ಬ್ಯಾಡಗಿಯಲ್ಲಿ ವಿಜಯಪುರದ ಮೂಲದ ಇಬ್ಬರು ಆರೋಪಿಗಳ ಸೆರೆ| ಬಂಧಿತರನ್ನ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು| ಎರಡು ಸ್ಕೀಂಗಳ ನಡುವೆ ಒಟ್ಟು 213 ಗ್ರಾಹಕರಿಗೆ ವಂಚನೆ| ಮಾರ್ಡನ್ ಮಾರ್ಕೆಟಿಂಗ್ ಗೋಲ್ಡ್ ಟ್ರೇಡರ್ಸ್ ಎಂಬ ಹೆಸರಲ್ಲಿ ಹಣ ದ್ವಿಗುಣಗೊಳಿಸುವ ದಂಧೆ ನಡೆಸುತ್ತಿದ್ದ ಖದೀಮರು|
ಬ್ಯಾಡಗಿ(ಮೇ.02): ಹಣ ದ್ವಿಗುಣಗೊಳಿಸುವುದಾಗಿ ಹಾಗೂ ಬಂಗಾರ ಕೊಡುವುದಾಗಿ ನಂಬಿಸಿ ಮೋಸವೆಸಗಿದ ವಿಜಯಪುರ ಮೂಲದ ಇಬ್ಬರು ಸಾರ್ವಜನಿಕರಿಂದ ಸುಮಾರು 85 ಲಕ್ಷ ಹಣ ವಂಚಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪಟ್ಟಣದ ಮೋಟೆಬೆನ್ನೂರು ರಸ್ತೆಯಲ್ಲಿರುವ ಜಗದಂಬಾ ಹೋಟೆಲ್ ಮೇಲ್ಭಾಗದಲ್ಲಿನ ಮಳಿಗೆಯೊಂದರಲ್ಲಿ ವಿಜಯಪುರ ಮೂಲದ ಸೈಯದ್ ಸೊಹೈಲ್ ಶೇಖ್ ಹಾಗೂ ಮೆಹಬೂಬ ಇಸ್ಮಾಯಿಲ್ ತಿಕ್ಕೋಟಿಕಲ್ ಎಂಬವರು ವಂಚನೆ ನಡಸಿದ್ದಾಗಿ ತಿಳಿದುಬಂದಿದೆ. ಕಳೆದ 4 ತಿಂಗಳಿಂದ ಮಾರ್ಡನ್ ಮಾರ್ಕೆಟಿಂಗ್ ಗೋಲ್ಡ್ ಟ್ರೇಡರ್ಸ್ ಎಂಬ ಹೆಸರಲ್ಲಿ ಹಣ ದ್ವಿಗುಣಗೊಳಿಸುವ ದಂಧೆ ನಡೆಸುತ್ತಿದ್ದರು.
ಪ್ರತ್ಯೇಕ 2 ಸ್ಕೀಂಗಳು:
ಸ್ಕೀಮ್ ಒಂದರಲ್ಲಿ 21 ಸಾವಿರ ಹಣ ತುಂಬಿಸಿಕೊಂಡು 11 ದಿನಗಳ ಬಳಿಕ ಪ್ರತಿವಾರ 6 ಸಾವಿರದಂತೆ ಒಟ್ಟು 36 ಸಾವಿರ ಮೌಲ್ಯದ ಬಂಗಾರ, ಗೃಹೋಪಯೋಗಿ ವಸ್ತುಗಳನ್ನು ನೀಡುವುದಾಗಿ ನಂಬಿಸಿದ್ದಲ್ಲದೇ, ಇನ್ನೊಂದು ಸ್ಕೀಮ್‌ನಲ್ಲಿ ಮೊದಲು ಶೇ. 60ರಷ್ಟು ಹಣ ತುಂಬಿಸಿಕೊಂಡು ಉಳಿದ ಹಣ ಕಂತುಗಳಲ್ಲಿ ಪಾವತಿಸಿದಲ್ಲಿ ಬಂಗಾರ ಕೊಡಿಸುವುದಾಗಿ ನಂಬಿಸಿದ್ದಾರೆ.
ಮೊಬೈಲ್ ಸಂಖ್ಯೆಯನ್ನೇ ಹ್ಯಾಕ್ ಮಾಡಿ 98 ಸಾವಿರ ಎಗರಿಸಿದ ವಂಚಕರು
85 ಲಕ್ಷ ವಂಚನೆ:
ಎರಡು ಸ್ಕೀಂಗಳ ನಡುವೆ ಒಟ್ಟು 213 ಗ್ರಾಹಕರಿಗೆ ವಂಚಿಸಿದ್ದು, ಬಳಿಕ ತಮ್ಮ ಕಾರ್ಯಚಟುವಟಿಕೆ ನಡೆಸುತ್ತಿದ್ದ ಕಚೇರಿ ಸ್ಥಗಿತಗೊಳಿಸಿ ಮೊಬೈಲ್ ಸ್ವಿಚ್‌ಆಫ್ ಮಾಡಿ ನಾಪತ್ತೆಯಾಗಿದ್ದಾರೆ. ಇಬ್ಬರನ್ನು ಹುಡುಕಾಡಲು ಗ್ರಾಹಕರು ಪ್ರಯತ್ನಪಟ್ಟರಾದರೂ ಸಂಪರ್ಕಕ್ಕೆ ಸಿಗದ ಹಿನ್ನೆಲೆ ಪಟ್ಟಣದ ಇಸ್ಲಾಂಪುರಓಣಿ ನಿವಾಸಿ ಮಹಮ್ಮದ ಇಸ್ಮಾಯಿಲ್ ಕಳಗೊಂಡ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆರೋಪಿಗಳ ಬಂಧನ:
ದೂರಿನನ್ವಯ ವಂಚಕರ ಬಂಧನಕ್ಕೆ ಬಲೆ ಬೀಸಿದ ಬ್ಯಾಡಗಿ ಪೊಲೀಸರು, ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 85 ಲಕ್ಷ ಪಡೆದು ವಂಚನೆ ನಡೆಸಿದ್ದಾಗಿ ಪೊಲೀಸ್ ತನಿಖೆಯಿಂದ ತಿಳಿದು ಬಂದಿದ್ದು, ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.