ದಶಕದ ಹಿಂದಿನ ಮರ್ಡರ್ ಕೇಸ್ ಭೇದಿಸಿದ ವಿಜಯಪುರ ಪೊಲೀಸ್ರು, ಕುಡಿದ ನಶೆಯಲ್ಲಿ ಬಾಯ್ಬಿಟ್ಟ ಕಹಾನಿ

By Suvarna News  |  First Published Jul 18, 2022, 10:02 PM IST

ಹೆಂಡತಿಯನ್ನ ದಾರುಣವಾಗಿ ಕೊಂದು ಓಡಿ ಹೋದಳು ಎಂದು ಕಥೆಕಟ್ಟಿದ್ದ ಗಂಡ ಇದೀಗ ಕುಡಿದ ನಶೆಯಲ್ಲಿ ಎಲ್ಲಾ ಬಾಯ್ಬಿಟ್ಟಿದ್ದಾನೆ. ಈ ಮರ್ಡರ್ ಪ್ರಕರಣ ಯಾವ ಕ್ರೈಂ ಥ್ರಿಲ್ಲರ್ ಸಿನಿಮಾಗು ಕಮ್ಮಿ ಇಲ್ಲ.


ವರದಿ: ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್..

ವಿಜಯಪುರ (ಜುಲೈ 18) :
10 ವರ್ಷಗಳ ಹಿಂದೆ ನಡೆದಿದ್ದ ಮರ್ಯಾದಾ ಹತ್ಯೆ ಪ್ರಕರಣವನ್ನ ವಿಜಯಪುರ ಪೊಲೀಸರು ಬಯಲಿಗೆಳೆದಿದ್ದಾರೆ. ಇಡೀ ಮರ್ಡರ್ ಪ್ರಕರಣ ಯಾವ ಕ್ರೈಂ ಥ್ರಿಲ್ಲರ್ ಸಿನಿಮಾಗು ಕಮ್ಮಿ ಇಲ್ಲ. ಜಿಲ್ಲೆಯನ್ನೇ ಬೆಚ್ಚಿ ಬಿಳಿಸುವಂತ  ಪ್ರಕರಣದ ಆರೋಪಿಗಳನ್ನು ಪೊಲೀಸರು 10 ವರ್ಷದ ಬಳಿಕ ಜೈಲಿಗಟ್ಟಿದ್ದಾರೆ. 

ಹೆಂಡತಿಯನ್ನ ಕೊಂದು ಓಡಿಹೋಗಿದ್ದಾಳೆ ಎಂದಿದ್ದ ಪಾಪಿ ಗಂಡ..!
ಕಳೆದ 10 ವರ್ಷಗಳ ಹಿಂದೆ ಮುದ್ದೇಬಿಹಾಳ ನಿವಾಸಿ ಹುಚ್ಚೆಪ್ಪಗೌಡ ತನ್ನ ಹೆಂಡತಿ ದಾನೇಶ್ವರಿ ಅಲಿಯಾಸ್ ಪ್ರೀಯಂಕಾಳನ್ನ ದೂರ ಆಂಧ್ರದ ಶ್ರೀಶೈಲಂಗೆ ಕರೆದೊಯ್ದು ದಾರುಣವಾಗಿ ಹತ್ಯೆ ಮಾಡಿದ್ದ. ಬಳಿಕ ಹೆಂಡ್ತಿ ಯಾವನದ್ದೊ ಜೊತೆಗೆ ಓಡಿ ಹೋಗಿದ್ದಾಳೆ ಅಂತಾ ಕಥೆ ಕಟ್ಟಿಬಿಟ್ಟಿದ್ದ. ಇದನ್ನ ಆಕೆಯ ತವರು ಮನೆಯವರು ನಂಬುವಂತೆ ಮಾಡಿದ್ದ..

Tap to resize

Latest Videos

ಪುಷ್ಪಾ ಸ್ಟೈಲಲ್ಲಿ ಕಳ್ಳರು, ಸಿಂಗಂ ಸ್ಟೈಲಲ್ಲಿ ಪೊಲೀಸರು: ರೈತರನ್ನ ಮೋಸ ಮಾಡಿದ್ದ ತಂಡ ಅಂದರ್‌

ಕೊಲೆ ಮಾಡಿ ವ್ಯವಸ್ಥಿತವಾಗಿ ಮುಚ್ಚಿ ಹಾಕಿದ ಗಂಡ..!

ಒಂದು ದಿನ ನಿಮ್ಮ ಮಗಳು ಅಂಗಡಿಗೆ ಹೋಗಿ ಬರುವನೆಂದು ಹೇಳಿ ನಾಪತ್ತೆಯಾಗಿದ್ದಾಳೆ ಅಂತ ಗಂಡನ ಮನೆಯವರು ದಾನೇಶ್ವರಿ ಮನೆಯವರಿಗೆ ಹೇಳುತ್ತಾರೆ. ಆಗ ದೂರು ಕೊಡಲು ಮುಂದಾದ ದಾನೇಶ್ವರಿ ಪೋಷಕರನ್ನು ತಡೆದ ಇವ್ರು, ದೂರು ಕೊಟ್ಟರೆ ನಮ್ಮ ಮರ್ಯಾದೆಯೇ ಹೋಗುತ್ತದೆ. ದೂರು ನೀಡುವುದು ಬೇಡ ಅಂತ ಸುಮಾರು 10 ವರ್ಷಗಳ ಕಾಲ ನಾಪತ್ತೆ ಅಂತಲೇ ಬಿಂಬಿಸಿದ್ದರು. ಇದಾದ ಮೇಲೂ ಎರಡು ಕುಟುಂಬಗಳ ನಡುವೆ ಸಂಬಂಧ ಚೆನ್ನಾಗಿಯೇ ಇತ್ತು. ಯಾವಾಗ 10 ವರ್ಷವಾದರೂ ಮಗಳು ಬರುವದಿಲ್ಲವೋ ಆಗ ದಾನೇಶ್ವರಿಯ ತಾಯಿ ಮುದ್ದೇಬಿಹಾಳ ಪೊಲೀಸ್ ಠಾಣೆಗೆ ಮಗಳು ಕಾಣೆಯಾದ ಬಗ್ಗೆ 01.06.2021ರಂದು ದೂರು ನೀಡುತ್ತಾರೆ. 

ಗಂಡನ ಮರ್ಡರ್ ಮಿಸ್ಟೆರಿ ಬಯಲಾಗಿದ್ದು ಹೀಗೆ..!
ಒಂದು ದಿನ ದಾನೇಶ್ವರಿಯ ಚಿಕ್ಕಪ್ಪನ ಜೊತೆಗೆ ದಾನೇಶ್ವರಿಯ ಗಂಡ ಹಾಗೂ ಭಾವ ಯಾವುದೋ ಗುಂಗಿನಲ್ಲಿ ದಾನೇಶ್ವರಿಯನ್ನು ಕೊಲೆ ಮಾಡಿದ್ದು ನಾವೇ ಅಂತ ಹೇಳಿದ್ದಾಗ, ದಾನೇಶ್ವರಿಯ ನಾಪತ್ತೆ ಪ್ರಕರಣದ ಅಸಲಿ ಕಹಾನಿ ಬಯಲಾಗುತ್ತದೆ. ಆಗ ದಾನೇಶ್ವರಿಯ ತಂದೆ ಇತ್ತೀಚಿಗೆ ಅಂದರೆ ಜುಲೈ 07.2022ರಂದು ಮಗಳು ಕೊಲೆಯಾಗಿದ್ದಾಳೆ ಅಂತ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಾರೆ. ದೂರು ದಾಖಲಿಸಿಕೊಂಡ ಪೊಲೀಸರು, ತನಿಖೆಯನ್ನು ಚುರುಕುಗೊಳಿಸಿದಾಗ ಆ ವೇಳೆ ಬಯಲಾಗಿದ್ದೆ ಕ್ರೈ ಥ್ರಿಲ್ಲರ್ ಸಿನೆಮಾ ರೀತಿಯ ಮರ್ಯಾದಾ ಹತ್ಯೆ...

ಶ್ರೀಶೈಲ ಪ್ರವಾಸದ ನೆಪದಲ್ಲಿ ಕರೆದೊಯ್ದು ಕೊಲೆ..!

ದಾನೇಶ್ವರಿಯನ್ನು ಪುಸಲಾಯಿಸಿ ದೇವರ ದರ್ಶನಕ್ಕೆ ಶ್ರೀಶೈಲಗೆ ಹೋಗುವ ನೆಪ ಮಾಡಿದ ದಾನೇಶ್ವರಿಯ ಗಂಡ ಹುಚ್ಚಪ್ಪಗೌಡ ಪಾಟೀಲ್ ಹಾಗೂ ಬಾವ ಸಿದ್ದನಗೌಡ  ಪಾಟೀಲ್ 24 ಜುಲೈ 2011ರಂದು  ಬಾಡಿಗೆ ಕಾರು ಮಾಡಿಕೊಂಡು ಶ್ರೀಶೈಲಗೆ ಹೋಗುತ್ತಾರೆ. ದೇವರ ದರ್ಶನ ಪಡೆದು ವಾಪಸ್ ಬರುವಾಗ ಅಂದರೆ 25 ಜುಲೈ 2011ರಂದು ಆಂಧ್ರಪ್ರದೇಶದ ಕೊರಪುರ ಫಾರೆಸ್ಟ್ ಚೆಕ್ ಪೋಸ್ಟ್ ಬಳಿಯ, ಮಂತನಾಲಮ್ ಹಳ್ಳಿಯ ಬ್ರಿಜ್ ಬಳಿ ದಾನೇಶ್ವರಿಯ ಕುತ್ತಿಗೆಗೆ ನೈಲಾನ್ ಪ್ಲಾಸ್ಟಿಕ್ ಹಗ್ಗದಿಂದ ಬಿಗಿದು ಕೊಲೆ ಮಾಡಿ, ದಟ್ಟವಾದ ಕಾಡಿನ ಬ್ರಿಜ್ ಕೆಳಗೆ ಅವಳನ್ನು ವಿವಸ್ತ್ರಗೊಳಿಸಿ ಎಸೆದು ಹೋಗಿರುತ್ತಾರೆ. ಅವಳ ಮೈಮೇಲಿನ ಬಟ್ಟೆಯನ್ನು ನಾರಾಯಣಪುರ ಡ್ಯಾಂನ ಬ್ರಿಜ್ ನಲ್ಲಿ ಎಸೆದು ಹೋಗಿರುತ್ತಾರೆ.

ಅಷ್ಟಕ್ಕು ಹೆಂಡತಿಯನ್ನ ಈ ರೀತಿ ಕೊಲೆ ಮಾಡಿದ್ಯಾಕೆ ಗಂಡ..!?
ವಿಜಯಪುರ ನಗರದ ಬಸವರಾಜ ಮಮದಾಪುರ ಇವರ ಪುತ್ರಿಯಾದ ಪ್ರಿಯಾಂಕಾ ಇವಳನ್ನು, ತಮ್ಮ ಸಂಬಂಧಿಕರಲ್ಲಿಯೇ ನಿಡಗುಂದಿ ತಾಲೂಕಿನ ರಾಜನಾಳ ಗ್ರಾಮದ ಹುಚ್ಚಪ್ಪಗೌಡ ಪಾಟೀಲ್ ಎನ್ನುವನೊಂದಿಗೆ 2008 ರಲ್ಲಿ ಮದುವೆ ಮಾಡಿಕೊಡಲಾಗಿತ್ತು. ಮದುವೆ ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ನಂತರದ ದಿನಗಳಲ್ಲಿ ಇಬ್ಬರಲ್ಲಿಯೂ ಮನಸ್ತಾಪ ಉಂಟಾಗಿ ಪದೇಪದೇ ತವರು ಮನೆಗೆ ಬರುತ್ತಿದ್ದಳು, ಇತ್ತ ಕಡೆ ಪೋಷಕರೂ ಅವಳ ಮನವೊಲಿಸಿ ಗಂಡನ ಮನೆಗೆ ಬಿಟ್ಟು ಬರುತ್ತಿದ್ದರು. 2011ರ ವರೆಗೂ ಹೀಗೆಯೇ ಮುಂದುವರೆದಿತ್ತು.

ಹೊರ ಬಿತ್ತು ಹೆಂಡತಿಯ ಲವ್ ಸ್ಟೋರಿ..!
ಒಂದು ದಿನ ಮೃತ ದಾನೇಶ್ವರಿ ನನಗೆ ಗಂಡನ ಜೊತೆಗೆ ಸಂಸಾರ ಮಾಡಲು ಇಷ್ಟವಿಲ್ಲ, ನಾನು ಇನ್ನೊಬ್ಬನನ್ನು ಪ್ರೀತಿಸುತ್ತಿದ್ದೇನೆ ಎಂದು ಪೋಷಕರ ಬಳಿ ಹೇಳುತ್ತಾಳೆ. ಆಗ ನಿನಗೆ ಮದುವೆಯಾಗಿದ್ದು, ಈ ರೀತಿಯಾಗಿ ಮಾಡುವುದು ಸರಿಯಲ್ಲ ಎಂದು ಸಂಬಂಧಿಕರು ಎಲ್ಲ ರೀತಿಯ ಬುದ್ಧಿವಾದ ಹೇಳಿ, ಮತ್ತೆ ಗಂಡನ ಮನೆಗೆ ಬಿಟ್ಟು ಬರುತ್ತಾರೆ. ಈ ವಿಚಾರ ಗಂಡನ ಮನೆಯವರಿಗೆ ಗೊತ್ತಾಗುತ್ತದೆ. ಆಗ ಸ್ವತಃ ಗಂಡ ಹಾಗೂ ಆತನ ಅಣ್ಣ ಸೇರಿ ಸಿನಿಮಾ ಸ್ಟೈಲ್ ನಲ್ಲಿ ಕೊಲೆಗೆ ಸ್ಕೆಚ್ ಹಾಕಿ ಬಿಡ್ತಾರೆ. ಶ್ರೀಶೈಲಕ್ಕೆ ಕರೆದೊಯ್ದು ಕಥೆ ಮುಗಿಸಿ ಬಿಡ್ತಾರೆ...

ಬೆಚ್ಚಿ ಬೀಳಿಸಿದ ಕ್ರೈಂ ಥ್ರಿಲ್ಲರ್ ಕೊಲೆ ಕೇಸ್..!
ಹೀಗೆ ಸುಮಾರು 10 ವರ್ಷಗಳ ಹಿಂದೆ ನಡೆದಿರುವ ಒಂದು ಭಯಾನಕ, ಸಿನಿಮೀಯ ರೀತಿಯ ಕೊಲೆ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ. ಮರ್ಯಾದೆಗೆ ಹೆದರಿ ದೂರು ಕೊಡಲು ಹಿಂಜರಿದಿದ್ದ ದಾನೇಶ್ವರಿಯ ಪೋಷಕರು ಮಗಳನ್ನು ಕಳೆದುಕೊಂಡು ಶಾಕ್ ಗೆ ಒಳಗಾಗಿದ್ದಾರೆ. ತಮ್ಮ ಮಗಳ ಸಾವಿಗೆ ಸೂಕ್ತ ನ್ಯಾಯ ಸಿಗಲಿ ಅಂತ ಬೇಡಿಕೊಳ್ತಿದ್ದಾರೆ. ಹೀಗೆ ಗಂಡನ ಮನೆಯವರ ಮರ್ಯಾದೆಗೆ ಹೆಣ್ಣೊಂದು ತನ್ನ ಜೀವವನ್ನೇ ಕಳೆದುಕೊಂಡಿದ್ದು ವಿಪರ್ಯಾಸವೆ ಸರಿ.

click me!