ವೈದ್ಯಯ ತಾಯಿಯ ಮನೆಯಲ್ಲಿ ನಡೆದಿದ್ದ ದರೋಡೆ, ಘಟನೆ ನಡೆದು 48 ತಾಸಿನಲ್ಲಿಯೇ ಆರೋಪಿಗಳ ಬಂಧನ, 66 ಗ್ರಾಂ ಚಿನ್ನ, 1.5 ಲಕ್ಷ ನಗದು ಜಪ್ತಿ.
ಬೆಂಗಳೂರು(ಜ.11): ಮನೆಯಲ್ಲಿ ಒಂಟಿಯಾಗಿದ್ದ ವೈದ್ಯೆಯ ತಾಯಿಯ ಕೈ-ಕಾಲು ಕಟ್ಟಿ ದರೋಡೆ ಪ್ರಕರಣವನ್ನು ಭೇದಿಸಿರುವ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು, ತಂದೆ-ಮಗ ಸೇರಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಒಡಿಸ್ಸಾ ಮೂಲದ ಜ್ಞಾನರಂಜನ್ ನಾಥ್ ಅಲಿಯಾಸ್ ಬಾಪಿ(36), ಶ್ರೀಕಾಂತ್ ದಾಶ್(40), ಸುಭಾಷ್ ಬಿಸ್ವಾಲ್(41), ಬಿಷ್ಣು ಮೋಹನ್ ಖಟುವಾ(35), ಬಿಷ್ಣು ಚರಣ್ ಬೆಹೆರಾ(61) ಹಾಗೂ ಸುದಾಂಶು ಬೆಹೆರಾ(21) ಬಂಧಿತರು. ಆರೋಪಿಗಳಿಂದ 3.50 ಲಕ್ಷ ಮೌಲ್ಯದ 66 ಗ್ರಾಂ ತೂಕದ ಚಿನ್ನಾಭರಣ, .1.50 ಲಕ್ಷ ನಗದು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜ.3ರಂದು ಕುಮಾರಸ್ವಾಮಿ ಲೇಔಟ್‌ನ 6ನೇ ಮುಖ್ಯರಸ್ತೆ 6ನೇ ಅಡ್ಡರಸ್ತೆಯ ನಿವಾಸಿ ಶ್ರೀಲಕ್ಷ್ಮಿ(57) ಅವರ ಮನೆಗೆ ನಾಲ್ವರು ದುಷ್ಕರ್ಮಿಗಳು ನುಗ್ಗಿ ಆಕೆಯ ಕೈ-ಕಾಲು ಕಟ್ಟಿಬಾಯಿಗೆ ಪ್ಲಾಸ್ಟ್ ಹಾಕಿ ಬೆದರಿಸಿ, ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಸಂತ್ರಸ್ತೆಯ ಪುತ್ರಿ, ವೈದ್ಯೆ ವೈಷ್ಣವಿ ಸುರೇಶ್ ಕುಮಾರಸ್ವಾಮಿ ಲೇಔಟ್ ಠಾಣೆಗೆ ದೂರು ನೀಡಿದ್ದರು. ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಎಂ.ಕೊಟ್ರೇಶಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಘಟನೆ ನಡೆದ 48 ತಾಸಿನೊಳಗೆ ಆರೋಪಿಗಳನ್ನು ಬಂಧಿಸಿದೆ.
Chikkamagaluru: ಬೆಳಗ್ಗೆ ಹಣ್ಣು ವ್ಯಾಪಾರ, ರಾತ್ರಿ ಮನೆ ದರೋಡೆ: ಖತರ್ನಾಕ್ ಕಳ್ಳನ ಬಳಿ ಗನ್ ಪತ್ತೆ
ವೈದ್ಯೆ ವೈಷ್ಣವಿ ಅವರು ಸುರೇಶ್ ಜೊತೆ ವಿವಾಹವಾಗಿದ್ದು, ಬಸವನಗುಡಿಯ ಲಾಲ್‌ಬಾಗ್ ವೆಸ್ಟ್ ಗೇಟ್ ಬಳಿಯ ಪತಿಯ ಮನೆಯಲ್ಲಿ ನೆಲೆಸಿದ್ದಾರೆ. ಗರ್ಭವತಿಯಾದ ಹಿನ್ನೆಲೆಯಲ್ಲಿ ತಿಂಗಳ ಹಿಂದೆ ಕುಮಾರಸ್ವಾಮಿ ಲೇಔಟ್‌ನಲ್ಲಿರುವ ತಾಯಿಗೆ ಮನೆಗೆ ಬಂದಿದ್ದರು. ಕುಮಾರಸ್ವಾಮಿ ಲೇಔಟ್‌ನಲ್ಲಿ ಕ್ಲಿನಿಕ್ ಹೊಂದಿದ್ದು, ತಾಯಿ ಮನೆಯಿಂದಲೇ ಕ್ಲಿನಿಕ್‌ಗೆ ಹೋಗಿ ಬರುತ್ತಿದ್ದರು. ಈ ಮನೆಯಲ್ಲಿ ತಾಯಿ ಶ್ರೀಲಕ್ಷ್ಮಿ ಹಾಗೂ ಸಹೋದರ ಪವನ್‌ಕುಮಾರ್ ವಾಸವಾಗಿದ್ದಾರೆ.
ವಾಸಸ್ಥಳ ಬದಲಾವಣೆ ಬಗ್ಗೆ ತಾಯಿಗೆ ಮಾಹಿತಿ:
ಒಡಿಸ್ಸಾ ಮೂಲದ ಶಿವಾಜಿ ಬೆಹೆರಾ ಮತ್ತು ಆತನ ಪತ್ನಿ ಕಲ್ಪನಾ ಬೆಹರಾ ಹಲವು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದರು. ಪವನ್ ರಾಮಮೂರ್ತಿ ನಗರದಲ್ಲಿ ನಡೆಸುತ್ತಿರುವ ಹೋಟೆಲ್‌ನಲ್ಲಿ ಸಿಬ್ಬಂದಿ ಕೆಲಸ ಬಿಟ್ಟಿದ್ದರು. ಹೀಗಾಗಿ 25 ದಿನದ ಹಿಂದೆ ಹೋಟೆಲ್ ನೋಡಿಕೊಳ್ಳಲು ಶಿವಾಜಿ ಹಾಗೂ ಆತನ ಪತ್ನಿ ಕಲ್ಪನಾ ಅವರನ್ನು ರಾಮಮೂರ್ತಿ ನಗರಕ್ಕೆ ವಸತಿ ಬದಲಿಸಿದ್ದರು. ಈ ವಿಚಾರವನ್ನು ಕಲ್ಪನಾ ಒಡಿಸ್ಸಾದಲ್ಲಿರುವ ತನ್ನ ತಾಯಿಗೆ ತಿಳಿಸಿದ್ದಳು.
ಕಲ್ಪನಾಳ ತಮ್ಮ ಸುದಾಂಶು ಬೆಹರಾ ತಿಂಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದು ಗೊಬ್ಬಲಾಳದಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ. ಅಪರಾಧ ಹಿನ್ನೆಲೆವುಳ್ಳ ಬಿಷ್ಣು ಚರಣ್ ಬೆಹರಾ, ತನ್ನ ಮಗನಿಗೆ ಕರೆ ಮಾಡಿ ಕಲ್ಪನಾ ದಂಪತಿ ವಸತಿ ಬದಲಿಸುತ್ತಿರುವ ವಿಚಾರ ತಿಳಿಸಿದ್ದ. ಸುದಾಂಶು ಬೆಹರಾ ಒಡಿಸ್ಸಾಗೆ ಕರೆ ಮಾಡಿ ತನ್ನ ಸ್ನೇಹಿತರಾದ ಜ್ಞಾನರಂಜನ್ ನಾಥ್, ಶ್ರೀಕಾಂತ್ ದಾಶ್, ಸುಭಾಷ್ ಬಿಸ್ವಾಲ್, ಬಿಷ್ಣು ಮೋಹನ್ ಖಟುವಾ ಅವರನ್ನು ಡಿ.23ರಂದು ಬೆಂಗಳೂರಿಗೆ ಕರೆಸಿಕೊಂಡಿದ್ದ.
Dharwad: ಸಚಿವೆ ಶಶಿಕಲಾ ಜೊಲ್ಲೆ ಒಡೆತನದ ಬೀರೇಶ್ವರ ಬ್ಯಾಂಕ್ ಗೆ ಕನ್ನ!
ಜ.3ರಂದು ಸಂಜೆ 5ಕ್ಕೆ ವೈದ್ಯೆ ವೈಷ್ಣವಿ ಸುರೇಶ್ ಕ್ಲಿನಿಕ್‌ಗೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ತಾಯಿ ಶ್ರೀಲಕ್ಷ್ಮಿ ಒಂಟಿಯಾಗಿದ್ದರು. ಇದೇ ಸಮಯಕ್ಕೆ ಹೊಂಚು ಹಾಕಿ ಕುಳಿತ್ತಿದ್ದ ನಾಲ್ವರು ದುಷ್ಕರ್ಮಿಗಳು, ಏಕಾಏಕಿ ಮನೆಗೆ ನುಗ್ಗಿ ಶ್ರೀಲಕ್ಷ್ಮಿ ಅವರ ಕೈ-ಕಾಲು ಕಟ್ಟಿ, ಬಾಯಿಗೆ ಪ್ಲಾಸ್ಟರ್ ಹಾಕಿ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ರಾತ್ರಿ 9ಕ್ಕೆ ವೈಷ್ಣವಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿತ್ತು.
ಒಡಿಶಾದಲ್ಲಿ ಸೆರೆ
ದರೋಡೆ ಹಿನ್ನೆಲೆಯಲ್ಲಿ ಪೊಲೀಸರು ಘಟನಾ ಸ್ಥಳ ಹಾಗೂ ಸುತ್ತಮುತ್ತಲ ಸ್ಥಳಗಳ ಸುಮಾರು 100ಕ್ಕೂ ಅಧಿಕ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದ್ದರು. ಇಲ್ಲಿ ಸಿಕ್ಕ ಸುಳಿವು ಆಧರಿಸಿ ಕಾರ್ಯಾಚರಣೆಗೆ ಇಳಿದಾಗ ಆರೋಪಿಗಳು ರೈಲಿನಲ್ಲಿ ಒಡಿಸ್ಸಾಗೆ ಪರಾರಿ ಆಗುತ್ತಿರುವ ಮಾಹಿತಿ ಸಿಕ್ಕಿದೆ. ತಕ್ಷಣ ಪೊಲೀಸರು ಆರೋಪಿಗಳನ್ನು ಹಿಂಬಾಲಿಸಿ ಒಡಿಸ್ಸಾಗೆ ತೆರಳಿ ಬಂಧಿಸಿ ನಗರಕ್ಕೆ ಕರೆತರಲಾಗಿದೆ.