
ಯಾವುದೋ ಕೆಟ್ಟ ಗಳಿಗೆಯಲ್ಲಿ ತಪ್ಪು ಮಾಡಿದ ಬಳಿಕ, ಅದರ ಬಗ್ಗೆ ಪಶ್ಚಾತ್ತಾಪ ಪಡುವವರು ಹಲವರು ಇದ್ದಾರೆ. ಆದರೆ, ಆ ಅಪರಾಧದಿಂದ ಮುಕ್ತಿಯನ್ನು ಹೇಗೆ ಪಡೆಯಬೇಕು ಎನ್ನುವುದು ತಿಳಿಯುವುದಿಲ್ಲ. ಆದರೆ ಇಲ್ಲೊಂದು ಘಟನೆಯಲ್ಲಿ, ಸುಮಾರು 6.50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 50 ಸಾವಿರ ರೂಪಾಯಿ ನಗದನ್ನು ಕಳವು ಮಾಡಿ ಪರಾರಿಯಾಗಿದ್ದ ಕಳ್ಳರಿಗೆ ಕೊನೆಗೆ ತಾವು ಮಾಡಿದ್ದು ತಪ್ಪು ಎಂದು ತಿಳಿದು ಕ್ಷಮಾಪಣೆಯ ಪತ್ರದ ಜೊತೆಗೆ ಎಲ್ಲವನ್ನೂ ವಾಪಸ್ ಇಟ್ಟು ಹೋಗಿರುವ ಕುತೂಹಲದ ಘಟನೆಯೊಂದು ನಡೆದಿದೆ. ಮನೆಯ ಬೀಗ ಮುರಿದು ಚಿನ್ನಾಭರಣ ಮತ್ತು ನಗದು ದೋಚಿಕೊಂಡು ಪರಾರಿಯಾಗಿದ್ದ ಕಳ್ಳ, 15 ದಿನಗಳ ಬಳಿಕ ಪಶ್ಚಾತ್ತಾಪದಿಂದ ಮನೆ ಬಾಗಿಲಿಗೆ ಅದನ್ನು ವಾಪಸ್ ತಂದಿಟ್ಟಿದ್ದಾರೆ.
ಈ ಘಟನೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ನಡೆದಿದೆ. ಅಷ್ಟೇ ಅಲ್ಲ, ಕದ್ದ ವಸ್ತುಗಳ ಜೊತೆಗೆ ‘ನಮ್ಮನ್ನು ಕ್ಷಮಿಸಿ’ ಎಂದು ಕೈಬರಹದ ಪತ್ರವನ್ನೂ ಇಟ್ಟು ಹೋಗಿದ್ದಾರೆ. ಕಾಕಿನಾಡ ಜಿಲ್ಲೆಯ ಕರಪ ಮಂಡಲದ ರಾಮಕಂಚಿರಾಜು ನಗರದ ನಿವಾಸಿ ನಾಮಲ ಗಣೇಶ್ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಜುಲೈ 18ರಂದು ಗಣೇಶ್ ಅವರು ಕುಟುಂಬ ಸಮೇತ ತಮ್ಮ ಊರಿಗೆ ಹೋಗಿದ್ದರು. ಅದನ್ನು ಗಮನಿಸಿದ್ದ ಕಳ್ಳರು, ಮನೆಯ ಬೀಗ ಒಡೆದು ಸುಮಾರು 6.50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 50 ಸಾವಿರ ರೂಪಾಯಿ ನಗದನ್ನು ಕಳವು ಮಾಡಿ ಪರಾರಿಯಾಗಿದ್ದರು. ವಾಪಸ್ ಬಂದ ಕುಟುಂಬಸ್ಥರು ಕಳುವು ಆಗಿರುವುದನ್ನು ನೋಡಿ ಕರಪ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೊಲೀಸರು ಕೆಲಸ ಆರಂಭಿಸಿದರು. ಆದರೆ ಅವರಿಗೆ ಆ ಕ್ಷಣದಲ್ಲಿ ಕಳ್ಳರ ಸುಳಿವು ಸಿಗಲಿಲ್ಲ. ತನಿಖೆ ಪ್ರಗತಿಯಲ್ಲಿದೆ ಎನ್ನುವ ಸಾಮಾನ್ಯ ಉತ್ತರ ಅವರಿಂದ ಬಂತು. ತಮ್ಮ ಒಡವೆ, ನಗದು ಎಲ್ಲವೂ ಇನ್ನೂ ತಮಗೆ ಕನಸು ಎಂದುಕೊಂಡಿತು ಗಣೇಶ್ ಕುಟುಂಬ. ಆದರೆ ಸುಮಾರು 15 ದಿನ ಆದ ಬಳಿಕ, ಬೆಳಿಗ್ಗೆ ಎದ್ದು ನೋಡಿದಾಗ, ಮನೆಯ ಆವರಣದಲ್ಲಿ ಒಂದು ಬ್ಯಾಗ್ ಬಿದ್ದಿತ್ತು. ಅದನ್ನು ತೆರೆದು ನೋಡಿದಾಗ, ಕಳವಾಗಿದ್ದ ಬಹುತೇಕ ಚಿನ್ನಾಭರಣಗಳು ಮತ್ತು ನಗದು ಅದರಲ್ಲೇ ಇತ್ತು. ಬ್ಯಾಗ್‌ನೊಳಗೆ ಚಿನ್ನಾಭರಣ ಮತ್ತು ಹಣದ ಜೊತೆಗೆ ಒಂದು ‘ಕೈಬರಹದ ಪತ್ರ’ ಕೂಡ ಇತ್ತು. ಅದರಲ್ಲಿ ಕಳ್ಳರು ತಮ್ಮ ಕೃತ್ಯಕ್ಕೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದರು.
“ನಮ್ಮನ್ನು ಕ್ಷಮಿಸಿಬಿಡಿ. ನಾವು ಮಾಡಿದ್ದು ದೊಡ್ಡ ತಪ್ಪು. ಅದು ನಮಗೆ ಅರಿವಾಗಿದೆ. ನಿಮ್ಮ ಮನೆಯಿಂದ ಕದ್ದದ್ದನ್ನೆಲ್ಲಾ ವಾಪಸ್ ಕೊಡುತ್ತಿದ್ದೇವೆ. ಆದರೆ ಕದ್ದ ಹಣದಲ್ಲಿ 22 ಸಾವಿರ ರೂಪಾಯಿ ಖರ್ಚು ಆಗಿದೆ. ಅದನ್ನು ವಾಪಸ್ ಕೊಡಲು ಆಗುತ್ತಿಲ್ಲ. ಕ್ಷಮಿಸಿ ಎಂದು ಬರೆದಿತ್ತು. ಪೊಲೀಸರ ತನಿಖೆಯಿಂದ ತಮ್ಮ ವಸ್ತು ತಮಗೆ ಸಿಗುವ ಆಸೆಯನ್ನೇ ಬಿಟ್ಟಿದ್ದ ಕುಟುಂಬಸ್ಥರು 22 ಸಾವಿರ ಹೋದರೆ ಹೋಗಲಿ, ಉಳಿದದ್ದು ಸಿಕ್ಕಿತಲ್ಲ ಎಂದು ಖುಷಿಯಿಂದ ಸ್ವೀಕರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ