1 ಕೋಟಿ ಮೌಲ್ಯದ ಡ್ರಗ್ಸ್‌ ವಶ: ಇಬ್ಬರು ವಿದೇಶಿ ಪೆಡ್ಲರ್‌ಗಳ ಬಂಧನ

By Kannadaprabha News  |  First Published Dec 25, 2020, 7:27 AM IST

ವರ್ಷಾಚರಣೆ ವೇಳೆ ಮಾರಲು ನೈಜೀರಿಯಾ ಪ್ರಜೆಗಳಿಂದ ಸಂಗ್ರಹ| ಡಾರ್ಕ್ ವೆಬ್‌ನಲ್ಲಿ ಖರೀಸಿದಿ ಬ್ರಿಟನ್‌ನಿಂದ ತರಿಸಿದ್ದ ಡ್ರಗ್ಸ್‌| ಸಿಸಿಬಿ ಬಲೆಗೆ ಬಿದ್ದ ಡ್ರಗ್ಸ್‌ ಜಾಲದಲ್ಲಿ ತೊಡಗಿದ್ದ ಮತ್ತೊಂದು ವಿದೇಶಿ ಪೆಡ್ಲರ್‌ಗಳ ತಂಡ| ಮಾದಕ ದ್ರವ್ಯ ಇಟ್ಟುಕೊಂಡು ಗಿರಾಕಿಗಳಿಗೆ ಹುಡುಕಾಟ ನಡೆಸುತ್ತಿದ್ದಾಗ ಆರೋಪಿಗಳ ಬಂಧನ|  


ಬೆಂಗಳೂರು(ಡಿ.25): ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಮತ್ತೇರಿಸಲು ಸಜ್ಜಾಗಿರುವ ಡ್ರಗ್ಸ್‌ ಜಾಲದ ವಿರುದ್ಧ ರಾಜಧಾನಿ ಖಾಕಿ ಕಾರ್ಯಾಚರಣೆ ಮುಂದುವರೆದಿದ್ದು, ಈಗ ವಿದೇಶಿ ಮೂಲದ ಇಬ್ಬರು ಪೆಡ್ಲರ್‌ಗಳನ್ನು ಸೆರೆ ಹಿಡಿದು ಒಂದು ಕೋಟಿ ರುಪಾಯಿ ಮೌಲ್ಯದ ಡ್ರಗ್ಸ್‌ (ಮಾದಕ ದ್ರವ್ಯ) ಅನ್ನು ಪೂರ್ವ ವಿಭಾಗದ ಪೊಲೀಸರು ಜಪ್ತಿ ಮಾಡಿದ್ದಾರೆ.

ಭಾರತೀನಗರದ ಡಾಂಚುಕ್ಸ್‌ ಒಕೆಕೆ ಅಲಿಯಾಸ್‌ ಡಾಮಿನಿನಿಕ್‌ ಹಾಗೂ ಬಿದರಹಳ್ಳಿಯ ಸೆಲೆಸ್ಟಿನ್‌ ಅನುಗ್ವಾ ಅಲಿಯಾಸ್‌ ಒಮೆಮ ಬಂಧಿತರಾಗಿದ್ದು, ಅವರಿಂದ 3300 ಎಂಡಿಎಂಎ ಮಾತ್ರೆ, 600 ಗ್ರಾಂ ಎಸ್ಟೇಸ್ಸಿ ಪುಡಿಯನ್ನು ವಶಕ್ಕೆ ಪಡೆಯಲಾಗಿದೆ. ಸಿ.ವಿ.ರಾಮನ್‌ ನಗರದ ಬಾಗ್ಮಮನೆ ಟೆಕ್‌ ಪಾರ್ಕ್ ಸಮೀಪ ಆರೋಪಿಗಳು ಡ್ರಗ್ಸ್‌ ಮಾರಾಟಕ್ಕೆ ಸಜ್ಜಾಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಬಂಧಿಸಲಾಗಿದೆ ಎಂದು ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ತಿಳಿಸಿದ್ದಾರೆ.
ಆರೋಪಿಗಳ ಬಳಿ ಪಾರ್ಸ್‌ಪೋರ್ಟ್‌, ವೀಸಾ ದೊರೆತಿಲ್ಲ. ಹೊಸ ವರ್ಷಾಚರಣೆ ವೇಳೆ ಡ್ರಗ್ಸ್‌ಗೆ ಹೆಚ್ಚಿನ ಬೇಡಿಕೆ ಹಿನ್ನೆಲೆಯಲ್ಲಿ ಡಾರ್ಕ್ ವೆಬ್‌ಸೈಟ್‌ನಿಂದ ಡ್ರಗ್ಸ್‌ ಖರೀದಿಸಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಆದರೆ, ವಿದೇಶಿ ಅಂಚೆ ಕಚೇರಿ ಮೂಲಕ ಹೇಗೆ ಪೆಡ್ಲರ್‌ಗಳ ಡ್ರಗ್ಸ್‌ ತಲುಪಿದೆ ಬಗ್ಗೆ ತನಿಖೆಗೆ ನಡೆದಿದೆ. ಕೆಲವು ಪ್ರಕರಣಗಳಲ್ಲಿ ಆರೋಪಿಗಳ ಬಂಧನಕ್ಕೆ ಅಂಚೆ ಕಚೇರಿ ಅಧಿಕಾರಿಗಳು ಸಹಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ.

Latest Videos

undefined

ಪಾರ್ಟಿ ಕಿಕ್ಕಿಳಿಸಿದ ಪೊಲೀಸರು:

ಹೊಸ ವರ್ಷದ ಪಾರ್ಟಿಗಳಲ್ಲಿ ಕಿಕ್ಕೇರಿಸುವ ಡ್ರಗ್ಸ್‌ ಜಾಲದ ಮೇಲೆ ಪೊಲೀಸರು ನಿಗಾವಹಿಸಿದ್ದಾರೆ. ನ್ಯೂ ಇಯರ್‌ ಪಾರ್ಟಿ ಸಲುವಾಗಿ ಕೋಟ್ಯಂತರ ಮೌಲ್ಯದ ಡ್ರಗ್ಸ್‌ ಪೂರೈಕೆಗೆ ಡ್ರಗ್ಸ್‌ ಮಾಫಿಯಾ ಸಜ್ಜಾಗಿದೆ. ಅಂತೆಯೇ ಕೆಲ ದಿನಗಳ ಹಿಂದೆ ಡಾರ್ಕ್ ನೆಟ್‌ ವೆಬ್‌ಸೈಟ್‌ನಲ್ಲಿ ಬ್ರಿಟನ್‌ನಿಂದ ಡ್ರಗನ್ನು ಪಾರ್ಸಲ್‌ ಮೂಲಕ ಬೆಂಗಳೂರಿಗೆ ಆರೋಪಿಗಳು ತರಿಸಿಕೊಂಡಿದ್ದರು. ಈ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಬೈಯಪ್ಪನಹಳ್ಳಿ ಪೊಲೀಸರು ಮತ್ತು ಹಲಸೂರು ಉಪವಿಭಾಗದ ಅಪರಾಧ ಪತ್ತೆ ದಳ ನೇತೃತ್ವದಲ್ಲಿ ಪೆಡ್ಲರ್‌ಗಳ ಪತ್ತೆಗೆ ಕಾರ್ಯಾಚರಣೆ ನಡೆಸಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕ್ರಿಸ್‌ಮಸ್- ನ್ಯೂಇಯರ್‌ಗೆ ಡ್ರಗ್ಸ್‌ ಮಾರಾಟ: ನೈಜೀರಿಯನ್ ಪ್ರಜೆ ಸೇರಿ ಮೂವರ ಬಂಧನ

ಸಿ.ವಿ.ರಾಮನ್‌ನಗರದ ಬಾಗ್ಮನೆ ಟೆಕ್‌ಪಾರ್ಕ್ ಹತ್ತಿರ ಗ್ರಾಹಕರಿಗೆ ಡ್ರಗ್ಸ್‌ ಪೂರೈಕೆಗೆ ಆರೋಪಿಗಳು ಸನ್ನದ್ಧರಾಗಿದ್ದರು. ತಕ್ಷಣ ಎಚ್ಚೆತ್ತ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಲಾಯಿತು. ನೈಜೀರಿಯಾ ಮೂಲದ ಆರೋಪಿಗಳು, ವ್ಯಾಪಾರದ ಸೋಗಿನಲ್ಲಿ ಪಾಸ್‌ಪೋರ್ಟ್‌, ವೀಸಾ ಪಡೆದು ಬೆಂಗಳೂರಿಗೆ ಬಂದಿದ್ದರು. ವೀಸಾ ಅವಧಿ ಮುಗಿದ ಬಳಿಕವು ಕಾನೂನುಬಾಹಿರವಾಗಿ ನೆಲೆಯೂರಿ ಡ್ರಗ್ಸ್‌ ದಂಧೆಯಲ್ಲಿ ತೊಡಗಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಸಿಸಿಬಿ ಬಲೆಗೆ ಮೂವರು

ಡ್ರಗ್ಸ್‌ ಜಾಲದಲ್ಲಿ ತೊಡಗಿದ್ದ ಮತ್ತೊಂದು ವಿದೇಶಿ ಪೆಡ್ಲರ್‌ಗಳ ತಂಡವು ಸಿಸಿಬಿ ಬಲೆಗೆ ಬಿದ್ದಿದೆ. ನೈಜೀರಿಯಾದ ಉಡೆಉಜಾ, ಕೇರಳ ಮೂಲದ ಕೆ.ಪ್ರಸೋನ್‌ ಹಾಗೂ ಆನಂದ್‌ ಚಂದ್ರನ್‌ ಬಂಧಿತರಾಗಿದ್ದು, ಆರೋಪಿಗಳಿಂದ 100 ಗ್ರಾಂ ಎಂಡಿಎಂಎ, ಕಾರು ಹಾಗೂ 1 ಬೈಕ್‌ ಜಪ್ತಿ ಮಾಡಲಾಗಿದೆ. ಯಲಹಂಕದ ರಾಮಕೃಷ್ಣಪ್ಪ ಬಿಲ್ಡಿಂಗ್‌ ಮುಂಭಾಗ 5ನೇ ಕ್ರಾಸ್‌ ಕಟ್ಟಿಗೇನಹಳ್ಳಿಯಲ್ಲಿ ಕಾರಿನಲ್ಲಿ ಮಾದಕ ದ್ರವ್ಯ ಇಟ್ಟುಕೊಂಡು ಗಿರಾಕಿಗಳಿಗೆ ಹುಡುಕಾಟ ನಡೆಸುತ್ತಿದ್ದಾಗ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
 

click me!