
ಬೆಂಗಳೂರು(ಏ.28): ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ಗೆ ನುಗ್ಗಿ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಮೂವರು ಖದೀಮರನ್ನು ಹುಳಿಮಾವು ಠಾಣೆ ಪೊಲೀಸರು(Police) ಘಟನೆ ನಡೆದ 24 ತಾಸಿನೊಳಗೆ ಚುರುಕಿನ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.
ಅರಕೆರೆ ಸಾಯಿಬಾಬಾ ದೇವಸ್ಥಾನ ರಸ್ತೆಯ ರೋಶನ್ ಪ್ಲಾಟಿನಂ ಅಪಾರ್ಟ್‌ಮೆಂಟ್‌ನಲ್ಲಿ ಕಳ್ಳತನ ಮಾಡಿದ್ದ ಬಿಹಾರ ಮೂಲದ ಬಬ್ಲೂ ಪಾಸ್ವಾನ್(58), ಬೋರಾ ಪಾಸ್ವಾನ್(38) ಹಾಗೂ ಶ್ರೀಧರ್ ಪಾಸ್ವಾನ್(28) ಬಂಧಿತರು. ಇವರಿಂದ .1.25 ಕೋಟಿ ಮೌಲ್ಯದ 1.313 ಕೇಜಿ ಚಿನ್ನಾಭರಣ, 116 ಗ್ರಾಂ ತೂಕದ ವಜ್ರದ ಆಭರಣಗಳು, 20 ಗ್ರಾಂ ತೂಕದ ಪ್ಲಾಟಿನಂ ಆಭರಣಗಳು, 123 ಗ್ರಾಂ ತೂಕದ ಬೆಳ್ಳಿ ವಸ್ತುಗಳು, 4 ಬ್ರಾಂಡೆಡ್ ವಾಚ್‌ಗಳು ಹಾಗೂ ವಿದೇಶಿ ಕರೆನ್ಸಿಗಳು ಹಾಗೂ ನಗದು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ: ಗೀತಂ ಯುನಿವರ್ಸಿಟಿಯಲ್ಲಿ ಉಗಾಂಡ ಮೂಲದ ವಿದ್ಯಾರ್ಥಿನಿ ಸಾವು
ಏ.27ರಂದು ರಾತ್ರಿ ಆಂಧ್ರಪ್ರದೇಶದ(Andhra Pradesh) ಅನಂತಪುರ ಮೂಲದ ನಿವೃತ್ತ ಸಿವಿಲ್ ಎಂಜನಿಯರ್ ತಾಜ್‌ಮುಲ್ ಬಾಷಾ ಅವರ ಪ್ಲ್ಯಾಟ್‌ನ ಬಾಲ್ಕನಿಯ ಸ್ಲೈಡಿಂಗ್ ಬಾಗಿಲು ಮುರಿದು ಒಳಗೆ ನುಗ್ಗಿರುವ ದುಷ್ಕರ್ಮಿಗಳು ಫ್ಲ್ಯಾಟ್ ಬೆಡ್ ರೂಮ್‌ನ ವಾರ್ಡ್ ರೋಬ್ ಮುರಿದು ಚಿನ್ನ, ವಜ್ರ ಪ್ಲಾಟಿನಂ ಆಭರಣಗಳು ಹಾಗೂ ನಗದು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು(Accused) ಬಂಧಿಸಲಾಗಿದೆ(Arrest) ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೃಹ ಪ್ರವೇಶವಾಗಿ ಒಂದೇ ವಾರಕ್ಕೆ ಕಳ್ಳತನ!
ನಿವೃತ್ತ ಸಿವಿಲ್ ಎಂಜಿನಿಯರ್ ತಾಜ್‌ಮುಲ್ ಬಾಷಾ ಅವರು ಇತ್ತೀಚೆಗೆ ರೋಶನ್ ಪ್ಲಾಟಿನಂ ಅಪಾರ್ಚ್‌ಮೆಂಟ್‌ನಲ್ಲಿ ಪ್ಲ್ಯಾಟ್ ಖರೀದಿಸಿದ್ದರು. ಕಳೆದ ಮಾಚ್‌ರ್ 27ರಂದು ಗೃಹ ಪ್ರವೇಶ ಮಾಡಿ ಏ.21ರಂದು ಮನೆಗೆ ಪೀಠೋಪಕರಣ ಹಾಗೂ ಇತರೆ ಗೃಹೋಪಯೋಗಿ ವಸ್ತುಗಳನ್ನು ಸ್ಥಳಾಂತರಿಸಿ ಕುಟುಂಬದ ಜತೆ ವಾಸ್ತವ್ಯ ಹೂಡಿದ್ದರು. ತಾಜ್‌ಮುಲ್ ಬಾಷಾ ಅವರ ಪುತ್ರ ತಬ್ರೇಜ್ ಪಾಷಾ ಅವರು ನಗರದ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ.
ಏ.25ರಂದು ತಬ್ರೇಜ್ ಪಾಷಾ ಅವರ ವೈದ್ಯಕೀಯ ಪದವಿ ಘಟಿಕೋತ್ಸವವಿದ್ದ ಹಿನ್ನೆಲೆಯಲ್ಲಿ ಏ.24ರಂದು ಪ್ಲ್ಯಾಟ್‌ಗೆ ಬೀಗ ಹಾಕಿಕೊಂಡು ಹೋಗಿದ್ದರು. ಕುಟುಂಬ ಸಹಿತ ತಾಜ್‌ಮುಲ್ ಬಾಷಾ ಹೈದರಾಬಾದ್‌ಗೆ ತೆರಳಿದ್ದರು. ಘಟಿಕೋತ್ಸವ ಮುಗಿಸಿಕೊಂಡು ಏ.27ರ ಮುಂಜಾನೆ 2.30ಕ್ಕೆ ಪ್ಲ್ಯಾಟ್‌ಗೆ ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಗಾರಪೇಟೆ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗಾರ್ಡನ್ ಕೆಲಸಗಾರರೇ ಕಳ್ಳರು
ಆರೋಪಿ ಬಬ್ಲೂ ಪಾಸ್ವಾನ್ ಕಳೆದ ಆರು ವರ್ಷಗಳಿಂದ ರೋಶನ್ ಪ್ಲಾಟಿನಂ ಅಪಾರ್ಚ್‌ಮೆಂಟ್‌ನಲ್ಲಿ ಗಾರ್ಡನ್ ನಿರ್ವಹಣೆ ಕೆಲಸ ಮಾಡುತ್ತಿದ್ದ. ಕೊರೋನಾ ಹಿನ್ನೆಲೆಯಲ್ಲಿ ಆರು ತಿಂಗಳ ಹಿಂದೆ ಬಿಹಾರಕ್ಕೆ ತೆರಳಿದ್ದ. ಈ ವೇಳೆ ಅಪಾರ್ಚ್‌ಮೆಂಟ್‌ನ ಮ್ಯಾನೇಜರ್ ಗಾರ್ಡನ್ ಕೆಲಸಕ್ಕೆ ಇಬ್ಬರು ಕೆಲಸಗಾರರನ್ನು ಜತೆಯಲ್ಲಿ ಕರೆ ತರುವಂತೆ ಬಬ್ಲೂಗೆ ಹೇಳಿದ್ದರು. ಅದರಂತೆ ಬಬ್ಲೂ ಆರೋಪಿಗಳಾದ ಬೋರಾ ಪಾಸ್ವಾನ್ ಮತ್ತು ಶ್ರೀಧರ್ ಪಾಸ್ವಾನ್‌ನನ್ನು ನಗರಕ್ಕೆ ಕರೆತಂದಿದ್ದ. ಮೂವರು ಆರೋಪಿಗಳು ಅಪಾರ್ಚ್‌ಮೆಂಟ್‌ನ ಗಾರ್ಡನ್ ನಿರ್ವಹಣೆ ಮಾಡಿಕೊಂಡು ಪಾರ್ಕಿಂಗ್ ಸ್ಥಳದಲ್ಲೇ ನೆಲೆಸಿದ್ದರು.
ಯುವತಿ ಸಾವಿನ ಸುತ್ತ ಅನುಮಾನದ ಹುತ್ತ, ಆತ್ಮಹತ್ಯೆಯೋ? ಮರ್ಯಾದಾ ಹತ್ಯೆಯೋ?
ಅಪಾರ್ಟ್‌ಮೆಂಟ್‌ನ ಒಟ್ಟು 110 ಫ್ಲ್ಯಾಟ್‌ಗಳ ಪೈಕಿ 10 ಫ್ಲ್ಯಾಟ್‌ಗಳು ಮಾರಾಟವಾಗಿವೆ. ಹೀಗಾಗಿ ಆರೋಪಿಗಳು ಪ್ರತಿ ಫ್ಲ್ಯಾಟ್‌ನಲ್ಲಿರುವ ನಿವಾಸಿಗಳ ಚಲನವಲನ ಗಮನಿಸಿದ್ದರು. ಏ.24ರಂದು ತಾಜ್‌ಮುಲ್ ಬಾಷಾ ಅವರು ಫ್ಲ್ಯಾಟ್‌ಗೆ ಬೀಗ ಹಾಕಿಕೊಂಡು ಹೈದರಾಬಾದ್‌ಗೆ(Hyderababd) ಹೋಗುವ ವಿಚಾರ ತಿಳಿದುಕೊಂಡಿದ್ದರು. ಏ.26ರ ತಡರಾತ್ರಿ ಫ್ಲ್ಯಾಟ್‌ನ ಬಾಲ್ಕನಿಯ ಸ್ಲೈಡಿಂಗ್ ಬಾಗಿಲು ಮುರಿದು ಒಳಗೆ ನುಗ್ಗಿ ಕಳ್ಳತನ ಮಾಡಿ ಪರಾರಿಯಾಗಿದ್ದರು. ಏ.27ರ ಮುಂಜಾನೆ ತಾಜ್‌ಮುಲ್ ಪಾಷಾ ಅವರ ಕುಟುಂಬ ಹೈದರಾಬಾದ್‌ನಿಂದ ಫ್ಲ್ಯಾಟ್‌ಗೆ ವಾಪಾಸಾಗಿದೆ. ಒಂದೆರೆಡು ತಾಸು ಬೇಗ ಫ್ಲ್ಯಾಟ್‌ಗೆ ಬಂದಿದ್ದಲ್ಲಿ ಆರೋಪಿಗಳು ಫ್ಲ್ಯಾಟ್ ಒಳಗೆ ಸಿಕ್ಕಿ ಕೊಳ್ಳುವ ಸಾಧ್ಯತೆಯಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವೇ ನಿಮಿಷ ತಡ ಆಗಿದ್ದರೂ ಎಸ್ಕೇಪ್
ಆರೋಪಿಗಳು ಕಳ್ಳತನ ಮಾಡಿ ಕ್ಯಾಬ್‌ನಲ್ಲಿ ಹುಳಿಮಾವಿನಿಂದ ಮೆಜೆಸ್ಟಿಕ್‌ಗೆ ಬಂದು ಬಳಿಕ ಕೆ.ಆರ್.ಪುರ ರೈಲು ನಿಲ್ದಾಣಕ್ಕೆ ಬಂದಿದ್ದಾರೆ. ಈ ನಡುವೆ ಆರೋಪಿಗಳು ಪೊಲೀಸರ ದಿಕ್ಕು ತಪ್ಪಿಸಲು ಮೊಬೈಲ್ ಸ್ವಿಚ್‌್ಡ ಆಫ್ ಮಾಡಿದ್ದಾರೆ. ಬಳಿಕ ರೈಲಿನಲ್ಲಿ ಕೆ.ಆರ್.ಪುರದಿಂದ ಬಂಗಾರಪೇಟೆಗೆ ತೆರಳಿ ಕೀ ಪ್ಯಾಡ್ ಮೊಬೈಲ್‌ಗೆ ಸಿಮ್ ಹಾಕಿಕೊಂಡಿದ್ದಾರೆ. ಈ ವೇಳೆಗೆ ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ(CCTV) ಕ್ಯಾಮರಾ ದೃಶ್ಯಾವಳಿ ಆಧರಿಸಿ ಆರೋಪಿಗಳ ಬೆನ್ನು ಬಿದ್ದಿದ್ದ ಪೊಲೀಸರು, ಮೊಬೈಲ್ ನೆಟ್‌ವರ್ಕ್ ಆಧರಿಸಿ ಆರೋಪಿಗಳನ್ನು ಹಿಂಬಾಲಿಸಿದ್ದಾರೆ. ಬಂಗಾರಪೇಟೆ ರೈಲು ನಿಲ್ದಾಣದಲ್ಲಿ ಬಿಹಾರಕ್ಕೆ ತೆರಳುವ ರೈಲು ಎರಡು ತಾಸು ತಡವಾಗಿ ಬಂದಿದೆ. ಈ ವೇಳೆಗೆ ರೈಲು ನಿಲ್ದಾಣದ ತಲುಪಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರು ರೈಲು ನಿಲ್ದಾಣಕ್ಕೆ ತೆರಳುವುದು ಕೆಲವೇ ನಿಮಿಷ ತಡವಾಗಿದ್ದರೂ ಆರೋಪಿಗಳು ಪರಾರಿ ಆಗುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ