ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ದೆಹಲಿಗೆ ತೆರಳಲು ಉಡುಪಿ ಪೊಲೀಸರ ಟೀಂ ರೆಡಿ

By Suvarna News  |  First Published May 3, 2022, 6:26 PM IST

* ಗುತ್ತಿಗೆದರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ
* ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆ ಮತ್ತಷ್ಟು ತೀವ್ರ
 * ದೆಹಲಿಗೆ ತೆರಳಲು ಉಡುಪಿ ಪೊಲೀಸರ ಟೀಂ ರೆಡಿ


ವರದಿ- ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ, (ಮೇ.03): ಗುತ್ತಿಗೆದರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆ ಮತ್ತಷ್ಟು ತೀವ್ರಗೊಂಡಿದೆ. ಈಗಾಗಲೇ ಉಡುಪಿ ಪೊಲೀಸರ ತಂಡ ಬೆಳಗಾವಿ, ಧಾರವಾಡ, ಚಿಕ್ಕಮಗಳೂರು ,ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಒಂದು ಸುತ್ತಿನ ತನಿಖೆ ಪೂರೈಸಿ ಎರಡನೇ ಹಂತದ ತನಿಖೆ ಆರಂಭಿಸಿದೆ. ಈ ನಡುವೆ ದೆಹಲಿಗೂ ಒಂದು ತಂಡವನ್ನು ಕಳಿಸಲು ಉಡುಪಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಕೆ ಎಸ್ ಈಶ್ವರಪ್ಪ ಅವರ ಮೇಲೆ 40% ಕಮಿಷನ್ ಆರೋಪ ಮಾಡಿದ್ದ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಎಪ್ರೀಲ್ 12 ಕ್ಕೆ ಉಡುಪಿಯಲ್ಲಿ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ನನ್ನ ಸಾವಿಗೆ ಸಚಿವ ಈಶ್ವರಪ್ಪ ಮತ್ತು ಅವರ ಇಬ್ಬರು ಆಪ್ತರು ಕಾರಣ ಎಂದು ವಾಟ್ಸಪ್ ಮೆಸೇಜ್ ನಲ್ಲಿ ಸಂದೇಶ ಕಳುಹಿಸಿದ್ದರು. ತನ್ನ ಇಬ್ಬರು ಗೆಳೆಯರ ಜೊತೆ ಪ್ರವಾಸದ ನೆಪದಲ್ಲಿ ವಿವಿಧ ಜಿಲ್ಲೆಗಳಿಗೆ ತೆರಳಿ ಉಡುಪಿಗೆ ಬಂದಿದ್ದರು. ಉಡುಪಿಯ ಖಾಸಗಿ ಲಾಡ್ಜಿನಲ್ಲಿ ಸಂತೋಷ್ ಪಾಟೀಲ್ ಶವ ಪತ್ತೆಯಾದ ನಂತರ ಘಟನೆಯ ಹೊಣೆ ಹೊತ್ತು ಕೆ.ಎಸ್. ಈಶ್ವರಪ್ಪ ರಾಜೀನಾಮೆಯನ್ನು ಕೂಡ ನೀಡಿದ್ದರು.

Tap to resize

Latest Videos

ಸಂತೋಷ್‌ ಪಾಟೀಲ್‌ ಕೇಸ್‌: ಬೆಳಗಾವಿಯಲ್ಲಿ ತನಿಖೆ ಪೂರ್ಣ

ರಾಜಕೀಯ ಕಾರಣಗಳಿಗೆ ಈ ಪ್ರಕರಣ ಸಾಕಷ್ಟು ಗಮನ ಸೆಳೆದಿತ್ತು. ಈವರೆಗಿನ ತನಿಖೆಯಲ್ಲಿ ಇದೊಂದು ಆತ್ಮಹತ್ಯೆ ಪ್ರಕರಣ ಎನ್ನುವುದು ಸಾಬೀತಾಗಿದೆ. ಈಗಾಗಲೇ ವಿವಿಧ ಜಿಲ್ಲೆಗಳಿಗೆ ತೆರಳಿ ಒಂದು ಸುತ್ತಿನ ತನಿಖೆ ಪೂರೈಸಲಾಗಿದೆ. ಸಂತೋಷ್ ಪಾಟೀಲ್ ಜೊತೆ ಸಂಪರ್ಕ ಹೊಂದಿದ್ದ ವಿವಿಧ ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಇದೀಗ ಉಡುಪಿ ಪೊಲೀಸರ ಒಂದು ತಂಡ ದೆಹಲಿಗೆ ಹೊರಡಲು ಸಿದ್ಧತೆ ನಡೆಸಿದೆ.

ದೆಹಲಿಗೆ ತೆರಳಲು ವಿಶೇಷ ತಂಡವನ್ನು ಎಸ್ಪಿ ವಿಷ್ಣುವರ್ಧನ್ ರಚನೆ ಮಾಡಿದ್ದಾರೆ. ಈ ಹಿಂದೆ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಸಂತೋಷ್ ಪಾಟೀಲ್ ಕೆಎಸ್ ಈಶ್ವರಪ್ಪ ಅವರ ವಿರುದ್ಧ ಕಮಿಷನ್ ಆರೋಪ ಮಾಡಿದ್ದರು. ಇದೇ ವೇಳೆ ದೆಹಲಿಯ ಬಿಜೆಪಿ ನಾಯಕರನ್ನು ಭೇಟಿಯಾಗಲು ಕೂಡ ಸಂತೋಷ್ ಪಾಟೀಲ್ ಯತ್ನಿಸಿದ್ದರು. ಎರಡು ಮೂರು ದಿನಗಳ ಕಾಲ ದೆಹಲಿಯಲ್ಲಿದ್ದು ಓಡಾಟ ನಡೆಸಿ ಹಲವರನ್ನು ಭೇಟಿ ಮಾಡಿದ್ದರು.

ಈ ವೇಳೆ ಸಂತೋಷ್ ಪಾಟೀಲ್ ಯಾರನ್ನೆಲ್ಲಾ ಸಂಪರ್ಕ ಮಾಡಿದ್ದರು? ಈಶ್ವರಪ್ಪನವರ ವಿರುದ್ಧ ಹೇಳಿಕೆ ನೀಡುವಲ್ಲಿ ಯಾವೆಲ್ಲ ನಾಯಕರ ಕೈವಾಡ ಇದೆ? ಕಾಂಗ್ರೆಸ್ ಸೇರಿದಂತೆ ವಿಪಕ್ಷದ ನಾಯಕರನ್ನು ದೆಹಲಿಯಲ್ಲಿ ಭೇಟಿಯಾಗಿದ್ದರಾ? ಈ ಎಲ್ಲಾ ವಿಚಾರಗಳ ಬಗ್ಗೆ ತನಿಖೆ ನಡೆಯಲಿದೆ. ಸಾವಿಗೂ ಮುನ್ನ ಸಂತೋಷ್ ಪಾಟೀಲ್ ಭೇಟಿಯಾಗಿದ್ದ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಗುತ್ತೆ.

ದೆಹಲಿ ನಾಯಕರುಗಳ ಬೇಟಿಗೆ ಸಂತೋಷ್ ಪಾಟೀಲ್ ಗೆ ಕೊಂಡಿಯಾಗಿದ್ದ ವ್ಯಕ್ತಿಗಳು ಯಾರು ಎಂಬುದನ್ನು ಪತ್ತೆಹಚ್ಚಿ ಅವರನ್ನು ಕೂಡ ವಿಚಾರಣೆಗೆ ಒಳಪಡಿಸಲು ಪೊಲೀಸರು ತೀರ್ಮಾನಿಸಿದ್ದಾರೆ. 

ಒಂದು ಸುತ್ತಿನ ತನಿಖೆ ಪೂರೈಸಿ ವಾಪಸಾಗಿರುವ ಉಡುಪಿ ಪೊಲೀಸರ ತಂಡಗಳು ಎಡಿಜಿಪಿ ಪ್ರತಾಪರೆಡ್ಡಿ ಅವರಿಗೆ ಎಲ್ಲಾ ಮಾಹಿತಿಗಳನ್ನು ನೀಡಿದೆ. ಒಟ್ಟು ಏಳು ತಂಡಗಳು ಸಂಗ್ರಹಿಸಿರುವ ಮಾಹಿತಿಗಳನ್ನು ಕಲೆಹಾಕಿ, 2ನೇ ಸುತ್ತಿನ ತನಿಖೆಗೆ ಈಗಾಗಲೇ ಉಡುಪಿ ಪೊಲೀಸರ ತಂಡ ಬೆಳಗಾವಿಗೂ ತೆರಳಿದೆ. 

ಈಗಾಗಲೇ ಶವದ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಪೊಲೀಸರ ಕೈಸೇರಿದ್ದು, ಸಾವಿಗೆ ನಿಖರ ಕಾರಣವನ್ನು ಇದರಲ್ಲಿ ತಿಳಿಸಲಾಗಿಲ್ಲ. ಮುಂದಿನ ಹತ್ತು ದಿನಗಳ ಒಳಗಾಗಿ ಎಫ್ ಎಸ್ ಎಲ್ ವರದಿ ಬರಲಿದ್ದು, ಆ ಬಳಿಕವೇ ಶವದ ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಪೊಲೀಸರಿಗೆ ಸಿಗಲಿದೆ. ಈವರೆಗಿನ ತನಿಖೆಯಲ್ಲಿ ಇದೊಂದು ಆತ್ಮಹತ್ಯೆ ಪ್ರಕರಣ ಎಂಬುದು ಸಾಬೀತಾಗಿದ್ದು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

click me!