ಹುಲಿ ಉಗುರು ಪೆಂಡೆಂಟ್ ಧರಿಸಿದ್ದಾರೆನ್ನಲಾದ ನಟ ಜಗ್ಗೇಶ್, ದರ್ಶನ್ ತೂಗುದೀಪ, ರಾಕ್‌ಲೈನ್ ವೆಂಕಟೇಶ್ ಹಾಗೂ ನಿಖಿಲ್ ಕುಮಾರಸ್ವಾಮಿಗೂ ಸಂಕಷ್ಟ ಎದುರಾಗಿದೆ.
ಬೆಂಗಳೂರು (ಅ.25): ಕರ್ನಾಟಕದಲ್ಲಿ ಬಿಗ್‌ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ವರ್ತೂರು ಸಂತೋಷ್ ಅವರು ಹುಲಿ ಉಗುರು ಧರಿಸಿದ್ದರಿಂದ ಅವರನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ ಬೆನ್ನಲ್ಲೇ ಸ್ಯಾಂಡಲ್‌ವುಡ್ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಮುಖಂಡ ಪಿ.ಆರ್. ರಮೇಶ್ ಅವರು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಈಗಾಗಲೇ ದರ್ಶನ್ ವಿರುದ್ಧವೂ ದೂರು ದಾಖಲಿಸಲಾಗಿದೆ. ಉಳಿದಂತೆ ರಾಕ್‌ಲೈನ್ ವೆಂಕಟೇಶ್ ಮತ್ತು ನಟ ನಿಖಿಲ್ ಕುಮಾರಸ್ವಾಮಿ ವಿರುದ್ಧವೂ ಹುಲಿ ಉಗುರು ಪೆಂಡೆಂಟ್ ಧರಿಸಿದ ಆರೋಪ ಕೇಳಿಬಂದಿದೆ.
ಹೌದು, ಹುಲಿ ಉಗುರಿನ ಪೆಂಡೆಂಡ್ ಧರಿಸಿದ ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಬಂಧನವಾಗಿದ್ದು, ನಂತರ 14 ದಿನಗಳ ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ. ಇದಾದ ಬಳಿಕ ಹುಲಿ ಉಗುರನ್ನು ಧರಿಸಿದವರು ಸಾಕಷ್ಟು ಜನರಿದ್ದಾರೆಬ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು. ಕಳೆದ ಎರಡು ದಿನಗಳು ದಸರಾ ಹಬ್ಬದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ರಜಾ ಇದ್ದುದರಿಂದ ಇಂದು ಬೆಳಗ್ಗೆ ಹುಲಿ ಉಗುರು ಧರಿಸಿದ್ದ ಹಲವು ನಾಯಕರ ವಿರುದ್ಧ ದೂರು ದಾಖಲಾಗುತ್ತಿವೆ. ಈಗಾಗಲೇ ಹುಲಿ ಉಗುರು ಪೆಂಡೆಂಟ್ ಹೊಂದಿದ್ದ ನಟ ದರ್ಶನ್ ತೂಗುದೀಪ, ರಾಜ್ಯಸಭಾ ಸದಸ್ಯ ಜಗ್ಗೇಶ್ ಹಾಗೂ ಹುಲಿ ಚರ್ಮ ಹೊಂದಿದ್ದ ಅವಧೂತ ವಿನಯ್ ಗುರೂಜಿ ವಿರುದ್ಧ ದೂರು ದಾಖಲಾಗಿದೆ.
ಹುಲಿ ಉಗುರು ಪೆಂಡೆಂಟ್: ದರ್ಶನ್ ತೂಗುದೀಪ್ ಹಾಗೂ ವಿನಯ್ ಗುರೂಜಿ ವಿರುದ್ಧ ದೂರು
ಕಾಂಗ್ರೆಸ್ ಮುಖಂಡ ಹಾಗೂ ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಪಿ.ಆರ್. ರಮೇಶ್ ಅವರು ನಟ ಜಗ್ಗೇಶ್ ವಿರುದ್ಧ ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ನಟ ಜಗ್ಗೇಶ ಅವರು ಹುಲಿ ಉಗುರು ಪೆಂಡೆಂಟ್ ಧರಿಸಿದ ಬಗ್ಗೆ ಹೇಳಿಕೊಂಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಸಂಬಂಧ ನಟ ಜಗ್ಗೇಶ್ ವಿರುದ್ಧ ಕಾಂಗ್ರೆಸ್ನ ಮಾಜಿ ಎಂಎಲ್ಸಿ ಪಿ.ಆರ್ ರಮೇಶ್, ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರಿಗೆ ದೂರು ನೀಡಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ನಟ ಜಗ್ಗೇಶ್ ಅವರು 'ನನಗೆ 20 ವರ್ಷ ಆದಾಗ ನನ್ನಮ್ಮ ನನ್ನ ಮಗ ಹುಲಿ ಇದ್ದಂಗೆ ಇರಬೇಕು ಅಂತ ಹೇಳಿ ಒರಿಜಿನಲ್ ಹುಲಿ ಉಗುರಿನಲ್ಲಿ ಈ ಲಾಕೆಟ್ ಇರುವ ಸರ ಮಾಡಿಸಿ ಹಾಕಿದ್ದರು' ಎಂದಿದ್ದರು. ಹೀಗಾಗಿ, ಅವರ ವಿರುದ್ಧ ಕೂಡಲೇ ಶಿಸ್ತು ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ. ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಉಗುರು ಧರಿಸಿದ್ದಕ್ಕೆ ಬಂಧನದ ಬೆನ್ನಲ್ಲೇ ಹಲವರು ಹುಲಿ ಉಗುರಿನ ಲಾಕೆಟ್ ಧರಿಸಿಕೊಂಡಿದ್ದು, ಇದೀಗ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ವರ್ತೂರ್ ಸಂತೋಷ್ ಪ್ರಕರಣದ ಬೆನ್ನಲ್ಲೇ ರಾಜ್ಯಾದ್ಯಂತ ಹುಲಿ ಉಗುರು ಭಾರೀ ಸದ್ದು ಮಾಡುತ್ತಿದೆ. ಇನ್ನು ವರ್ತೂರಿನಲ್ಲಿ ಸಂತೋಷ್ ಬಂಧನ ಮಾಡಿದ್ದರಿಂದ ಗ್ರಾಮಸ್ಥರಿಂದ ಪ್ರತಿಭಟನೆ ಮಾಡಲಾಗುತ್ತಿದೆ.
ಜಗ್ಗೇಶ್, ದರ್ಶನ್‌ಗೆ ನೋಟಿಸ್ ಜಾರಿ: ಹುಲಿ ಉಗುರಿನ ಪೆಂಡೆಂಟ್ ಧರಿಸಿದ ರಾಜ್ಯಸಭಾ ಸದಸ್ಯ ಜಗ್ಗೇಶ್ ಹಾಗೂ ನಟ ದರ್ಶನ್ ವಿರುದ್ಧ ದೂರು ದಾಖಲಾಗದ್ದು, ಅವರಿಗೆ ನೋಟಿಸ್ ನೀಡಲಾಗುವುದು. ಇನ್ನು ನಟ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮತ್ತು ನಟ ನಿಖಿಲ್ ಕುಮಾರಸ್ವಾಮಿ ಅವರೂ ಹುಲಿ ಉಗುರು ಪೆಂಡೆಂಟ್ ಧರಿಸಿದ ಫೋಟೋಗಳು ಹರಿದಾಡುತ್ತಿದ್ದು, ಅದನ್ನು ಪರಿಶೀಲನೆ ಮಾಡಿಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಸರಾ ಆನೆ ಕೊಂಡೊಯ್ಯುತ್ತಿದ್ದ ಲಾರಿ ಅಪಘಾತ: ಚಾಲಕ ಸಾವು, ಪ್ರಾಣಾಪಾಯದಿಂದ ಪಾರಾದ ಆನೆ
ನಾನು ಧರಿಸಿರುವುದು ಹುಲಿ ಉಗುರಲ್ಲ ಎಂದ ನಿಖಿಲ್: ತಮ್ಮ ಮದುವೆ ಸಮಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರು ಎಂದು ಕೆಲ ಮಾಧ್ಯಮಗಳಲ್ಲಿ ವರದಿ ಮಾಡಲಾಗಿದೆ. ಇದು ಸತ್ಯಕ್ಕೆ ದೂರ. ವನ್ಯಜೀವಿ ಸಂರಕ್ಷಣಾ ಕಾಯ್ದೆ, ಅದರ ಗಂಭೀರತೆ ಬಗ್ಗೆ ನನಗೆ ಖಂಡಿತಾ ಅರಿವಿದೆ. ನಾನು ಧರಿಸಿದ್ದ ಹುಲಿ ಉಗುರು ಮಾದರಿಯ ಪೆಂಡೆಂಟ್ ಕೃತಕವಾದದ್ದೇ ಹೊರತು ನೈಜವಾದುದ್ದಲ್ಲ. ಅದನ್ನು ನನ್ನ ಮದುವೆ ಸಮಯದಲ್ಲಿ ಉಡುಗೋರೆ ನೀಡಿದ್ದು. ಅದು ಈಗಲೂ ನನ್ನ ಬಳಿ ಇದೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬಹುದು. ದಯಮಾಡಿ ಯಾರೂ ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಪ್ರಸಾರ ಮಾಡಬಾರದು ಎಂದು ವಿನಂತಿ ಮಾಡಿಕೊಳ್ಳುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.