Davanagere: ಸೋಷಿಯಲ್‌ ಮೀಡಿಯಾ ಕೀಚಕರಿಗೆ ಎಚ್ಚರಿಕೆಯ ಗಂಟೆ

By Kannadaprabha News  |  First Published Nov 4, 2022, 9:47 PM IST

ಸೋಷಿಯಲ್‌ ಮೀಡಿಯಾ ಕೀಚಕರಿಂದ ಒಂದಲ್ಲ ಒಂದು ರೀತಿ ತೊಂದರೆ ಅನುಭವಿಸುತ್ತಿರುವ ನೊಂದ ಕುಟುಂಬಗಳು, ತಮ್ಮ ಮನೆ ಹೆಣ್ಣು ಮಗಳು ಸಂಕಷ್ಟ ಅನುಭವಿಸುತ್ತಿದ್ದರೂ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿದ್ದ ಅದೆಷ್ಟೋ ಕುಟುಂಬದ ಸದಸ್ಯರು, ಸ್ವತಃ ಸಂತ್ರಸ್ತ ಮಹಿಳೆಯರು, ವಿದ್ಯಾರ್ಥಿನಿಯರು, ಯುವತಿಯರು, ಗೃಹಿಣಿಯರು, ವಿಚ್ಛೇದಿತೆ ಯರು, ಪತಿಯಿಂದ ಪರಿತ್ಯಕ್ತ ಮಹಿಳೆಯರು, ಉದ್ಯೋಗಸ್ಥ ಮಹಿಳೆಯರು ಈಗ ನೆಮ್ಮದಿಯ ನಿಟ್ಟಿಸಿರು ಬಿಡುತ್ತಿದ್ದಾರೆ.


ನಾಗರಾಜ ಎಸ್.ಬಡದಾಳ

ದಾವಣಗೆರೆ (ನ.04): ಸೋಷಿಯಲ್‌ ಮೀಡಿಯಾ ಕೀಚಕರಿಂದ ಒಂದಲ್ಲ ಒಂದು ರೀತಿ ತೊಂದರೆ ಅನುಭವಿಸುತ್ತಿರುವ ನೊಂದ ಕುಟುಂಬಗಳು, ತಮ್ಮ ಮನೆ ಹೆಣ್ಣು ಮಗಳು ಸಂಕಷ್ಟ ಅನುಭವಿಸುತ್ತಿದ್ದರೂ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿದ್ದ ಅದೆಷ್ಟೋ ಕುಟುಂಬದ ಸದಸ್ಯರು, ಸ್ವತಃ ಸಂತ್ರಸ್ತ ಮಹಿಳೆಯರು, ವಿದ್ಯಾರ್ಥಿನಿಯರು, ಯುವತಿಯರು, ಗೃಹಿಣಿಯರು, ವಿಚ್ಛೇದಿತೆ ಯರು, ಪತಿಯಿಂದ ಪರಿತ್ಯಕ್ತ ಮಹಿಳೆಯರು, ಉದ್ಯೋಗಸ್ಥ ಮಹಿಳೆಯರು ಈಗ ನೆಮ್ಮದಿಯ ನಿಟ್ಟಿಸಿರು ಬಿಡುತ್ತಿದ್ದಾರೆ.

Tap to resize

Latest Videos

ಫೇಸ್‌ ಬುಕ್‌, ಟ್ವೀಟರ್‌, ವಾಟ್ಸಪ್‌ ಮೆಸೇಜ್‌, ವಾಟ್ಸಪ್‌ ವಾಯ್ಸ್‌ ಕಾಲ್‌, ವಾಟ್ಸಪ್‌ ವೀಡಿಯೋ ಕಾಲ್‌, ಎಸ್ಸೆಮ್ಮೆಸ್‌, ಮೊಬೈಲ್‌ ಕರೆ ಮಾಡುವಂತೆ ನಿರಂತರ ಪೀಡಿಸುತ್ತಿದ್ದ ಅದೆಷ್ಟೋ ಸೋಷಿಯಲ್‌ ಮೀಡಿಯಾ ಕೀಚಕರಿಗೆ ಕನ್ನಡಪ್ರಭ ಗುರುವಾರದಿಂದ ಆರಂಭಿಸಿದ ಸರಣಿ ವರದಿ ಎಚ್ಚರಿಕೆಯ ಗಂಟೆಯಾದರೆ, ಸಂತ್ರಸ್ತ ಹೆಣ್ಣು ಮಕ್ಕಳು, ಕಿರುಕುಳ ಅನುಭವಿಸುತ್ತಿದ್ದ ಅದೆಷ್ಟೋ ಕುಟುಂಬ ಸದಸ್ಯರಿಗೆ ಒಂದಿಷ್ಟುಧೈರ್ಯ ತುಂಬಿದೆ.

ನಾರಿಯರಿಗೆ ಸೋಷಿಯಲ್‌ ಮೀಡಿಯಾ ಕೀಚಕರ ಕಾಟ..!

ಸಂತ್ರಸ್ತರಲ್ಲಿ ಧೈರ್ಯ: ಇಂತಹ ಸೋಷಿಯಲ್‌ ಮೀಡಿಯಾ ಕಿರಾತಕರ ಸರಣಿ ವರದಿ ಆರಂಭಿಸಿದ ಕನ್ನಡಪ್ರಭದ ಮಹಿಳಾ ಪರ ಕಾಳಜಿಗೆ ಜನ ಸಾಮಾನ್ಯರು, ಸಂಘ-ಸಂಸ್ಥೆ, ಸಂಘಟನೆಗಳು, ಮಹಿಳಾ ಪರ ಸಂಘಟನೆಗಳು, ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಂತ್ರಸ್ತ ಮಹಿಳೆಯರಲ್ಲಿ ಒಂದಿಷ್ಟು ಧೈರ್ಯ ತುಂಬುವ ಕೆಲಸವನ್ನು ಕನ್ನಡಪ್ರಭದ ಸರಣಿ ವರದಿ ಶುರುವಾಗಿರುವುದು ಒಂದಿಷ್ಟು ಮಹಿಳೆಯರು ನಿರಮ್ಮಳರಾಗುವಂತೆ ಮಾಡಿದೆ. ಸಮಾಜದ ಮುಂದೆ ಮುಂದೆ ಸಜ್ಜನರ ವೇಷ ಧರಿಸಿ, ತಮ್ಮ ಗಾಳಕ್ಕೆ ಸಿಲುಕಿದ ಹೆಣ್ಣು ಮಕ್ಕಳ ಜೀವನವನ್ನೇ ನರಕ ಮಾಡಿರುವ ಆಧುನಿಕ ಕೀಚಕರು, ಭಾವನಾತ್ಮಕವಾಗಿ, ಮಾನಸಿಕವಾಗಿ, ದೈಹಿಕವಾಗಿ, ಆರ್ಥಿಕವಾಗಿ ಹೆಣ್ಣು ಮಕ್ಕಳನ್ನು ಶೋಷಣೆಗೀಡು ಮಾಡುತ್ತಿರುವ ಸೋಷಿಯಲ್‌ ಮೀಡಿಯಾ ಕೀಚಕರ ಕುರಿತು ಇನ್ನೂ ಎರಡು ದಿನಗಳ ಕಾಲ ಪತ್ರಿಕೆ ಬೆಳಕು ಚೆಲ್ಲಲಿದ್ದು, ಜಿಲ್ಲಾ ಪೊಲೀಸ್‌ ಇಲಾಖೆಯು ಸಹ ವರದಿಯನ್ನು ಗಂಭೀರವಾಗಿ ಪರಿಗಣಿಸುತ್ತಿದೆ.

ನಿಧಾನವಾಗಿ ವಿಕೃತಿ ಅನಾವರಣ: ಮುಗ್ಧ ಹೆಣ್ಣು ಮಕ್ಕಳ ಸ್ನೇಹ, ಗೆಳೆತನ ಬೆಳೆಸಿಕೊಳ್ಳುವ ಮುನ್ನ ಇರುವಂತಹ ವ್ಯಕ್ತಿಯ ವ್ಯಕ್ತಿತ್ವವು ಸಲಿಗೆ ಸಿಕ್ಕ ನಂತರ, ಹೆಣ್ಣು ಮಕ್ಕಳ ಜೊತೆಗೆ ಆತ್ಮೀಯ ಒಡನಾಟ ಸಿಕ್ಕ ನಂತರ ಆಗುವಂತಹ ಬದಲಾವಣೆ, ಸೋಷಿಯಲ್‌ ಮೀಡಿಯಾ ಕೀಚಕನ ನಿಜವಾದ ವಿಕೃತ ಮನಸ್ಥಿತಿ ಅನಾವರಣಗೊಳ್ಳುತ್ತದೆ. ಅಲ್ಲಿವರೆಗೆ ಸೌಜನ್ಯದಿಂದ ಮಾತನಾಡುತ್ತಿದ್ದವನು ಮಹಿಳೆಗೆ ಆಕೆಯ ಹೆತ್ತವರು, ಸಹೋದರರು, ಪತಿಯೇ ಬಳಸದ ಪದಗಳು, ಏಕವಚನಗಳನ್ನು ಬಳಸುವ ಮೂಲಕ ನಿಯಂತ್ರಿಸುವ ಕೆಲಸ ಮಾಡಲು ಶುರು ಮಾಡುತ್ತಾರೆ. ಅಲ್ಲದೇ, ತನಗೆ ಬೇಕು ಅಂದ ತಕ್ಷಣ ಕರೆ ಮಾಡಬೇಕು, ಮೆಸೇಜ್‌, ವೀಡಿಯೋ ಕಾಲ್‌, ವಾಯ್ಸ್‌ ಕಾಲ್‌ ಮಾಡಬೇಕೆಂಬ ಬೆದರಿಸುವವರ ಸಂಖ್ಯೆಯೂ ಕಡಿಮೆ ಇಲ್ಲವೆಂಬ ಆರೋಪ ಕೇಳಿ ಬರುತ್ತಿವೆ.

ಹೆತ್ತವರು, ಸಹೋದರರು, ಪತಿ, ಮಕ್ಕಳು ಇದ್ದರೂ ಸಂತ್ರಸ್ತ ಮಹಿಳೆಯರು, ಹೆಣ್ಣು ಮಕ್ಕಳದ್ದು ಯಾರ ಬಳಿಯೂ ಹೇಳಿಕೊಳ್ಳಲಾಗದ ಗೋಳಾಗಿದೆ. ತನ್ನ ಗಾಳಕ್ಕೆ ಸಿಲುಕಿದ ಮಹಿಳೆಯರು ಸೋಷಿಯಲ್‌ ಮೀಡಿಯಾ ಕೀಚಕರ ತಾಳಕ್ಕೆ ತಕ್ಕಂತೆ ತಲೆಯಾಡಿಸುವಂತೆ ಮಾಡಿರುವ ನಿದರ್ಶನಗಳೂ ಇವೆ. ಅಷ್ಟೇ ಅಲ್ಲ, ವಿದ್ಯಾರ್ಥಿನಿಯರು, ಯುವತಿಯರು, ಗೃಹಿಣಿಯರು, ಉದ್ಯೋಗಸ್ಥರು, ವಿಧವೆಯರು, ಡೈವೋರ್ಸ್‌ ಆದ ಅಸಹಾಯಕ ಹೆಣ್ಣು ಮಕ್ಕಳಿಗೆ ಯಾವ ಬಟ್ಟೆತೊಡಬೇಕು, ಯಾವುದನ್ನು ಬೇಡ, ಯಾರ ಜೊತೆ ಮಾತನಾಡಬೇಕು, ಯಾರ ಜೊತೆ ಮಾತನಾಡಬಾರದು ಎಂಬೆಲ್ಲಾ ಅಧಿಕಾರ ಚಲಾಯಿಸುವ ಮೂಲಕ ದಬ್ಬಾಳಿಕೆ ಮಾಡುತ್ತಿರುವ ಪ್ರಕರಣಗಳ ಸಂಖ್ಯೆಯೂ ಕಡಿಮೆ ಇಲ್ಲ. ಆದರೆ, ಠಾಣೆ ಮೆಟ್ಟಿಲೇರುತ್ತಿದ್ದ ಮಹಿಳೆಯರು ಇದೀಗ ಒಂದಿಷ್ಟು ಧೈರ್ಯ ತೋರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಸೋಷಿಯಲ್‌ ಮೀಡಿಯಾ ಕೀಚಕರ ವರದಿ ಪ್ರಕಟಗೊಂಡ ಬೆನ್ನಲ್ಲೇ ಅನೇಕರು ಕರೆ ಮಾಡಿ, ಮೌಖಿಕವಾಗಿ ಸೋಷಿಯಲ್‌ ಮೀಡಿಯಾದಿಂದ ಆಗುತ್ತಿರುವ ಉಪಟಳ, ಸಮಸ್ಯೆ ಬಗ್ಗೆ, ತಮ್ಮ ಸ್ನೇಹಿತೆ, ಸಂಬಂಧಿ ಮಹಿಳೆ, ಅಸಹಾಯಕ ಮಹಿಳೆಯರು, ವಿದ್ಯಾರ್ಥಿನಿಯರು, ಯುವತಿಯರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ, ಯಾರಿಗೂ ಹೇಳಿಕೊಳ್ಳಲಾಗದೇ ಪರಿತಪಿಸುತ್ತಿರುವ ಬಗ್ಗೆ ಪತ್ರಿಕೆ ಗಮನಕ್ಕೆ ತರುತ್ತಿದ್ದಾರೆ. ಅದೆಷ್ಟೋ ಮಹಿಳೆಯರು, ಹೆಣ್ಣು ಮಕ್ಕಳು ಇಂತಹ ಕಿರುಕುಳದಿಂದ ನೊಂದು ಜೀವನವೇ ಸಾಕು ಸಾಕು ಎನಿಸುವಷ್ಟರ ಮಟ್ಟಿಗೆ ರೋಸಿ ಹೋಗಿದ್ದಾರೆ. ಬಹುತೇಕ ಇಂತಹ ಪ್ರಕರಣಗಳಲ್ಲಿ ಎಲ್ಲರದಲ್ಲೂ ಒಂದೇ ಸಾಮ್ಯತೆ ಇದ್ದರೂ, ಆಧುನಿಕ ಕೀಚಕರ ವಯೋಮಾನ ಬೇರೆ ಬೇರೆಯಾಗಿದೆಯಷ್ಟೇ.

Davanagere: ಮಾಜಿ ಶಾಸಕ ಶಿವಶಂಕರ್‌ಗೆ ಗೆಲ್ಲುವ ತಾಕತ್ತಿಲ್ಲ: ಶಾಸಕ ರಾಮಪ್ಪ

ಸಂತ್ರಸ್ತರಿಗೆ ಮನವಿ: ಸೋಷಿಯಲ್‌ ಮೀಡಿಯಾ ಕೀಚಕರ ಉಪಟಳದ ಬಗ್ಗೆ ಏನೇ ಮಾಹಿತಿ ಇದ್ದರೂ ಕನ್ನಡಪ್ರಭ (ಮೊಃ 98440-24995)ಕ್ಕೆ ಸಂಪರ್ಕಿಸಬಹುದು. ಹೀಗೆ ಮಾಹಿತಿ ನೀಡುವವರ ವಿವರ, ಹೆಸರು, ಊರು ಇತರೆ ವಿವರ ಬೇಡ. ಯಾವ್ಯಾವ ರೀತಿ ತೊಂದರೆ ಆಗುತ್ತಿದೆಯೆಂಬ ಮಾಹಿತಿ ನೀಡಿದರೆ ಸಾಕು. ಆಕಸ್ಮಾತ್‌ ತುರ್ತಾಗಿ ಪೊಲೀಸ್‌ ಇಲಾಖೆ ನೆರವು ಬೇಕಿದ್ದರೆ ಸಂಬಂಧಿಸಿದ ಠಾಣಾಧಿಕಾರಿಗಳು, ಮೇಲಾಧಿಕಾರಿಗಳ ಗಮನಕ್ಕೂ ತರಲಾಗುವುದು.

click me!