
ಕಲಬುರಗಿ (ಮೇ.06): ‘ನೀಟ್’ ಬರೆಯಲು ಬಂದಿದ್ದ ವಿದ್ಯಾರ್ಥಿಗೆ ಜನಿವಾರ ತೆಗೆಸಿದ ಪ್ರಕರಣದಲ್ಲಿ ಪರೀಕ್ಷಾ ಕೇಂದ್ರದ ಇಬ್ಬರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದು, ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ. ನಗರದ ಸೇಂಟ್ ಮೇರಿ ಕಾಲೇಜಿನ ಪರೀಕ್ಷಾ ಕೇಂದ್ರದೊಳಕ್ಕೆ ಪ್ರವೇಶಿಸುವ ಮುನ್ನ ಶ್ರೀಪಾದ ಸುಧೀರ್ ಪಾಟೀಲ್ ಎನ್ನುವ ವಿದ್ಯಾರ್ಥಿಗೆ ಜನಿವಾರ ತೆಗೆಯುವಂತೆ ಸೂಚಿಸಲಾಗಿತ್ತು.
ಈ ಕುರಿತು ಪರೀಕ್ಷಾ ಕೇಂದ್ರದಲ್ಲಿ ತಪಾಸಣೆ (ಫ್ರಿಸ್ಕಿಂಗ್) ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಹೊರಗುತ್ತಿಗೆ ಸಂಸ್ಥೆಗೆ ಸೇರಿದ್ದ ಸಿಬ್ಬಂದಿ ಗಮೇಶ ಹಾಗೂ ಶರಣಗೌಡ ಅವರ ವಿರುದ್ಧ ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆಗೆ ನೊಂದ ವಿದ್ಯಾರ್ಥಿ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿತ್ತು. ಅದರ ಆಧಾರದಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಾಯ್ದೆ 298ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಹೇಳಿದ್ದಾರೆ.
ಹೇಳಿದರೂ ಬಿಡಲಿಲ್ಲ- ವಿದ್ಯಾರ್ಥಿ: ‘ನನ್ನ ತಂದೆ ಜತೆಗೆ ಮಧ್ಯಾಹ್ನ 1 ಗಂಟೆಗೆ ಪರೀಕ್ಷಾ ಕೇಂದ್ರಕ್ಕೆ ತೆರಳಿದೆ. ತಪಾಸಣೆ ಮಾಡಿ ಕೈಗೆ ಕಟ್ಟಿದ್ದ ಕಾಶೀದಾರ ತೆಗೆದು ಬಾ ಅಂದಾಗ ಕತ್ತರಿಸಿಕೊಂಡು ಹೋದೆ. ಮೈಯೊಳಗೆ ದಾರ ಇದ್ದರೆ ತೆಗೆದು ಬಾ ಅಂದರು. ಆಗ ನಾನು, ಅದು ಧರ್ಮೋಪದೇಶ ಮಾಡಿ ಹಾಕಿರುವ ಜನಿವಾರ. ಅದನ್ನು ತೆಗೆಯಲಾಗದು ಎಂದು ಸಿಬ್ಬಂದಿಗೆ ಮನವರಿಕೆ ಮಾಡಿದರೂ ಅವರೂ ಕೇಳದೆ ತೆಗೆಸಿದರು.
ಅಕ್ರಮ ವಲಸಿಗರ ಬಗ್ಗೆ ಬಿಜೆಪಿ ರೆಬೆಲ್ಸ್ ವಾರ್ ರೂಂಗೆ 900+ ದೂರು!
ಅಳುತ್ತಲೇ ಒಳಗೆ ಹೋದ ನಾನು, ಓಎಂಆರ್ ಶೀಟ್‌ನಲ್ಲಿ ನೋಂದಣಿ ಸಂಖ್ಯೆಯನ್ನೇ ತಪ್ಪು ಬರೆದಿರುವೆ. ಪ್ರಶ್ನೆಗಳಿಗೆ ಅದೇನು ಉತ್ತರ ಬರೆದೆ ಅನ್ನೋದು ನನಗೆ ಗೊಂದಲಕಾರಿಯಾಗಿದೆ. ಜನಿವಾರ ತೆಗೆಸಿ ಮಾನಸಿಕ ಹಿಂಸೆ ನೀಡಿದ ಸಿಬ್ಬಂದಿಗೆ, ಸದರಿ ಘಟನೆ ನಡೆದ ಸಂಸ್ಥೆಯ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ನೊಂದ ವಿದ್ಯಾರ್ಥಿ ಶ್ರೀಪಾದ್ ದೂರಿನಲ್ಲಿ ವಿವರಿಸಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ