ನಾಲ್ವರು ಮಕ್ಕಳ ಕಾಲುವೆಗೆ ತಳ್ಳಿದ ಪಾಪಿ ಅಪ್ಪ: ಇಬ್ಬರ ರಕ್ಷಿಸಿದ ಮಗಳು

By Anusha KbFirst Published Jan 25, 2023, 8:53 PM IST
Highlights

ಉತ್ತರಪ್ರದೇಶದ ಕಿಶನ್‌ಗಂಜ್ ಜಿಲ್ಲೆಯಲ್ಲಿ ಮನಕಲುಕುವ ಘಟನೆಯೊಂದು ನಡೆದಿದೆ. ಪತ್ನಿಯೊಂದಿಗೆ ಜಗಳ ಮಾಡಿ ತಂದೆಯೊರ್ವ ತನ್ನ ನಾಲ್ವರು ಮಕ್ಕಳನ್ನು ಕಾಲುವೆಗೆ ಎಸೆದಿದ್ದಾನೆ.

ಆಗ್ರಾ: ಉತ್ತರಪ್ರದೇಶದ ಕಿಶನ್‌ಗಂಜ್ ಜಿಲ್ಲೆಯಲ್ಲಿ ಮನಕಲುಕುವ ಘಟನೆಯೊಂದು ನಡೆದಿದೆ. ಪತ್ನಿಯೊಂದಿಗೆ ಜಗಳ ಮಾಡಿ ತಂದೆಯೊರ್ವ ತನ್ನ ನಾಲ್ವರು ಮಕ್ಕಳನ್ನು ಕಾಲುವೆಗೆ ಎಸೆದಿದ್ದಾನೆ.  ದುಃಖದಲ್ಲೂ ಖುಷಿಯ ವಿಚಾರವೆಂದರೆ ಹೀಗೆ ಕಾಲುವೆಗೆ ತಳ್ಳಲ್ಪಟ್ಟ ನಾಲ್ವರು ಮಕ್ಕಳಲ್ಲಿ 2ನೇ ಸಹೋದರಿ  ಹಿರಿಯ ಸಹೋದರ ಹಾಗೂ ಕಿರಿಯ ಸಹೋದರಿನ್ನು ರಕ್ಷಿಸಿ ಭೇಷ್ ಎನಿಸಿಕೊಂಡಿದ್ದಾಳೆ. ಆದರೆ ಕಾಲುವೆಗೆ ತಳ್ಳಲ್ಪಟ್ಟ ಕುಟುಂಬದ ಅತ್ಯಂತ ಕಿರಿಯ ಮಗು ಮಾತ್ರ ಇನ್ನು ನಾಪತ್ತೆಯಾಗಿದ್ದು, ಆಕೆಗಾಗಿ ಶೋಧ ನಡೆಯುತ್ತಿದೆ. 

ಛೇ ಎಂಥಾ ದುರಂತ ನೋಡಿ, ಮಕ್ಕಳ ಜವಾಬ್ದಾರಿ ವಹಿಸಿಕೊಂಡು ಮಕ್ಕಳ ಪಾಲನೆ ಪೋಷಣೆ ಮಾಡಬೇಕಾದ ಅಪ್ಪನೋರ್ವ ಹೆಂಡತಿ (Wife) ಮೇಲಿನ ಸಿಟ್ಟಿಗೆ ತನ್ನದೇ ಮಕ್ಕಳನ್ನು ಕಾಲುವೆಗೆ ತಳ್ಳಿದ್ದಾನೆ.  ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗ ಈ ದುರುಳ ಅಪ್ಪನನ್ನು ಬಂಧಿಸಿದ್ದಾರೆ. ಪುಷ್ಪೇಂದ್ರ ಕುಮಾರ್ ಬಂಧಿತ ಅಪ್ಪ.  ಉತ್ತರಪ್ರದೇಶದ (Uttar Pradesh) ಕಿಶನ್‌ಗಂಜ್ (Kishanganj)ಜಿಲ್ಲೆಯ  ಶಹವಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಶೇಕ್‌ಪುರ ಹುಂಡಾದಲ್ಲಿ ಈ ಘಟನೆ ನಡೆದಿದೆ.  

Kolar: ಕೌಟುಂಬಿಕ ಕಲಹಕ್ಕೆ ಬೇಸರ: ಎರಡು ಪುಟ್ಟ ಕಂದಮ್ಮಗಳೊಂದಿಗೆ ಕೆರೆಗೆ ಹಾರಿದ ಕ್ರೂರಿ ತಾಯಿ

ಹೆಂಡತಿಯೊಂದಿಗೆ ಜಗಳ ಶುರು ಮಾಡಿದ ಪುಷ್ಪೇಂದ್ರ ಕುಮಾರ್ (Pushpendra Kumar) ನಂತರ ತನ್ನ ಗ್ರಾಮದಿಂದ 15 ಕಿಲೋ ಮೀಟರ್ ದೂರದಲ್ಲಿರುವ ಪತ್ನಿಯ ಪೋಷಕರ (Parents) ಮನೆಗೆ ಆಕೆಯನ್ನು ಬಿಡಲು ಹೋಗಿದ್ದಾನೆ.  ಹೀಗೆ ಹೆಂಡತಿಯನ್ನು ತವರಿನಲ್ಲಿ ಬಿಟ್ಟು ಬಂದ ಈ ಪಾಪಿ ಪತಿ, ಪತ್ನಿ ಮೇಲಿನ ಸಿಟ್ಟನ್ನು ಮಕ್ಕಳ ಮೇಲೆ ತೀರಿಸಲು ಮುಂದಾಗಿದ್ದಾನೆ.  ಇದಕ್ಕಾಗಿ ಮಕ್ಕಳಿಗೆ ಸಮೀಪದ ದೇಗುಲದಲ್ಲಿ ಜಾತ್ರೆ ಇದೆ ಎಂದು ಹೇಳಿ ಮಕ್ಕಳನ್ನು ನಂಬಿಸಿ ಕರೆದುಕೊಂಡು ಹೋಗಿದ್ದು, ದಾರಿ ಮಧ್ಯೆ ಕಾಲುವೆ ಬಳಿ ಬ್ರಿಡ್ಜ್‌ನಲ್ಲಿ ನಿಂತ ಆತ ತನ್ನ ನಾಲ್ವರು ಮಕ್ಕಳಾದ 13 ವರ್ಷ ಪ್ರಾಯದ ಮಗ ಸೋನು, 12 ವರ್ಷ ಪ್ರಾಯದ ಮಗಳು ಪ್ರಭ, 8 ವರ್ಷ ಪ್ರಾಯದ ಮಗಳು ಕಾಜಲ್ (Kajal) ಹಾಗೂ 5 ವರ್ಷ ಪ್ರಾಯದ ಹೇಮಲತಾಳನ್ನು(Hemalata) 15 ಅಡಿ ಆಳವಿರುವ ಕಾಲುವೆಗೆ 30 ಅಡಿ ಎತ್ತರದಿಂದ ತಳ್ಳಿದ್ದಾನೆ. 

ನಂತರ ನಡೆದಿದ್ದೆ 12 ವರ್ಷದ ಬಾಲಕಿ ಸಾಹಸಗಾಥೆ

ಕಾಲುವೆಗೆ ತಳ್ಳಲ್ಪಟ್ಟರು ಧೃತಿಗೆಡದ 12 ವರ್ಷದ ಬಾಲಕಿ ಪ್ರಭ (Prabha)ತಾನು ಈಜಿ ದಡ ಸೇರಿದ್ದಲ್ಲದೇ ತನ್ನ ಜೊತೆಗೆ ತನ್ನ ಹಿರಿಯ ಸಹೋದರ ಸೋನು ಹಾಗೂ ಕಿರಿಯ ಸಹೋದರಿ  ಕಾಜಲ್‌ನನ್ನು ದಡ ಸೇರಿಸಿದ್ದಾಳೆ. ಮೊದಲಿಗೆ ಕಾಜಲ್ ಅನ್ನು ದಡ ಸೇರಿಸಿದ ಪ್ರಭ ನಂತರ ಸಹೋದರ ಸೋನುನನ್ನು ದಡ ಮುಟ್ಟಿಸಿದ್ದಾಳೆ. ಆದರೆ ದುರಾದೃಷ್ಟವಶಾತ್ 5 ವರ್ಷದ ಮಗು ಹೇಮಲತಾಳನ್ನು ರಕ್ಷಿಸಲು ಪ್ರಭಗೆ ಸಾಧ್ಯವಾಗಿಲ್ಲ. ಈ ವೇಳೆ ಆಕೆ ಜೋರಾಗಿ ಬೊಬ್ಬೆ ಹಾಕಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾಳೆ.  ಆದರೆ ಆ ಪುಟ್ಟ ಮಗು ನಾಪತ್ತೆಯಾಗಿದ್ದು, ಸ್ಥಳೀಯ ಈಜುಗಾರರು ಆಕೆಗಾಗಿ ಶೋಧ ನಡೆಸಿದ್ದಾರೆ.  ಸಹೋದರಿ ಹಾಗೂ ರಕ್ಷಿಸಲ್ಪಟ್ಟ ಇಬ್ಬರು ಪುಟಾಣಿಗಳ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.  ನಾಪತ್ತೆಯಾಗಿರುವ ಪುಟಾಣಿ ಹೇಮಲತಾಳಿಗಾಗಿ ಶೋಧ ಮುಂದುವರೆದಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. 

ಬಸವನಬಾಗೇವಾಡಿ: ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಘಟನೆಯನ್ನು ಮಗ ಸೋನು ವಿವರಿಸಿದ್ದು ಹೀಗೆ

ಅಪ್ಪ ಜಾತ್ರೆಗೆ ನಮ್ಮೆಲ್ಲರನ್ನು ಕರೆದೊಯ್ಯಲು ಆಟೋವೊಂದನ್ನು ಬಾಡಿಗೆ ಪಡೆದರು.  ಅಪ್ಪನ ಮಾತಿನಿಂದ ಖುಷಿಯಾದ ನಾವು ಹೊಸ ಬಟ್ಟೆ ಧರಿಸಿ ಚೆನ್ನಾಗಿ ಸಿದ್ಧರಾದೆವು. ನಂತರ ಆಟೋದಲ್ಲಿ ಕೆಲವು ನಿಮಿಷಗಳ ಕಾಲ ದೂರ ಪ್ರಯಾಣಿಸಿದೆವು. ಬ್ರಿಡ್ಜ್‌ ಬರುತ್ತಿದ್ದಂತೆ  ಆಟೋ ನಿಲ್ಲಿಸಿದ ನಮ್ಮ ಅಪ್ಪ ನಮ್ಮನ್ನು  ಕಾಲುವೆ ನೋಡುವುದಕ್ಕೆ ಕರೆದೊಯ್ದರು. ಅಲ್ಲದೇ ಕಾಲುವೆಯ ತಡೆಗೋಡೆ ಮೇಲೆ ಕೂರುವಂತೆ ಹೇಳಿದರು. ಅದರಂತೆ ನಾವು ತಡೆಗೋಡೆ ಮೇಲೆ ಕುಳಿತಿದ್ದೆವು. ಈ ವೇಳೆ ನಾನು ಕಾಲುವೆಯ ಆಳ ಎಷ್ಟಿದೆ ಎಂದು ಕೇಳುತ್ತಿದ್ದಂತೆ ಒಬ್ಬರಾದ ಮೇಲೊಬ್ಬರಂತೆ ಎಲ್ಲರನ್ನು ಅವರು ಕಾಲುವೆಗೆ ನೂಕಿದರು. ನಮಗಿನ್ನು ನಮ್ಮ ಕಿರಿಯ ಸಹೋದರಿಯನ್ನು ಪತ್ತೆ ಮಾಡಲಾಗಲಿಲ್ಲ ಎಂದು ಸೋನು ಬೇಸರ ವ್ಯಕ್ತಪಡಿಸಿದ್ದಾನೆ. 

ಘಟನೆಗೆ ಸಂಬಂಧಿಸಿದಂತೆ ಪಾಪಿ ಅಪ್ಪನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 363 (ಅಪಹರಣ) , 307 (ಕೊಲೆ ಪ್ರಕರಣ) ದಾಖಲಿಸಲಾಗಿದೆ. ಗ್ರಾಮದ ವಾಚ್‌ಮನ್ ಚೋಬ್ ಸಿಂಗ್ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ. ಹೀಗೆ ತನ್ನ ಸಹೋದರ ಹಾಗೂ ಸಹೋದರಿಯನ್ನು ರಕ್ಷಿಸಿದ ಮಗು  12 ವರ್ಷದ ಪ್ರಭಾಳನ್ನು ರಿಯಲ್ ಹೀರೋ ಎಂದು ಕರೆಯಲಾಗುತ್ತಿದೆ.  ಇತ್ತ ಈ ಕೃತ್ಯವೆಸಗಿದ್ದ ಪುಷ್ಪೇಂದ್ರ ಸಿಂಗ್ ಕೂಲಿ ಕಾರ್ಮಿಕನಾಗಿದ್ದು,  ಯಾವಾಗಲೂ ಕುಡಿತದಲ್ಲೇ ದಿನ ಕಳೆಯುತ್ತಿದ್ದ. ಈತನ ಪತ್ನಿ ಅದ್ಹೇಗೋ ಮೂವರು ಮಕ್ಕಳಿಗೆ ಶಿಕ್ಷಣ ನೀಡಿ ಸಲಹುತ್ತಿದ್ದಳು ಎಂದು ಸಿಂಗ್ ಹೇಳಿದ್ದಾರೆ. 

click me!