
ಬೆಂಗಳೂರು(ಡಿ.16): ಖಾಸಗಿ ಸಂಸ್ಥೆಯ ಹಣ ಸಂಗ್ರಹಕಾರನೊಬ್ಬನಿಗೆ ‘ಲೈಟರ್ ಗನ್’ ತೋರಿಸಿ, ಜೀವ ಬೆದರಿಕೆ ಹಾಕಿ ಸುಲಿಗೆ ಮಾಡಿದ್ದ ಇಬ್ಬರನ್ನು ಕೆಂಗೇರಿ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಮುದ್ದನಪ್ಪಪಾಳ್ಯದ ರವಿ ಹಾಗೂ ರಾಜು ಬಂಧಿತರಾಗಿದ್ದು, ಆರೋಪಿಗಳಿಂದ 60 ಸಾವಿರ ನಗದು, ದ್ವಿಚಕ್ರ ವಾಹನ ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಡಿ.2ರಂದು ಕೆಂಗೇರಿ ಉಪನಗರದ ಬಂಡೇಮಠ ಹತ್ತಿರ ಬೆಹತರ್ ಸೂಪರ್ ಮಾರ್ಕೆಟ್‌ನಲ್ಲಿ ಹಣ ಸಂಗ್ರಹಕ ಮಲ್ಲಿಕಾರ್ಜುನ್ ಅವರನ್ನು ಬೆದರಿಸಿ ಆರೋಪಿಗಳು 80 ಸಾವಿರ ರು. ಣ ದೋಚಿದ್ದರು. ಈ ಬಗ್ಗೆ ತನಿಖೆ ನಡೆಸಿದ ಇನ್ಸ್‌ಪೆಕ್ಟರ್ ವಸಂತ್ ನೇತೃತ್ವದ ತಂಡ, ಸಿಸಿಟಿವಿ ಕ್ಯಾಮರಾಗಳ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸುಲಿಗೆ ಮಾಡಿ ಮಲೆ ಮಹದೇಶ್ವರನಿಗೆ ಕಾಣಿಕೆ:
ರಾಮನಗರ ತಾಲೂಕಿನ ಬಿಡದಿ ಹತ್ತಿರದ ಗುಡ್ಡದಹಳ್ಳಿ ಗ್ರಾಮದ ರವಿ ಹಾಗೂ ರಾಜು ಸೋದರ ಸಂಬಂಧಿಗಳಾಗಿದ್ದು, ಹಲವು ದಿನಗಳಿಂದ ಕೆಂಗೇರಿ ಹತ್ತಿರದ ಮುದ್ದನಪಾಳ್ಯದಲ್ಲಿ ನೆಲೆಸಿದ್ದಾರೆ. 2014ರಲ್ಲಿ ಹಲ್ಲೆ ಪ್ರಕರಣದಲ್ಲಿ ಈ ಇಬ್ಬರು ಜೈಲು ಸೇರಿದ್ದರು. ಬಳಿಕ ಜಾಮೀನು ಪಡೆದು ಅವರು ಹೊರ ಬಂದಿದ್ದರು. ಈ ಮೊದಲು ಕಾರು ಮಾರಾಟ ಮಳಿಗೆಯಲ್ಲಿ ರವಿ ಕೆಲಸ ಮಾಡುತ್ತಿದ್ದ. ಆ ಮಳಿಗೆಗೆ ಹಣ ಸಂಗ್ರಹಕ್ಕೆ ಖಾಸಗಿ ಏಜೆನ್ಸಿಯ ಮಲ್ಲಿಕಾರ್ಜುನ್ ಬರುತ್ತಿದ್ದರು. ಹಾಗಾಗಿ ಆತನಿಗೆ ಮಲ್ಲಿಕಾರ್ಜುನ್ ಪರಿಚಯವಿತ್ತು.
ಪ್ರತಿದಿನ ಮಲ್ಲಿಕಾರ್ಜುನ್‌ನನ್ನು ಬಳಿ ಐದಾರು ಲಕ್ಷ ಹಣವಿರುತ್ತದೆ, ಅದನ್ನು ಹೇಗಾದರೂ ಮಾಡಿ ಲೂಟಿ ಮಾಡಬೇಕು ಎಂದು ಸಂಬಂಧಿ ಮೆಜೆಸ್ಟಿಕ್ ಹೊಟೇಲ್‌ನಲ್ಲಿ ಕೆಲಸ ಮಾಡುವ ರಾಜು ಜತೆ ಸೇರಿ ರವಿ ಸಂಚು ರೂಪಿಸಿದ್ದ. ಅಂತೆಯೇ ಒಂದು ತಿಂಗಳು ಕಾಲ ಮಲ್ಲಿಕಾರ್ಜುನ್ ಚಲವಲನದ ಬಗ್ಗೆ ಮಾಹಿತಿ ಸಂಗ್ರಹಿಸಿದ ಆರೋಪಿಗಳು, ಡಿ.2 ರಂದು ಸಂಚು ಕಾರ್ಯರೂಪಕ್ಕಿಳಿಸಲು ನಿರ್ಧರಿಸಿದ್ದರು. ಅದರಂತೆ ಕೆಂಗೇರಿ ಉಪ ನಗರದ ಬಂಡೇಮಠ ಸಮೀಪದ ಬೆಹತರ್ ಸೂಪರ್ ಮಾರ್ಕೆಟ್‌ಗೆ ಮಲ್ಲಿಕಾರ್ಜುನ್ ಹಣ ಸಂಗ್ರಹಕ್ಕೆ ತೆರಳಿದ್ದರು. ಆಗ ಏಕಾಏಕಿ ಸೂಪರ್ ಮಾರ್ಕೆಟ್‌ಗೆ ನುಗ್ಗಿದ ಆರೋಪಿಗಳು, ಲೈಟರ್ ಗನ್ ಅನ್ನು ಅಸಲಿ ಎಂದೂ ತೋರಿಸಿ ಬೆದರಿಕಿ ಹಾಕಿ 80 ಸಾವಿರ ಹಣ ದೋಚಿ ಪರಾರಿಯಾಗಿದ್ದರು. ಈ ಕೃತ್ಯ ಎಸಗಿದ ಬಳಿಕ ಮಲೆ ಮಹದೇಶ್ವರ ದೇವಾಲಯಕ್ಕೆ ತೆರಳಿದ್ದರು. ಬಳಿಕ ಮಾಹಿತಿ ಪಡೆದು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
51 ಸಿಸಿಟಿವಿ ಫುಟೇಜ್ ಪರಿಶೀಲನೆ
ಈ ಕೃತ್ಯ ಸಂಬಂಧ 51 ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಯಿತು. ಆಗ ಒಂದು ಕಟ್ಟಡ ಪ್ರವೇಶಿಸುವಾಗ ಆರೋಪಿಗಳ ಮುಖಚಹರೆ ಪತ್ತೆಯಾಯಿತು. ಇದನ್ನು ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಇಬ್ಬರು ಸಿಕ್ಕಿಬಿದ್ದಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್ ಪಾಟೀಲ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ