ಪೊಲೀಸರ ಮೇಲೆ ಲಾಂಗ್ ಬೀಸಿದ ಆರೋಪಿ: ಸಾವಿನಿಂದ ಜಸ್ಟ್ ಬಚಾವ್..!

By Kannadaprabha News  |  First Published Jul 16, 2020, 9:54 AM IST

ಕೊಲೆ ಆರೋಪಿಯನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೆಯೇ ಆರೋಪಿಯೊಬ್ಬ ಲಾಂಗ್ ಬೀಸಿದ್ದಾನೆ. ಪರಿಣಾಮ ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ಬಾಳೆಹೊನ್ನೂರು(ಜು.16): ಕೊಲೆ ಯತ್ನ ಸೇರಿದಂತೆ 2 ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲು ಮುಂದಾದ ವೇಳೆ ಆತ ಲಾಂಗ್‌ ಬೀಸಿದ ಪರಿಣಾಮ ಇಬ್ಬರು ಪೊಲೀಸರು ಪ್ರಾಣಾಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಬಾಳೆಹೊನ್ನೂರು ಠಾಣಾ ವ್ಯಾಪ್ತಿಯ ಮಾಗಲು ಗ್ರಾಮದಲ್ಲಿ ಸೋಮವಾರ ನಡೆದಿದೆ.

ಘಟನೆಯಲ್ಲಿ ಪೊಲೀಸರಾದ ಬಸವರಾಜ್‌ ಹಾಗೂ ಬಿ.ಎಲ್‌. ಗೌಡ ಅವರಿಗೆ ಕೈ, ಹೊಟ್ಟೆಯ ಭಾಗಕ್ಕೆ ಪೆಟ್ಟಾಗಿದ್ದು, ಬಾಳೆಹೊನ್ನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕಾನ್‌ಸ್ಟೇಬಲ್‌ ಬಸವರಾಜ್‌ ನೀಡಿದ ದೂರಿನ ಅನ್ವಯ ಪೂರ್ಣೇಶ್‌ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣವನ್ನು ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Tap to resize

Latest Videos

ಘಟನೆ ವಿವರ:

ದೇವದಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಗಲು ನಿವಾಸಿ ಎಂ.ಕೆ. ಪೂರ್ಣೇಶ ಜ.31ರಂದು ಕಡಬಗೆರೆಯಲ್ಲಿನ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ. ಆತನ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಕೆಲ ದಿನಗಳ ನಂತರ ಊರಿಗೆ ಮರಳಿದ ಆತ ಕತ್ತಿ ಹಿಡಿದು ರಾಜಾರೋಷವಾಗಿ ತಿರುಗಾಡುತ್ತಿದ್ದ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದಂತೆ ಸ್ಥಳೀಯರಿಗೆ ಬೆದರಿಸುತ್ತಿದ್ದ ಎನ್ನಲಾಗಿದೆ.

ಪೊಲೀಸರಿಗೆ ಮಾಹಿತಿ ನೀಡಿದ ಎಂದು ಪೂರ್ಣೇಶ್‌ ಆರೋಪಿಸಿ ಜೂ.6ರಂದು ಹ್ಯಾರಂಬಿ ಗ್ರಾಮದ ಪ್ರೀತಮ್‌ ಎಂಬಾತನ ಕೈ ಕಡಿದು ಹಲ್ಲೆ ನಡೆಸಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಳ್ಳುತ್ತಿದ್ದಂತೆ ಆರೋಪಿಯನ್ನು ಆರು ತಿಂಗಳಾದರೂ ಹಿಡಿಯದ ಕಾರಣ ಪೊಲೀಸರು ವಿರುದ್ಧ ಗ್ರಾಮಸ್ಥರು ಹರಿಹಾಯ್ದಿದ್ದರು. ಆರೋಪಿ ಕತ್ತಿ ಹಿಡಿದು ಸುತ್ತಾಡುತ್ತಿದ್ದ ಕಾರಣ ಇಡೀ ಊರಿನಲ್ಲಿ ಭಯದ ವಾತಾವರಣ ಮೂಡಿದ್ದಲ್ಲದೆ ಆಕ್ರೋಶಕ್ಕೂ ಕಾರಣವಾಗಿತ್ತು.

ಶಿವಮೊಗ್ಗದಲ್ಲಿ ರೌಡಿಶೀಟರ್‌ ಬರ್ಬರ ಹತ್ಯೆ..!

ಅನಂತರ ಎಚ್ಚೆತ್ತ ಠಾಣಾಧಿಕಾರಿ ತಲಾ ಮೂರು ಜನರ ಎರಡು ಪೊಲೀಸ್‌ ತಂಡ ರಚಿಸಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಕಳೆದೊಂದು ವಾರದಿಂದ ಪೊಲೀಸರ ತಂಡ ಕಾರ್ಮಿಕರಂತೆ, ಗ್ರಾಮೀಣರಂತೆ ಲುಂಗಿ, ಚಡ್ಡಿ ಧರಿಸಿ ಊರಿನ ಎಲ್ಲೆಡೆ ಹುಡುಕಾಟದಲ್ಲಿ ತೊಡಗಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಸೋಮವಾರ ಮಧ್ಯಾಹ್ನ ಪೊಲೀಸರ ತಂಡ ಮಾಗಲು ಕೆಂಚರ ದೇವಸ್ಥಾನದ ಬಳಿ ತೆರಳಿದಾಗ ಆರೋಪಿ ಒಳಭಾಗದಲ್ಲಿ ಮಲಗಿದ್ದನ್ನು ಕಂಡುಹಿಡಿಯಲು ಮುಂದಾಗುತ್ತಿದ್ದಂತೆ ಆತ ಕತ್ತಿ ಬೀಸಿದ. ಇದರ ಪರಿಣಾಮ ಪೊಲೀಸರಾದ ಬಸವರಾಜ್‌ ಹಾಗೂ ಬಿ.ಎಲ್‌. ಗೌಡ ಅವರಿಗೆ ಕೈ, ಹೊಟ್ಟೆಯ ಭಾಗಕ್ಕೆ ಪೆಟ್ಟಾಗಿದೆ. ಬಾಳೆಹೊನ್ನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಅಪಾಯದಿಂದ ಪಾರಾಗಿದ್ದಾರೆ.

ಕಾನ್‌ಸ್ಟೇಬಲ್‌ ಬಸವರಾಜ್‌ ನೀಡಿದ ದೂರಿನ ಅನ್ವಯ ಪೂರ್ಣೇಶ್‌ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣವನ್ನು ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಮೂರು ಪ್ರಕರಣಗಳಲ್ಲದೆ ಆತನ ಮೇಲೆ ಇನ್ನೆರಡು ಹಳೆಯ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪಿಎಸ್‌ಐ ನೀತು ಆರ್‌. ಗುಡೆ ನೇತೃತ್ವದಲ್ಲಿ ಸಿಬ್ಬಂದಿ ಗಂಗಶೆಟ್ಟಿ, ಮಂಜೇಗೌಡ, ಯಾಕೂಬ್‌ ತಾಂಬೂಲಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ರೌಡಿ ಶೀಟ್‌ ತೆರೆಯಲು ಆಗ್ರಹ: ಆತನ ಮೇಲೆ 5ಕ್ಕೂ ಅಧಿಕ ಪ್ರಕರಣಗಳಿದ್ದು, ಊರಿನಲ್ಲಿ ಅಶಾಂತಿ ಉಂಟು ಮಾಡುವ ಕಾರಣ ಆತನ ಮೇಲೆ ರೌಡಿ ಶೀಟ್‌ ತೆರೆಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

click me!