ರೋಣ: ವಿದೇಶಿಗರ ಸೋಗಿನಲ್ಲಿ ಬಂದು 18 ಸಾವಿರ ಎಗರಿಸಿದ ಚಾಲಾಕಿಗಳು..!

By Kannadaprabha NewsFirst Published Jul 16, 2020, 10:40 AM IST
Highlights

ಜುವೇಲರಿ ಶಾಪ್ ಮಾಲೀಕನಿಗೆ ವಂಚನೆ ಮಾಡಿದ ಕಳ್ಳರು| ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ನಡೆದ ಘಟನೆ| ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ ಅಂಗಡಿ ಮಾಲೀಕ|

ರೋಣ(ಜು.16): ಬಂಗಾರದ ಮೂಗುತಿ (ಮೂಗಬೊಟ್ಟು) ಖರೀದಿಗಾಗಿ ವಿದೇಶಿಗರ ಸೋಗಿನಲ್ಲಿ ಜುವೇಲರಿ ಶಾಪ್‌ಗೆ ನುಗ್ಗಿದ ಇಬ್ಬರು ಚಾಲಾಕಿಗಳು, ಮಾಲೀಕನಿಗೆ ಮಂಕುಬೂದಿ ಎರಚಿ ಬರೊಬ್ಬರಿ 18 ಸಾವಿರ ಎಗರಿಸಿಕೊಂಡು ಪರಾರಿಯಾದ ಘಟನೆ ಪಟ್ಟಣದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

ಪಟ್ಟಣದ ಮುಲ್ಲನಬಾವಿ ವೃತ್ತದಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ಜುವೆಲರ್ಸ್‌ ಶಾಪ್‌ಗೆ ವಿದೇಶಿಗರ ಸೋಗಿನಲ್ಲಿ ಓರ್ವ ಯುವತಿ, ಒಬ್ಬ ಯುವಕ ಬಂದಿದ್ದಾರೆ. ಒಳ ಬಂದಾಗಿನಿಂದ ಹಿಡಿದು ಶಾಪ್‌ನಿಂದ ಹೊರ ಹೋಗುವವರೆಗೂ ಇಂಗ್ಲಿಷ್‌ (ವಿದೇಶಿ ಶೈಲಿ ಭಾಷೆ) ನಲ್ಲಿಯೇ ಮಾತನಾಡಿದ್ದಾರೆ. ಬಂಗಾರದ ಮೂಗುತಿ ಬೇಕೆಂದು ಜುವೆಲರ್ಸ್‌ ಮಾಲೀಕ ಕೃಷ್ಣ ಬಾಕಳೆ ಅವರಲ್ಲಿ ಕೇಳಿದ್ದಾರೆ. ವಿವಿಧ ತರಹದ ಮೂಗುತಿ ತೋರಿಸಿದ್ದು, ಇದರಲ್ಲಿ ಒಂದು ಮೂಗುತಿ ಆಯ್ಕೆ ಮಾಡಿದ್ದಾರೆ. ಮೂಗುತಿ ತಗಲುವ ಹಣ ಕೊಡಲು ಮುಂದಾಗಿದ್ದಾರೆ. ಆಗ ಶಾಪ್‌ ಮಾಲಿಕ ಕೃಷ್ಣ ಅವರು, ಇದು ವಿದೇಶಿ ಕರೆನ್ಸಿ ನೋಟು, ಈ ನೋಟು ನಮ್ಮ ದೇಶದಲ್ಲಿ ಚಲಾವಣೆಯಿಲ್ಲ, ಭಾರತ ದೇಶದ ನೋಟು ಕೊಡಿ ಎಂದಿದ್ದಾರೆ. ನಮ್ಮಲ್ಲಿ ಭಾರತದ ನೋಟು ಇಲ್ಲ, ಈ ನೋಟನ್ನು ತಗೆದುಕೊಳ್ಳಿ, ಭಾರತದ ನೋಟುಗಳು ಹೇಗಿರುತ್ತವೆ ತೋರಿಸಿ ಎಂದು ಪುಸಲಾಯಿಸಿದ್ದಾರೆ.

ದಾಬಸ್‌ಪೇಟೆ: ದೇವಸ್ಥಾನದ ಹುಂಡಿ ಒಡೆದು ದೇವಿ ತಾಳಿ ಕದ್ದ ಖದೀಮರು

ಆಗ ಮಾಲೀಕ, ಮೊದಲು ತನ್ನ ಜೇಬಿನಲ್ಲಿದ್ದ . 2000 ಮುಖ ಬೆಲೆಯ 12 ನೋಟು ತೋರಿಸಿದ್ದಾನೆ. ಅಗ, ಅದೇಗೆ ಇರುತ್ತವೆ ಎಂದು ಅವುಗಳನ್ನು ತನ್ನ ಕೈಯಲ್ಲಿಡಿದುಕೊಂಡು ನೋಡಿ ಮರಳಿ ಕೊಟ್ಟಿದ್ದಾನೆ. ಈ ವೇಳೆ ತನ್ನ ಕೈ ಚಳಕದಿಂದ ಚಾಲಾಕಿ ಕಳ್ಳ 3 ನೋಟುಗಳನ್ನು (6 ಸಾವಿರ) ಎಗರಿಸಿ, ತಕ್ಷಣವೇ ತನ್ನ ಜೇಬಿಗಿಳಿಸಿದ್ದಾನೆ. ಉಳಿದ ನೋಟುಗಳನ್ನು ಮಾಲೀಕನ ಜೇಬಿಗೆ ಹಾಕಿಕೊಳ್ಳುವಂತೆ ತಾನೇ ಒತ್ತಾಯಿಸಿದ್ದಾನೆ.

ಬಳಿಕ ಮತ್ತೆ ಯಾವದಾದರೂ ನೋಟುಗಳಿವೆಯೆ? ಎಂದು ಕೇಳಿದ್ದಾನೆ. ಆಗ ಮಾಲೀಕ ಕೃಷ್ಣ, 5 ನೋಟುಗಳು ಈ ರೀತಿಯಾಗಿರುತ್ತವೆ ಎಂದು ಒಂದೊಂದೇ ನೋಟುಗಳನ್ನು ತೋರಿಸಿದ್ದಾನೆ. ಆಗ ಚಾಲಾಕಿ ಕಳ್ಳ, ನಿಮ್ಮಲ್ಲಿ ಎಷ್ಟು ನೋಟುಗಳಿವೆಯೋ ಅಷ್ಟನ್ನು ತೋರಿಸಿ ಎಂದಿದ್ದಾನೆ. ಆಗ ಮಾಲೀಕ, ತನ್ನ ಅಂಗಡಿಯಲ್ಲಿದ್ದ 500 ನೋಟಿನ . 25 ಸಾವಿರ ಗಳನ್ನು ತೋರಿಸಿದ್ದಾನೆ. ಆಗ ಚಾಲಕಿ ಕಳ್ಳ ಆ ನೋಟಿನ ಕಂತೆಯನ್ನು ಕೈಯಲ್ಲಿಡಿದು, ಅದರಲ್ಲಿನ ನಂಬರ್‌ ನೋಡುವ ರೀತಿ ನಟಿಸಿದ್ದಾನೆ. ಆಗ ಮಾಲಿಕನ ಗಮನವನ್ನು ಪಕ್ಕದಲ್ಲಿ ನಿಂತಿದ್ದ ಚಾಲಾಕಿ ಕಳ್ಳಿ ಬೇರೆಡೆ ಗಮನ ಸೆಳೆದಿದ್ದಾಳೆ. ಆಗ ತಕ್ಷಣವೇ ಆ ನೋಟಿನ ಕಂತೆಯಿಂದ ಒಟ್ಟು 12 ಸಾವಿರಗಳನ್ನು ಎಗರಿಸಿದ್ದಾನೆ. ಈ ಎಲ್ಲ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ಬಳಿಕ ಚಾಲಾಕಿಗಳು, ಬ್ಯಾಂಕ್‌ಗೆ ತೆರಳಿ, ಕರೆನ್ಸಿ ಬದಲಿಸಿಕೊಂಡು ಬರುವದಾಗಿ ಹೇಳಿ, ಅಲ್ಲಿಂದ ಕಾಲ್ಕಿತ್ತಿದ್ದಾರೆ. ಕೆಲ ನಿಮಿಷಗಳ ಬಳಿಕ ಮಾಲಿಕ ಕೃಷ್ಣಾ ತಮ್ಮಲ್ಲಿದ್ದ ನೋಟುಗಳನ್ನು ಎಣಿಸಿಕೊಂಡಿದ್ದು, ಒಟ್ಟು 18 ಸಾವಿರ ಮಂಗ ಮಾಯವಾಗಿವೆ ಎಂದು ಗೊತ್ತಾಗಿದೆ.

ಪೊಲೀಸರಿಗೆ ದೂರು:

ಕೂಡಲೇ ಪಟ್ಟಣದ ಪೊಲೀಸ್‌ ಠಾಣೆಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಪೊಲೀಸರು ಸಿಸಿ ಟಿವಿ ಫುಟೇಜ್‌ ತರಿಸಿ ಚೆಕ್‌ ಮಾಡಿದ್ದಾರೆ. ಆದರೆ, ಚಾಲಾಕಿ ಕಳ್ಳರು ಸಿಸಿ ಟಿವಿಯಲ್ಲಿ ಸ್ಪಷ್ಟವಾಗಿ ಕಾಣದೇ ಮಣ್ಣೆರಚುವ ರೀತಿಯಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ. ಈ ಕುರಿತು ದೂರು ನೀಡಿ, ಚಾಲಾಕಿ ಕಳ್ಳರನ್ನು ಪತ್ತೆ ಮಾಡುವುದಾಗಿ ಪೊಲೀಸರು ಕೃಷ್ಣಾ ಬಾಕಳೆ ಅವರಿಗೆ ತಿಳಿಸಿದ್ದಾರೆ.
 

click me!