* ಉಡುಪಿ ಜಿಲ್ಲೆಯ ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ
* ಏಳು ಮಂದಿ ವಿರುದ್ಧ ಪ್ರಕರಣ ದಾಖಲು
* ರೌಡಿಗಳ ಅಟ್ಟಹಾಸ ಠಕ್ಕರ್ ಕೊಟ್ಟ ಪೊಲೀಸರು
ಉಡುಪಿ(ಜೂ.04): ಮಾರಕ ಆಯುಧ ತಲವಾರಿನಲ್ಲಿ ಕೇಕ್ ತುಂಡರಿಸಿ ಬರ್ತ್ ಡೇ ಆಚರಿಸಿದ ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ ಮೂವರನ್ನು ಬಂಧಿಸಿದ ಘಟನೆ ಇಂದು(ಶನಿವಾರ) ಉಡುಪಿ ಜಿಲ್ಲೆಯ ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರ ಆದೇಶದಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಡುಬಿದ್ರಿ ನಿವಾಸಿಗಳಾದ ಜೀತೇಂದ್ರ ಶೆಟ್ಟಿ, ಗಣೇಶ್ ಪೂಜಾರಿ ಹಾಗೂ ಶರತ್ ಶೆಟ್ಟಿ ಎಂಬುವರೇ ಬಂಧಿತ ಅರೋಪಿಗಳಾಗಿದ್ದಾರೆ.
ಉಳಿದಂತೆ ತಲೆ ಮರೆಸಿಕೊಂಡಿರುವ ಬರ್ತ್ ಡೇ ಯುವಕ ನಿರಂಜನ್ ಶೆಟ್ಟಿಗಾರ್, ತನುಜ್, ಸೂರಜ್ ಹಾಗೂ ಅನಿಶ್ ಇವರ ಬಂಧನಕ್ಕೆ ಕಾಪು ಸರ್ಕಲ್ ಇನ್ಸ್ ಪೆಕ್ಟರ್ ಪ್ರಕಾಶ್ ಹಾಗೂ ಪಡುಬಿದ್ರಿ ಎಸ್ಸೈ ಪುರುಷೋತ್ತಮ್ ತಂಡ ಬಲೆ ಬೀಸಿದೆ.
ಮೇ ತಿಂಗಳ ಮೂವತ್ತನೇ ತಾರೀಕಿನಂದು ಪಡುಬಿದ್ರಿಯ ಜೀತೇಂದ್ರ ಶೆಟ್ಟಿ ಎಂಬಾತನ ಮನೆಯಲ್ಲಿ ಈ ಏಳು ಮಂದಿ ಮಾರಾಕಾಯುಧ ಬಳಸಿ ನಿರಂಜನ್ ಶೆಟ್ಟಿಗಾರ್ ಎಂಬಾತನ ಹುಟ್ಟು ಹಬ್ಬ ಆಚರಿಸಿದ್ದ. ಈ ವಿಡಿಯೋ ತುಣುಕನ್ನು ಅವರೇ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುವ ಮೂಲಕ ಸಮಸ್ಯೆಯನ್ನು ತಮ್ಮ ತಲೆ ಮೇಲೆ ತಾವೇ ಹಾಕಿಕೊಂಡಂತ್ತಾಗಿದೆ.
ಗಂಡನನ್ನು ಬಿಟ್ಟು ಮತ್ತೊಬ್ಬನೊಂದಿಗೆ ವಾಸಿಸುತ್ತಿದ್ದ ಮಹಿಳೆ, ಈಗ ಇಬ್ಬರೂ ಶವವಾಗಿ ಪತ್ತೆ!
ಈ ವಿಡಿಯೋ ವೀಕ್ಷಿಸಿದ ಉನ್ನತ ಪೊಲೀಸ್ ಅಧಿಕಾರಿಗಳು ಉಡುಪಿ ಎಸ್ಪಿಗೆ ಕಾನೂನು ಕ್ರಮಕ್ಕಾಗಿ ಆದೇಶಿಸಿದ್ದಾರೆ. ಉನ್ನತಾಧಿಕಾರಿಗಳ ಆದೇಶದ ಮೇರೆಗೆ, ಅವರು ಕಾಪು ಸರ್ಕಲ್ ಇನ್ಸ್ ಪೆಕ್ಟರ್ ಹಾಗೂ ಪಡುಬಿದ್ರಿ ಎಸ್ಸೈಯವರಿಗೆ ಸೂಚನೆ ನೀಡಿದರು. ಈ ಹಿನ್ನಲೆಯಲ್ಲಿ ಪಡುಬಿದ್ರಿಯ ಕಾರ್ಕಳ ರಸ್ತೆಯಲ್ಲಿರುವ ಜಾರಪ್ಪ ಮನೆಗೆ ದಾಳಿ ಮಾಡಿದ ಪೊಲೀಸ್ ತಂಡ ಅಲ್ಲಿದ್ದ ಮೂವರನ್ನು ಬಂಧಿಸಿದೆ ಎಂಬುದಾಗಿ ಸರ್ಕಲ್ ಇನ್ಸ್ ಪೆಕ್ಟರ್ ಪ್ರಕಾಶ್ ತಿಳಿಸಿದ್ದಾರೆ.
ಈ ಕೃತ್ಯದಲ್ಲಿ ತೊಡಗಿದವರು, ಅಪರಾಧಿ ಹಿನ್ನೆಲೆಯವರಾಗಿದ್ದು ಹುಟ್ಟುಹಬ್ಬ ಆಚರಿಸುವ ವೇಳೆ ತಲವಾರಿನಿಂದ ಕೇಕ್ ಕತ್ತರಿಸಿದ್ದು ಮಾತ್ರವಲ್ಲ, ಟೇಬಲ್ ಮೇಲೆ ಮಾರಕಾಯುಧ ಕೊಡಲಿಯನ್ನು ಕೂಡ ಇರಿಸಿದ್ದರು. ಮಾರಕಾಯುಧಗಳನ್ನು ಈ ರೀತಿ ಸಾರ್ವಜನಿಕ ಪ್ರದರ್ಶನ ಮಾಡುವುದು ಅಪರಾಧವಾಗಿದ್ದು, ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುವ ಮೂಲಕ ರೌಡಿಗಳ ಅಟ್ಟಹಾಸ ಠಕ್ಕರ್ ಕೊಟ್ಟಿದ್ದಾರೆ.