2 ವರ್ಷದ ಪುಟ್ಟ ಹೆಣ್ಣ ಮಗು ಆಟವಾಡುತ್ತಿತ್ತು. ಆದರೆ ಪಕ್ಕದಲ್ಲಿ ಗೆಳೆಯನ ಜೊತೆ ಹರಟೆ ಹೊಡೆಯತ್ತಾ, ತಳ್ಳಾಡುತ್ತಿದ್ದ ಕಾಲೇಜು ವಿದ್ಯಾರ್ಥಿಯೊಬ್ಬ ಈ ಮಗುವಿನ ಮೇಲೆ ಬಿದ್ದ ದುರಂತ ಘಟನೆ ನಡೆದಿದೆ.
ಮುಂಬೈ(ಜ.09) ಪುಟ್ಟ ಹೆಣ್ಣು ಮಗು ತನ್ನಪಾಡಿಗೆ ಪೋಷಕರ ಅಂಗಡಿ ಪಕ್ಕದಲ್ಲಿ ಆಟವಾಡುತ್ತಿತ್ತು. ಇದೇ ಅಂಗಡಿಗೆ ಬಂದ ಕಾಲೇಜು ವಿದ್ಯಾರ್ಥಿಗಳ ಗುಂಪು ಒಬ್ಬರನ್ನೊಬ್ಬರು ಕಾಲೆಳೆಯುತ್ತಾ, ತಮಾಷೆ ಮಾಡುತ್ತಾ ನಿಂತಿದೆ. ಮಗುವಿನ ತಾಯಿ ಕಾಲೇಜು ವಿದ್ಯಾರ್ಥಿಗಳಿಗೆ ಮಗು ಆಟವಾಡುತ್ತಿರುವ ಕಾರಣ ಬೇರೆ ಜಾಗದಲ್ಲಿ ಹರಟೆ, ತಮಾಷೆ ಮುಂದುವರಿಸುವಂತೆ ಸೂಚಿಸಿದ್ದಾರೆ. ಆದರೆ ಇದ್ಯಾವುದು ಗಣನೆಗೆ ತೆಗೆದುಕೊಂಡಿಲ್ಲ. ವಿದ್ಯಾರ್ಥಿಗಳು ನೂಕಾಟ, ತಳ್ಳಾಟದಲ್ಲಿ ಒಬ್ಬ ಮಗುವಿನ ಮೇಲೆ ಬಿದ್ದಿದ್ದಾನೆ. ಇದರ ಪರಿಣಾಮ ಗಂಭೀರವಾಗಿ ಗಾಯಗೊಂಡ ಮಗು ಮೃತಪಟ್ಟ ಘಟನೆ ಮುಂಬೈನ ಜುಹುವಿನಲ್ಲಿ ನಡೆದಿದೆ.
2 ವರ್ಷದ ಹೆಣ್ಣು ಮಗುವಿನ ಹೆಸರು ವಿಧಿ ಅಗ್ರಹಾರಿ. ಜುಹುವಿನಲ್ಲಿ ವಿಧಿ ಪೋಷಕರಿಗೆ ಸಣ್ಣ ಅಂಗಡಿ ಇದೆ. ಮನೆ ಹಾಗೂ ಅಂಗಡಿ ಒಂದೆ ಭಾಗದಲ್ಲಿದೆ. ಈ ಅಂಗಡಿ ಪಕ್ಕದಲ್ಲೇ ವಿಧಿ ಅಗ್ರಹಾರಿ ಆಟವಾಡುತ್ತಾ ಕಳೆದಿದೆ. ಕೆಲ ಆಟಿಕೆಗಳನ್ನು ಹಿಡಿದು ಆಟದಲ್ಲಿ ತಲ್ಲೀನವಾಗಿದೆ. ಮಗುವಿನ ತಾಯಿ ಹದ್ದಿನ ಕಣ್ಣಿಟ್ಟು ನೋಡುತ್ತಿದ್ದರು. ಇದೇ ವೇಳೆ 20 ವರ್ಷದ ಹರ್ಷದ್ ಗೌರವ್, ಶೆಹನ್ವಾಜ್ ಅನ್ಸಾರಿ ಇಬ್ಬರು ಅಂಗಡಿಗೆ ಬಂದಿದ್ದಾರೆ. ತಿಂಡಿ ತಿನಿಸು ಖರೀದಿಸಿದ ಇಬ್ಬರು ಹರಟೆ ಶುರುಮಾಡಿದ್ದಾರೆ.
ಇಬ್ಬರ ಹರಟೆಯಲ್ಲಿ ತಮಾಷೆ, ನಗು, ನೂಕಾಟ, ತಳ್ಳಾಟ ಶುರುವಾಗಿತ್ತು. ಈ ವೇಳೆ ತಕ್ಷಣ ಮಗುವಿನ ತಾಯಿ ಇಲ್ಲಿ ಯಾವುದೇ ರೀತಿ ನೂಕಾಟ ತಳ್ಳಾಟ ಮಾಡಬೇಡಿ. ಪಕ್ಕದಲ್ಲಿ ಮಗು ಆಟವಾಡುತ್ತಿದೆ ಎಂದು ಸೂಚಿಸಿದ್ದಾರೆ. ಈ ಮಾತಿಗೆ ಇಬ್ಬರು ಗರಂ ಆಗಿದ್ದಾರೆ. ಬಳಿಕ ಈ ಮಾತುಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ತಮ್ಮ ಹರಟೆ, ತಮಾಷೆ ಮುಂದುವರಿಸಿದ್ದಾರೆ. ನೋಡ ನೋಡುತ್ತಿದ್ದಂತೆ ಇವರಿಬ್ಬರ ನೂಕಾಟ ತಳ್ಳಾಟಗಳು ಹೆಚ್ಚಾಗಿದೆ. ಇದರ ಪರಿಣಾಮ ಹರ್ಷದ್ ಗೌರವ್ ಅಚಾನಕ್ಕಾಗಿ ಆಟವಾಡುತ್ತಿದ್ದ ಮಗುವಿನ ಮೇಲೆ ಬಿದ್ದಿದ್ದಾನೆ.
ವಿಜಯಪುರದಲ್ಲಿ ಮಗುವಿನ ಜೀವದ ಜೊತೆ ಚೆಲ್ಲಾಟ: ನಿಷೇಧಿತ ಆಚರಣೆಗೆ ಆಕ್ರೋಶ
20 ವರ್ಷದ ಹರ್ಷದ್ ಗೌರವ್ ಮಗುವಿನ ಮೇಲೆ ಬಿದ್ದ ಕಾರಣ ಮಗುವಿನ ತಲೆ ನೆಲಕ್ಕೆ ಬಡಿದಿದೆ. ತೀವ್ರವಾಗಿ ಗಾಯಗೊಂಡ ಮಗುವನ್ನು ತಕ್ಷಣವೆ ಆಸ್ಪತ್ರೆಗೆ ದಾಖಲಿಸಿದೆ. ಮುಂಬೈನ ಕೂಪರ್ ಆಸ್ಪತ್ರೆಯಲ್ಲಿ ಸತತ 2 ದಿನ ಸಾವು ಬದುಕಿನ ನಡುವೆ ಹೋರಾಡಿದ 2 ವರ್ಷದ ಪುಟ್ಟ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ತಲೆಗೆ ಗಂಭೀರ ಗಾಯವಾಗಿದ್ದ ಕಾರಣ ಮಗು ಮೃತಪಟ್ಟಿದೆ. ಇತ್ತ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮಕ್ಕೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ವಿದ್ಯಾರ್ಥಿಗಳಿಬ್ಬರಿಗೂ ಸೂಚನೆ ನೀಡಿದ್ದೆ. ಆದರೆ ನನ್ನ ಮಾತುಗಳನ್ನು ಕೇಳಿಸಿಕೊಂಡಿಲ್ಲ. ಇಬ್ಬರು ತಮ್ಮದೇ ಲೋಕದಲ್ಲಿದ್ದರು. ಮಗು ಆಟವಾಡುತ್ತಿದೆ. ಈ ಜಾಗ ಬಿಟ್ಟು ಬೇರೆಡೆ ತೆರಳಿ ಎಂದು ಮನವಿ ಮಾಡಿಕೊಂಡಿದ್ದೆ. ಈ ಮಾತು ಹೇಳಿದ ಕೆಲವೇ ಕ್ಷಣಗಳಲ್ಲಿ ದುರಂತ ಸಂಭವಿಸಿದೆ. ವಿದ್ಯಾರ್ಥಿಗಳು ಕಲಿತ ಸಂಸ್ಕಾರ ಇಂದು ನನ್ನ ಮಗುವನ್ನು ಬಲಿಪಡೆದಿದೆ. ಆ ವಿದ್ಯಾರ್ಥಿಗಳಿಗೆ ಯಾವುದೇ ಶಿಕ್ಷೆ ನೀಡಿದರೂ ಕಡಿಮೆ. ನನ್ನ ಮಗು ಅದೆಂತಾ ನೋವು ಅನುಭವಿಸಿದೆ. ಯಾರ ತಂಟೆಗೂ , ಜಗತ್ತಿನ ಒಳಿತು ಕೆಡುಕುಗಳ ಅರಿವಿಲ್ಲದೆ ನಿಷ್ಕಲ್ಮಷ ಮನಸ್ಸಿನಿಂದ ಆಟವಾಡುತ್ತಿದ್ದ ಮಗು ಇಂದಿಲ್ಲ ಅನ್ನೋದು ಅರಗಿಸಿಕೊಳ್ಳಲಾಗುತಿಲ್ಲ ಎಂದು ಮಗುವಿನ ತಾಯಿ ಅಳಲು ತೋಡಿಕೊಂಡಿದ್ದಾರೆ.
ಮಗುವಿನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 106ರ ಅಡಿ ಪ್ರಕರಣ ದಾಖಲಾಗಿದೆ. ನಿರ್ಲಕ್ಷ್ಯದಿಂದ ಮಗುವಿನ ಸಾವಿಗೆ ಕಾರಣವಾಗಿದ್ದಾರೆ ಎಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ.
ಮತ್ತೆ ಕಲಬುರಗಿ ಮಹಾನಗರ ಪಾಲಿಕೆ ನಿರ್ಲಕ್ಷ: ಮಕ್ಕಳ ಶಾಲಾ ವಾಹನಕ್ಕೆ ಕರೆಂಟ್ ಶಾಕ್, ಮಹಿಳೆ ಸ್ಥಿತಿ ಗಂಭೀರ