ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಹಲ್ಲೆ ವೇಳೆ ನಟ ದರ್ಶನ್ ಧರಿಸಿದ್ದ ಶೂಗಳು ಪತ್ನಿ ವಿಜಯಲಕ್ಷ್ಮೀ ಮನೆಯಲ್ಲಿ ಪತ್ತೆಯಾಗಿವೆ. ವಿಚಾರಣೆ ವೇಳೆ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಹೊಸಕೆರೆಹಳ್ಳಿಯಲ್ಲಿರುವ ವಿಜಯಲಕ್ಷ್ಮೀ ಅವರ ಮನೆಯಲ್ಲಿ ದರ್ಶನ್ ಶೂಗಳನ್ನು ಜಪ್ತಿ ಮಾಡಿದ್ದಾರೆ.
ಬೆಂಗಳೂರು (ಜೂ.19): ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಹಲ್ಲೆ ವೇಳೆ ನಟ ದರ್ಶನ್ ಧರಿಸಿದ್ದ ಶೂಗಳು ಪತ್ನಿ ವಿಜಯಲಕ್ಷ್ಮೀ ಮನೆಯಲ್ಲಿ ಪತ್ತೆಯಾಗಿವೆ. ವಿಚಾರಣೆ ವೇಳೆ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಹೊಸಕೆರೆಹಳ್ಳಿಯಲ್ಲಿರುವ ವಿಜಯಲಕ್ಷ್ಮೀ ಅವರ ಮನೆಯಲ್ಲಿ ದರ್ಶನ್ ಶೂಗಳನ್ನು ಜಪ್ತಿ ಮಾಡಿದ್ದಾರೆ. ಪಟ್ಟಣಗೆರೆಯ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ನಟ ದರ್ಶನ್ ಸೇರಿದಂತೆ ಇತರೆ ಆರೋಪಿಗಳು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೈದಿದ್ದರು. ಬಳಿಕ ದರ್ಶನ್ ಶೆಡ್‌ನಿಂದ ನೇರವಾಗಿ ರಾಜರಾಜೇಶ್ವರಿನಗರದ ತನ್ನ ಮನೆಗೆ ತೆರಳಿ ಬಟ್ಟೆ ಹಾಗೂ ಶೂಗಳನ್ನು ಬದಲಿಸಿ ಸ್ನಾನ ಮಾಡಿಕೊಂಡು ಮೈಸೂರಿಗೆ ತೆರಳಿದ್ದ.
ಬಳಿಕ ಮನೆಯ ಕೆಲಸಗಾರ ಆ ಶೂಗಳನ್ನು ಹೊಸಕೆರೆಯಹಳ್ಳಿಯ ವಿಜಯಲಕ್ಷ್ಮೀ ಅವರ ಮನೆಗೆ ತೆಗೆದುಕೊಂಡು ಹೋಗಿ ಇರಿಸಿದ್ದ. ಪೊಲೀಸರು ಸ್ಥಳ ಮಹಜರು ವೇಳೆ ರಾಜರಾಜೇಶ್ವರಿನಗರದ ದರ್ಶನ್ ಮನೆಯಲ್ಲಿ ಕೊಲೆ ದಿನ ದರ್ಶನ್ ಧರಿಸಿದ್ದ ಬಟ್ಟೆಗಳನ್ನು ಜಪ್ತಿ ಮಾಡಿದ್ದರು. ಆದರೇ, ಶೂಗಳು ಮಾತ್ರ ಸಿಕ್ಕಿರಲಿಲ್ಲ. ಈ ಬಗ್ಗೆ ಆರೋಪಿಗಳನ್ನು ವಿಚಾರಣೆ ಮಾಡಿದಾಗ ದರ್ಶನ್ ಮನೆಯ ಕೆಲಸಗಾರ ಆ ಶೂಗಳನ್ನು ವಿಜಯಲಕ್ಷ್ಮೀ ಮನೆಗೆ ತೆಗೆದುಕೊಂಡು ಹೋಗಿರುವುದು ಗೊತ್ತಾಗಿದೆ. ಬಳಿಕ ಪೊಲೀಸರು ವಿಜಯಲಕ್ಷ್ಮೀ ಮನೆಗೆ ತೆರಳಿ ಆ ಶೂಗಳನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಪವಿತ್ರಾ ಗೌಡ ಆರೋಗ್ಯ ಏರುಪೇರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಪವಿತ್ರಾ ಗೌಡ ಮಂಗಳವಾರ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಬಳಿಕ ಪೊಲೀಸ್ ಠಾಣೆಗೆ ಕರೆತರಲಾಗಿದೆ. ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣದ ಆರೋಪಿಗಳ ವಿಚಾರಣೆ ಮುಂದುವರೆದಿದೆ. ಮಂಗಳವಾರ ಆರೋಪಿ ಪವಿತ್ರಾಗೌಡ ಅವರ ದೇಹದಲ್ಲಿ ಗ್ಲೂಕೋಸ್ ಪ್ರಮಾಣ ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ಅಸ್ವಸ್ಥಗೊಂಡಿದ್ದರು. ಕೂಡಲೇ ಪೊಲೀಸರು ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ.
ಡಿ'ಗ್ಯಾಂಗ್‌ನ ಒಬ್ಬೊಬ್ಬ ಆರೋಪಿಯದೂ ಒಂದೊಂದು ಅವತಾರ: ದರ್ಶನ್ ಜತೆ ಬಂಧಿತರ ವಿಸ್ತೃತ ಮಾಹಿತಿ
ಈ ವೇಳೆ ವೈದ್ಯರು ಆಕೆಯ ಆರೋಗ್ಯ ತಪಾಸಣೆ ನಡೆಸಿ ಐವಿ ಫ್ಲ್ಯೂಯೆಡ್ ಹಾಕಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಪೊಲೀಸರು ಆಕೆಯನ್ನು ಮತ್ತೆ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಆರೋಪಿಗಳಿಗೆ ನಿಯಮದಂತೆ ನಿತ್ಯ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಆರೋಪಿ ಪವಿತ್ರಾಗೌಡ ಅವರ ಆರೋಗ್ಯದಲ್ಲಿ ಕೊಂಚ ಏರುಪೇರಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಆಕೆಯ ಆರೋಗ್ಯ ಸ್ಥಿರವಾಗಿದೆ. ಹೀಗಾಗಿ ಆಕೆಯನ್ನು ಆಸ್ಪತ್ರೆಯಿಂದ ಠಾಣೆಗೆ ಕರೆತಂದು ವಿಚಾರಣೆ ಮುಂದುವರೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.