
ವಿಜಯಪುರ(ಆ.10): ಒನ್ ನೇಷನ್ ಒನ್ ಕಾರ್ಡ್ ನೋಂದಣಿ ಪ್ರಕ್ರಿಯೆಗೆ ನೇಮಕಾತಿ ನಡೆಯಲಿದ್ದು, ಉದ್ಯೋಗಾವಕಾಶ ದೊರಕಿಸಿ ಕೊಡಲಾಗುವುದು ಎಂದು ಸರಿಸುಮಾರು .95.75 ಲಕ್ಷ ಹಣ ವಸೂಲಿ ಮಾಡಿ ಅಮಾಯಕರಿಗೆ ವಂಚಿಸಿದ ಆರೋಪದ ಮೇರೆಗೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ ಮಾಹಿತಿ ನೀಡಿದರು.
ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂಧ್ರಪ್ರದೇಶ ಮೂಲದ ಸುಧೀರಬಾಬು ಉರ್ಫ್ ಸುಧೀರ ರೆಡ್ಡಿ ಸುಂಕಪ್ಪ, ಮಧುಗಿರಿಯ ಶಶಾಂಕ ಎಸ್.ಎನ್. ನಾಗರಾಜ ಪ್ರಮುಖ ಆರೋಪಿಗಳು. ಇವರಿಬ್ಬರನ್ನು ತುಮಕೂರಿನಲ್ಲಿ ಬಂಧಿಸಲಾಗಿದೆ. ಹಣ ಪಾವತಿಸಿದರೆ ಉದ್ಯೋಗ ಒದಗಿಸುವುದಾಗಿ ಸರ್ಕಾರೇತರ ಸಂಸ್ಥೆಯೊಂದನ್ನು ದಾಳವಾಗಿಸಿಕೊಂಡು ಜನರಿಗೆ ಆಮಿಷ ಒಡ್ಡಿದ್ದರು ಎಂದು ಗೊತ್ತಾಗಿದೆ ಎಂದು ಅವರು ತಿಳಿಸಿದರು.
ಬೇಡವೆಂದು ಬೇಡಿಕೊಂಡರೂ ಬಿಡದೇ ಹೆತ್ತ ಮಕ್ಕಳನ್ನೇ ಬಾವಿಗೆ ತಳ್ಳಿದ ತಾಯಿ, ತಾನೂ ಹಾರಿ ಸಾವು
ತಿಕೋಟಾ ತಾಲೂಕಿನ ತೊರವಿ ಗ್ರಾಮದ ಶಶಿಕಲಾ ಗುರುಪಾದಯ್ಯ ತಳಸದಾ ಅವರು ಸ್ಫೂರ್ತಿ ಮಹಿಳಾ ಗ್ರಾಮೀಣಾಭಿವೃದ್ಧಿ ಸರ್ವಿಸ್ ಅಸೋಸಿಯೇಷನ್ ಎಂಬ ಸರ್ಕಾರೇತರ ಸಂಸ್ಥೆ ನಡೆಸುತ್ತಿದ್ದಾರೆ. ಈ ಸಂಸ್ಥೆಯನ್ನು ಸಂಪರ್ಕಿಸಿದ ವಂಚಕರು ಒನ್ ನೇಷನ್ ಒನ್ ಕಾರ್ಡ್ ನೋಂದಣಿ ಪ್ರಕ್ರಿಯೆಗೆ ಉದ್ಯೋಗಿಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿ ನಂಬಿಸಿದ್ದಾರೆ, ಡಾಟಾ ಎಂಟ್ರಿ ಆಪರೇಟರ್‌ಗೆ ಪರೀಕ್ಷಾ ಶುಲ್ಕ .1299, ಸಂಯೋಜಕ ಹುದ್ದೆಗೆ ಭದ್ರತಾ ಠೇವಣಿಯಾಗಿ .10 ಸಾವಿರ ಹೀಗೆ ಅನೇಕ ಹುದ್ದೆಗಳಿಗೆ ವಿವಿಧ ರೀತಿಯ ಠೇವಣಿ, ಪರೀಕ್ಷಾ ಶುಲ್ಕ ವಿಧಿಸಿ ರಾಜ್ಯಾದ್ಯಂತ ಅಭ್ಯರ್ಥಿಗಳಿಂದ ಹಣ ವಸೂಲಿ ಮಾಡಿದ್ದಾರೆ. ಅವರ ವರ್ತನೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಶಶಿಕಲಾ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರನ್ನು ಆಧರಿಸಿ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ದೂರು ಬಂದ ಕೆಲವೇ ಗಂಟೆಗಳಲ್ಲಿ ಪ್ರಕರಣ ಬೇಧಿಸಿದ್ದಾರೆ. ಒಟ್ಟಾರೆಯಾಗಿ .95,75,548 ಲಕ್ಷಗಳನ್ನು ವಂಚಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ವಿವರಿಸಿದರು.
ಮೊಬೈಲ್ ಲೋಕೇಷನ್, ಇ-ಮೇಲ್ ಐಡಿಗಳ ಐಪಿ ಅಡ್ರೆಸ್ ಸೇರಿದಂತೆ ಅತ್ಯಾಧುನಿಕ ತನಿಖಾ ವಿಧಾನಗಳನ್ನು ಅನುಸರಿಸಿ ಮಧುಗಿರಿಗೆ ತೆರಳಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಆರೋಪಿಗೆ ಸಂಬಂಧಿಸಿದಂತೆ ಅಕೌಂಟ್‌ಗಳನ್ನು ಫ್ರೀಜಿಂಗ್ ಮಾಡುವಂತೆ ಕೋರಲಾಗಿದ್ದು, ಆ ಪೈಕಿ ಎರಡು ಅಕೌಂಟ್‌ಗಳು ಫ್ರೀಜಿಂಗ್ ಆಗಿದ್ದು .10 ಲಕ್ಷಗಳನ್ನು ಹೋಲ್ಡ್ ಮಾಡಲಾಗಿದೆ ಎಂದು ವಿವರಿಸಿದರು.
ಸಿಇಎನ್ ವಿಭಾಗದ ಸಿಪಿಐ ರಮೇಶ ಅವಜಿ, ಪಿಎಸ್‌ಐ ಮಲ್ಲಿಕಾರ್ಜುನ ತಳವಾರ, ಪಿ.ವೈ. ಅಂಬಿಗೇರ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಈ ಪ್ರಕರಣವನ್ನು ಬೇಧಿಸಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ