ವಿಡಿಯೋ ಮಾಡೋ ಹುಚ್ಚಾಟಕ್ಕೆ ಮೂವರು ಬಾಲಕರ ಸಾವು

By Kannadaprabha NewsFirst Published May 27, 2022, 4:48 AM IST
Highlights

*  ವಿಡಿಯೋ ಮಾಡುವ ಉದ್ದೇಶದಿಂದ ಕೆರೆಗೆ ಇಳಿದಿದ್ದ ಬಾಲಕರು
*  ಬೆಂಗಳೂರಿನ ದೊಡ್ಡಗುಬ್ಬಿ ಕೆರೆಯಲ್ಲಿ ನಡೆದ ಘಟನೆ
*  ಈ ಸಂಬಂಧ ಕೊತ್ತನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು 
 

ಬೆಂಗಳೂರು(ಮೇ.27): ನಗರದ ದೊಡ್ಡಗುಬ್ಬಿ ಕೆರೆಯಲ್ಲಿ ಈಜಾಡಲು ಹೋಗಿದ್ದ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ಗುರುವಾರ ನಡೆದಿದೆ.

ಸಾರಾಯಿಪಾಳ್ಯ ನಿವಾಸಿಗಳಾದ ಇಮ್ರಾನ್‌ ಪಾಷ (17), ಮುಬಾರಕ್‌ (17) ಹಾಗೂ ಸಾಹಿಲ್‌ (15) ಮೃತರು. ಮಧ್ಯಾಹ್ನ 1.40ರ ಸುಮಾರಿಗೆ ಈ ಘಟನೆ ಜರುಗಿದೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಕೊತ್ತನೂರು ಠಾಣೆ ಪೊಲೀಸರು ಮೂವರ ಮೃತದೇಹಗಳಿಗಾಗಿ ಕೆರೆಯಲ್ಲಿ ಕಾರ್ಯಾಚರಣೆ ನಡೆಸಿದರು. ಸಂಜೆ ಆರು ಗಂಟೆ ವರೆಗೂ ಸತತ ಐದು ತಾಸು ಕಾರ್ಯಾಚರಣೆ ನಡೆದರೂ ಮೃತದೇಹಗಳು ಪತ್ತೆಯಾಗಿಲ್ಲ. ಕತ್ತಲಾದ ಪರಿಣಾಮ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಶುಕ್ರವಾರ ಬೆಳಗ್ಗೆ ಮೃತದೇಹಗಳ ಪತ್ತೆ ಕಾರ್ಯಾಚರಣೆ ಮುಂದುವರೆಯಲಿದೆ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ವಿವರ:

ಎಲಿಮೆಂಟ್‌ ಮಾಲ್‌ನ ಪಿವಿಆರ್‌ನಲ್ಲಿ ಹೆಲ್ಪರ್‌ ಕೆಲಸ ಮಾಡುವ ಮೃತ ಇಮ್ರಾನ್‌ ಪಾಷ ಗುರುವಾರ ಮಧ್ಯಾಹ್ನ ಸಾರಾಯಿಪಾಳ್ಯದ ನಿವಾಸಿಗಳಾದ ಸ್ನೇಹಿತರಾದ ಮುಬಾರಕ್‌, ಸಾಹಿಲ್‌, ಶಾಹಿದ್‌, ಅಬ್ದುಲ್‌ ರೆಹಮಾನ್‌ರನ್ನು ಭೇಟಿಯಾಗಿ ಕಳೆದ ವಾರ ನಾನು ದೊಡ್ಡಗುಬ್ಬೆ ಕೆರೆಗೆ ಹೋಗಿ ಈಜಾಡಿಕೊಂಡು ಬಂದಿದ್ದೇನೆ ಎಂದು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ ವಿಡಿಯೋ ತೋರಿಸಿದ್ದಾನೆ. ಈ ವಿಡಿಯೊ ಇನ್ಸ್‌ಟಾಗ್ರಾಮ್‌ನಲ್ಲಿ ಅಪ್ಲೋಡ್‌ ಮಾಡಿರುವುದಾಗಿ ವಿಡಿಯೊ ತೋರಿಸಿದ್ದಾನೆ. ಬಳಿಕ ಕೆರೆಯಲ್ಲಿ ಈಜಾಡೋಣ ಎಂದು ಪುಸಲಾಯಿಸಿ ಬಾಡಿಗೆ ಆಟೋದಲ್ಲಿ ನಾಲ್ವರನ್ನು ಜತೆಯಲ್ಲಿ ಕರೆದುಕೊಂಡು ದೊಡ್ಡಗುಬ್ಬಿ ಕೆರೆ ಬಳಿ ಬಂದಿದ್ದಾನೆ.

Kolar: ತಾಲೂಕು ಕಚೇರಿಯಲ್ಲಿ ಆತ್ಮಹತ್ಯೆಗೆ ಯತ್ನ: ಕ್ಷಣಾರ್ಧದಲ್ಲಿ ಪ್ರಾಣ ಉಳಿಸಿದ ಸ್ಥಳೀಯರು!

ವಿಡಿಯೊ ಹುಚ್ಚಾಟ

ಈಜಾಡುವ ದೃಶ್ಯಾವಳಿಯನ್ನು ಮೊಬೈಲ್‌ನಲ್ಲಿ ವಿಡಿಯೊ ಮಾಡುವ ಉದ್ದೇಶದಿಂದ ಬಾಲಕರು ಕೆರೆ ಬಳಿ ಬಂದಿದ್ದರು. ಅಬ್ದುಲ್‌ ರೆಹಮಾನ್‌ ಮತ್ತು ಶಾಹಿದ್‌ಗೆ ದಡದಲ್ಲಿ ನಿಂತು ವಿಡಿಯೊ ಮಾಡಲು ಹೇಳಿ ಮೂವರು ಒಟ್ಟಿಗೆ ನೀರಿಗೆ ಧುಮುಕಿದ್ದರು. ಕೆರೆಯಲ್ಲಿ ಈಜಾಡುವುದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಲು ನಿರ್ಧರಿಸಿದ್ದರು. ಇದೀಗ ವಿಡಿಯೊ ಹುಚ್ಚಾಟಕ್ಕೆ ತಮ್ಮ ಪ್ರಾಣವನ್ನೇ ತೆತ್ತಿದ್ದಾರೆ ಎನ್ನಲಾಗಿದೆ.

ಘಟನೆ ಬಗ್ಗೆ ತಕ್ಷಣ ಮಾಹಿತಿ ನೀಡಿದ ನಂತರ ಸ್ಥಳಕ್ಕೆ ಬಂದ ಅಗ್ನಿಶಾಮ ಸಿಬ್ಬಂದಿ ಸಂಜೆ ಆರು ಗಂಟೆ ವರೆಗೂ ಕಾರ್ಯಾಚರಣೆ ಮಾಡಿದರೂ ಮೃತದೇಹಗಳು ಪತ್ತೆಯಾಗಲಿಲ್ಲ. ಈ ಸಂಬಂಧ ಕೊತ್ತನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!