ಹಣಕಾಸಿನ ವಿಚಾರದಲ್ಲಿ ಒಂದೇ ಕಡೆ ಕೆಲಸ ಮಾಡುತ್ತಿದ್ದ ಸ್ನೇಹಿತರ ನಡುವೆ ಶುರುವಾದ ಜಗಳ ನಂತರ, ಗಂಗೆ ಮುಟ್ಟಿ ಆಣೆ ಪ್ರಮಾಣ ಮಾಡಲು ಹೋಗಿ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ತೇಜೂರು ಕೆರೆಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ವರದಿ: ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾಸನ
ಹಾಸನ (ನ.04): ಹಣಕಾಸಿನ ವಿಚಾರದಲ್ಲಿ ಒಂದೇ ಕಡೆ ಕೆಲಸ ಮಾಡುತ್ತಿದ್ದ ಸ್ನೇಹಿತರ ನಡುವೆ ಶುರುವಾದ ಜಗಳ ನಂತರ, ಗಂಗೆ ಮುಟ್ಟಿ ಆಣೆ ಪ್ರಮಾಣ ಮಾಡಲು ಹೋಗಿ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ತೇಜೂರು ಕೆರೆಯಲ್ಲಿ ಗುರುವಾರ ತಡರಾತ್ರಿ ನಡೆದಿದೆ. ತೇಜೂರು ಗ್ರಾಮದ ಚಂದ್ರು (39), ಆನಂದ್ (30), ಮೃತ ದುರ್ದೈವಿಗಳು.
ಮೃತ ಆನಂದ್ ಮತ್ತು ಚಂದ್ರು ಇಬ್ಬರೂ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದರು. ಗುರುವಾರ ಎಂದಿನಂತೆ ಕೆಲಸ ಮುಗಿಸಿ ರಾತ್ರಿ 11 ಗಂಟೆ ಸುಮಾರಿಗೆ ಮನೆಗೆ ವಾಪಸ್ ಆಗುವ ಮುನ್ನ, ರಿಂಗ್ ರಸ್ತೆಯ ಬಾರೊಂದರಲ್ಲಿ ಮದ್ಯಪಾನ ಮಾಡಿದ್ದಾರೆ. ಇವರೊಂದಿಗೆ ಅದೇ ಗ್ರಾಮದ ಕಿರಣ, ಸುರೇಶ, ಪೃಥ್ವಿ ಎಂಬುವರೂ ಸೇರಿದ್ದರು. ರಾತ್ರಿ 11:30 ರ ವೇಳೆಯಲ್ಲಿ ಚಂದ್ರು ಮತ್ತು ಆನಂದ ಒಂದೇ ಬೈಕಿನಲ್ಲಿ ಗ್ರಾಮದತ್ತ ತೆರಳಿದರು. ಉಳಿದ ಮೂವರು ಸುರೇಶ ಎಂಬುವರಿಗೆ ಸೇರಿದ ಟಾಟಾ ಏಸ್ ಗೂಡ್ಸ್ ವಾಹನದಲ್ಲಿ ಹೋದರು.
ತಾಯಿ-ಮಗ ಇಬ್ಬರೂ ಎಣ್ಣೆ ಹೊಡೆದು ಮಾತನಾಡ್ತಾರೆ: ಭವಾನಿ, ಪ್ರಜ್ವಲ್ ರೇವಣ್ಣ ವಿರುದ್ಧ ಪ್ರೀತಂಗೌಡ ವಾಗ್ದಾಳಿ
ಆಗಿದ್ದೇ ಬೇರೆ: ಮಾರ್ಗಮಧ್ಯೆ ಆನಂದ ಮತ್ತು ಚಂದ್ರು, ಮೂತ್ರ ವಿಸರ್ಜನೆಗೆಂದು ತೇಜೂರು ಕೆರೆ ಕೋಡಿಯಲ್ಲಿ ಬೈಕ್ ನಿಲ್ಲಿಸಿದ್ದಾರೆ. ಈ ವೇಳೆ ಹಣಕಾಸು ವಿಚಾರ ಮತ್ತು ಶುಭ ಸಮಾರಂಭಗಳಲ್ಲಿ ಆರ್ಡರ್ ಒಪ್ಪಿಕೊಳ್ಳುವ ವಿಚಾರದಲ್ಲಿ ಇಬ್ಬರು ನಡುವೆ ಜಗಳ ಶುರುವಾಗಿದೆ. ಮಾತಿಗೆ ಮಾತು ಬೆಳೆದು, ಬಾ ಗಂಗೆ ಮುಟ್ಟಿ ಸತ್ಯ ಮಾಡೋಣ ಎಂದು ಕುಡಿದ ಮತ್ತಿನಲ್ಲೇ ಇಬ್ಬರೂ ನೀರಿಗೆ ಇಳಿದಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ತುಂಬಿದ್ದ ಕೆರೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬೇಕರಿಯಲ್ಲಿ ಸಿಹಿ ತಿಂಡಿ ತಯಾರಿಸುವ ಕೆಲಸ ಮಾಡಲೆಂದು ಬೇರೆಯವರಿಂದ ಹಣ ಪಡೆದಿದ್ದರು. ನಂತರ ಕೆಲಸಕ್ಕೆ ಹೋಗಿರಲಿಲ್ಲ ಎನ್ನಲಾಗಿದೆ. ಈ ಸಂಬಂಧ ಇಬ್ಬರ ನಡುವೆ ಆಗಾಗ ಮಾತು ಕತೆ ನಡೆದಿತ್ತು. ಏನೇ ಆದರೂ, ಹಣ ಪಡೆದಿದ್ದ ಮನಸ್ತಾಪ ತಿಳಿಯಾಗಿರಲಿಲ್ಲ.
ಕಳೆದ ರಾತ್ರಿ ಸಹ ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಇಬ್ಬರಲ್ಲೂ ಪರಸ್ಪರ ಅನುಮಾನ, ಅಪನಂಬಿಕೆ ಹೆಚ್ಚಾದ ಹಿನ್ನೆಲೆ, ಯಾರು ತಪ್ಪು ಮಾಡಿದ್ದಾರೆ ಎಂಬುದನ್ನು ಗಂಗಾಮಾತೆಯೇ ನೋಡಿಕೊಳ್ಳಲಿ ಎಂದು ತೇಜೂರು ಕೆರೆಗೆ ತೆರಳಿ ಆಣೆ-ಪ್ರಮಾಣ ಮಾಡಲು ಮುಂದಾದರು. ಈ ವೇಳೆ ಅಲ್ಲಿ ಏನು ನಡೆಯಿತು ಎಂಬುದು ಅವರಿಗೇ ಗೊತ್ತು. ಆದರೆ ಇಬ್ಬರೂ ಕಾಲುಜಾರಿ ಬಿದ್ದು ಜೀವ ಕಳೆದುಕೊಂಡಿದ್ದಾರೆ. ರಾತ್ರಿ ಇಬ್ಬರೂ ಒಂದೇ ಬೈಕಿನಲ್ಲಿ ಬಂದಿದ್ದ ಬಗ್ಗೆ ಉಳಿದವರು ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ನಂತರ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗೂ ವಿಷಯ ತಿಳಿಸಿದರು. ಎಲ್ಲರೂ ಸೇರಿ ಶುಕ್ರವಾರ ಬೆಳಗ್ಗೆ ಕೆರೆಯಲ್ಲಿ ಹುಡುಕಾಟ ನಡೆಸಿ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಈ ಸಂಬಂಧ ಹಾಸನ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಹಾಸನ: ಹುಂಡಿ ಎಣಿಕೆ ಕಾರ್ಯ ಮುಕ್ತಾಯ, ಹಾಸನಾಂಬೆಗೆ ಹರಿದು ಬಂದ ಕೋಟಿ ಕೊಟಿ ಆದಾಯ..!
ಸಿಹಿ ತಂದ ಕಹಿ: ಸಿಹಿ ತಿಂಡಿ ತಯಾರಿಕೆ ಮಾಡುವ ಸಂಬಂಧ ಮುಂಗಡವಾಗಿ ಹಣ ಪಡೆದಿದ್ದೇ, ಇಬ್ಬರ ಜೀವಕ್ಕೆ ಕಹಿಯಾಗಿ ಪರಿಣಮಿಸಿದೆ. ಸಿಹಿ ಖಾದ್ಯ ತಯಾರಿಸಲು ಹಣ ಪಡೆದವರು, ಅದರಂತೆ ವಹಿಸಿಕೊಂಡ ಕೆಲಸವನ್ನು ಮುಗಿಸಬೇಕಿತ್ತು. ಆದರೆ ಹಾಗೆ ಮಾಡದೆ ಜಗಳಕ್ಕಿಳಿದರು. ಇದು ಅತಿರೇಖಕ್ಕೆ ಹೋಗಿ ಸಾವಿನಲ್ಲಿ ಅಂತ್ಯವಾಗಿದೆ. ತಪ್ಪು-ಒಪ್ಪು ನಿರ್ಧಾರವಾಗುವ ಮುನ್ನವೇ ಇಬ್ಬರ ಜೀವ ಹೋಗಿರುವುದು ನಿಜಕ್ಕೂ ದುರಂತವೇ ಸರಿ. ಚಂದ್ರುಗೆ ಮದುವೆಯಾಗಿದ್ದು, ಈತನನ್ನೇ ನಂಬಿದ್ದ ಕುಟುಂಬ ಈಗ ಕಣ್ಣೀರಿಡುವಂತಾಗಿದೆ.