
ಉತ್ತರಕನ್ನಡ (ಆ.7): ಉತ್ತರ ಜಿಲ್ಲೆಯ ಮುಂಡಗೋಡ ತಾಲೂಕಿನ ಕಾಳಗನಕೊಪ್ಪ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿರುವ ಬಾಲಕನಿಗೆ, ಬೆನ್ನಿನ ಮೇಲೆ ಬಾಸುಂಡೆ ಮೂಡುವ ಹಾಗೆ ಶಿಕ್ಷಕಿಯೊಬ್ಬರು ಹೊಡೆದಿರುವ ಘಟನೆ ನಡೆದಿದೆ.
ಸರಿಯಾಗಿ ಬರೆಯುವುದಿಲ್ಲ, ಕಲಿಸಿರೋದನ್ನು ಮನನ ಮಾಡಿಕೊಳ್ಳುವುದಿಲ್ಲ ಎಂದು ಸಿಟ್ಟಿಗೆದ್ದು ಶಿಕ್ಷಕಿಯು ವಿದ್ಯಾರ್ಥಿಗೆ ಸಣ್ಣ ಕೋಲಿನಿಂದ ಹೊಡೆದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಶಾಲೆ ಬಿಟ್ಟ ನಂತರ ಮನೆಗೆ ಹೋದ ಬಾಲಕ, ಮನೆಯಲ್ಲಿ ನೋವು ತಡೆದುಕೊಳ್ಳಲಾರದೇ ಅಳಲು ಆರಂಭಿಸಿದ್ದಾನೆ. ಮನೆಯವರು ಮೈಮೇಲಿನ ಶರ್ಟ್ ಬಿಚ್ಚಿ ನೋಡಿದಾಗ ಬಾಸುಂಡೆಗಳು ಮೂಡಿರುವುದು ಕಂಡುಬಂದಿದೆ. ಬಾಲಕನ ತಾಯಿ, ಗ್ರಾಮದ ಪ್ರಮುಖರಲ್ಲಿ ತಮ್ಮ ಮಗನಿಗೆ, ಶಿಕ್ಷಕಿ ಹೊಡೆದಿರುವುದನ್ನು ತೋರಿಸಿ ಕಣ್ಣೀರು ಹಾಕಿದ್ದಾರೆ.
ಶಾಲೆ ಬಿಟ್ಟ ನಂತರ ಮಾಹಿತಿ ತಿಳಿಯುತ್ತಿದ್ದಂತೆ ಬಿಇಒ ಸುಮಾ ಜಿ. ಶಾಲೆಗೆ ಭೇಟಿ ನೀಡಿದ್ದು, ಬಾಲಕನ ಪಾಲಕರು ಹಾಗೂ ಶಿಕ್ಷಕಿಯ ಜತೆ ಮಾತನಾಡಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಈ ವೇಳೆ ಶಿಕ್ಷಕಿ, ತಾನು ಉದ್ದೇಶಪೂರ್ವಕವಾಗಿ ಬಾಲಕನಿಗೆ ಹೊಡೆದಿಲ್ಲ. ನನ್ನಿಂದ ತಪ್ಪಾಗಿದೆ. ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ ಎಂದು ಕಣ್ಣೀರು ಹಾಕಿದ್ದಾರೆ.
ಶಿಕ್ಷಕಿಯ ಮಾತು ಕೇಳಿ ಬಿಇಒ ಸುಮಾ ಆಕೆಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ನಂತರ ಬಾಲಕನನ್ನು ಮುಂಡಗೋಡದ ತಾಲೂಕು ಆಸ್ಪತ್ರೆಗೆ ದಾಖಲಿಸಿ, ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಶಾಲಾಭಿವೃದ್ಧಿ ಸಮಿತಿಯವರು ಹಾಗೂ ಬಾಲಕನ ಕುಟುಂಬಸ್ಥರು ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ