ತೆ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ