ಯುವಪ್ರೇಮಿಗಳು ಇಬ್ಬರು ನಿಗದಿತ ಸಮಯಕ್ಕೆ ನದಿಗೆ ಹಾರಲು ಮುಂದಾಗಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಮಹಿಳೆ ಮಾತ್ರ ನದಿಗೆ ಹಾರಿದ್ದು, ಪ್ರಿಯಕರ ತನ್ನ ಅಮೂಲ್ಯವಾದ ಜೀವನವನ್ನು ಬಿಟ್ಟುಕೊಡದಿರಲು ನಿರ್ಧರಿಸಿದ್ದ.
ಪ್ರಯಾಗ್‌ರಾಜ್ (ಜೂ. 09): ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಈ ಯುವಪ್ರೇಮಿಗಳು ಬೇರೆ ಬೇರೆ ವ್ಯಕ್ತಿಗಳನ್ನು ಮದುವೆಯಾಗಿದ್ದರೂ ಒಟ್ಟಿಗೆ ಜೀವನ ಸಾಗಿಸಲು ಬಯಸಿದ್ದರು. ಆದರೆ ಇದಕ್ಕೆ ಸಮಾಜ ಅಡ್ಡಿಯಾದಾಗ ಸಿನಿಮಾಗಳಲ್ಲಿನ ನಾಯಕ/ನಾಯಕಿಯಂತೆ ಒಟ್ಟಿಗೆ ಸಾಯಲು ನಿರ್ಧರಿಸಿದ್ದರು. ಯಮುನಾ ನದಿಗೆ ಒಟ್ಟಿಗೆ ಹಾರುವ ದಿನಾಂಕ ಮತ್ತು ಸ್ಥಳ ಸಹ ನಿಗದಿಯಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಈ ಕಹಾನಿಗೊಂದು ಟ್ವಿಸ್ಟ್ ಸಿಕ್ಕಿತ್ತು. ಯುವಪ್ರೇಮಿಗಳು ಇಬ್ಬರು ನಿಗದಿತ ಸಮಯಕ್ಕೆ ನದಿಗೆ ಹಾರಲು ಮುಂದಾಗಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಮಹಿಳೆ ಮಾತ್ರ ನದಿಗೆ ಹಾರಿದ್ದು, ಪ್ರಿಯಕರ ತನ್ನ ಅಮೂಲ್ಯವಾದ ಜೀವನವನ್ನು ಬಿಟ್ಟುಕೊಡದಿರಲು ನಿರ್ಧರಿಸಿದ್ದ.
ಆದರೆ ಈಜುವುದನ್ನು ಚೆನ್ನಾಗಿಯೇ ಅರಿತಿದ್ದ ಮಹಿಳೆ, ತನ್ನ ಸಂಗಾತಿಯ ದ್ರೋಹ ಅರಿತು ಈಜಿಕೊಂಡು ದಡ ಸೇರಿದ್ದಳು. ತನ್ನ ಸಂಗಾತಿ ಮಾಡಿದ ದ್ರೋಹದಿಂದ ಆಘಾತಕ್ಕೊಳಗಾದ ಮಹಿಳೆ ಈಗ ತನ್ನ ಪ್ರಿಯಕರನ ವಿರುದ್ಧ ದೂರು ನೀಡಿದ್ದಾಳೆ. ಈ ಪ್ರೇಮಿಗಳ ನಡುವಿನ ಭಾಂಧವ್ಯಕ್ಕೆ ಈಗ ಫುಲ್‌ಸ್ಟಾಪ್ ಬಿದ್ದಿದ್ದು, 32 ವರ್ಷದ ಮಹಿಳೆ, ಆರು ವರ್ಷದ ಮಗಳ ತಾಯಿ, ಈಗ ಜುನ್ಸಿ ನಿವಾಸಿ ಚಂದು (30) ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾಳೆ.
ಘಟನೆಯು ಮೇ 29 ರಂದು ನಡೆದಿದ್ದು, ಘಟನೆಯ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಯತ್ನ ಮತ್ತು ಮಹಿಳೆಯ ಮೊಬೈಲ್ ಹಾನಿ ಮಾಡಿದ ಆರೋಪದ ಮೇಲೆ ಚಂದು ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸರ್ಕಲ್ ಆಫೀಸರ್ ಸಂತೋಷ್ ಸಿಂಗ್ ತಿಳಿಸಿದ್ದಾರೆ.
ಆತ್ಮಹತ್ಯೆಗೆ ನಿರ್ಧಾರ: ವರದಿಗಳ ಪ್ರಕಾರ, ಮಹಿಳೆ ಕಳೆದ ಹಲವು ವರ್ಷಗಳಿಂದ ಚಂದು ಜೊತೆ ಸಂಬಂಧ ಹೊಂದಿದ್ದಳು. ಕೆಲವು ತಿಂಗಳ ಹಿಂದೆ ಆಕೆ ತನ್ನ ಆರು ವರ್ಷದ ಮಗಳೊಂದಿಗೆ ಪುಣೆಗೆ ಹೋಗಿದ್ದಳು. ಆಕೆಯ ಅನುಪಸ್ಥಿತಿಯಲ್ಲಿ ಮಹಿಳೆಗೆ ತಿಳಿಸದೆ ಚಂದು ಮದುವೆಯಾಗಿದ್ದ. ಮೇ 18 ರಂದು ಮಹಿಳೆ ಪ್ರಯಾಗ್‌ರಾಜ್‌ಗೆ ಹಿಂತಿರುಗಿದಾಗ ಇಬ್ಬರ ಮಧ್ಯೆ ಈ ಸಂಬಂಧ ಜಗಳವಾಗಿತ್ತು.
ನಂತರ ಚಂದು ತನ್ನ ಪತ್ನಿಗೆ ವಿಚ್ಛೇದನ ನೀಡಿದ ನಂತರ ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಆದರೆ ಬಳಿಕ ಹಿಂಜರಿದಿದ್ದ. ಈ ವಿಷಯದ ಬಗ್ಗೆ ಸಾಕಷ್ಟು ಜಗಳಗಳ ನಂತರ, ಇಬ್ಬರೂ ಅಂತಿಮವಾಗಿ ಆತ್ಮಹತ್ಯೆಯ ಮೂಲಕ ಸಾಯಲು ನಿರ್ಧರಿಸಿದ್ದರು.
ಮೇ 29 ರಂದು, ಇಬ್ಬರೂ ಹೊಸ ಯಮುನಾ ಸೇತುವೆಯ ಮೇಲೆ ಭೇಟಿಯಾದರು. ಮಹಿಳೆಯ ಪ್ರಕಾರ, ಅವಳು ಮೊದಲು ನದಿಗೆ ಹಾರಿದಳು ಆದರೆ ಚಂದು ಅವಳನ್ನು ಅನುಸರಿಸಲಿಲ್ಲ. ನಂತರ ಮಹಿಳೆ ಹೇಗೋ ನದಿಯ ದಡಕ್ಕೆ ಈಜಿದಳು. ಘಟನೆ ಬಳಿಕ ಸ್ಥಳಕ್ಕಾಗಮಿಸಿದ ಕಿದ್‌ಗಂಜ್ ಪೊಲೀಸರು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಈಗ ತನ್ನ ಪ್ರಿಯಕರನ ವಿರುದ್ಧವೇ ಮಹಿಳೆ ದೂರು ದಾಖಲಿಸಿದ್ದಾಳೆ.
ಇದನ್ನೂ ಓದಿ: ಕಪಾಳಮೋಕ್ಷಕ್ಕೆ ಪ್ರತೀಕಾರ: ದಕ್ಷಿಣ ದೆಹಲಿಯಲ್ಲಿ ವ್ಯಕ್ತಿಯನ್ನು ಕೊಂದ ಯುವಕರು
ಇದನ್ನೂ ಓದಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಇಬ್ಬರು ಆರೋಪಿಗಳನ್ನು ಥಳಿಸಿ, ಬೆಂಕಿ ಇಟ್ಟ ಗ್ರಾಮಸ್ಥರು