* ಒಬ್ಬ ತುಮಕೂರಿನವ, ಮತ್ತೊಬ್ಬ ಗೋಕಾಕ ಮೂಲದವ
* ಪೆರೋಲ್ ಮೇಲೆ ಹೋಗಿದ್ದ ಆರೋಪಿಗಳು
* ಈ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಬೆಳಗಾವಿ(ಆ.27): ಪೆರೋಲ್ ಮೇಲೆ ತೆರಳಿದ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದ ಶಿಕ್ಷಾ ಬಂಧಿ ಆರೋಪಿಗಳಾದ ರಮೇಶ ವೆಂಕಟರವಣಪ್ಪ ಕುರಿ ಹಾಗೂ ಈಶ್ವರ ಮಲ್ಲಪ್ಪಾ ವಗ್ಗರ ಕಾರಾಗೃಹಕ್ಕೆ ಮರಳಿ ಶರಣಾಗದೇ ತಲೆಮರೆಸಿಕೊಂಡಿದ್ದಾರೆ.
ಆರೋಪಿ ರಮೇಶನಿಗೆ ಜಿಲ್ಲೆಯ ಅನಗೋಳದ ಮುಸ್ಲಿಂ ಗಲ್ಲಿಯ ಅಯಾಜ್ ಮೆಹಬೂಬ ಅಲಿ ಶೇಖ ಜಾಮೀನಿನ ಮೇಲೆ ಹೋಗಲು ಜಾಮೀನುದಾರನಾಗಿದ್ದಾನೆ. ಕೋವಿಡ್ -19 ಪ್ರಯುಕ್ತ ಸರ್ಕಾರದ ಆದೇಶದಂತೆ ಆರೋಪಿ ರಮೇಶ ಮೇ 15 ರಿಂದ ಆ.16 ರವರೆಗೆ 90 ದಿನಗಳ ಕೋವಿಡ್-19 ಪ್ರಯುಕ್ತ ಪೆರೋಲ್ ರಜೆಯ ಮೇಲೆ ಹೋಗಿದ್ದ. ಆ.17 ಸಂಜೆ 5:30 ಗಂಟೆಗೆ ಕಾರಾಗೃಹಕ್ಕೆ ಮರಳಿ ಶರಣಾಗಿಲ್ಲ. ಆರೋಪಿ ರಮೇಶ ವೆಂಕಟರವಣಪ್ಪ ಕುರಿ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹಳಿಹಟ್ಟಿ ಗ್ರಾಮದವನಾಗಿದ್ದಾನೆ. ಈತನ ವಯಸ್ಸು 33 ವರ್ಷ ಆಗಿದ್ದು, ಕಪ್ಪು ಮೈಬಣ್ಣ ಹೊಂದಿದ್ದಾನೆ. ಉದ್ದನೆಯ ಮುಖ ಹಾಗೂ ಸದೃಢ ಮೈಕಟ್ಟು ಹೊಂದಿದ್ದಾನೆ.
ಪೆರೋಲ್ ಮೇಲೆ ಹೋದವರು ನಾಪತ್ತೆ: ಕಾರಗೃಹ ಇಲಾಖೆಗೆ ತಲೆನೋವಾಗಿರುವ ಎಸ್ಕೇಪ್ ಕಹಾನಿ
ಅದರಂತೆಯೇ ಈಶ್ವರ ಮಲ್ಲಪ್ಪ ವಗ್ಗರ ಮೇ 15 ರಿಂದ ಆ.14ರವರೆಗೆ 90 ದಿನಗಳ ಕೋವಿಡ್ -19 ಪ್ರಯುಕ್ತ ಸಿದ್ದಪ್ಪ ಮಾರುತಿ ಸಿದ್ದನ್ನವರ ನೀಡಿದ ಜಾಮೀನಿನ ಆಧಾರವಾಗಿ ಪೆರೋಲ್ ಮೇಲೆ ಹೋಗಿದ್ದಾನೆ. ಆ.15 ರಂದು ಮತ್ತೆ ಕಾರಾಗೃಹಕ್ಕೆ ಶರಣಾಗದೆ ತಲೆಮರೆಸಿಕೊಂಡಿದ್ದಾನೆ. ಈಶ್ವರ ಮಲ್ಲಪ್ಪ ವಗ್ಗರ ಈತ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಚಿಕ್ಕನಂದಿ ಗ್ರಾಮದವನು. ವಯಸ್ಸು 57 ವರ್ಷ ಸಧೃಡ ಮೈಕಟ್ಟು, ಉದ್ದ ಮುಖ ಹೊಂದಿದ್ದಾನೆ. ಈ ಕುರಿತು, ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕ ಶಾಬುದ್ದೀನ ಮಸಾಕಸಾಬ ಕಾಲೇಖಾನ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗುತ್ತಿದೆ. ಈ ಕೈದಿಗಳ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕರೆ ಕೂಡಲೇ ಬೆಳಗಾವಿ ನಗರ ಅಥವಾ ಪೊಲೀಸ್ ಇನ್ಸಪೆಕ್ಟರ್ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಬೆಳಗಾವಿ ಇವರಿಗೆ ಸಂಪರ್ಕಿಸಬೇಕು.
ಪೊಲೀಸ್ ಕಂಟ್ರೋಲ್ ರೂಂ. 0831-2405233 ಹಾಗೂ ಪಿ.ಐ.ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ಮೊ.ಸಂ. 9480804031 ಅಥವಾ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ದೂ.ಸಂ.0831-2405252 ನ್ನು ಸಂಪರ್ಕಿಸಬಹುದು ಎಂದು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ಎಎಸ್‌ಐ ಎಚ್.ಎಚ್. ಪಮ್ಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.