ಖಾಸಗಿ ಆಸ್ಪತ್ರೆ ನರ್ಸ್‌ಗಳಿಂದಲೇ ರೆಮ್‌ಡಿಸಿವಿರ್‌ ಮಾರಾಟಕ್ಕೆ ಯತ್ನ..!

By Kannadaprabha News  |  First Published Apr 29, 2021, 7:42 AM IST

ಸಿಕ್ಕಿಬಿದ್ದ ಖಾಸಗಿ ಆಸ್ಪತ್ರೆ ಶುಶ್ರೂಷಕರು| ಆರೋಪಿಗಳಿಂದ ಏಳು ವೈಯಲ್‌ ರೆಮ್‌ಡಿಸಿವಿರ್‌ ಜಪ್ತಿ| ಹಣದಾಸೆಗೆ ತಲಾ ಒಂದಕ್ಕೆ 20 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ ಆರೋಪಿಗಳು| ಸುಲಭವಾಗಿ ಹಣ ಸಂಪಾದನೆ ಮಾಡಲು ಸಂಚು ರೂಪಿಸಿದ್ದ ನರ್ಸ್‌ಗಳು| 


ಬೆಂಗಳೂರು(ಏ.29): ಕಾಳಸಂತೆಯಲ್ಲಿ ರೆಮ್‌ಡಿಸಿವಿರ್‌ ಮಾರಾಟಕ್ಕೆ ಯತ್ನಿಸಿದ ಖಾಸಗಿ ಆಸ್ಪತ್ರೆಯ ಮೂವರು ಶುಶ್ರೂಷಕರನ್ನು ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿ ಸಿಸಿಬಿ ಪೊಲೀಸರು ರೆಡ್‌ ಹ್ಯಾಂಡ್‌ ಆಗಿ ನಗರದಲ್ಲಿ ಸೆರೆ ಹಿಡಿದಿದ್ದಾರೆ.

ಚಿಕ್ಕಬೆಟ್ಟಹಳ್ಳಿಯ ಬಿ.ಟಿ.ಲಿಂಗರಾಜು, ಯಲಂಹಕದ ಕುಮಾರಸ್ವಾಮಿ ಹಾಗೂ ದಾವಣಗೆರೆಯ ಬಸವರಾಜು ಬಂಧಿತರು. ಆರೋಪಿಗಳಿಂದ ಏಳು ವೈಯಲ್‌ ರೆಮ್‌ಡಿಸಿವಿರ್‌ ಜಪ್ತಿ ಮಾಡಲಾಗಿದೆ. ಒಮೆಗಾ ಆಸ್ಪತ್ರೆಯಲ್ಲಿ ಲಿಂಗರಾಜು, ಅನುಪಮ ಆಸ್ಪತ್ರೆಯಲ್ಲಿ ಕುಮಾರಸ್ವಾಮಿ ಮತ್ತು ಆಸ್ಟ್ರಾ ಆಸ್ಪತ್ರೆಯಲ್ಲಿ ಬಸವರಾಜು ಶುಶ್ರೂಷಕರಾಗಿದ್ದರು. ಶಂಕಪುರ ಸಮೀಪದ ಡಾ. ಬಿ.ಎನ್‌.ಸುಬ್ರಹ್ಮಣ್ಯ ಸರ್ಕಲ್‌ ಬಳಿ ನಿಂತು ಮಂಗಳವಾರ ಗ್ರಾಹಕರಿಗೆ ರೆಮ್‌ ಡಿಸಿವಿಆರ್‌ ಮಾರಾಟಕ್ಕೆ ಸಜ್ಜಾಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಇನ್‌ಸ್ಪೆಕ್ಟರ್‌ ಗಿರೀಶ್‌ ನಾಯಕ್‌ ನೇತೃತ್ವದ ತಂಡ, ಮಪ್ತಿಯಲ್ಲಿ ಗ್ರಾಹಕರಂತೆ ಹೋಗಿ ಆರೋಪಿಗಳನ್ನು ಬಲೆಗೆ ಬೀಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos

undefined

ಗೂಂಡಾ ಕಾಯ್ದೆಯಡಿ 9 ರೌಡಿಶೀಟ​ರ್‌ಗಳ ಬಂಧನ

ನಾವು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಬಳಿ 6ರಿಂದ 7 ವಯಲ್‌ ರೆಮ್‌ಡಿಸಿವಿರ್‌ ಇವೆ. ತಲಾ ಒಂದಕ್ಕೆ 20 ಸಾವಿರ ನೀಡಿದರೆ ಕೊಡುತ್ತೇವೆ ಎಂದು ಗ್ರಾಹಕರಿಗೆ ಆರೋಪಿಗಳು ಬೇಡಿಕೆ ಇಟ್ಟಿದ್ದರು. ಬಳಿಕ ಹಣ ಕೊಡುವುದಾಗಿ ಹೇಳಿ ಮಾಲು ತರಿಸಿಕೊಂಡು ಜಪ್ತಿ ಮಾಡಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಆರೋಪಿಗಳು ಸ್ನೇಹಿತರಾಗಿದ್ದು, ಮಾರುಕಟ್ಟೆಯಲ್ಲಿ ರೆಮ್‌ಡಿಸಿವಿರ್‌ ಅಭಾವ ಆಗಿರುವುದು ತಿಳಿದಿತ್ತು. ಇದರ ಲಾಭ ಪಡೆದು ಸುಲಭವಾಗಿ ಹಣ ಸಂಪಾದನೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು. ಇನ್ನು ಜೆ.ಪಿ.ನಗರದ ಆಸ್ಟ್ರಾ ಆಸ್ಪತ್ರೆಯ ಶುಶ್ರೂಷಕ ಬಸವರಾಜು, ಆಸ್ಪತ್ರೆಯಿಂದ ರೆಮ್‌ಡಿಸಿವಿರ್‌ ಕದ್ದು ತಂದು ತನ್ನ ಗೆಳೆಯರಾದ ಲಿಂಗರಾಜು ಹಾಗೂ ಕುಮಾರಸ್ವಾಮಿ ನೆರವಿನಿಂದ ಕಾಳ ಸಂತೆಯಲ್ಲಿ ಮಾರಾಟಕ್ಕೆ ಯತ್ನಿಸಿದ್ದ. ಇದರ ತಲಾ ವಯಲ್‌ ಬೆಲೆ 3,400 ದಿಂದ 3950 ಬೆಲೆ ಇದೆ. ಆದರೆ ಹಣದಾಸೆಗೆ ತಲಾ ಒಂದಕ್ಕೆ 20 ಸಾವಿರಕ್ಕೆ ಆರೋಪಿಗಳು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
 

click me!